Cini NewsMovie ReviewSandalwood

ಸಮಾಜ ಕಂಟಕರಿಗೆ ತಕ್ಕ ಪಾಠ ಕಲಿಸುವ ‘ಯುದ್ದಕಾಂಡ’ (ಚಿತ್ರವಿಮರ್ಶೆ -ರೇಟಿಂಗ್ : 3.5 /5)

ರೇಟಿಂಗ್ : 3.5 /5

ಚಿತ್ರ : ಯುದ್ದಕಾಂಡ (chapter 2)
ನಿರ್ದೇಶಕ : ಪವನ್ ಭಟ್
ನಿರ್ಮಾಪಕ : ಅಜಯ್ ರಾವ್ ಸಂಗೀತ : ಹೇಮಂತ್ ಜೋಯಿಸ್ , ಪ್ರವೀಣ್ ಕೆ. ಬಿ.
ಛಾಯಾಗ್ರಹಣ : ಕಾರ್ತಿಕ್ ಶರ್ಮಾ
ತಾರಾಗಣ : ಅಜಯ್ ರಾವ್ , ಅರ್ಚನಾ ಜೋಯಿಸ್ , ರಾಧ್ಯ ರಾಕೇಶ್, ಪ್ರಕಾಶ್ ಬೆಳವಾಡಿ , ಟಿ. ಎಸ್ .ನಾಗಭರಣ ಹಾಗೂ ಮುಂತಾದವರು…

ಪ್ರತಿನಿತ್ಯ ಕೋರ್ಟ್ ಆವರಣದಲ್ಲಿ ಸಾವಿರಾರು ಕೇಸುಗಳ ವಾದ ವಿವಾದಗಳು ನಿರಂತರವಾಗಿ ಇದ್ದೇ ಇರುತ್ತದೆ. ಅದರಲ್ಲೂ ಸಮಾಜಘಾತಕ ಶಕ್ತಿಗಳ ಕೈವಾಡದ ಆಶ್ರಯದಲ್ಲೇ ಕೊಲೆಗಡಕರು , ಅತ್ಯಾಚಾರಿಗಳು ಸೇರಿದಂತೆ ಹಲವು ದುಷ್ಟ ವ್ಯಕ್ತಿಗಳ ಅಟ್ಟಹಾಸಕ್ಕೆ ಕೊನೆಗೆ ಇಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಏನು ಅರಿಯದಂತ ಎಷ್ಟೋ ಹೆಣ್ಣುಮಕ್ಕಳ ಭವಿಷ್ಯವೇ ನಾಶವಾಗುತ್ತಿರುವ ಈ ಕಾಲಘಟ್ಟದಲ್ಲಿ ದುಷ್ಟರನ್ನ ಸದೆಬಡಿಯಲು ಎದ್ದು ನಿಲ್ಲುವಂತಹ ವ್ಯಕ್ತಿ ಮುಖ್ಯ,

ನಿರಪರಾಧಿಯನ್ನ ರಕ್ಷಿಸಿ , ಅಪರಾಧಿಗಳಿಗೆ ಶಿಕ್ಷೆ ನೀಡುವಂತಹ ಕಥಾನಕವಾಗಿ ಕೋರ್ಟ್ ಹಾಲ್ ನಲ್ಲಿ ನಡೆಯುವ ವಾದ ವಿವಾದಗಳ ಸುಳಿಯಲ್ಲಿ ಸಾಗುವ ಕುತೂಹಲಕಾರಿ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಯುದ್ಧಕಾಂಡ”. ನಿವೇದಿತಾ (ಅರ್ಚನಾ ಜೋಯಿಸ್) ಎಂಬ ಅಸಹಾಯಕ ತಾಯಿಯೊಬ್ಬಳು ಕೋರ್ಟ್ ಆವರಣದಲ್ಲೇ ಶಾಸಕನ ಸಹೋದರನ ಮೇಲೆ ಪೊಲೀಸರ ಪಿಸ್ತೂಲ್‌ನಿಂದಲೇ ಗುಂಡು ಹಾರಿಸುತ್ತಾಳೆ.

ಎರಡು ಬುಲೆಟ್‌ಗಳು ಆತನ ಎದೆಗೆ ಇಳಿದರೆ, ಒಂದು ಸೀದಾ ಹಣೆಯಿಂದ ತೂರಿಕೊಂಡು ಹೋಗಿರುತ್ತದೆ. ಹೀಗೆ ನ್ಯಾಯಾಲಯದ ಆವರಣದಲ್ಲೇ ಅತ್ಯಾಚಾರಿಯೊಬ್ಬನನ್ನು ಹತ್ಯೆಗೈದು ಪೊಲೀಸರ ಬಂಧಿಯಾದ ನಿವೇದಿತಾಳ ಕಥೆ ಏನು, ಆಕೆ ಯಾಕೆ ಆತನನ್ನು ಕೊಂದಳು ಎಂಬ ವಿಚಾರದೊಂದಿಗೆ ಮುಖ್ಯಕಥೆ ತೆರೆದುಕೊಳ್ಳುತ್ತದೆ.

ಆಗ ಯುವ ಲಾಯರ್ ಭರತ್(ಅಜಯರಾವ್) ಈ ಕೇಸನ್ನು ಕೈಗೆತ್ತಿಕೊಂಡು ಹೇಗೆಲ್ಲಾ ವಾದ ಮಾಡುತ್ತಾನೆ, ಕಾನೂನನ್ನು ಕೈಗೆ ತೆಗೆದುಕೊಂಡ ನಿವೇದಿತಾಗೆ ಶಿಕ್ಷೆ ಆಗಬೇಕೆಂಬ ಎಲ್ಲರ ಅಭಿಪ್ರಾಯದ ವಿರುದ್ದ ನಿಂತು ಭರತ್ ಹೇಗೆ ಕೇಸ್ ಗೆಲ್ಲುತ್ತಾನೆ ಎಂಬ ಹಾದಿಯೇ ರಣರೋಚಕ. ಆದರೆ ಆಗತಾನೇ ಲಾ ಮುಗಿಸಿ ಪ್ರಾಕ್ಟೀಸ್ ಮಾಡುತ್ತಿದ್ದ ಲಾಯರ್ ಭರತ್ (ಅಜಯ್‌ ರಾವ್) ಯಾರಿಬ್ಬರೂ ಮುಟ್ಟದ ಈ ಕೇಸನ್ನು ಕೈಗೆತ್ತಿಕೊಂಡು ನಿವೇದಿತಾಳನ್ನು ಈ ಕೇಸಿನಿಂದ ಹೇಗೆ ಹೊರತರುತ್ತಾನೆ.

ನಿವೇದಿತಾ ಯಾಕೆ, ಶಾಸಕನ ತಮ್ಮನನ್ನು ಕೊಲೆ ಮಾಡಿದಳು, ಆತನ ಮೇಲೆ ಆಕೆಗಿದ್ದ ಅಂಥಾ ದ್ವೇಶವಾದರೂ ಏನಾಗಿತ್ತು ಎಂದು ಮುಂದೆ ನಡೆಯುವ ಕಥೆಯಲ್ಲಿ ಅನಾವರಣಗೊಳ್ಳುತ್ತಾ ಸಾಗುತ್ತದೆ, ಎಂದೂ ಸೋಲು ಕಂಡಿರದ ಖ್ಯಾತ ಡಿಫೆನ್ಸ್ ಲಾಯರ್ ರಾಬರ್ಟ ಡಿಸೋಜಾ(ಪ್ರಕಾಶ್ ಬೆಳವಾಡಿ) ಎದುರು, ತನ್ನ ವಾದ ಮಾಡುತ್ತಾನೆ.ಕೇಸ್ ಯಾವ ತಿರುವು ಪಡೆಯುತ್ತೆ… ಭರತ್ ಈ ಕೇಸನ್ನ ಗೆಲ್ತಾನ… ಜಡ್ಜ್ಮೆಂಟ್ ಏನಾಗುತ್ತೆ… ಎಂಬುವುದಕ್ಕೆ ಒಮ್ಮೆ ಈ ಯುದ್ದಕಾಂಡ ಚಿತ್ರ ನೋಡಬೇಕು.

ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು , ಪ್ರಸ್ತುತ ಸಮಾಜದ ಸ್ಥಿತಿಗತಿಯ ವಿಚಾರವನ್ನು ತೆರೆದಿಟ್ಟಿದೆ. ಪೋಷಕರು ಎಷ್ಟೇ ಎಚ್ಚರಿಕೆ ವಹಿಸಿದರೂ ಯುವತಿಯರು, ಅಪ್ರಾಪ್ತ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿರೋ ದೌರ್ಜನ್ಯಗಳು ಕಮ್ಮಿ ಆಗುತ್ತಿಲ್ಲ.

ಹಣವಂತರು, ರಾಜಕಾರಣಿಗಳು ತಮ್ಮ ಪ್ರಭಾವ ಬಳಸಿ, ಕಾನೂನನ್ನು ಹೇಗೆಲ್ಲಾ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ, ನಮ್ಮ ದೇಶದಲ್ಲಿ ಯಾವೆಲ್ಲ ಸೆಕ್ಷನ್ ಅಡಿ ಕಾನೂನು ರಚಿಸಲಾಗಿದೆ ಎಂದು ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಲಾಗಿದೆ. ಕಮರ್ಷಿಯಲ್ ಸಿದ್ಧಸೂತ್ರ ಗಳನ್ನು ಬದಿಗಿಟ್ಟು, ನೇರವಾಗಿ ಕಥೆಯ ಮೇಲೆ ಫೋಕಸ್ ಮಾಡಿದ್ದಾರೆ. ಸಮಾಜ ಕಂಟಕರಾದ ಕೆಲ ವ್ಯಕ್ತಿಗಳು ಹೇಗೆ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಅಂಥವರಿಗೆ ನಮ್ಮ ದೇಶದ ಕಾನೂನಿನಲ್ಲಿ ಏಕೆ ಕಠಿಣ ಶಿಕ್ಷೆ ಇಲ್ಲ, ‘ಹತ್ತು ಜನ ಅಪರಾಧಿಗಳು ಶಿಕ್ಷೆಯಿಂದ ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು’ ಎಂಬ ನಿಲುವೇ ಇಂಥವರಿಗೆ ಶ್ರೀರಕ್ಷೆಯಾಗಬಾರದು ಎನ್ನುವ ಚರ್ಚೆಯನ್ನು ಯುದ್ದಕಾಂಡ ಹುಟ್ಟುಹಾಕುತ್ತದೆ. ಚಿತ್ರಕಥೆಯಲ್ಲಿ ಮತ್ತಷ್ಟು ಹಿಡಿತವನ್ನು ಮಾಡಬಹುದಿತ್ತು.

ಇನ್ನು ಚಿತ್ರದ ಸಂಗೀತ , ಛಾಯಾಗ್ರಹಣ , ಸಂಕಲನದ ಕೆಲಸ ಸೇರಿದಂತೆ ತಾಂತ್ರಿಕ ವರ್ಗ ಬಹಳಷ್ಟು ಶ್ರಮ ಪಟ್ಟಿರುವುದು ತೆರೆಯ ಮೇಲೆ ಕಾಣುತ್ತದೆ. ಈ ಚಿತ್ರವನ್ನ ನಿರ್ಮಿಸುವುದರ ಜೊತೆಗೆ ಪ್ರಮುಖ ಲಾಯರ್ ಭರತ್ ಪಾತ್ರವನ್ನು ಅಜಯ್‌ರಾವ್ ಎನರ್ಜಿಟಿಕ್ ಆಗಿ ನಿಭಾಯಿಸಿದ್ದು, ವಾದ ವಿವಾದದ ಸನ್ನಿವೇಶಗಳಲ್ಲಿ ಗಮನ ಸೆಳೆಯುತ್ತಾರೆ. ಅದೇ ರೀತಿ ಹಿರಿಯ ನ್ಯಾಯವಾದಿ ಯಾಗಿ ಪ್ರಕಾಶ್ ಬೆಳವಾಡಿ ಅವರದ್ದು ತೂಕದ ನಟನೆ. ನಿವೇದಿತಾ ಪಾತ್ರವನ್ನ ಅರ್ಚನಾ ಜೋಯಿಸ್ ಜೀವಿಸಿದ್ದಾರೆ.

ನ್ಯಾಯಾಧೀಶ ರಾಗಿ ಟಿ.ಎಸ್. ನಾಗಾಭರಣ, ನಾಯಕನ ಸಹೋದ್ಯೋಗಿ ಲಾಯರ್ ಆಗಿ ಸುಪ್ರೀತಾ ಸತ್ಯನಾರಾಯಣ್ ತಮ್ಮ ತಮ್ಮ ಪಾತ್ರವನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಈಗಾಗಲೇ ಈ ರೀತಿಯ ವಿಚಾರಗಳ ಚಿತ್ರಗಳು ಬಂದಿದ್ದರು , ಸಮಾಜಘಾತಕ ಶಕ್ತಿಗಳನ್ನು ಮಟ್ಟ ಹಾಕಲು ಒಂದು ಅರ್ಥಪೂರ್ಣ ಚಿತ್ರವಾಗಿ ಹೊರ ಬಂದಿರುವ ಈ ಯುದ್ಧಕಾಂಡ ಚಿತ್ರವನ್ನ ಎಲ್ಲರೂ ಒಮ್ಮೆ ನೋಡಬಹುದು.

error: Content is protected !!