Cini NewsSandalwood

“45” ಚಿತ್ರದ ಪ್ರಮೋಷನ್ ಹಾಡಿಗೆ ನೃತ್ಯ ಮಾಡಲು ಉಗಾಂಡದಿಂದ ಬಂದ ನೃತ್ಯಗಾರರು

Spread the love

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ , ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖಪಾತ್ರದಲ್ಲಿ ನಟಿಸಿರುವ, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಚೊಚ್ಚಲ ನಿರ್ದೇಶನದ ಹಾಗೂ ಎಂ. ರಮೇಶ್ ರೆಡ್ಡಿ ಅವರು ತಮ್ಮ ಸೂರಜ್ ಪ್ರೊಡಕ್ಷನ್ ಬ್ಯಾನರ್ ನಲ್ಲಿ ನಿರ್ಮಿಸುತ್ತಿರುವ ಕನ್ನಡದ ಬಹುನಿರೀಕ್ಷಿತ ಮಲ್ಟಿಸ್ಟಾರರ್ “45” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ.

ಪ್ರಸ್ತುತ “45” ಚಿತ್ರಕ್ಕಾಗಿ ಅದ್ದೂರಿ ಪ್ರಮೋಷನ್ ಸಾಂಗ್ ನ ಚಿತ್ರೀಕರಣ ನಡೆಸಲು ಚಿತ್ರತಂಡ ತಯಾರಿ ನಡೆಸಿದೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರೊಂದಿಗೆ ಈ ಹಾಡಿಗೆ ಹೆಜ್ಜೆ ಹಾಕಲು ಉಗಾಂಡದಿಂದ “ಜಿಟೊ ಕಿಡ್ಸ್” ಎಂದೇ ಖ್ಯಾತರಾಗಿರುವ ನೃತ್ಯಗಾರರ ತಂಡ ಆಗಮಿಸಿದ್ದಾರೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ಮಾಪಕ ರಮೇಶ್ ರೆಡ್ಡಿ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಅವರು ದೂರದ ಉಗಾಂಡಾ ದಿಂದ ಆಗಮಿಸಿದ ನೃತ್ಯಗಾರರನ್ನು ಆತ್ಮೀಯವಾಗಿ ಸ್ವಾಗತಿಸಿದ್ದಾರೆ.

ಪ್ರಮೋಷನ್ ಸಾಂಗ್ ಕುರಿತು ಮಾತನಾಡಿದ ನಿರ್ದೇಶಕ ಅರ್ಜುನ್ ಜನ್ಯ, ಎಲ್ಲಾ ಚಿತ್ರಗಳಲ್ಲೂ ಸಾಮಾನ್ಯವಾಗಿ ಪ್ರಮೋಷನ್ ಸಾಂಗ್ಸ್ ಇರುತ್ತದೆ. ಆದರೆ ನಾವು ಸ್ವಲ್ಪ ವಿಭಿನ್ನವಾಗಿ ಮಾಡೋಣ ಅಂದುಕೊಂಡಿದ್ದೇವೆ. ತಮ್ಮ ಅಮೋಘ ನೃತ್ಯದಿಂದ ಇಡೀ ವಿಶ್ವದಲ್ಲೇ ಪ್ರಸಿದ್ದರಾಗಿರುವ ಉಗಾಂಡದ “ಜಿಟೊ ಕಿಡ್ಸ್” ಎಂಬ ನೃತ್ಯಗಾರರ ತಂಡ ಈ ಹಾಡಿಗೆ ನೃತ್ಯ ಮಾಡಲು ದೂರದ ಉಗಾಂಡಾ ದಿಂದ ಆಗಮಿಸಿದ್ದಾರೆ.

ಇವರು ಇದೇ ಮೊದಲು ಭಾರತಕ್ಕೆ ಆಗಮಿಸಿರುವುದು. ಈ ಪ್ರಮೋಷನ್ ಸಾಂಗ್ ನ ಚಿತ್ರೀಕರಣದಲ್ಲಿ ಶಿವರಾಜಕುಮಾರ್, ಉಪೇಂದ್ರ , ರಾಜ್ ಬಿ ಶೆಟ್ಟಿ ಹಾಗೂ ಉಗಾಂಡಾದ “ಜಿಟೊ ಕಿಡ್ಸ್” ಪಾಲ್ಗೊಳ್ಳಲ್ಲಿದ್ದಾರೆ. ಇದಕ್ಕಾಗಿ ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗಿದೆ. ಕನ್ನಡದಲ್ಲಿ ಎಂ.ಸಿ.ಬಿಜ್ಜು ಈ ಹಾಡನ್ನು ಬರೆದು ಹಾಡಿದ್ದಾರೆ. ಜಾನಿ ಮಾಸ್ಟರ್ ನೃತ್ಯ ನಿರ್ದೇಶನ ಮಾಡಲಿದ್ದಾರೆ ಎಂದರು.

ನಮ್ಮ ನಿರ್ದೇಶಕರು ಸಿನಿಮಾವನ್ನು ಪ್ರೀತಿಸುವ ರೀತಿ ನೋಡಿದರೆ ಬಹಳಸಂತೋಷವಾಗುತ್ತದೆ. ಈಗ ಪ್ರಮೋಷನ್ ಸಾಂಗ್ ಅನ್ನು ಅದ್ದೂರಿಯಾಗಿ ಚಿತ್ರೀಕರಣ ಮಾಡಲು ಮುಂದಾಗಿದ್ದಾರೆ. ಅದಕ್ಕಾಗಿ ಉಗಾಂಡಾದಿಂದ ಹೆಸರಾಂತ ನೃತ್ಯಗಾರರು ಆಗಮಿಸಿದ್ದಾರೆ. ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅವರು ಸಹ ಹಾಡಿನಲ್ಲಿ ಅಭಿನಯಿಸಲಿದ್ದಾರೆ. ಎಲ್ಲಾ ಕಲಾವಿದರ ಹಾಗೂ ತಂತ್ರಜ್ಞರ ಸಹಕಾರದಿಂದ ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ. ನಮ್ಮ “45” ಚಿತ್ರ ಭಾರತ ಹಾಗೂ ಭಾರತದಾಚೆಗೂ ಯಶಸ್ವಿಯಾಗಲಿದೆ ಎಂಬ ನಂಬಿಕೆ ನನಗಿದೆ. ಆಗಸ್ಟ್ 15 ರಂದು ನಮ್ಮ ಚಿತ್ರ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ರಮೇಶ್ ರೆಡ್ಡಿ ತಿಳಿಸಿದ್ದಾರೆ.

Visited 1 times, 1 visit(s) today
error: Content is protected !!