“ಸೀಟ್ ಎಡ್ಜ್” ಚಿತ್ರದ ‘ಅಂಗೋ ಇಂಗೋ…’ ಎಂಬ ವಿಡಿಯೋ ಸಾಂಗ್ ಬಿಡುಗಡೆ.
ಈಗಾಗಲೇ ಕಿರುತೆರೆ ಮತ್ತು ಹಿರಿತೆರೆ ಎರಡರಲ್ಲೂ ತನ್ನದೇ ಆದ ಛಾಪು ಮೂಡಿಸಿರುವ ಯುವ ನಟ ಸಿದ್ದು ಮೂಲಿಮನೆ ನಾಯಕ ನಟನಾಗಿ ಅಭಿನಯಿಸಿರುವ ಹೊಸಚಿತ್ರ ‘ಸೀಟ್ ಎಡ್ಜ್’ ಸದ್ದಿಲ್ಲದೆ ಬಿಡುಗಡೆಗೆ ಸಿದ್ದವಾಗುತ್ತಿದೆ. ‘ಎನ್. ಆರ್. ಸಿನಿಮಾ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಗಿರಿಧರ ಟಿ. ವಸಂತಪುರ ಮತ್ತು ಸುಜಾತ ಗಿರಿಧರ ಬಂಡವಾಳ ಹೂಡಿ ನಿರ್ಮಿಸುತ್ತಿರುವ ‘ಸೀಟ್ ಎಡ್ಜ್’ ಸಿನಿಮಾಕ್ಕೆ ಯುವ ನಿರ್ದೇಶಕ ಚೇತನ್ ಶೆಟ್ಟಿ ನಿರ್ದೇಶನ ಮಾಡುತ್ತಿದ್ದಾರೆ.
ಕನ್ನಡದಲ್ಲಿ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವವಿರುವ ಚೇತನ್ ಶೆಟ್ಟಿ ಮೊದಲ ಬಾರಿಗೆ ‘ಸೀಟ್ ಎಡ್ಜ್’ ಸಿನಿಮಾದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಗಾಂಧಿನಗರಕ್ಕೆ ಪರಿಚಯವಾಗುತ್ತಿದ್ದಾರೆ.
ಇನ್ನು ‘ಸೀಟ್ ಎಡ್ಜ್’ ಸಿನಿಮಾದಲ್ಲಿ ನಾಯಕ ಸಿದ್ದು ಮೂಲಿಮನಿಗೆ ಯುವ ನಟಿ ರವೀಕ್ಷಾ ಶೆಟ್ಟಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ , ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕರೇ, ಪುನೀತ್ ಬಾಬು ತೇಜು ಪೊನ್ನಪ್ಪ, ಮನಮೋಹನ್ ರೈ ಮುಂತಾದವರು ‘ಸೀಟ್ ಎಡ್ಜ್’ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
‘ಸೀಟ್ ಎಡ್ಜ್’ ಸಿನಿಮಾದ ಹಾಡುಗಳಿಗೆ ಆಕಾಶ್ ಪರ್ವ ಸಂಗೀತ ಸಂಯೋಜಿಸಿದ್ದು, ಕೆಲದಿನಗಳ ಹಿಂದಷ್ಟೇ ಈ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿತ್ತು. ಸಿದ್ದು ಕೊಡಿಪುರ ಸಾಹಿತ್ಯದ ರೋಮ್ಯಾಂಟಿಕ್ ಗೀತೆಗೆ ಅರ್ಮನ್ ಮಲ್ಲಿಕ್ ಧ್ವನಿ ಕುಣಿಸಿದ್ದು, ಆಕಾಶ್ ಪರ್ವ ಟ್ಯೂನ್ ಹಾಕಿದ್ದಾರೆ. ‘ಸಾರಿ ಹೇಳುವೆ ಜಗಕ್ಕೆ…’ ಎಂಬ ಗೀತೆ ಬಿಡುಗಡೆಯಾಗಿದ್ದು ಸಿದ್ದು ಮೂಲಿಮನಿ ಹಾಗೂ ರವೀಕ್ಷಾ ಜೋಡಿಯಾಗಿ ಹೆಜ್ಜೆ ಹಾಕಿದ್ದರು. ಈ ಹಾಡಿಗೆ ಸಿನಿಪ್ರಿಯರು ಮತ್ತು ಕೇಳುಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ಇತ್ತೀಚೆಗಷ್ಟೇ, ‘ಸೀಟ್ ಎಡ್ಜ್’ ಚಿತ್ರದ ‘ಅಂಗೋ ಇಂಗೋ…’ ಎಂಬ ಮತ್ತೊಂದು ವಿಡಿಯೋ ಸಾಂಗ್ ಬಿಡುಗಡೆ ಆಗಿದೆ. ಲಕ್ಷ್ಮಿ ರಮೇಶ್ ಸಾಹಿತ್ಯವಿರುವ ಈ ಹಾಡಿಗೆ ಗಾಯಕ ಟಿಪ್ಪು ದನಿಯಾಗಿದ್ದಾರೆ. ಪಕ್ಕಾ ಮಾಸ್ ಆಗಿ, ಅಷ್ಟೇ ಕಲರ್ ಫುಲ್ ಆಗಿ ಈ ಹಾಡು ಮೂಡಿ ಬಂದಿದೆ.
ಡಾರ್ಕ್ ಕಾಮಿಡಿ ಜೊತೆಗೆ ಹಾರರ್-ಥ್ರಿಲ್ಲರ್ ಶೈಲಿಯಲ್ಲಿ ‘ಸೀಟ್ ಎಡ್ಜ್’ ಸಿನಿಮಾ ಮೂಡಿಬಂದಿದೆ. ಯೂ-ಟ್ಯೂಬ್ ಬ್ಲಾಗರ್ ಆಗಿರುವ ಹುಡುಗನೊಬ್ಬನ ಘೋಸ್ಟ್ ಹಂಟಿಂಗ್ ಸಾಹಸ, ಅದರಲ್ಲಿ ಆತ ಏನೇನು ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದರ ಸುತ್ತ ಇಡೀ ಸಿನಿಮಾದ ಕಥಾಹಂದರ ಸಾಗುತ್ತದೆ. ಬೆಂಗಳೂರು, ಮೈಸೂರು, ಶಿವಮೊಗ್ಗ ಸುತ್ತಮುತ್ತ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಚಿತ್ರಕ್ಕೆ
ದೀಪಕ್ ಕುಮಾರ್ ಜೆ. ಕೆ ಛಾಯಾಗ್ರಹಣ, ನಾಗೇಂದ್ರ ಉಜ್ಜನಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ.
ಸದ್ಯ ‘ಸೀಟ್ ಎಡ್ಜ್’ ಚಿತ್ರದ ಸಿ. ಜಿ (ಕಂಪ್ಯೂಟರ್ ಗ್ರಾಫಿಕ್ಸ್) ಕೆಲಸಗಳು ನಡೆಯುತ್ತಿದ್ದು, ಇದೇ ಜುಲೈನಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.