ಮುಗ್ಧರ ನಂಬಿಕೆಗೆ ಮೋಸದ ಗಾಳ…ಮರಳೆ ಮುಳ್ಳು “ಕೊತ್ತಲವಾಡಿ” (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಕೊತ್ತಲವಾಡಿ
ನಿರ್ದೇಶಕ : ಶ್ರೀರಾಜ್
ನಿರ್ಮಾಪಕಿ : ಪುಷ್ಪಾ ಅರುಣ್‌ಕುಮಾರ್
ಸಂಗೀತ : ವಿಕಾಸ್ ವಸಿಷ್ಠ
ಛಾಯಾಗ್ರಾಹಣ : ಕಾರ್ತಿಕ್
ತಾರಾಗಣ : ಪೃಥ್ವಿ ಅಂಬಾರ್, ಕಾವ್ಯ ಶೈವ, ಗೋಪಾಲಕೃಷ್ಣ ದೇಶಪಾಂಡೆ , ರಾಜೇಶ್ ನಟರಂಗ , ಬಾಲ ರಾಜವಾಡಿ, ಅವಿನಾಶ್ , ಮಾನಸಿ ಸುಧೀರ್, ರಘು ರಾಮನಕೊಪ್ಪ ಹಾಗೂ ಮುಂತಾದವರು…
ಭೂಮಿ ಮೇಲೆ ಬದುಕಲು ಮನುಷ್ಯನಿಗೆ ಊಟ ಬೇಕು… ದುಡಿಯಲು ಕೆಲಸ ಬೇಕು….
ನೀರು , ಗಾಳಿ , ಬೆಳಕು ಸೇರಿದಂತೆ ದೈವದತ್ತ ಕೊಡುಗೆಗಳು ಬಹಳಷ್ಟು ನಮ್ಮ ಪರಿಸರದ ನಡುವೆ ಇದೆ.
ಅದನ್ನು ಎಷ್ಟು ಅಗತ್ಯವೋ ಅಷ್ಟು ಬಳಸಿಕೊಳ್ಳಬೇಕು ಹಾಗೆ ರಕ್ಷಿಸುವುದು ಅಷ್ಟೇ ಮುಖ್ಯ. ಮಳೆ ಇದ್ದರೆ ಬೆಳೆ, ಸಮೃದ್ಧಿ ಎಲ್ಲವೂ, ಅಂತದ್ದೇ ಒಂದು ಊರಿನಲ್ಲಿ ಜನರು ಊಟಕ್ಕೂ ಪರದಾಡುವ ಸ್ಥಿತಿ ಬಂದಾಗ ಮರಳು ಅವರ ಜೀವನಕ್ಕೆ ಆಧಾರವಾಗುವ ಕಥಾನಕದಲ್ಲಿ ರಾಜಕೀಯ ತಂತ್ರಗಾರಿಕೆ ಜನರ ಬದುಕನ್ನ ಯಾವ ಹಂತಕ್ಕೆ ತರುತ್ತದೆ ಎಂಬುದನ್ನು ಬಹಳ ಸೂಕ್ಷ್ಮವಾಗಿ ತೆರೆದಿಟ್ಟಿರುವಂತಹ ಚಿತ್ರ “ಕೊತ್ತಲವಾಡಿ” ಸುಂದರ ಪರಿಸರದ ಹೊಳೆಯ ಸಮೀಪದ ಒಂದು ಊರು , ಒಬ್ಬೊಬ್ಬರದು ಒಂದೊಂದು ರೀತಿಯ ದಿನನಿತ್ಯದ ಕೆಲಸ. ಮನೆ ಕಟ್ಟುವ ಕೆಲಸಕ್ಕೆ ಸೇರಿದಂತೆ ಬೇರೆ ಬೇರೆ ಕೆಲಸಕ್ಕೆ ಕೂಲಿ ಆಳುಗಳನ್ನು ನೋಡಿಕೊಳ್ಳುವ ಮೇಸ್ತ್ರಿ ಮೋಹನ (ಪೃಥ್ವಿ ಅಂಬರ್) ತಂದೆ ತಾಯಿ ಇಲ್ಲದ ಅನಾಥ. ಇನ್ನು ಅಜ್ಜಿ ಜೊತೆ ಜೀವನ ಮಾಡುತ್ತಾ ಅಂಗನವಾಡಿ ಟೀಚರ್ ಆಗಿ ಕೆಲಸ ಮಾಡುವ ಮಂಜಿ (ಕಾವ್ಯ ಶೈವ)ಗೆ ಮೋಹನನ ಮದುವೆ ಆಗುವ ಆಸೆ. ಊರಿನಲ್ಲಿ ಗುಜರಿ ವ್ಯಾಪಾರ ಮಾಡುವ ಬಾಬಣ್ಣ (ಗೋಪಾಲಕೃಷ್ಣ ದೇಶಪಾಂಡೆ) ಎಲ್ಲರ ಪ್ರೀತಿ , ನಂಬಿಕೆ ಗಳಿಸಿರುವುದರಲ್ಲಿ ಎತ್ತಿದ ಕೈ.
ಇದರ ನಡುವೆ ಕೆಲವರು ಲಗೋರಿ ಕುಮಾರನ ಬಳಿ ಸಾಲ ಪಡೆದು ಆಸ್ತಿ ಪತ್ರ ಇಟ್ಟು ಹಿಂಪಡೆಯಲು ಪರದಾಡುತ್ತಾರೆ. ಊಟಕ್ಕೂ ಪರದಾಡುವ ಜನರು , ಊರನ್ನು ಬೈಯುವಾಗ ಬಾಬಣ್ಣ ಜನರನ್ನು ಒಟ್ಟುಗೂಡಿಸಿ ಊರು ನಮ್ಮದು , ಗಾಳಿ ನಮ್ಮದು , ನೀರು ನಮ್ಮದು , ಈ ಮರಳು ನಮ್ಮದೇ ನಾವೆಲ್ಲರೂ ಮರಳನ್ನ ಸಾಗಿಸಿ ಹಣವನ್ನು ಗಳಿಸೋಣ ಎಂದು ಎಲ್ಲರನ್ನ ಒಪ್ಪಿಸುತ್ತಾನೆ. ನಿರಂತರ ಕೆಲಸದಿಂದ ಊರು ಜನರ ಬದುಕು ನೆಮ್ಮದಿಯಾಗುತ್ತದೆ.
ಬಾಬಣ್ಣನ ಕೈಯಲ್ಲಿ ಹಣದ ಸುರಿಮಳೆ, ಬಲಗೈಯಾಗಿ ನಿಲ್ಲುವ ಮೋಹನನಿಗೂ ಬೆಂಬಲವಾಗುತ್ತಾನೆ. ಪೊಲೀಸ್ ಕಡಿವಾಣಕ್ಕೂ ಜಗ್ಗದೆ ಮರಳು ದಂಧೆ ಜೋರಾಗುತ್ತದೆ. ಊರಿನ ಎಂಎಲ್ಎ ತಮ್ಮಣ್ಣನ ಸಾವಿನ ನಂತರ ಪತ್ನಿ ಮಾಲಿನಿ ತಮ್ಮಣ್ಣ (ಮನಸಿ ಸುಧೀರ್) ರ ನಂಬಿಕೆ , ವಿಶ್ವಾಸವನ್ನ ಮೋಸದಿಂದ ಗಳಿಸುವ ಬಾಬಣ್ಣ ಬೈ ಎಲೆಕ್ಷನ್ ನಲ್ಲಿ ಎಂಎಲ್ಎ ಆಗಿ ಗೆಲ್ಲುತ್ತಾನೆ. ಇವನ ಆಟ , ಆರ್ಭಟ ಪೊಲೀಸರಿಗೆ ದೊಡ್ಡ ತಲೆ ನೋವಾಗಿ ಎಸ್.ಪಿ. ಪರಶುರಾಮ್ (ರಾಜೇಶ್ ನಟರಂಗ) ಕಮಿಷನರ್ (ಅವಿನಾಶ್) ಮಾರ್ಗದರ್ಶನ ದಂತೆ ಈ ದಂಧೆ ಕೊರರನ್ನು ಮಟ್ಟ ಹಾಕಲು ಅಖಾಡಕ್ಕೆ ಎಂಟ್ರಿ ಪಡೆಯುತ್ತಾರೆ.
ಇದರ ನಡುವೆ ಮರಳು ತೆಗೆಯುವ ವಿಚಾರದಲ್ಲಿ ಪೊಲೀಸ್ ಹಾಗೂ ಮೋಹನ ನಡುವೆ ಮಾತಿನ ಚಿಕ್ಕಮಕಿ ನಡೆಯುತ್ತದೆ. ಒಂದಷ್ಟು ಸಾವು , ನೋವು ಎದುರಾಗುತ್ತದೆ. ಮತ್ತೆ ಚುನಾವಣಾ ವಿಚಾರವಾಗಿ ಮಾಲಿನಿ ತಮಣ್ಣ ಅಖಾಡಕ್ಕೆ ಪ್ರವೇಶ ಮಾಡುತ್ತಾರೆ. ಇಲ್ಲಿಂದ ಬೇರೆ ತಿರುಗು ಪಡೆದು ಬಾಬಣ್ಣನ ಹೊಸ ಅವತಾರ ಶುರುವಾಗುತ್ತದೆ. ಅದು ಏನು… ಊರಿನ ಪರಿಸ್ಥಿತಿ… ರಾಜಕೀಯ ಆಟ… ಪ್ರೇಮಿಗಳ ಬದುಕು… ಜನರ ಮನಸ್ಥಿತಿ… ಪೋಲಿಸ್ ಪ್ಲಾನ್… ಮರಳು ಮುಳ್ಳೇ… ಕ್ಲೈಮಾಕ್ಸ್ ಉತ್ತರ ಏನು ಎಂಬುದನ್ನು ಚಿತ್ರ ನೋಡಿ ತಿಳಿದುಕೊಳ್ಳಬೇಕು.
ಈ ಚಿತ್ರದ ನಿರ್ದೇಶಕ ಶ್ರೀರಾಜ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಸೂಕ್ಷ್ಮ ವಿಚಾರವಾಗಿದ್ದು , ಮರಳು ದಂಧೆಯ ಸುತ್ತ ಜನರ ಬದುಕು ,ಬಾವಣೆಯ ಮೇಲೆ ರಾಜಕೀಯದ ಆಟ ಏನು ಎಂಬುದನ್ನು ಸೂಕ್ಷ್ಮವಾಗಿ ಹೇಳುವ ಪ್ರಯತ್ನ ಮಾಡಿದ್ದಾರೆ. ಮುಗ್ಧರ ನಂಬಿಕೆಗೆ ಮೋಸದ ಗಾಳ ಹಾಕುವ ಸನ್ನಿವೇಶಗಳು ಗಮನ ಸೆಳೆಯುತ್ತದೆ. ಈ ರೀತಿಯ ಕಥೆ ಬಂದಿದ್ದು , ಚಿತ್ರಕಥೆ ವಿಭಿನ್ನವಾಗಿದೆ. ಆದರೆ ಚಿತ್ರದ ಓಟ ನಿಧಾನಗತಿಯಲ್ಲಿ ಸಾಗುವುದು ನೋಡುವುದಕ್ಕೆ ಕಷ್ಟವೆನಿಸುತ್ತದೆ. ಆದರೂ ಪ್ರಯತ್ನ ಚೆನ್ನಾಗಿದೆ.
ಎಲ್ಲರೂ ಕುಳಿತು ನೋಡುವಂತಹ ಚಿತ್ರ ನಿರ್ಮಿಸಿರುವ ನಿರ್ಮಾಪಕಿ ಪುಷ್ಪ ಅರುಣ್ ಕುಮಾರ್ ರವರ ಆಲೋಚನೆ ಮೆಚ್ಚುವಂಥದ್ದು, ಇನ್ನು ಈ ಚಿತ್ರದ ಸಂಗೀತ , ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿಬಂದಿದೆ. ಛಾಯಾಗ್ರಾಹಕರ ಕೈಚಳಕ ಅದ್ಭುತವಾಗಿದೆ. ಸಾಹಸ ಸನ್ನಿವೇಶಗಳು ಕೂಡ ಅದ್ಭುತವಾಗಿದೆ. ತಾಂತ್ರಿಕವಾಗಿ ತಂಡ ಶ್ರಮಪಟ್ಟಿರುವುದು ತೆರೆಯ ಮೇಲೆ ಕಾಣುತ್ತದೆ. ನಾಯಕನಾಗಿ ಅಭಿನಯಿಸಿರುವ ಪೃಥ್ವಿ ಅಂಬರ್ ಬಹಳ ಸ್ವಾಭಾವಿಕವಾಗಿ ನೈಜಕ್ಕೆ ಹತ್ತಿರ ಎನ್ನುವ ರೀತಿ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.
ಒಬ್ಬ ಪ್ರೇಮಿಯಾಗಿ , ಮನ ಮಿಡಿಯುವ , ಆಕ್ಷನ್ ಸನ್ನಿವೇಶವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇನ್ನು ನಾಯಕಿಯಾಗಿ ಕಾವ್ಯ ಶೈವ ಹಳ್ಳಿ ಹುಡುಗಿಯ ಪಾತ್ರಕ್ಕೆ ಸೂಕ್ತ ಎನ್ನುವಂತೆ ಕಾಣುತ್ತಾ , ಪಾತ್ರಕ್ಕೆ ನ್ಯಾಯವನ್ನು ಒದಗಿಸಿ ಗಮನ ಸೆಳೆಯುತ್ತಾರೆ. ಇವರಿಬ್ಬರ ಹವಭಾವ , ಭಾಷೆ ಸೊಗಡು ಸೊಗಸಾಗಿದೆ. ಇನ್ನು ಇಡೀ ಚಿತ್ರದ ಹೈಲೈಟ್ ಅಂದರೆ ಗೋಪಾಲ್ ಕೃಷ್ಣ ದೇಶಪಾಂಡೆ ಗುಜರಿ ಬಾಬಣ್ಣ ಹಾಗೂ ರಾಜಕೀಯ ಮುಖಂಡನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುವುದರ ಜೊತೆಗೆ ಎರಡು ಶೇಡ್ ಗಳಲ್ಲಿ ಮಿಂಚಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ರಾಜೇಶ್ ನಟರಂಗ ಸಮರ್ಥವಾಗಿ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅದೇ ರೀತಿ ರಾಜಕೀಯ ನಾಯಕಿಯಾಗಿ ಮಾನಸಿ ಸುಧೀರ್ ಕೂಡ ನ್ಯಾಚುರಲ್ ಆಗಿ ಅಭಿನಯಿಸಿದ್ದಾರೆ. ಉಳಿದಂತೆ ಬಾಲ ರಾಜವಾಡಿ , ರಘು ರಾಮನಕೊಪ್ಪ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದಂತೆ ಇಡೀ ಕುಟುಂಬ ಕುಳಿತು ನೋಡಬಹುದಾದಂತಹ ಚಿತ್ರ ಇದಾಗಿದೆ.