Cini NewsSandalwood

ಡಿ ಬೀಟ್ಸ್ ಮಡಿಲಿಗೆ ಸೇರಿದ “ಕೆಂಡ” ಚಿತ್ರದ ಆಡಿಯೋ ರೈಟ್ಸ್.

Spread the love

ವಿಭಿನ್ನ ಕಥಾಹಂದರದಲ್ಲಿ ಸಹದೇವ್ ಕೆಲವಡಿ ನಿರ್ದೇಶನದ ಮೂಲಕ ಹೊರ ಬರುತ್ತಿರುವ `ಕೆಂಡ’ ಚಿತ್ರದ ಒಂದಷ್ಟು ಅಚ್ಚರಿಯ ಸುದ್ದಿಗಳು ಬರುತ್ತಿವೆ. ಗಂಟುಮೂಟೆ ಖ್ಯಾತಿಯ ರೂಪಾ ರಾವ್ ನಿರ್ಮಾಣದ ಈ ಸಿನಿಮಾ ಎಲ್ಲ ರೀತಿಯತಿಂದಲೂ ಭಿನ್ನ ಜಾಡಿನದ್ದೆಂಬ ವಿಚಾರ ಈಗಾಗಲೇ ಪ್ರೇಕ್ಷಕ ವಲಯಕ್ಕೆ ದಾಟಿಕೊಂಡಿದೆ. ಇದೀಗ ಕೆಂಡ ಚಿತ್ರದ ಆಡಿಯೋ ಹಕ್ಕುಗಳ ವಿಚಾರದಲ್ಲಿ ಖುಷಿಯ ಸಂಗತಿಯೊಂದನ್ನು ಚಿತ್ರತಂಡ ಹಂಚಿಕೊಂಡಿದೆ.

ಹೆಸರಲ್ಲೇ ನಿಗಿನಿಗಿಸುವ ಆವೇಗವೊಂದನ್ನು ಬಚ್ಚಿಟ್ಟುಕೊಂಡಂತಿರೋ ಸಿನಿಮಾ `ಕೆಂಡ’. ಇದರ ಮೂಲಕ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಅವರ ಪುತ್ರ ರಿತ್ವಿಕ್ ಕಾಯ್ಕಿಣಿ ಸಂಗೀತ ನಿರ್ದೇಶಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅವರ ಸಂಗೀತ ನೀಡಿರುವ ಹಾಡಿಗಳ ಆಡಿಯೋ ರೈಟ್ಸ್ ಅನ್ನು ಡಿ ಬೀಟ್ಸ್ ಪಡೆದುಕೊಂಡಿದೆ. ಸಿನಿಮಾ ಮ್ಯೂಸಿಕ್ ವಲಯದಲ್ಲಿ ದೊಡ್ಡ ಹೆಸರು ಮಾಡಿರುವ ಸಂಸ್ಥೆ ಡಿ ಬೀಟ್ಸ್. ಖುದ್ದು ಸಂಗೀತ ನಿರ್ದೇಶಕ ಕಂ ಈ ಸಂಸ್ಥೆಯ ಮುಖ್ಯಸ್ಥರಾದ ವಿ. ಹರಿಕೃಷ್ಣ ಅವರೇ ಕೆಂಡದ ಹಾಡುಗಳನ್ನು ಕೇಳಿ, ಬಹುವಾಗಿ ಮೆಚ್ಚಿಕೊಂಡು ಆಡಿಯೋ ಹಕ್ಕುಗಳನ್ನು ಖರೀದಿಸಿದ್ದಾರೆ.

ಈ ಸಂದರ್ಭದಲ್ಲಿ ಹರಿಕೃಷ್ಣ ಅವರ ಕಡೆಯಿಂದ ಬಂದಿರುವ ಮೆಚ್ಚುಗೆಯ ಮಾತುಗಳು ಚಿತ್ರತಂಡಕ್ಕೆ ಮತ್ತಷ್ಟು ಹುರುಪು ತುಂಬಿವೆ. ಎಲ್ಲ ರೀತಿಯಿಂದಲೂ ಈ ಹಾಡುಗಳು ಅದ್ಭುತವಾಗಿ ಮೂಡಿ ಬಂದಿವೆ ಎಂಬ ಅಭಿಪ್ರಾಯ ಹರಿಕೃಷ್ಣರ ಕಡೆಯಿಂದ ರವಾನೆಯಾಗಿದೆ. ಈ ಮೂಲಕ ಮೊದಲ ಹೆಜ್ಜೆಯಲ್ಲಿಯೇ ರಿತ್ವಿಕ್ ಕಾಯ್ಕಿಣಿ ಗಮನ ಸೆಳೆದಿದ್ದಾರೆ. ಅಂದಹಾಗೆ, ಕೆಂಡ ಹಾಡುಗಳಿಗೆ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.

ಅದರಲ್ಲೊಂದು ಹಾಡನ್ನು ಖ್ಯಾತ ಸಂಗೀತ ನಿರ್ದೇಶಕ ಚರಣ್ ರಾಜ್ ಹಾಡಿರೋದು ವಿಶೇಷ. ಅದಿತಿ ಸಾಗರ್ ಕೂಡಾ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ. ಸದ್ಯಕ್ಕೆ ಇವಿಷ್ಟು ಮಾಹಿತಿಯನ್ನಷ್ಟೇ ಚಿತ್ರತಂಡ ಜಾಹೀರು ಮಾಡಿದೆ. ಮಿಕ್ಕುಳಿದ ಮಾಹಿತಿಗಳು ಇಷ್ಟರಲ್ಲಿಯೇ ಪ್ರೇಕ್ಷಕರನ್ನು ತಲುಪಿಕೊಳ್ಳಲಿವೆ.

Visited 1 times, 1 visit(s) today
error: Content is protected !!