Cini NewsSandalwood

ಲೂಪ್ ಸ್ಟುಡಿಯೋದಲ್ಲಿ “ಸಂಜು ವೆಡ್ಸ್ ಗೀತಾ” ಡಬ್ಬಿಂಗ್ ಶುರು

Spread the love

ಕನ್ನಡ ಚಿತ್ರರಂಗಕ್ಕೆ ಅದ್ಭುತ ಪ್ರೇಮಕಥೆಗಳನ್ನು ಕೊಟ್ಟಂಥ ನಿರ್ದೇಶಕ ನಾಗಶೇಖರ್ ಅವರ ಸಾರಥ್ಯದಲ್ಲಿ ದಶಕದ ಹಿಂದೆ ಮೂಡಿಬಂದಿದ್ದ ಸಂಜು ವೆಡ್ಸ್ ಗೀತಾ ತನ್ನ ಕಥೆ ಹಾಡುಗಳಿಂದಲೇ ಜನಪ್ರಿಯವಾಗಿತ್ತು. ಈಗ ಅದೇ ಹೆಸರಿನಲ್ಲಿ ನಾಗಶೇಖರ್ ಮತ್ತೊಂದು ಪ್ರೇಮಕಥೆಯನ್ನು ಹೇಳಹೊರಟಿದ್ದಾರೆ. ಶ್ರೀನಗರ ಕಿಟ್ಟಿ ಜೊತೆ ಇಲ್ಲಿ ರಮ್ಯಾ ಬದಲು ರಚಿತಾರಾಮ್ ನಾಯಕಿಯಾಗಿದ್ದಾರೆ.

ಸಧ್ಯ ಈ ಚಿತ್ರದ ೩ ಹಂತಗಳ ಚಿತ್ರೀಕರಣ ಹಾಗೂ ಎಡಿಟಿಂಗ್ ಮುಗಿದಿದ್ದು ಯುಗಾದಿಯ ಶುಭದಿನದಂದು ಸಾಧು ಕೋಕಿಲ ಅವರ ಲೂಪ್ ಸ್ಟುಡಿಯೋದಲ್ಲಿ ಮಾತುಗಳ ಮರುಜೋಡಣೆ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ನಾಗಶೇಖರ್ ನಮ್ಮ ಚಿತ್ರ ಅದ್ದೂರಿಯಾಗಿ ಮೂಡಿಬರಲು ನಿರ್ಮಾಪಕರ ಸಹಕಾರವೇ ಕಾರಣ.

ಬೆಂಗಳೂರಿನಲ್ಲಿ ಮೊದಲಹಂತದ ಶೂಟಿಂಗ್ ಮುಗಿಸಿ, ನಂತರ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ ಶೂಟ್ ಮಾಡಿಕೊಂಡು ಬಂದೆವು. ಈಗಾಗಲೇ ಮೂರನೇ ಹಂತ ಮುಗಿಸಿದ್ದು, ಈ ಶುಕ್ರವಾರದಿಂದ ನಾಲ್ಕನೇ ಹಂತದ ಚಿತ್ರೀಕರಣವನ್ನು ಶುರು ಮಾಡುತ್ತಿದ್ದೇವೆ. ಶಿಡ್ಲಘಟ್ಟ ರೇಶ್ಮೆಗೆ ದೊಡ್ಡ ಮಾರ್ಕೆಟ್ ಇದೆ.

ನಮ್ಮ ರೇಶ್ಮೆ ನೂಲಿಗೆ ಒಳ್ಳೆ ಬೆಲೆ ಬೇಕು ಅಂತ ಹೋರಾಡುವ ಇಬ್ಬರು ಪ್ರೇಮಿಗಳ ಕಥೆ ಈ ಚಿತ್ರದಲ್ಲಿದೆ. ಆರ್ಟಿಫೀಷಿಯಲ್ ಲವ್ಸ್ಟೋರಿ ಮಾಡೋದಕ್ಕಿಂತ ನಮ್ಮ ಮಣ್ಣಿನ ಹೋರಾಟದ ಕಥೆ ಹೇಳಬೇಕೆಂದು ಈ ಸಿನಿಮಾ ಮಾಡಿದ್ದೇನೆ. ನಮ್ಮ ಚಿತ್ರದಲ್ಲಿ ಹಾಡುಗಳೇ ಹೈಲೈಟ್. ಹಾಡು ಕೇಳಿದವರೆಲ್ಲ‌ ಮೆಚ್ಚಿಕೊಂಡಿದ್ದಾರೆ. ಚಿತ್ರ ಶುರುವಾದಾಗಲೇ ಆನಂದ್ ಆಡಿಯೋದವರು ರೈಟ್ಸ್ ತಗೊಂಡಿದ್ದಾರೆ.

ಒಂದು ಹಾಡು ಬಳಸಿಕೊಂಡಿರುವ ಬಗ್ಗೆ ಲಹರಿ ಜೊತೆ ಮಾತುಕತೆ ನಡೆಯುತ್ತಿದೆ. ನಮ್ಮ ಸಿನಿಮಾಗೆ ಕಾಂಟ್ರಿವರ್ಸಿ ಪ್ರಚಾರ ಬೇಕಿಲ್ಲ. ಕಿಟ್ಟಿ, ರಚ್ಚು ಪರ್ಫಾರ್ಮನ್ಸ್ ತುಂಬಾ ಚೆನ್ನಾಗಿ ಬಂದಿದೆ. ಜೂನ್ ವೇಳೆಗೆ ಬರಲೇಬೇಕು ಎಂಬ ಹಠದಿಂದ ಕೆಲಸ ಮಾಡುತ್ತಿದ್ದೇವೆ ಮೇ ಎಂಡ್ ಫಸ್ಟ್ ಕಾಪಿ ಬರುತ್ತದೆ ಎಂದರು.

ನಂತರ ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ಚಿತ್ರದಲ್ಲಿ ಮಾತುಗಳಿಗೆ ತುಂಬಾ ಪ್ರಾಮುಖ್ಯತೆ ಇರುವುದರಿಂದ ಸ್ವಲ್ಪ ಮುಂಚೆಯೇ ಡಬ್ಬಿಂಗ್ ಶುರು ಮಾಡುತ್ತಿದ್ದೇವೆ. ಚಿತ್ರದಲ್ಲಿ ತುಂಬಾ ಮೆಲೋಡಿಯಸ್ ಹಾಡುಗಳಿವೆ. ಮತ್ತೊಂದು ಅದ್ಭುತ ಪ್ರೇಮಕಾವ್ಯ ಇದಾಗಲಿದೆ ಎಂದರು.
ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡಿ 40 ದಿನ ಶೂಟಿಂಗ್ ಮಾಡಿದ್ದೇವೆ. ಎಲ್ಲೂ ಸಹ ತೊಂದರೆಯಾಗದೆ, ಸರಾಗವಾಗಿ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ.

ಹಾಸನದಲ್ಲಿ ಆಡಿಯೋ ರಿಲೀಸ್ ಮಾಡುವ ಪ್ಲಾನ್ ಇದೆ ಎಂದರು. ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌ ಶ್ರೀಧರ ವಿ. ಸಂಭ್ರಮ ೫ ಸುಂದರ ಟ್ಯೂನ್ ಕಂಪೋಜ್ ಮಾಡಿದ್ದು ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ಹಾಡಿದ್ದಾರೆ. ರಾಗಿಣಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ.

Visited 1 times, 1 visit(s) today
error: Content is protected !!