Cini NewsSandalwood

ಯುವ ನಿರ್ದೇಶಕ ರಾಘವನ್ ಕಾರ್ತಿಕ್ ಸಾರಥ್ಯದ “ದಿ ಗ್ರ್ಯಾಂಡ್ ಇಲ್ಯೂಶನ್” ಟೀಸರ್ ಬಿಡುಗಡೆ.

Spread the love

ಈಗಾಗಲೇ ಒಂದಷ್ಟು ಮ್ಯೂಸಿಕ್ ಆಲ್ಬಂಗಳಿಗೆ ಸಂಗೀತ ಸಂಯೋಜಿಸುವ ಮೂಲಕ ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಯವ ಪ್ರತಿಭೆ ರಾಘವನ್ ಕಾರ್ತಿಕ್, ಈಗ ‘ದಿ ಗ್ರ್ಯಾಂಡ್ ಇಲ್ಯೂಶನ್’ ಎಂಬ ಹೊಸ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಅಡಿಯಿಡುವ ತಯಾರಿಯಲ್ಲಿದ್ದಾರೆ. ಈಗಾಗಲೇ ‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದು, ಇತ್ತೀಚೆಗೆ ‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಮೊದಲ ಟೀಸರ್ ಮತ್ತು ‘ಅನುರಾಗದಿ ಅರಳಿದೆ ಮನ…’ ಎಂಬ ಮೊದಲ ಹಾಡು ಬಿಡುಗಡೆಯಾಯಿತು.

ಹಿರಿಯ ನಟ ಉಮೇಶ್, ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಮೊದಲಾದ ಗಣ್ಯರು ಈ ಸಮಾರಂಭದಲ್ಲಿ ಹಾಜರಿದ್ದು’ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಟೀಸರ್ ಮತ್ತು ‘ಅನುರಾಗದಿ ಅರಳಿದೆ ಮನ…’ ಹಾಡನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು. ಯುವ ಪ್ರತಿಭೆ ರಾಘವನ್ ಕಾರ್ತಿಕ್ ‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸುವುದರ ಜೊತೆಗೆ ಈ ಚಿತ್ರಕ್ಕೆ ನಿರ್ದೇಶಕನಾಗಿ ಆ್ಯಕ್ಷನ್-ಕಟ್ ಕೂಡ ಹೇಳುತ್ತಿದ್ದಾರೆ. ‘ಅನುರಾಗದಿ ಅರಳಿದೆ ಮನ…’ ಗೀತೆಗೆ ಗಾಯಕಿ ಪ್ರತಿಮಾ ಭಟ್ ಧ್ವನಿಯಾಗಿದ್ದಾರೆ.

‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಮೊದಲ ಟೀಸರ್ ಮತ್ತು ಹಾಡನ್ನು ಬಿಡುಗಡೆಗೊಳಿಸಿ ಮಾತನಾಡಿದ ನಿರ್ದೇಶಕ ಕಂ ಸಂದೀತ ಸಂಯೋಜಕ ರಾಘವನ್ ಕಾರ್ತಿಕ್, ‘ಒಂದು ಹೆಣ್ಣಿನ ಸುತ್ತ ಮತ್ತು ಒಂಬತ್ತು ಪ್ರಮುಖ ಪಾತ್ರಗಳ ಸುತ್ತ ಈ ಸಿನಿಮಾದ ಕಥೆ ಸಾಗುತ್ತದೆ. ಜಗತ್ತಿನ ಅನೇಕ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇವೆ. ಭ್ರಮೆ ಮತ್ತು ವಾಸ್ತವಗಳ ಸಂಗಮ ಈ ಸಿನಿಮಾವಾಗಲಿದೆ. ಈಗಾಗಲೇ ಈ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಕೂಡ ನಡೆಯುತ್ತಿದೆ. ಶೀಘ್ರದಲ್ಲಿಯೇ ಈ ಸಿನಿಮಾದ ಇತರ ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದೇವೆ. ಆದಷ್ಟು ಬೇಗ ಈ ಸಿನಿಮಾದ ಚಿತ್ರೀಕರಣ ಶುರುವಾಗಲಿದೆ. ನಮ್ಮ ಸಿನಿಮಾದಲ್ಲಿ ಹೇಳಬೇಕಾದ ವಿಷಯಗಳನ್ನು ಈ ಟೀಸರಿನಲ್ಲಿ ಹೇಳಿದ್ದೇವೆ’ ಎಂದು ಚಿತ್ರದ ಬಗ್ಗೆ ಪ್ರಾಥಮಿಕ ವಿವರಣೆ ನೀಡಿದರು.

ಇನ್ನು ‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದ ಹಿರಿಯ ನಟ ಉಮೇಶ್, ‘ನಾನು ಹೊಸಬರ ಈ ಚಿತ್ರತಂಡಕ್ಕೆ ಶುಭ ಹಾರೈಸಲು ಬಂದಿದ್ದೇನೆ. ಇಂದಿನ ಕಾಲದ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಮಾಡಿ. ಒಳ್ಳೆಯ ಕಥೆಯಿರುವ, ಸದಭಿರುಚಿಯ ಸಿನಿಮಾಗಳನ್ನು ಕನ್ನಡ ಪ್ರೇಕ್ಷಕರು ಕೈ ಹಿಡಿದು ಬೆಳೆಸುತ್ತಾರೆ’ ಎಂದು ಚಿತ್ರತಂಡಕ್ಕೆ ಕಿವಿಮಾತು ಹೇಳಿದರು. ಮತ್ತೋರ್ವ ಅತಿಥಿ ಪಲ್ಲಕ್ಕಿ ರಾಧಾಕೃಷ್ಣ, ‘ಈ ಸಿನಿಮಾದ ಕಥಾಹಂದರ ಮತ್ತು ಅವರ ಯೋಚನೆಗಳನ್ನು ನೋಡಿದರೆ, ಕನ್ನಡದಲ್ಲಿ ಇದೊಂದು ಬೇರೆ ಆಯಾಮದ ಸಿನಿಮಾವಾಗಲಿದೆ ಎಂಬ ಭರವಸೆಯಿದೆ. ಇಂಥ ಹೊಸ ಪ್ರತಿಭೆಗಳು ಬೆಳೆಯಬೇಕು’ ಎಂದು ಶುಭ ಹಾರೈಸಿದರು.

ಪತ್ರಿಕಾಗೋಷ್ಟಿಯಲ್ಲಿ ನಿರ್ದೇಶಕ ರಾಘವನ್ ಕಾರ್ತಿಕ್, ನಟರಾದ ಸೂರ್ಯತೇಜ, ಶ್ರೇಯಸ್, ಪುನೀತ್ ಮತ್ತಿತರರು ಹಾಜರಿದ್ದು ತಮ್ಮ ಪಾತ್ರದ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು. ಸದ್ಯ ‘ದಿ ಗ್ರ್ಯಾಂಡ್ ಇಲ್ಯೂಶನ್’ ಚಿತ್ರದ ಪ್ರೀ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಮುಂದಿನ ಎಂಟು-ಹತ್ತು ತಿಂಗಳಿನಲ್ಲಿ ಈ ಸಿನಿಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಈ ಚಿತ್ರದ ಇತರ ಕಲಾವಿದರು ಮತ್ತು ತಂತ್ರಜ್ಞರ ಕುರಿತು ಹೆಚ್ಚಿನ ಮಾಹಿತಿ ನೀಡುವುದಾಗಿ ಚಿತ್ರತಂಡ ತಿಳಿಸಿದೆ.

‘ಕನ್ನಡದ ಮಟ್ಟಿಗೆ ‘ದಿ ಗ್ರ್ಯಾಂಡ್ ಇಲ್ಯೂಶನ್’ ಹೊಸಬಗೆಯ ಸಿನಿಮಾವಾಗಲಿದೆ ಎಂಬ ವಿಶ್ವಾಸವಿದೆ. ಈ ಸಿನಿಮಾದಲ್ಲಿ ಹತ್ತಾರು ವಿಷಯಗಳಿವೆ. ಅವೆಲ್ಲವನ್ನೂ ಮನರಂಜನೆಯ ಪರಿದಿಯೊಳಗೆ ಪ್ರೇಕ್ಷಕರ ಮುಂದೆ ತರುವ ಪ್ರಯತ್ನವನ್ನು ಈ ಸಿನಿಮಾದಲ್ಲಿ ಮಾಡುತ್ತಿದ್ದೇವೆ. ಈಗಾಗಲೇ ಈ ಸಿನಿಮಾದ ತೆರೆಹಿಂದಿನ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣಕ್ಕೆ ಹೊರಡಲಿದ್ದೇವೆ. ಮುಂದಿನ ಎಂಟು-ಹತ್ತು ತಿಂಗಳಲ್ಲಿ ಈ ಸಿನಿಮಾ ತೆರೆಗೆ ಬರಲಿದೆ.

 

Visited 1 times, 1 visit(s) today
error: Content is protected !!