Cini NewsSandalwood

“ನಿರ್ದಿಗಂತದ” ಹರ್ಷ ಎರಡನೇ ವರ್ಷ

Spread the love

ಮೈಸೂರಿನ ಕಿರುರಂಗಮಂದಿರದಲ್ಲಿ ಭಾನುವಾರ ನಡೆದ ‘ನಿರ್ದಿಗಂತದ ಹರ್ಷ, ಎರಡನೇ ವರ್ಷ’ ಕಾರ್ಯಕ್ರಮ ಸಹೃದಯರಿಗೆ ನಾಟಕ, ಸಂಗೀತ, ಹಾಡುಗಳ ಹೂರಣವಾಗಿತ್ತು. ನಟ ಪ್ರಕಾಶ್‌ ರಾಜ್‌ ನೇತೃತ್ವದ ತಂಡ ಪ್ರಸ್ತುತಪಡಿಸಿದ ‘ಸಮತೆಯ ಹಾಡುಗಳು’ ಸಮಾಜದಲ್ಲಿನ ಕೆಡಕುಗಳಿಗೆ ಪ್ರತಿರೋಧದ ದೊಂದಿಯಾದರೆ, ಅರುಣ್ ಲಾಲ್ ನಿರ್ದೇಶನದ ‘ಕು ಹೂ’ ನಾಟಕವು ಸಮಾಜದ ಗತಿಬಿಂಬವನ್ನು ರೈಲು ಪ್ರಯಾಣದಲ್ಲಿ ಅನುರಣಿಸಿತು.

ರಂಗಭೂಮಿ ಎಂದರೆ ಸಾಧ್ಯತೆ:
‘ನಿರ್ದಿಗಂತವಾಗಿ ಏರಿ’ ವಾರ್ಷಿಕ ಸಂಚಿಕೆ ಬಿಡುಗಡೆ ಮಾಡಿದ ಲೇಖಕ ಜಯಂತ ಕಾಯ್ಕಿಣಿ, ‘ಬೇರೆಯವರ ಕಥೆ ನೋಡಲು ರಂಗಭೂಮಿಗೆ ಬರುವುದಲ್ಲ. ನಮ್ಮ ಅಸಾಧ್ಯ ಸಾಧ್ಯತೆಗಳನ್ನು ಕಂಡುಕೊಳ್ಳಲು ಬರುವುದಾಗಿದೆ’ ಎಂದರು.

ಸಂವೇದನಾಶೀಲ ಚಲನಚಿತ್ರ ನಿರ್ದೇಶಕ ಋತ್ವಿಕ್ ಘಟಕ್ ಕುರಿತ ಕವಿತೆ ಓದಿದ ಅವರು, ‘ಯೋಚಿಸಿ, ಯೋಚಿಸಿ, ಅದಕ್ಕೆ ನಿಮ್ಮನ್ನು ನೀವು ತಯಾರಿಸಿಕೊಳ್ಳಿ. ಅದು ಸಮಾಜಕ್ಕೆ ನೆರವಾಗುತ್ತದೆ’ ಎಂಬ ಅವರ ಮಾತನ್ನು ನೆನಪಿಸಿಕೊಂಡರು. ‘ಅಂಚಿನ ಮನುಷ್ಯನ ಕುರಿತ ನೋವು, ಏಕಾಂತ, ಯಾತನೆ ನಮ್ಮದಾಗಬೇಕಿದೆ’ ಎಂದರು. ‘ವೈದ್ಯಕೀಯ ವಿಜ್ಞಾನ ಮತ್ತು ಕಲೆಯು ಮನುಷ್ಯನ ನೋವನ್ನು ಕಡಿಮೆ ಮಾಡುವುದಾಗಿದೆ. ರಂಗಭೂಮಿ ಕೇವಲ ಬುದ್ಧಿವಂತರಾಗಿಸದೇ, ಎಲ್ಲರನ್ನೂ ಒಳಗೊಳ್ಳುವ ಮಾನವೀಯತೆ ಕಲಿಸುತ್ತದೆ’ ಎಂದು ಹೇಳಿದರು.

‘70 ವರ್ಷದ ಭಾರತೀಯ ರಂಗಭೂಮಿಯ ಸಂವೇದನೆ ಹಿಗ್ಗಿಸಿದ ರಂಗಕರ್ಮಿಗಳಾದ ಬಾದಲ್ ಸರ್ಕಾರ್, ಬಿ.ವಿ.ಕಾರಂತ, ಸತ್ಯದೇವ ದುಬೆ, ಮಹೇಶ್‌ ಎಲಕುಂಚವಾರ್, ಪ್ರಸನ್ನ ಅವರ ಪರ್ವ ಮುಗಿಯಿತೆಂದು ಅಂದುಕೊಳ್ಳುವಾಗ ನಿರ್ದಿಗಂತವು ಹೊಸ ತಲೆಮಾರಿಗೆ ಬೆಳಕನ್ನು ನೀಡುವ ಜೀವಂತ ಸಾಧ್ಯತೆ. ತೋರುಗಾಣಿಕೆಯಿಲ್ಲದ ಮಾತೃತ್ವ ಅದಕ್ಕಿದೆ’ ಎಂದರು.

‘ಕೃಷಿಯಂತೆ ನಿರ್ದಿಗಂತವು ಪ್ರಾಮಾಣಿಕ ಕೆಲಸ ಮಾಡುತ್ತಿದೆ. ಈಚೆಗೆ ಅಲ್ಲಿಗೆ ಹೋದಾಗ ಕೃಪಾಕರ ಸೇನಾನಿ ಅವರು ಕೊಟ್ಟ ದೋಣಿ ನೋಡುತ್ತಲೇ ಮಾಧವ ಗಾಡ್ಗೀಳ್‌ ನೆನಪಾದರು’ ಎಂದು ಸ್ಮರಿಸಿದರು.

‘ಕಾಡಿನಲ್ಲಿ ಹೆಣ್ಣಾನೆ ಗರ್ಭ ಧರಿಸಿದರೆ, ಪ್ರಸವಕ್ಕೆ ಮೂರ್ನಾಲ್ಕು ತಿಂಗಳ ಮೊದಲೇ ಉಳಿದ ನಾಲ್ಕೈದು ಹೆಣ್ಣಾನೆಗಳಿಗೂ ಕೆಚ್ಚಲು ತುಂಬುತ್ತದೆ. ಗಜಪ್ರಸವದಲ್ಲಿ ತಾಯಿ ಆನೆ ಸತ್ತರೆ, ನಿಸರ್ಗವೇ ಮರಿಗಾಗಿ ಪರ್ಯಾಯ ಕಲ್ಪಿಸಿರುತ್ತದೆ’ ಎಂದು ಗಾಡ್ಗೀಳ್ ಹೇಳಿದ್ದರು. ‘ರಂಗಭೂಮಿ, ಕಲೆ, ಕಾವ್ಯ, ಕಥೆ ಇವೆಲ್ಲ ಆ ಮಾದರಿಯ ಸಾಧ್ಯತೆಗಳು’ ಎಂದರು.

‘ಮೌನವನ್ನೇ ಕದಿಯಲಾದ ಕಾಲವಿದು’
‘ತನ್ನೊಳಗೆ ಹಕೀಮನನ್ನು ಕಂಡುಕೊಳ್ಳದಿರುವ ಸ್ಥಿತಿಗೆ ದೇಶ ತಲುಪಿದೆ. ಮೌನವನ್ನೇ ಕದಿಯಲಾದ ಕಾಲದಲ್ಲಿದ್ದೇವೆ. ಈ ಕಾಲಕ್ಕೆ ಪ್ರಕಾಶ್‌ ಮಾಡಿರುವ ಸಾಂಸ್ಕೃತಿಕ ಪ್ರಣಾಳಿಕೆ ನಿರ್ದಿಗಂತವಾಗಿದೆ’ ಎಂದು ಲೇಖಕ ಕೆ.ವೈ.ನಾರಾಯಣಸ್ವಾಮಿ ಹೇಳಿದರು.‘ಕಣ್ಣಗಾಯ ಅರಿಯಲು ಬಾರದ ಸ್ಥಿತಿಯಲ್ಲಿ ಸಮಾಜವಿದೆ. ಅದನ್ನು ಮಾಯಿಸುವುದು ರಂಗಭೂಮಿ. ಮನುಷ್ಯತ್ವದ ಸಾಧ್ಯತೆ ವಿಸ್ತರಿಸಬೇಕಿದ್ದು, ನಿರ್ದಿಗಂತವು ಕರಾವಳಿ, ಬಯಲು ಸೀಮೆಗೂ ಚಾಚಲಿದೆ’ ಎಂದರು.

Visited 1 times, 1 visit(s) today
error: Content is protected !!