“ಸರ್ಕಾರಿ ನ್ಯಾಯಬೆಲೆ ಅಂಗಡಿ” ಗೆ ಚಾಲನೆ ನೀಡಿದ ಆಹಾರ ಸಚಿವರು
ಸರ್ಕಾರಿ ನ್ಯಾಯಬೆಲೆ ಅಂಗಡಿ, ಸೋಮನಹಳ್ಳಿ, ನಟಿ ರಾಗಿಣಿ ದ್ವಿವೇದಿ ಅವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಚಿತ್ರ, ಪವನ್ ಹಾಗೂ ಬಿ.ರಾಮಮೂರ್ತಿ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದ ಮುಹೂರ್ತ ಸಮಾರಂಭ ವಿಜಯನಗರದ ಆದಿಚುಂಚನಗಿರಿ ಶಾಖಾಮಠದ ಗಂಗಾಧರೇಶ್ವರ ದೇವಸ್ಥಾನದಲ್ಲಿ ನೆರವೇರಿತು. ಎರಡು ತಿಂಗಳ ಹಿಂದಷ್ಟೇ ಚಿತ್ರದ ಹಾಡುಗಳ ಧ್ವನಿಮುದ್ರಣ ಪೂಜೆ ಕೂಡ ಇಲ್ಲೇ ನಡೆದಿತ್ತು.
ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಹಿರಿಯ ನಿರ್ದೇಶಕರಾದ ಬಿ.ರಾಮಮೂರ್ತಿ ಅವರು ರಚಿಸಿದ್ದಾರೆ. ಚಿತ್ರದ ಮುಹೂರ್ತ ದೃಶ್ಯಕ್ಕೆ ಹಿರಿಯನಟ ಶ್ರೀನಾಥ್ ಅವರು ಕ್ಲಾಪ್ ಮಾಡಿ ಶುಭ ಹಾರೈಸಿದರು, ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಕೆ.ಹೆಚ್.ಮುನಿಯಪ್ಪ ಹಾಗೂ ಶಾಸಕ, ಎಲ್. ಶಿವರಾಮೇಗೌಡರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು, ಜಯಶಂಕರ್ ಟಾಕೀಸ್ ಬ್ಯಾನರ್ ಅಡಿಯಲ್ಲಿ ತೇಜುಮೂರ್ತಿ ಹಾಗೂ ಎಸ್.ಪದ್ಮಾವತಿ ಚಂದ್ರಶೇಖರ್ ಅವರುಗಳು ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಒಕ್ಕೂಟದ ಅಧ್ಯಕ್ಷರಾದ ಟಿ.ಕೃಷ್ಣಪ್ಪ ಅವರೂ ಸಹ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಖ್ಯ ಅತಿಥಿಯಾದ ಸಚಿವ ಮುನಿಯಪ್ಪ ಮಾತನಾಡಿ ಅಂಗಡಿ ಯಾವರೀತಿ ನಡೆಯುತ್ತದೆ ಎಂಬುದನ್ನು ಈ ಚಿತ್ರದಲ್ಲಿ ತೋರಿಸುತ್ತಿದ್ದಾರೆ, ಕೃಷ್ಣಪ್ಪ, ಬಾಮ ಹರೀಶ್ ಬಂದು ಈ ಕಾರ್ಯಕ್ರಮ ಉದ್ಘಾಟನೆ ನೀವೇ ಮಾಡಬೇಕು ಎಂದು ಒತ್ತಾಯಿಸಿದರು. ಸಿದ್ದರಾಮಯ್ಯಅವರ ಸರ್ಕಾರ ನಾಡಿನ ಕಟ್ಟಕಡೆಯ ಬಡವರಿಗೂ ಸಹ ಅನ್ನ ಸಿಗುವಂತಾಗಬೇಕು ಎಂದು ಸೊಸೈಟಿಗಳ ಮೂಲಕ ಕೇಂದ್ರದ ಸಹಯೋಗ ದೊಂದಿಗೆ ಒಬ್ಬರಿಗೆ ಹತ್ತು ಕೆಜಿಯಂತೆ ಅಕ್ಕಿಯನ್ನು ವಿತರಿಸುತ್ತಿದೆ. ನ್ಯಾಯಬೆಲೆ ಅಂಗಡಿಯವರು ಯಾವ ರೀತಿ ಈ ಕೆಲಸ ನಿರ್ವಹಿಸುತ್ತಿದ್ದಾರೆ, ಅದಕ್ಕೆ ಪೂರಕಾಗಿ ನಿಮ್ಮ ಚಿತ್ರ ಮೂಡಿಬರಲಿ, ದೇವರ ಸನ್ನಿಧಿಯಲ್ಲಿ ಸಿನಿಮಾಗೆ ಚಾಲನೆ ದೊರೆತಿದೆ, ಈ ಚಿತ್ರ ಜನರಿಗೆ ಒಂದು ಸಂದೇಶವಾಗಲಿ ಎಂದು ಶುಭ ಹಾರೈಸಿದರು.
ನಂತರ ಶಾಸಕ ಶಿವರಾಮೇ ಗೌಡರು ಮಾತಾಡುತ್ತ ಬಹಳ ಚಿತ್ರಗಳು ಬಂದು ಜನರ ಜೀವನವನ್ನು ಉತ್ತಮ ಗೊಳಿಸಿದ್ದನ್ನು ನಾವೆಲ್ಲ ನೋಡಿದ್ದೇವೆ, ನ್ಯಾಯಬೆಲೆ ಅಂಗಡಿಗಳಿಗೆ ಸರ್ಕಾರ ಕೊಟ್ಯಾಂತರ ರೂ.ಗಳನ್ನು ಖರ್ಚು ಮಾಡುತ್ತಿದೆ, ಕುಮಾರ ಬಂಗಾರಪ್ಪ ಅವರೂ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ, ಇನ್ನು ಕೃಷ್ಣಪ್ಪ ಅವರು ನಮ್ಮ ಊರನವರು, ನಾವಿಬ್ಬರೂ ಒಂದೇದಿನ ಹುಟ್ಟಿದವರು, ನ್ಯಾಯಬೆಲೆ ಅಂಗಡಿಯವರು ಎಂದರೆ ಅಕ್ಕಿ ಕದಿಯುವವರು ಅನ್ನೋ ಮಾತಿದೆ, ಅದಲ್ಲ, ಎಲ್ಲೆಲ್ಲಿ ಲೋಪದೋಷಗಳಾಗುತ್ತಿವೆ ಅದನ್ನೆಲ್ಲ ಸರಿಪಡಿಸುವ ಕೆಲಸ ಆಗುತ್ತಿದೆ.
ಸರ್ಕಾರ ಹಾಗೂ ಸಾರ್ವಜನಿಕರ ಮಧ್ಯ ಕೊಂಡಿಯಾಗಿ ನ್ಯಾಯಬೆಲೆ ಅಂಗಡಿಯವರು ಹೇಗೆ ಕೆಲಸ ಮಾಡುತ್ತಿದ್ದಾರೆ, ನ್ಯಾಯಬೆಲೆ ಅಂಗಡಿಗಳು ಹೇಗೆ ನಡೆಯುತ್ತಿವೆ ಇದೆಲ್ಲವನ್ನೂ ಈ ಚಿತ್ರದ ಮೂಲಕ ಹೇಳಹೊರಟಿದ್ದಾರೆ. ಇಬ್ಬರು ನಿರ್ಮಾಪಕಿಯರು ಚಿತ್ರಕ್ಕೆ ಬಂಡವಾಳ ಹಾಕುತ್ತಿದ್ದಾರೆ, ಅವರಿಗೆಲ್ಲ ಒಳ್ಳೇದಾಗಲಿ, ನನಗೂ ಒಂದು ಪಾತ್ರ ಕೊಟ್ಟರೆ, ಸಂಭಾವನೆ ಇಲ್ಲದೆ ಬಂದು ಆಕ್ಟ್ ಮಾಡುತ್ತೇನೆ ಎಂದು ಹೇಳಿದರು.
ನಂತರ ನ್ಯಾಯಬೆಲೆ ಅಂಗಡಿಯ ಅಧ್ಯಕ್ಷ ಕೃಷ್ಣಪ್ಪ ಮಾತನಾಡುತ್ತ ಇಡೀ ದೇಶದಲ್ಲಿ ಯಾವ ರಾಜ್ಯದಲ್ಲೂ ೧೦ ಕೆಜಿ ಅಕ್ಕಿ ಕೊಟ್ಟಿಲ್ಲ, ಅದು ನಮ್ಮ ರಾಜ್ಯದಲ್ಲೇ ಮೊದಲಬಾರಿಗೆ ಆಗಿದೆ, ನಾವು ಪ್ರಾಮಾಣಿಕವಾಗಿ ನಮ್ಮ ಕೆಲಸ ಮಾಡುತ್ತಿದ್ದೇವೆ. ಇನ್ನು ಒಂದಷ್ಟು ಲೋಪದೋಷಗಳಿಗೆ ಎಲ್ಲವೂ ಸರಿಹೋಗುತ್ತದೆ. ಹಾಗೆಯೇ ಬಾಮ ಹರೀಶ್ ಅವರು ಒಂದು ವರ್ಷದಿಂದ ಈ ಚಿತ್ರಕ್ಕಾಗಿ ಪ್ರಯತ್ನ ಮಾಡುತ್ತಿದ್ದು , ನಾನು ಈಗ ಅವರಿಗೆ ಸಿಕ್ಕಿದ್ದೇನೆ.
ಈ ಚಿತ್ರದಲ್ಲಿ ನಾನು ಅಭಿನಯಿಸುತ್ತಿದ್ದೇನೆ ಎಂದರು. ನಿರ್ಮಾಪಕಿಯರಾದ ತೇಜುಮೂರ್ತಿ ಹಾಗೂ ಎಸ್.ಪದ್ಮಾವತಿ ಚಂದ್ರಶೇಖರ್ ಅವರುಗಳು ಚಿತ್ರದ ಕುರಿತಂತೆ ಈ ಕಥೆ ಬಹಳ ಇಷ್ಟವಾಯಿತು ಹಾಗಾಗಿ ನಾವು ಈ ಸಿನಿಮಾ ಮಾಡುತ್ತಿದ್ದೇವೆ ಎಂದರು. ಹಿರಿಯನಟಿ ದೊಡ್ಡಣ್ಣ ಮಾತನಾಡುತ್ತ ಅನ್ನವನ್ನು ಯಾರೂ ತುಳಿಯಬಾರದು, ಎಲೆಯಲ್ಲಿ ಬಿಡಬಾರದು, ಜಗತ್ತಿನಲ್ಲಿ ತಾಯಿ ದೊಡ್ಡದೋ, ಅನ್ನ ದೊಡ್ಡದೋ ಎಂಬ ಪ್ರಶ್ನೆ ಬಂದಾಗ ಎಲ್ಲರೂ ತಾಯಿಯೇ ದೊಡ್ಡದು ಅಂತಾರೆ, ಆದರೆ ಧರ್ಮಶಾಸ್ತ್ರದಲ್ಲಿ ಅನ್ನವೇ ದೊಡ್ಡದು ಅನ್ನುತ್ತದೆ ಎಂದು ಹೇಳಿದರು.
ಕುಮಾರ ಬಂದಾರಪ್ಪ ಮಾತನಾಡುತ್ತ ೪೦ ವರ್ಷಗಳ ಹಿಂದೆ ವಿಜಯೋತ್ಸವ ಚಿತ್ರದಲ್ಲಿ ನಾನು ರಾಮಮೂರ್ತಿ ಜತೆಯಾಗಿ ಕೆಲಸ ಮಾಡಿದ್ದೆವು, ಈಗ ಮತ್ತೊಮ್ಮೆ ಆ ಅವಕಾಶ ಬಂದಿದೆ, ನ್ಯಾಯಬೆಲೆ ಅಂಗಡಿ ಯಾವ ಉದ್ದೇಶಕ್ಕೋಸ್ಕರ ಇದೆ, ಯಾತಕ್ಕೋಸ್ಕರ ಇದೆ ಅನ್ನೋದೇ ಈ ಚಿತ್ರದ ಉದ್ದೇಶ , ಇದರಲ್ಲಿ ಯಶಸ್ಸಿನ ಕಥೆಯಿದೆ, ಹೋರಾಟ ಮಾಡಿದರೆ ಯಾವ ರೀತಿ ಗೆಲ್ಲಬಹುದು ಅನ್ನೋದೂ ಇದೆ, ನಮ್ಮ ಮಹಿಳೆಯರಿಬ್ಬರು ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ, ಒಳ್ಳೇದಾಗಲಿ ಎಂದರು.
ನಾಯಕಿ ರಾಗಿಣಿ ದ್ವಿವೇದಿ ಮಾತನಾಡುತ್ತ ಒಂದು ಚಿಕ್ಕ ಹಳ್ಳಿಯಲ್ಲಿ ತುಂಬಾನೇ ಆಂಬಿಷಿಯಸ್ ಆಗಿರುವ ಹುಡುಗಿ ರೇಷನ್ ಸ್ಕ್ಯಾಮ್ ಅನ್ನು ಹೇಗೆ ತಡೆಗಟ್ಟುತ್ತಾಳೆ, ಆಕೆ ಒಂದು ಸಂದರ್ಭದಲ್ಲಿ ಹೇಗೆ ರೆಬೆಲ್ ಆಗುತ್ತಾಳೆ ಅನ್ನೋದೇ ನನ್ನ ಕ್ಯಾರೆಕ್ಟರ್. ಈ ಸಿನಿಮಾ ಮೂಲಕ ನಾವು ಬಹಳಷ್ಟು ವಿಷಯಗಳನ್ನು ಹೇಳಹೊರಟಿವೆ, ಮುಂದಿನ ದಿನಗಳಲ್ಲಿ ನಾವೇನು ಹೇಳುತ್ತಿದ್ದೇವೆ ಅನ್ನೋದು ಗೊತ್ತಾಗುತ್ತದೆ ಎಂದು ಹೇಳಿದರು, ನಿರ್ದೇಶಕ ಪವನ್ ಮಾತನಾಡಿ ಈ ಹಿಂದೆ ತಾಯವ್ವ ಚಿತ್ರವನ್ನು ನಿರ್ದೇಶಿಸಿದ್ದೆ, ಇದೊಂದು ಮಹಿಳಾ ಪ್ರಧಾನದ ಫ್ಯಾಮಿಲಿ ಡ್ರಾಮಾ. ಇದೇ ತಿಂಗಳು ಆರಂಭಿಸಿ, ಅಂಬರೀಶ್ ಅವರ ಹುಟ್ಟೂರಾದ ದೊಡ್ಡ ಅರಸಿನಕೆರೆ ಸುತ್ತಮುತ್ತ ೩೫ ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸುತ್ತಿರುವುದಾಗಿ ಹೇಳಿದರು, ನಿರ್ಮಾಪಕ ಬಾಮ ಹರೀಶ್ ಹಾಗೂ ಬಾಮ ಗಿರೀಶ್ ಸಹೋದರರು ಚಿತ್ರತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.