ಕಾಣದ ಕೈಗಳೇ ಪ್ರೇಮಿಗಳಿಗೆ ಶತ್ರು ” ಓಂ ಶಿವಂ” (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಓಂ ಶಿವಂ
ನಿರ್ದೇಶಕ : ಅಲ್ವಿನ್
ನಿರ್ಮಾಪಕ : ಕೆ.ಎನ್.ಕೃಷ್ಣ
ಸಂಗೀತ : ವಿಜಯ್ ಯಾರ್ಡ್ಲಿ
ಛಾಯಾಗ್ರಹಣ : ವಿರೇಶ್
ತಾರಾಗಣ : ಭಾರ್ಗವ ಕೃಷ್ಣ , ವಿರಾನಿಕ ಶೆಟ್ಟಿ , ರವಿ ಕಾಳೆ, ಕಾಕ್ರೋಜ್ ಸುಧೀ, ಯಶ್ ಶೆಟ್ಟಿ, ಬಲ ರಾಜ್ವಾಡಿ, ಲಕ್ಷ್ಮೀ ಸಿದ್ದಯ್ಯ, ಅಪೂರ್ವ, ಉಗ್ರಂ ರವಿ ಹಾಗೂ ಮುಂತಾದವರು..
ಈ ಪ್ರೇಮಿಗಳ ಹೃದಯದಲ್ಲಿ ಪ್ರೀತಿ ಯಾವಾಗ , ಹೇಗೆ ಆರಂಭಗೊಳ್ಳುತ್ತೆ ಅನ್ನೋದನ್ನ ಊಹಿಸಲು ಅಸಾಧ್ಯ. ಅಂತದ್ದೇ ಕಾಲೇಜು ವಿದ್ಯಾರ್ಥಿಗಳ ಪ್ರೀತಿ , ಪ್ರೇಮಕ್ಕೆ ಮನೆಯವರ ವಿರೋಧ , ಕಾಣದ ಕೈವಾಡಗಳ ನಡುವೆ ಮುಖಂಡನ ಕೊಲೆಯ ಸುತ್ತ ಅನುಮಾನದ ಹುತ್ತ ಬೆಳೆಯುತ್ತಾ ಪ್ರೇಮಿಗಳಿಗೆ ಹೇಗೆ ಕಂಠಕವಾಗುತ್ತೆ , ದುಷ್ಟರ ಆರ್ಭಟಕ್ಕೆ ಪೊಲೀಸರ ಉತ್ತರ ಏನು ಎಂಬುದನ್ನು ಕುತೂಹಲಕಾರಿಯಾಗಿ ಹೇಳುವ ಪ್ರಯತ್ನದ ಹಾದಿಯಲ್ಲಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಓಂ ಶಿವಂ”.
ಮಧ್ಯಮ ವರ್ಗದ ಕುಟುಂಬದ ಹುಡುಗ ಶಿವು (ಭಾರ್ಗವ ಕೃಷ್ಣ) ತನ್ನ ಪ್ರೇಯಸಿ ಅಂಜಲಿ (ವಿರಾನಿಕ ಶೆಟ್ಟಿ) ಸಾವಿನಿಂದ ಕಂಗಾಲಾಗಿ ಸದಾ ಕುಡಿಯುತ್ತಾ ಆಕೆಯ ಸಮಾಧಿಯ ಸುತ್ತ ಓಡಾಡಿಕೊಂಡು ಮನೆಗೂ ತನ್ನಿಷ್ಟ ಬಂದ ಹಾಗೆ ಹೋಗಿ ಮನೆಯವರಿಂದ ಕೂಡ ಶಾಪ ಹಾಕಿಸಿಕೊಳ್ಳುತ್ತಾನೆ.
ಮತ್ತೊಂದೆಡೆ ಊರಿನ ಅಧ್ಯಕ್ಷ ದೇವರಾಜ್ (ಬಾಲ ರಾಜವಾಡಿ) ದುಷ್ಕರ್ಮಿಗಳಿಂದ ಭೀಕರವಾಗಿ ಹತ್ಯೆಗೊಳಗಾಗುತ್ತಾನೆ. ಪೋಲಿಸ್ನವರಿಗೂ ಈ ಕೇಸ್ ಬಹಳ ಒತ್ತಡವನ್ನು ತರುತ್ತದೆ. ಅಧ್ಯಕ್ಷನ ಮಗ ನಂದ (ಕಾಕ್ರೋಚ್ ಸುದೀ) ಕೊಲೆಗಾರರನ್ನು ಹಿಡಿದು ಶಿಕ್ಷಿಸಿ ಎಂದು ಜನರ ಜೊತೆ ಪೊಲೀಸ್ ಸ್ಟೇಷನ್ನಲ್ಲಿ ಮನವಿ ಮಾಡುತ್ತಾನೆ. ಹಿರಿಯ ಪೊಲೀಸ್ ಅಧಿಕಾರಿ ಭರತ್ ( ರವಿಕಾಳೆ) ನೀಡುವ ಡೆಡ್ ಲೈನ್ ಒಳಗೆ ಕೊಲೆಗಾರನನ್ನು ಹುಡುಕಾಟದಲ್ಲಿರುವಾಗ ಪೊಲೀಸ್ ಕೈಗೆ ಕುಡಿದ ಮತ್ತಿನಲ್ಲಿರುವ ಶಿವ ಸಿಗುತ್ತಾನೆ. ಈ ಪರಿಸ್ಥಿತಿಗೆ ಕಾರಣ ಕೇಳುವಾಗ ಶಿವ ತನ್ನ ಕಾಲೇಜು ದಿನಗಳನ್ನು ನೆನಪಿಸಿಕೊಳ್ಳುತ್ತಾ ತನ್ನ ಪಾಡಿಗೆ ವಿದ್ಯೆ , ಮನೆ ಎನ್ನುತ್ತಾ ಎಲ್ಲರ ಜೊತೆ ಪ್ರೀತಿಯಿಂದ ಹೆಣ್ಣು ಮಕ್ಕಳನ್ನು ಗೌರವಿಸುತ್ತಾ ಇರುವಾಗಲೇ ನನ್ನ ಜೀವನದಲ್ಲಿ ಆಂಜಲಿ ಎಂಟ್ರಿ ಆಗುತ್ತಾಳೆ.
ಇವರಿಬ್ಬರ ಸ್ನೇಹ , ಪ್ರೀತಿ ಮದುವೆಯ ಹಂತಕ್ಕೆ ಆಲೋಚನೆ ಮೂಡುತ್ತದೆ. ಈ ವಿಚಾರ ಅಂಜಲಿ ತಾಯಿ ಸರೋಜಮ್ಮ (ಅಪೂರ್ವಶ್ರೀ)ಗೆ ತಿಳಿದು ಮಗಳನ್ನ ಕೂಡಿಹಾಕಿ ಶಿವ ಹಾಗೂ ಆತನ ತಂದೆ-ತಾಯಿಯನ್ನು ಭಿಕಾರಿಗಳಿಗೆ ನನ್ನ ಮಗಳು ಬೇಕಾ ಎಂದು ನಿಂದಿಸುತ್ತಾಳೆ. ಇದಕ್ಕೆ ಉತ್ತರ ನೀಡಲು ಸಿಟಿಯಲ್ಲಿ ಕೆಲಸ ಪಡೆದು ಬರುವ ಶಿವನಿಗೆ ಅಂಜಲಿ ಸೊಸೈಡ್ ವಿಚಾರ ತಿಳಿದು ಕಂಗಾಲಾಗಿ ಕುಡಿಯಲಾರಂಭಿಸುತ್ತಾನೆ.
ನಾನು ಬದುಕಿರೋದೇ ವೇಸ್ಟ್ ಎನ್ನುವನಿಗೆ ಪೊಲೀಸ್ ಇನ್ಸ್ಪೆಕ್ಟರ್ ಪ್ಲಾನ್ ಮಾಡಿ ಅಧ್ಯಕ್ಷನ ಕೊಲೆ ಆರೋಪವನ್ನು ಒಪ್ಪಿಕೋ ಎನ್ನುತ್ತಾನೆ. ಅದರಂತೆ ಶಿವನನ್ನ ಅರೆಸ್ಟ್ ಮಾಡುವ ಸಮಯದಲ್ಲಿ ಅಂಜಲಿ ಪ್ರತ್ಯಕ್ಷ ಆಗುತ್ತಾಳೆ. ಅಲ್ಲಿಂದ ಕಥೆ ಬೇರೆ ತಿರುವು ಪಡೆಯುತ್ತದೆ. ಡ್ರಗ್ಸ್ ಮಾಫಿಯಾ ಗ್ಯಾಂಗ್ , ಹನಿ ಟ್ರಾಪ್ , ಕೊಲೆಗಳ ಸಂಚಿನ ಜಾಲದ ಸುಳಿಗಳು ಬೇರೆದೇ ಕಥೆಯಲ್ಲ ಹೇಳುತ್ತದೆ. ಅಂಜಲಿ ಬದುಕಿದ್ದು ಹೇಗೆ… ಶಿವ ಪೊಲೀಸ್ ಬಲೆಗೆ ಬೀಳುತ್ತಾನಾ… ಅಧ್ಯಕ್ಷನ ಸಾವು ಹೇಗಾಯಿತು… ಕ್ಲೈಮಾಕ್ಸ್ ಹೇಳುವ ಸತ್ಯ ಏನು… ಎಂಬುದಕ್ಕೆ ನೀವು ಒಮ್ಮೆ ಚಿತ್ರ ನೋಡಬೇಕು.
ಈ ಚಿತ್ರದ ಮೂಲಕ ನಾಯಕನಾಗಿ ಹೊರಬಂದಿರುವ ಯುವ ಪ್ರತಿಭೆ ಭಾರ್ಗವ ಕೃಷ್ಣ ತನ್ನ ಪಾತ್ರಕ್ಕೆ ಜೀವ ತುಂಬಲು ಬಹಳಷ್ಟು ಶ್ರಮ ಪಟ್ಟಿದ್ದಾರೆ. ಆಕ್ಷನ್ ಸನ್ನಿವೇಶಕ್ಕೆ ಮೈ ಕೊಡವಿ ಗುದ್ದಾಡಿದ್ದಾರೆ. ಡ್ಯಾನ್ಸ್ಗೂ ಸೈ ಎಂದಿರುವ ಭಾರ್ಗವ ಇನ್ನೊಂದಷ್ಟು ಪರಿಪಕ್ವತೆ ಮಾಡಿಕೊಂಡು ಮುಂದೆ ಬಂದರೆ ಉಜ್ವಲ ಭವಿಷ್ಯವನ್ನು ಕಾಣಬಹುದು.
ನಟಿಯಾಗಿ ವಿರಾನಿಕ ಶೆಟ್ಟಿ ಸಿಕ್ಕ ಅವಕಾಶವನ್ನ ಸಮರ್ಥವಾಗಿ ಎದುರಿಸಿ , ತನ್ನ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದಾರೆ. ಡ್ಯಾನ್ಸ್ ಜೊತೆ ಫೈಟ್ ಗೂ ರೆಡಿ ಎನ್ನುವಂತೆ ಅಭಿನಯಿಸಿದ್ದಾರೆ. ಇನ್ನು ಎರಡು ಶೇಡ್ಗಳಲ್ಲಿ ಕಾಕ್ರೋಚ್ ಸುದೀ ನಂದ ಹಾಗೂ ಜೀರ್ಜಿಂಬೆಯಾಗಿ ಆರ್ಭಟಿಸಿದ್ದಾರೆ. ಅದೇ ರೀತಿ ಗುಲಗಂಜಿಯಾಗಿ ಯಶ್ ಶೆಟ್ಟಿ ಹನಿ ಟ್ರ್ಯಾಕ್ ರೂವಾರಿಯಾಗಿ ಕಳಿಸಿಕೊಂಡರೆ, ಮತ್ತೊಬ್ಬ ಪ್ರತಿಭೆ ವರ್ಧನ್ ಕೂಡ ಖಡಕ್ ಆಕ್ಷನ್ ನಲ್ಲಿ ಮಿಂಚಿದ್ದಾರೆ. ದಕ್ಷ ಪೋಲಿಸ್ ಅಧಿಕಾರಿಯಾಗಿ ಕಾಡಿಸಿಕೊಂಡಿರುವ ರವಿ ಕಾಳೆ ಡೈಲಾಗ್ ಡೆಲಿವರಿ ಗಮನ ಸೆಳೆಯುತ್ತದೆ. ಇನ್ನು ಇಡೀ ಚಿತ್ರದ ಹೈಲೈಟ್ ಅಂದರೆ ನಾಯಕಿಯ ತಾಯಿಯಾಗಿ ಅಪೂರ್ವ ಶ್ರೀ ರವರ ಮಾತಿನ ವರ್ಸೆ ಅದ್ಭುತವಾಗಿದೆ. ಉಳಿದಂತೆ ಲಕ್ಷ್ಮಿ ಸಿದ್ದಯ್ಯ , ಹನುಮಂತೇಗೌಡ , ಸೂರಜ್ , ಉಗ್ರಂ ರವಿ ಪಾತ್ರಗಳು ಕೂಡ ಚಿತ್ರಕ್ಕೆ ಪೂರಕವಾಗಿ ಸಾಗಿದೆ.
ಇನ್ನು ನಿರ್ದೇಶಕ ಈ ಚಿತ್ರದಲ್ಲಿ ಹಾಲಿನಂತಹ ಲವ್ ಸ್ಟೋರಿಯಲ್ಲಿ… ಆಲ್ಕೋಹಾಲ್ ನಂತಹ ಪೇನ್ ಸ್ಟೋರಿಯನ್ನ… ಹೇಳುವ ಪ್ರಯತ್ನದ ಜೊತೆಗೆ ಡ್ರಗ್ಸ್ ದಂಧೆ , ಹನಿ ಟ್ರ್ಯಾಪ್ ನಂತಹ ಕರಾಳ ಸತ್ಯದ ಮೇಲೆ ಬೆಳಕು ಚೆಲ್ಲಿರುವ ರೀತಿ ಉತ್ತಮವಾಗಿದೆ. ಚಿತ್ರಕಥೆ ಇನ್ನಷ್ಟು ವಿಭಿನ್ನವಾಗಿ ಮಾಡಬೇಕಿತ್ತು ಅನಿಸುತ್ತದೆ.
ಈ ಚಿತ್ರವನ್ನ ಕೆ.ಎನ್.ಕೃಷ್ಣ ನಿರ್ಮಿಸುವ ಜೊತೆಗೆ ತಮ್ಮ ಆಸೆಯನ್ನು ಪೊಲೀಸ್ ಸಿಬ್ಬಂದಿಯಾಗಿ ಪರದೆಯ ಮೇಲೆ ಈಡೇರಿಸಿಕೊಂಡಂತಿದೆ. ಇನ್ನು ಹೈಲೈಟ್ ಎಂದರೆ ಚಿತ್ರದ ಸಂಗೀತ , ಛಾಯಾಗ್ರಹಣ ಸೊಗಸಾಗಿ ಬಂದಿದೆ. ಅದೇ ರೀತಿ ಚಿತ್ರದ ಸಂಭಾಷಣೆ ಬರೆದಿರುವ ಮಳವಳ್ಳಿ ಸಾಯಿಕೃಷ್ಣ ಪಂಚಿಂಗ್ ಡೈಲಾಗ್ ಚಿತ್ರದುದ್ದಕ್ಕೂ ಗಮನ ಸೆಳೆಯುತ್ತದೆ. ಹಾಗೆ ಆಕ್ಷನ್ ಸನ್ನಿವೇಶಗಳು ಕೂಡ ಅದ್ಭುತವಾಗಿದೆ. ಒಟ್ಟಾರೆ ಯುವ ಪ್ರತಿಭೆಗಳ ವಿಭಿನ್ನ ಚಿತ್ರ ಇದಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಿದೆ.