ಶಂಖದ ಸುಳಿಯಲ್ಲಿ ಸಾವಿಗೆ ಡೋಲು ಹೊಡೆಯುವವನ ಕಥೆ – ವ್ಯಥೆ “ಎಲ್ಟು ಮುತ್ತಾ” (ಚಿತ್ರವಿಮರ್ಶೆ -ರೇಟಿಂಗ್ :3.5 /5)
ರೇಟಿಂಗ್ :3.5 /5
ಚಿತ್ರ : ಎಲ್ಟು ಮುತ್ತಾ
ನಿರ್ದೇಶಕ : ರಾ.ಸೂರ್ಯ
ನಿರ್ಮಾಣ : HIGH 5 ಸ್ಟುಡಿಯೋಸ್
ಸಂಗೀತ : ಪ್ರಸನ್ನ ಕೇಶವ
ಛಾಯಾಗ್ರಹಣ : ಮೈಯಪ್ಪ ಭಾಸ್ಕರ್
ತಾರಾಗಣ : ಶೌರ್ಯ ಪ್ರತಾಪ್, ರಾ.ಸೂರ್ಯ, ಪ್ರಿಯಾಂಕ ಮಳಲಿ, ರುಹಾನ್ ಆರ್ಯ, ಕಾಕ್ರೋಜ್ ಸುಧೀ , ನವೀನ್ ಡಿ ಪಡೀಲ್, ರಾಮ್ ದೇವನಗರಿ , ಬೇಬಿ ಪ್ರಿಯಾ, ಯಮುನಾ ಶ್ರೀನಿಧಿ, ಸತ್ಯ ಎಸ್ ಶ್ರೀನಿವಾಸನ್ ಹಾಗೂ
ಮುಂತಾದವರು…
ಬದುಕಿನಲ್ಲಿ ಸುಖ , ದುಃಖ ಕಷ್ಟ ,ನೋವು ಯಾರಿಗೂ ತಪ್ಪಿದ್ದಲ್ಲ. ಹುಟ್ಟಿದ ಮೇಲೆ ಸಾವು ಕಟ್ಟಿಟ್ಟ ಬುತ್ತಿ. ವಿಧಿಯ ಆಟದಂತೆ ಬದುಕು ನಡೆಸುವಷ್ಟೇ ಎಲ್ಲರ ಕಾಯಕ. ಅಂತದ್ದೇ ಒಂದು ಕಥಾನಕ ಮೂಲಕ ಕೊಡಗಿನ ದಟ್ಟ ಅರಣ್ಯದ ನಡುವಿನ ಊರಿನಲ್ಲಿ ಸಾವಿನ ಮನೆಯ ಮುಂದೆ ಡೊಳ್ಳು ಹೊಡೆಯುವವರ ಬದುಕು ಬವಣೆಯ ನಡುವೆ ನಶೆ , ಗಾಂಜಾ , ಮೋಹ , ದ್ವೇಷದ ಸುಳಿಯಲ್ಲಿ ಶಂಖದ ದಂಧೆಯ ಕ್ರೂರತೆಯ ರಕ್ತದೋಕುಳಿಯಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಎಲ್ಟು ಮುತ್ತಾ”.
ಸುಂದರ ಪರಿಸರದ ನಡುವೆ ಗೆಳೆಯರಲ್ಲ ಒಟ್ಟಾಗಿ ಬೆಳೆಯುತ್ತಾರೆ. ಊರಿನಲ್ಲಿ ಸಾವಾದರೆ ಸಾಕು ನಮ್ಮ ಬದುಕು ನಡೆಯುತ್ತದೆ ಎನ್ನುವ ಡೋಲು ಬಡಿಯುವ ಮುತ್ತಾ (ಶೌರ್ಯ ಪ್ರತಾಪ್), ತಂಡದ ಮುಖ್ಯಸ್ಥ ಬಾಬನ್ನಿ (ನವೀನ್. ಡಿ. ಪಾಟೀಲ್) ಹಾಗೂ ತಂಡ. ಇನ್ನು ಎಲ್ಟು (ರಾ ಸೂರ್ಯ) ರಸ್ತೆ ಬದಿಯಲ್ಲಿ ಹೂವು ಮಾರುತ್ತಲೆ ಬೇರೆ ಬೇರೆ ಹೂವಿಗೆ ಗಾಳ ಬೀಸುವುದೇ ಕೆಲಸ. ಯಾರೇ ಸತ್ತರೂ ಊರಿನ ಮುಖಂಡ ನುಚ್ಚುಮಣಿ( ರುಹನ್ ಆರ್ಯ) ಬಂದು ಹಾರ ಹಾಕಿ, ಹಣದ ಸಹಾಯ ಮಾಡುತ್ತಾನೆ.
ಡೊಳ್ಳು ಬಡಿದ ಮೇಲೆ ಸರಿಯಾದ ಹಣ ಕೊಡದಿದ್ದರೆ ಮುತ್ತ ವರ್ತನೆ , ಕೊಡುವ ಗೂಸಕ್ಕೆ ಕೆಲವರು ಕಕ್ಕಾಬಿಕ್ಕಿ ಆಗುತ್ತಾರೆ. ತಾನಾಯಿತು , ತನ್ನ ಪುಟಾಣಿ ಕುಂಜಿ (ಬೇಬಿ ಪ್ರಿಯಾ) ಹಾಗೂ ಗೆಳೆಯರ ಒಡನಾಟವೇ ಬದುಕಾಗಿರುತ್ತದೆ. ಕಾಡಿನ ನಡುವೆ ತನ್ನದೇ ಗ್ಯಾಂಗ್ ಕಟ್ಟಿಕೊಂಡು ಸದಾ ನಶೆಯಲ್ಲಿ ತೇಲುವ ರಾಂಬೋಲಿ (ರಾಮ್ ದೇವನಗರಿ) ಹಾಗೂ ಗ್ಯಾಂಗ್ ಎದುರಿಸಿ , ಬೆದರಿಸುವುದೇ ಜೀವನ. ಗೆಳೆಯ ಬೈರು ಪತ್ನಿ ಪೊನ್ನಿ (ಪ್ರಿಯಾಂಕ ಮಳಲಿ) ಮೇಲೆ ಇವನ ಕಣ್ಣು. ಇನ್ನು ಹಣ, ಆಸ್ತಿ ದರ್ಪದಿಂದ ಮೆರೆಯುವ ಅಲೆಕ್ಸ್ ಚಟ್ವಾ(ಕಾಕ್ರೋಚ್ ಸುದೀ) ವೈವಾಟು ದಂಧೆಯೇ ವಿಚಿತ್ರ. ಒಂದೇ ಊರಿನ ಹಲವು ವ್ಯಕ್ತಿಗಳ ನಿಗೂಢ ವರ್ತನೆಯ ಆರ್ಭಟಗಳು ನಿರಂತರವಾಗಿರುತ್ತೆ.
ಮುತ್ತಾನ ವರ್ತನೆ ವಿಚಿತ್ರ ಅನಿಸಿದರು ಕಷ್ಟ , ನೋವಿಗೆ ಸ್ಪಂದಿಸುವ ಮೃದು ಮನಸ್ಸು. ಗಂಡನನ್ನ ಕಳೆದುಕೊಳ್ಳುವ ಪೊನ್ನಿಯ ಮನೆ ಸೇರುವ ಕುಂಜಿಗೆ ಬೆಂಬಲವಾಗಿ ನಿಲ್ಲುವ ಮುತ್ತಾ. ಒಮ್ಮೆ ಹೊಳೆಯಲ್ಲಿ ಸ್ನಾನ ಮಾಡುವಾಗ ಶಂಖ ಒಂದು ಮುತ್ತನಿಗೆ ಸಿಗುತ್ತದೆ. ಗೆಳೆಯ ಎಲ್ಟು ಮೂಲಕ ಪವಾಡ ಶಂಖದಿಂದ ಹಣ ಸಂಪಾದನೆ ಮಾಡುವ ವಿಚಾರ ತಿಳಿದು ತನ್ನ ಬಳಿ ಇರುವ ಶಂಖದ ವಿಚಾರ ಹೇಳುತ್ತಾನೆ. ಇದನ್ನು ಮಾರಿ ಹಣ ಪಡೆಯುವ ಆಸೆಗೆ ಮುಂದಾಗುತ್ತಾನೆ. ಈ ಸುದ್ದಿ ಊರಿನ ಜನರಿಗೆ ತಿಳಿಯುತ್ತದೆ. ಇದರಿಂದ ರಕ್ತದೋಕಳಿಯೇ ನಡೆಯುತ್ತಾ ಹೋಗುತ್ತದೆ. ಮುಂದೆ ಪೊಲೀಸ್ ಅಧಿಕಾರಿಗಳ ಪ್ರವೇಶವು ಎದುರಾಗಿ ರೋಚಕ ಘಟನೆಗಳು ಕುತೂಹಲ ಮೂಡಿಸುತ್ತಾ ಸಾಗುತ್ತದೆ.
ಶಂಖ ಮಾರಿದನ ಮುತ್ತಾ…
ಎಲ್ಟು ಐಡಿಯಾ ಏನು…
ಡೊಳ್ಳು ಬಡಿಯುವವರ ಸ್ಥಿತಿಗತಿ…
ಕ್ಲೈಮಾಕ್ಸ್ ನೀಡುವ ಉತ್ತರ… ಶಂಖ ಶ್ರೀಲಂಕಾ ಸೇರುತ್ತಾ…
ಇದಕ್ಕೆ ನೀವು ಚಿತ್ರ ನೋಡಬೇಕು.
ಇನ್ನು HIGH 5 ಸ್ಟುಡಿಯೋಸ್
ಮೂಲಕ ಸತ್ಯ .ಎಸ್. ಶ್ರೀನಿವಾಸನ್ ನಿರ್ಮಿಸಿದ್ದು, ಸಹ ನಿರ್ಮಾಪಕರಾಗಿ ಪವೀಂದ್ರ ಪೊನ್ನಪ್ಪ ಹಾಗೂ ಸ್ನೇಹಿತರ ಬೆಂಬಲದಿಂದ ಒಂದು ವಿಭಿನ್ನ ಚಿತ್ರಕ್ಕೆ ಏನು ಬೇಕು ಅದನ್ನು ಒದಗಿಸಿ ತೆರೆಯ ಮೇಲೆ ತಂದಿದ್ದಾರೆ. ಈ ಚಿತ್ರದ ನಿರ್ದೇಶಕ ರಾ ಸೂರ್ಯ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ರಾ ಕಂಟೆಂಟ್ ಒಳಗೊಂಡಿದೆ. ಸುಂದರ ಹಸಿರು ಸಿರಿಯ ನಡುವೆ ರಕ್ತದೊಕುಳಿಯ ಕರಾಳ ದರ್ಶನವನ್ನು ಮಾಡಿಸಿದ್ದು, ಸಾವಿನ ಮನೆಯ ಮುಂದೆ ಡೋಲು ಹೊಡೆಯುವವರ ಕಷ್ಟ , ಕಾರ್ಪಣ್ಯಗಳು , ಮುಗ್ಧರ ಬದುಕಿನಲ್ಲಿ ಕ್ರೂರಿಗಳ ಅಟ್ಟಹಾಸ , ರೈಸ್ ಪುಲ್ಲಿಂಗ ಕರಾಳ ದಂಧೆಯ ಕ್ರೂರತೆಯನ್ನು ಸೂಕ್ಷ್ಮವಾಗಿ ತೆರೆದಿಟ್ಟಿದ್ದಾರೆ.
ಆದರೆ ಚಿತ್ರದ ಓಟ ನಿಧಾನಗತಿಯಲ್ಲಿ ಸಾಕಿದ್ದು, ಇನ್ನಷ್ಟು ವೇಗ ಮಾಡಬಹುದಿತ್ತು. ಮೊದಲ ಪ್ರಯತ್ನದಲ್ಲೇ ಗಮನ ಸೆಳೆಯುವಂತೆ ಮಾಡಿದ್ದು , ಚಿತ್ರದ ಎಲ್ಟು ಪಾತ್ರವನ್ನು ರಾ ಸೂರ್ಯ ಸಮರ್ಥವಾಗಿ ನಿರ್ವಹಿಸಿ , ಹೂಗಳನ್ನ ಪಟಾಯಿಸುವ ಕಿಲಾಡಿಯಾಗಿ ಮಿಂಚಿದ್ದಾರೆ. ಇನ್ನು ಚಿತ್ರ ಮುತ್ತಾ ಪಾತ್ರಧಾರಿ ಶೌರ್ಯ ಪ್ರತಾಪ್ ತನ್ನ ಪಾತ್ರಕ್ಕೆ ಜೀವ ತುಂಬಿ ತಾಳ್ಮೆ ಹಾಗೂ ಕೋಪವನ್ನು ತನ್ನ ಹಾವ ಭಾವದ ಮೂಲಕ ಅದ್ಭುತವಾಗಿ ತೋರಿಸಿದ್ದು , ಉತ್ತಮ ಪ್ರತಿಭೆ ಸಿಕ್ಕಂತಾಗಿದೆ.
ಇನ್ನು ನಟಿ ಪ್ರಿಯಾಂಕ ಮಳಲಿ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಪುಟಾಣಿ ಪ್ರಿಯಾ ಕೂಡ ಸೊಗಸಾಗಿ ಅಭಿನಯಿಸಿದ್ದಾಳೆ. ಇನ್ನು ಊರಿನ ಮುಖಂಡನಾಗಿ ರುಹನ್ ಆರ್ಯ ವಿಭಿನ್ನ ಶೇಡ್ ನಲ್ಲಿ ಗಮನ ಸೆಳೆದಿದ್ದು , ಬೇರೆ ಭಾಷೆಗಳಲ್ಲೂ ಅವಕಾಶ ಸಿಗಬಹುದು. ಕುಡಿತದ ಗುಂಗಿನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ನವೀನ್. ಡಿ. ಪಡೀಲ್, ರಾಮ್ ದೇವನಗರಿ ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇನ್ನು ಕಾಕ್ರೋಚ್ ಸುದೀ ಕೂಡ ಅಲೆಕ್ಸ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ.
ಇನ್ವೆಸ್ಟಿಗೇಷನ್ ಪೊಲೀಸ್ ಅಧಿಕಾರಿಯಾಗಿ ನಿರ್ಮಾಪಕ ಸತ್ಯ ಎಸ್ ಶ್ರೀನಿವಾಸನ್ , ಸೇಟು ಪಾತ್ರದಲ್ಲಿ ಸಂಗೀತ ನಿರ್ದೇಶಕ ಪ್ರಸನ್ನ ಕೇಶವ , ಇನ್ಸ್ಪೆಕ್ಟರ್ ಪಾತ್ರದಲ್ಲಿ ಯಮುನಾ ಶ್ರೀನಿಧಿ ಸೇರಿದಂತೆ ಎಲ್ಲಾ ಪಾತ್ರಗಳು ಗಮನ ಸೆಳೆದಿದ್ದಾರೆ. ಇಡೀ ಚಿತ್ರದ ಹೈಲೈಟ್ ಎಂದರೆ ಪ್ರಸನ್ನ ಕೇಶವ ರವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ಅದೇ ರೀತಿ ಛಾಯಾಗ್ರಹಕ ಮೈಯಪ್ಪ ಭಾಸ್ಕರ್ ರವರ ಸಾಫ್ಟ್ ಅಂಡ್ ರಫ್ ದೃಶ್ಯಗಳ ಕೈಚಳಕ ಅದ್ಭುತವಾಗಿದೆ. ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿರುವುದು ಕಾಣುತ್ತದೆ. ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಅಂಶವನ್ನು ಒಳಗೊಂಡಿರುವ ಈ ಚಿತ್ರ ಎಲ್ಲರ ಗಮನ ಸೆಳೆಯುವಂತಿದೆ.