ಲಿವಿಂಗ್ ರಿಲೇಶನ್ ಶಿಪ್ ಪ್ರೇಮಿಗಳಿಗೆ ಬದುಕಿನ ಪಾಠ “31 ಡೇಸ್” (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : 31 ಡೇಸ್
ನಿರ್ದೇಶಕ : ರಾಜಾ ರವಿಕುಮಾರ್
ನಿರ್ಮಾಪಕಿ :ನಾಗವೇಣಿ ಶೆಟ್ಟಿ
ಸಂಗೀತ : ವಿ.ಮನೋಹರ್
ಛಾಯಾಗ್ರಹಣ : ವಿನುತ್. ಕೆ
ತಾರಾಗಣ : ನಿರಂಜನ್ ಶೆಟ್ಟಿ , ಪ್ರಜ್ವಲಿ ಸುವರ್ಣ, ಚಿಲ್ಲರ್ ಮಂಜು , ಅಕ್ಷಯ್ ಕಾರ್ಕಳ ಹಾಗೂ ಮುಂತಾದವರು…
ಲೈಫ್ ಲೈಫಿನಲ್ಲಿ ಖುಷಿಖುಷಿಯಾಗಿ ಎಂಜಾಯ್ ಮಾಡುತ್ತಾ ಬದುಕು ನಡೆಸುವ ಆಸೆಯೊಂದಿಗೆ ಅದೆಷ್ಟೋ ಹಳ್ಳಿ ಯುವಕರು ಸಿಟಿ ಕಡೆ ಬಂದಿರೋದು ವಿಚಾರ ಗೊತ್ತೇ ಇರುತ್ತೆ. ಇಲ್ಲಿನ ಸುಖ, ಕಷ್ಟದ ಜೀವನದ ಜೊತೆ ಗೆಳೆತನ , ಸ್ನೇಹ , ಪ್ರೀತಿ , ಮೋಹದ ಸುಳಿಯಲ್ಲಿ ಸಿಲುಕುವ ಪ್ರೇಮಿಗಳ ನಡುವೆ ಎದುರಾಗುವ ಅಗ್ರಿಮೆಂಟ್ , ಕಂಡೀಶನ್ , ಲಿವಿಂಗ್ ಶಿಪ್ ಒದ್ದಾಟದ ಕಥೆಯ ಮೂಲಕ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರವೇ “31ಡೇಸ್”. ಕೆಲಸವಿಲ್ಲದೆ ಗೆಳೆಯ ರಮೇಶ್ (ಚಿಲ್ಲರ್ ಮಂಜು) ಜೊತೆ ರೂಮಿನಲ್ಲಿ ವಾಸ ಮಾಡುವ ನೀರು (ನಿರಂಜನ್ ಕುಮಾರ್ ಶೆಟ್ಟಿ) ಕನಸಿನಲ್ಲೂ ಹುಡುಗಿಯ ಜೊತೆ ಮೋಜು ಮಸ್ತಿಯದೇ ಗುಂಗು. ವಿದ್ಯಾಭ್ಯಾಸ ಮುಗಿಸಿ ವಿದೇಶಕ್ಕೆ ಹೋಗಲು ಸಿದ್ಧವಾದ ಹುಡುಗಿ ನಿಖಿತಾ (ಪ್ರಜ್ವಲಿ ಸುವರ್ಣ) ಳನ್ನ ಎರಡು ವರ್ಷಗಳಿಂದ ಹಿಂಬಾಲಿಸುವ ವಿಚಾರ ಗೆಳೆಯನಿಗೆ ತಿಳಿಸುವ ನೀರು ಗೆ ನೇರವಾಗಿ ಪ್ರೀತಿಯ ವಿಚಾರ ಹೇಳಲು ಧೈರ್ಯ ತುಂಬುತ್ತಾನೆ ರಮೇಶ.
ಇಬ್ಬರು ಪ್ರೇಮಿಗಳು ಭೇಟಿಯಾಗಿ ಮಾತನಾಡುತ್ತಾ ಅರ್ಥ ಮಾಡಿಕೊಳ್ಳಲು ಸಮಯ ಬೇಕು ಎನ್ನುತ್ತಾ , ಯಾರ ಸಂಪರ್ಕವೂ ಇಲ್ಲದ ಒಂದು ಮನೆಯಲ್ಲಿ ಇಬ್ಬರೇ ಒಂದು ತಿಂಗಳು ಲಿವಿಂಗ್ ರಿಲೇಶನ್ಶಿಪ್ ಗೆ ಒಪ್ಪಿ ಅಗ್ರಿಮೆಂಟ್ ಮಾಡಿಕೊಳ್ಳುತ್ತಾರೆ. ಒಂದು ವೇಳೆ ತಪ್ಪಿದರೆ 15 ಲಕ್ಷ ದಂಡ ನೀಡಿ ಮನೆಯಿಂದ ಹೊರ ನಡೆಯಬೇಕು ಎಂದು ನಿರ್ಧರಿಸಿ ಒಂಟಿ ಮನೆಯ ಎಸ್ಟೇಟ್ ಗೆ ಹೋಗುತ್ತಾರೆ.
ಇನ್ನು ನೀರು ತನ್ನ ಪ್ರೇಯಸಿ ನಿಕಿತಾ ಸೌಂದರ್ಯವನ್ನ ನೋಡುತ್ತಾ ಆಕೆಯನ್ನ ಅಪ್ಪಿಕೊಂಡು ಮುದ್ದಾಡುವ ತವಕ ಹೊಂದುತ್ತಾನೆ. ಅದಕ್ಕೆ ಬೇಕಾಗುವ ಸಿದ್ಧತೆಯೊಂದಿಗೆ ನುಗ್ಗೆಕಾಯಿ ಸಾಂಬಾರ್ ಅನ್ನ ಹೆಚ್ಚಾಗಿ ಸವಿಯುತ್ತಾನೆ. ಇವರಿಬ್ಬರ ಕೀಟಲೆ , ತರ್ಲೆ , ಅತಿಯಾದ ಮೋಹ , ದಾಹ ರೋಚಕವಾಗಿ ನಡೆಯುತ್ತದೆ.
ಇದರ ನಡುವೆ ದೆವ್ವದ ಕಾಟದ ಅನುಮಾನವೂ ನೀರುಗೆ ಮೂಡುತ್ತದೆ. ಪ್ರತಿ ದಿನ ಕಳೆದಂತೆ ಪರಸ್ಪರ ಹೊಂದಾಣಿಕೆಯಲ್ಲಿ ಇಬ್ಬರ ಕುಟುಂಬದ ವಿಚಾರ ತೆರೆದುಕೊಳ್ಳುತ್ತದೆ. ಒಂದಷ್ಟು ಮಾತುಕತೆ ಎದುರಾಗಿ ಇಬ್ಬರಲ್ಲೂ ಸರಸ , ವಿರಸ , ಕೋಪ ಎದುರಾಗಿ ಕೊನೆಯ ಹಂತ ತಲುಪುತ್ತದೆ.
ಮನೆಯಲ್ಲಿ ದೆವ್ವದ ಕಾಟವೇ… ಪ್ರೇಮಿಗಳು ಒಂದಾಗುತ್ತಾರಾ..
ಕುಟುಂಬದ ಹಿನ್ನೆಲೆ ಏನು…
ಅಗ್ರಿಮೆಂಟ್ ಕಥೆ… ಹಾಗೆಯೇ
ಹಳ್ಳಿ , ಸಿಟಿ ಯಾವ ಬದುಕು ಸೂಕ್ತ ಎನ್ನುವುದನ್ನು ನೀವು ಚಿತ್ರದಲ್ಲಿ ಬಂದು ನೋಡಬೇಕು.
ನಟ ನಿರಂಜನ್ ಕುಮಾರ್ ಶೆಟ್ಟಿ ಈ ಚಿತ್ರದಲ್ಲಿ ಬಹಳ ಲವಲವಿಕೆಯಿಂದ ತನ್ನ ಪಾತ್ರದಲ್ಲಿ ಮಿಂಚಿದ್ದಾರೆ. ಮಾತಿನ ಝಲಕ್ , ಕಾಮಿಡಿ ಪಂಚ್ , ಹವಭಾವಗಳ ಮೂಲಕ ಮನ್ಮಥನಾಗಿ ರಸದೌತಣ ನೀಡುವ ಪ್ರಯತ್ನವನ್ನ ಸಮರ್ಥವಾಗಿ ಎದುರಿಸಿದ್ದಾರೆ. ಈ ಹಿಂದೆ ಮಾಡಿರುವಂತಹ ವಿಭಿನ್ನ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ.
ಅದೇ ರೀತಿ ನಟಿ ಪ್ರಜ್ವಲಿ ಸುವರ್ಣ ಕೂಡ ಮೈ ಚಳಿ ಬಿಟ್ಟು ಬೋಲ್ಡ್ ಅಂಡ್ ಬ್ಯೂಟಿಫುಲ್ ಎನ್ನುವಂತೆ ಮಿಂಚಿದ್ದಾರೆ. ಲಿಪ್ ಲಾಕ್ ಸನ್ನಿವೇಶ ಪಡ್ಡೆ ಹುಡುಗರ ಕಣ್ಮಟಿಕಿಸಿದಂತೆ ಮಾಡಿದೆ. ಇಂತಹ ಪಾತ್ರಕ್ಕೆ ಒಪ್ಪಿಕೊಂಡಿರುವ ನಟಿಯ ಧೈರ್ಯ ಮೆಚ್ಚಲೇಬೇಕು. ಇಡೀ ಚಿತ್ರದಲ್ಲಿ ಬಹುತೇಕ ಈ ಎರಡೇ ಪಾತ್ರಗಳು ಆವರಿಸಿಕೊಂಡು ಪ್ರೇಕ್ಷಕರನ್ನ ಸೆಳೆಯುತ್ತದೆ. ಇನ್ನು ಗೆಳೆಯನ ಪಾತ್ರ ಮಾಡಿರುವ ಚಿಲ್ಲರ್ ಮಂಜು ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ.
ನಾಯಕನ ತಂದೆ ಪಾತ್ರಧಾರಿ ಉತ್ತಮವಾಗಿ ನಟಿಸಿದ್ದು , ಅವರ ಮೂಲಕ ಹೇಳಿರುವ ಸಂದೇಶ ಅರ್ಥಪೂರ್ಣ ವಾಗಿದೆ. ಇನ್ನು ಉಳಿದ ಪಾತ್ರವೂ ಕೂಡ ಚಿತ್ರದ ಓಟಕ್ಕೆ ಸಾಥ್ ನೀಡಿದೆ. ಇನ್ನೂ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಯುವ ಪೀಳಿಗೆಗಳ ಮನಸ್ಥಿತಿ , ಆಲೋಚನೆ , ಆಸೆ , ಮೋಹ , ದಾಹದಲ್ಲಿ ಎದುರಾಗುವ ಸಮಸ್ಯೆಗಳ ನಡುವೆ ಬದುಕಿನ ಪಾಠ ಎಲ್ಲರಿಗೂ ಅರಿವಾಗಬೇಕೆಂಬ ವಿಚಾರ ಗಮನ ಸೆಳೆಯುವಂತೆ ಮೂಡಿಬಂದಿದೆ.
ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಅಗತ್ಯ ಅನಿಸುತ್ತದೆ. ಎರಡು ಪಾತ್ರವೂ ಇದ್ದಲ್ಲಿ ಗಿರಿಕಿ ಹೊಡೆದಂತಿದೆ. ಇದು ವಿ. ಮನೋಹರ್ ಅವರ 150ನೇ ಚಿತ್ರವಾಗಿದ್ದು , ಸಂಗೀತವು ಉತ್ತಮವಾಗಿ ಮೂಡಿಬಂದಿದೆ. ಛಾಯಾಗ್ರಹಣ , ಸಂಕಲನ ಕೆಲಸ ತಕ್ಕಮಟ್ಟಗಿದೆ ಎನ್ನಬಹುದು. ರೋಮ್ಯಾಂಟಿಕ್ , ಹ್ಯೂಮರ್ ಹಾಗೂ ಹಾರರ್ ಕಂಟೆಂಟನ್ನ ಬೆಸೆದುಕೊಂಡಿರುವ ಈ ಚಿತ್ರ ಜಾಲಿಯಾಗಿ ಎಂಜಾಯ್ ಮೂಡ್ನಲ್ಲಿ ನೋಡುವವರಿಗೆ ಇಷ್ಟವಾಗುವ ಈ “31ಡೇಸ್” ಸಿನಿಮಾ ಒಮ್ಮೆ ನೋಡುವಂತಿದೆ.