ಮಹಿಳಾ ಕಥಾಹಂದರದ ‘ಕೆಂದಾವರೆ’ ಕೃತಿಗೆ ಚಿತ್ರರೂಪಕ
ಕನ್ನಡ ಚಿತ್ರರಂಗದ ಯುವನಟ, ಸಂಗೀತಗಾರ, ಕಂಠದಾನ ಕಲಾವಿದ ಆದಿತ್ಯ ವಿನೋದ್ ಅವರ ಮಹಿಳಾ ಪ್ರಧಾನ ಮತ್ತು ಸಾಮಾಜಿಕ ಕಥಾನಕ ಇತ್ತೀಚೆಗೆ ‘ಕೆಂದಾವರೆ’ ಎಂಬ ಹೆಸರಿನ ಕಾದಂಬರಿಯಾಗಿ ಬಿಡುಗಡೆಯಾಯಿತು. ಆದಿತ್ಯ ವಿನೋದ್ ಕಥೆಗೆ ಡಾ. ಶಯದೇವಿಸುತೆ ಮರವಂತೆ ಕಾದಂಬರಿ ರೂಪ ನೀಡಿದ್ದು, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ‘ಕೆಂದಾವರೆ’ ಕಾದಂಬರಿಯನ್ನು ಬಿಡುಗಡೆ ಮಾಡಿ ಶುಭ ಕೋರಿದರು.
ಇನ್ನು ಬಿಡುಗಡೆಯಾಗಿರುವ ಈ ‘ಕೆಂದಾವರೆ’ ಕಾದಂಬರಿಯನ್ನು ಅದೇ ಹೆಸರಿನಲ್ಲಿ ಸಿನಿಮಾ ರೂಪದಲ್ಲಿ ತೆರೆಮೇಲೆ ತರಲು ಕೆಲಸಗಳು ಶುರುವಾಗಿದೆ. ಈ ಚಿತ್ರದಲ್ಲಿ ನಟ ಆದಿತ್ಯ ವಿನೋದ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈ ಹಿಂದೆ ‘ಕಡಲ ತೀರದ ಭಾರ್ಗವ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಪನ್ನಗ ‘ಕೆಂದಾವರೆ’ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನು ‘ಕೆಂದಾವರೆ’ ಕಾದಂಬರಿಯ ಕಥಾ ಹಂದರ ಮತ್ತು ಅದರ ಸಿನಿಮಾ ಸ್ವರೂಪದ ಬಗ್ಗೆ ಮಾತನಾಡುವ ನಟ ಆದಿತ್ಯ ವಿನೋದ್, ‘ನಮ್ಮ ಸುತ್ತಲಿನ ವಾಸ್ತವಗಳಿಂದ ಪ್ರಭಾವಿತನಾಗಿ ಮತ್ತು ಪ್ರಸ್ತುತ ಅತ್ಯಂತ ಗಂಭೀರ ಸಮಸ್ಯೆಗಳಲ್ಲಿ ಒಂದಾದ ಮಕ್ಕಳ ಕಳ್ಳಸಾಗಣೆ ಮತ್ತು ಬಲವಂತದ ವೇಶ್ಯಾವಾಟಿಕೆಯನ್ನು ಬೆಳಕಿಗೆ ತರಲು ನಾನು ಈ ಕಥೆಯನ್ನು ಬರೆದಿದ್ದೇನೆ.
ಈ ಕೃತಿಯ ಹಲವು ಭಾಗಗಳು ನನ್ನ ಮೇಲೆ ಶಾಶ್ವತವಾದ ಪ್ರಭಾವ ಬೀರಿದ ನೈಜ ಘಟನೆಗಳು ಮತ್ತು ವೈಯಕ್ತಿಕ ಮುಖಾಮುಖಿಗಳಿಂದ ತೆಗೆದುಕೊಳ್ಳಲಾಗಿದೆ. ಈ ಕಾದಂಬರಿಯಲ್ಲಿ ಕೇವಲ ಕಥೆಯಿಲ್ಲ, ಇದೊಂದು ಎಚ್ಚರಿಕೆಯ ಕರೆ. ನೈಜ ಘಟನೆಗಳಿಂದ ಪ್ರೇರಿತವಾದ ಈ ಕಾದಂಬರಿ ಮಕ್ಕಳ ಕಳ್ಳಸಾಗಣೆ ಮತ್ತು ವೇಶ್ಯಾವಾಟಿಕೆ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಕ್ಕಳು ಮುಕ್ತವಾಗಿ, ಸುರಕ್ಷಿತವಾಗಿ ಮತ್ತು ಸಂತೋಷದಿಂದ ಬದುಕಬಹುದಾದ ಭರವಸೆಯನ್ನು ಮೂಡಿಸುವ ಪ್ರಯತ್ನವಾಗಿದೆ.
ಪ್ರತಿಯೊಂದು ಮಗುವೂ ಮಗುವಾಗಲು ಮುಕ್ತರಾಗಲಿ ಎಂಬ ಹಂಬಲ ಈ ಕಾದಂಬರಿ ಮೂಡಿಬರಲು ಕಾರಣ. ಶೀಘ್ರದಲ್ಲಿಯೇ ಈ ಕಾದಂಬರಿ ಸಿನಿಮಾ ರೂಪದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ. ಈಗಾಗಲೇ ಈ ಕೃತಿಯನ್ನು ಸಿನಿಮಾ ಮಾಡುವ ಕೆಲಸ ಶುರುವಾಗಿದೆ. ಮುಂದಿನ ವರ್ಷದಲ್ಲಿ ‘ಕೆಂದಾವರೆ’ ಸಿನಿಮಾವಾಗಿ ಪ್ರೇಕ್ಷಕರ ಮುಂದೆ ಬರಲಿದೆ’ ಎಂದಿದ್ದಾರೆ.