Cini NewsSandalwood

“ಅಲ್ಲೇ ಡ್ರಾ,ಅಲ್ಲೇ ಬಹುಮಾನ” ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ ಪ್ರಜ್ವಲ್ ದೇವರಾಜ್.

Spread the love

ಇತ್ತೀಚಿನ ದಿನಗಳಲ್ಲಿ ಪ್ರೇಕ್ಷಕರು ಹೆಚ್ಚಾಗಿ ಹಾರರ್, ಥ್ರಿಲ್ಲರ್ ಚಿತ್ರಗಳನ್ನು ಇಷ್ಟಪಡುತ್ತಿದ್ದಾರೆ. ಇದೀಗ ಅಂಥಾ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ‌. ರತ್ನತೀರ್ಥ ಅವರ ಕಥೆ, ಚಿತ್ರಕಥೆ ಹಾಗೂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಆ ಚಿತ್ರದ ಹೆಸರು ಅಲ್ಲೇ ಡ್ರಾ, ಅಲ್ಲೇ ಬಹುಮಾನ. ಜನನಿ ಫಿಲಂಸ್ ಮೂಲಕ ಪ್ರಶಾಂತ್ ಬಿ.ಜೆ. ಈ ಚಿತ್ರವನ್ನು ನಿರ್ಮಿಸಿದ್ದಾರೆ.

ಟಗರು ಖ್ಯಾತಿಯ ರಷಿಕಾರಾಜ್, ಶೌರ್ಯ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಮ್ಮ ಕೊನೆಯ ಹಾಡನ್ನು ಹಾಡಿದ್ದಾರೆ. ಅಲ್ಲದೆ ಸೂಪರ್ ಸ್ಟಾರ್ ಉಪೇಂದ್ರ ಕೂಡ ಒಂದು ಹಾಡಿಗೆ ದನಿಯಾಗಿದ್ದಾರೆ. ಹಾರರ್ ಕಾಮಿಡಿ, ಥ್ರಿಲ್ಲರ್ ಕಥಾಹಂದರ ಒಳಗೊಂಡ ಈ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನೆರವೇರಿತು.

ಮುಖ್ಯ ಅತಿಥಿಯಾಗಿದ್ದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರು ಟ್ರೈಲರ್ ರಿಲೀಸ್ ಮಾಡಿ ಮಾತನಾಡುತ್ತ ಸ್ಕ್ರೀನ್ ಮೇಲೆ ಪುನೀತ್ ಹಾಡಿದ್ದು ನೋಡಿ ಎಮೋಷನಲ್ ಆದೆ. ಇದು ಹಾರರ್ ಸಿನಿಮಾ ಅಂತ ಗೊತ್ತಿರಲಿಲ್ಲ, ರತ್ನತೀರ್ಥ ನನ್ನಜತೆ ಹಲವು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ತುಂಬಾ ಟ್ಯಾಲೆಂಟ್, ಅಪ್ಪಟ ರಾಯರ ಭಕ್ತ. ಚಿತ್ರದಲ್ಲಿ ಹಾರರ್ ಜತೆ ದೈವಿಕ ಅಂಶವೂ ಇದೆ ಅನ್ಸುತ್ತೆ. ಮೇಕಿಂಗ್ ತುಂಬಾ ಚೆನ್ನಾಗಿದೆ ಎಂದು ಹೇಳಿದರು.

ನಂತರ ಮಾತನಾಡಿದ ರತ್ನತೀರ್ಥ ಇನ್ ಸ್ಟಂಟ್ ಕರ್ಮ ಥೀಮ್ ಮೇಲೆ ಮಾಡಿದ ಚಿತ್ರವಿದು. ನಾವು ಮಾಡಿದ ಪಾಪಕ್ಕೆ ಇಲ್ಲೇ ಶಿಕ್ಷೆ ಅನುಭವಿಸಬೇಕು ಅಂತ ‘ಅಲ್ಲೇ ಡ್ರಾ, ಅಲ್ಲೇ ಬಹುಮಾನ’ ಟೈಟಲ್ ನಡಿ ಈ ಚಿತ್ರವನ್ನು ಮಾಡಿದ್ದೇವೆ. ಒಂದು ಮನೆಯಲ್ಲಿ ನಡೆಯುವ ನಾಯಕಿ ಪ್ರಧಾನ ಕಥೆ. ನಾನು ಈ ಹಿಂದೆ ಮೂರು ಕಿರುಚಿತ್ರಗಳನ್ನು ಮಾಡಿದ್ದೆ. ಶಾರ್ಟ್ ಫಿಲಂ‌ ಮಾಡಬೇಕೆಂದೇ ನಿರ್ಮಾಪಕರ ಬಳಿ ಹೋಗಿದ್ದೆ. ಅದು ದೊಡ್ಡ ಮಟ್ಟದಲ್ಲೇ ಆಯ್ತು. ಪಕ್ಕಾ ಕಮರ್ಷಿಯಲ್ ಸಿನಿಮಾ. ಅಪ್ಪು ಹಾಡಿದ ಸಾಂಗನ್ನು ಮನಾಲಿಯಲ್ಲಿ ಶೂಟ್ ಮಾಡಿದ್ದೇವೆ. ರಷಿಕಾ ಅವರದು ಲೀಡ್ ಪಾತ್ರ, ರಂಗಭೂಮಿಯಲ್ಲಿ ಪಳಗಿದ ಶೌರ್ಯ ನಾಯಕನಾಗಿ ನಟಿಸಿದ್ದಾರೆ ಎಂದು ಹೇಳಿದರು.

ನಾಯಕಿ ರಿಷಿಕಾ ರಾಜ್ ಮಾತನಾಡುತ್ತ ನನ್ನ ಹತ್ತು ವರ್ಷಗಳ ಜರ್ನಿಯಲ್ಲಿ ಈಗ ನಾಯಕಿಯಾಗಿದ್ದೇನೆ. ಒಮ್ಮೆ ವಾಪಸ್ ಕೂಡ ಹೋಗಿದ್ದೆ. ಟಗರು ಚಿತ್ರ ನನಗೆ ಹೊಸ ಲೈಫ್ ಕೊಟ್ಟಿತು. ಇಲ್ಲಿ ನನ್ನದು ಡಿಸೋಜಾ ಎಂಬ ಯುವತಿಯ ಪಾತ್ರ. ನನ್ನ ಪಾತ್ರದ ಮೇಲೆ ಇಡೀ ಕಥೆ ಸಾಗುತ್ತದೆ‌. ಚಿತ್ರದಲ್ಲಿ ನನಗೆ ಐದು ವಿಭಿನ್ನ ಗೆಟಪ್ ಇದೆ.

ನಾನು ಯುವರತ್ನದಲ್ಲಿ ಆಕ್ಟ್ ಮಾಡುವಾಗಲೇ ಈ ಆಫರ್ ಬಂತು. ಈಗಾಗಲೇ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿದರು. ವಿಜಯ್ ಚೆಂಡೂರು ಮಾತನಾಡುತ್ತ ಹಾರರ್ ಚಿತ್ರಗಳು ನನ್ನನ್ನು ಹುಡುಕಿಕೊಂಡು ಬರುತ್ತೆ. ನನಗೂ ಖುಷಿಯಿದೆ. ದೆವ್ವ ನನ್ನ ಕೈ ಹಿಡಿದಿದೆ. ವೆಬ್ ಸೀರೀಸ್ ನಿರ್ದೇಶಕನಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕರು ತುಂಬಾ ಸ್ಟೈಲಿಷ್ ಆಗಿ ನನ್ನ ಪಾತ್ರ ನಿರೂಪಿಸಿದ್ದಾರೆ ಎಂದು ಹೇಳಿದರು.

ನಿರ್ಮಾಪಕ ಪ್ರಶಾಂತ್ ಮಾತನಾಡಿ ನಾನು ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಚಿತ್ರ ತುಂಬಾ ಚೆನ್ನಾಗಿ ಬಂದಿದೆ ಎಂದರು. ರಘು ರಾಮನಕೊಪ್ಪ ಕುರಿರಂಗ, ಶಂಕರ್ ಅಶ್ವಥ್, ಸುಮಂತ್ ಸೂರ್ಯ, ಪರಶುರಾಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸತೀಶ್ ರಾಜೇಂದ್ರನ್, ಕಿರಣ್ ಹಂಪಾಪುರ ಅವರ ಛಾಯಾಗ್ರಹಣ, ವಿಜಯರಾಜ್, ಸತ್ಯರಾಧಕೃಷ್ಣ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

Visited 1 times, 1 visit(s) today
error: Content is protected !!