ಸೆಪ್ಟಂಬರ್ 5ರಂದು ಗಡಿ ಮೀರಿದ ಪ್ರೇಮಕಥೆ “ಏಳುಮಲೆ” ಚಿತ್ರ ಬಿಡುಗಡೆ.
ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾ ತನ್ನ ಕಂಟೆಂಟ್ ಮೂಲಕ ಸುದ್ದಿ ಮಾಡುತ್ತಿದೆ. ಹಾಡುಗಳು ಹಾಗೂ ಟೈಟಲ್ ಟೀಸರ್ ಮೂಲಕ ಪ್ರೇಕ್ಷಕ ವಲಯದಲ್ಲಿ ನಿರೀಕ್ಷೆ ಹೆಚ್ಚಿಸಿದ್ದು, ಇದೀಗ ಈ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಪುನೀತ್ ರಂಗಸ್ವಾಮಿ ಆಕ್ಷನ್ ಕಟ್ ಹೇಳಿರುವ ಏಳುಮಲೆ ಸಿನಿಮಾ ಸೆಪ್ಟೆಂಬರ್ 5ರಂದು ತೆರೆಗೆ ಬರ್ತಿದೆ. ಕನ್ನಡ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಕರ್ನಾಟಕ-ತಮಿಳುನಾಡು ನಡುವಿನ ಗಡಿಭಾಗದ ಪ್ರೇಮಕಥೆಯಾಗಿರುವ `ಏಳುಮಲೆ’ ಸಿನಿಮಾದಲ್ಲಿ ನಟಿ ರಕ್ಷಿತಾ ಸೋದರ ರಾಣಾ ಕನ್ನಡದ ಹುಡ್ಗ ಹರೀಶ್ ಆಗಿ ನಟಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಮನೆ ಮಾತಾಗಿರುವ ಮೈಸೂರಿನ ಹುಡುಗಿ ಪ್ರಿಯಾ ಆಚಾರ್ ತಮಿಳು ಹುಡುಗಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ರಾಣಾ, ಪ್ರಿಯಾಂಕಾ ಆಚಾರ್ ಜೊತೆಗೆ ಜಗಪತಿ ಬಾಬು, ನಾಗಾಭರಣ, ಕಿಶೋರ್ ಕುಮಾರ್, ಸರ್ದಾರ್ ಸತ್ಯ, ಜಗಪ್ಪ ತಾರಾಬಳಗದಲ್ಲಿದ್ದಾರೆ.
ಚೌಕ ಮತ್ತು ಕಾಟೇರ ಚಿತ್ರಗಳ ನಿರ್ದೇಶಕ ತರುಣ್ ಕಿಶೋರ್ ಸುಧೀರ್ ಅವರು ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಅಟ್ಲಾಂಟಾ ನಾಗೇಂದ್ರ ಅವರು ಚಿತ್ರಕ್ಕೆ ಸಹ ನಿರ್ಮಾಪಕರಾಗಿದ್ದಾರೆ. ಈ ಚಿತ್ರವು ನೈಜ ಘಟನೆಯನ್ನು ಆಧರಿಸಿದೆ. ಭಾವನಾತ್ಮಕವಾದ ಕಥೆಯನ್ನು ಒಳಗೊಂಡಿರಲಿದೆ. ಚಾಮರಾಜನಗರ, ಸೇಲಂ, ಈರೋಡ್ ಸೇರಿದಂತೆ ಕರ್ನಾಟಕ-ತಮಿಳುನಾಡು ಗಡಿ ಭಾಗದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ.