ತಂದೆ ಮಗನ ಬಾಂಧವ್ಯದ ಹಿಂದಿರುವ ಪುನರ್ಜನ್ಮದ ಕಥೆ “ವೃಷಭ” (ಚಿತ್ರವಿಮರ್ಶೆ)
ಚಿತ್ರ : ವೃಷಭ
ನಿರ್ದೇಶಕ : ನಂದ ಕಿಶೋರ್
ನಿರ್ಮಾಣ : ಬಾಲಾಜಿ ಮೋಷನ್ ಪಿಕ್ಚರ್ಸ್,ಕನೆಕ್ಟ್ ಮೀಡಿಯಾ , ಅಭಿಷೇಕ್ ವ್ಯಾಸ್ ಸ್ಟುಡಿಯೋ.
ತಾರಾಗಣ : ಮೋಹನ್ ಲಾಲ್, ಸಮರ್ಜಿತ್ ಲಂಕೇಶ್ , ರಾಗಿಣಿ ದ್ವಿವೇದಿ , ನಯನ ಸಾರಿಕಾ ಹಾಗೂ ಮುಂತಾದವರು…
ದೈತ್ಯ ಪ್ರತಿಭೆ ಮೋಹನ್ ಲಾಲ್ ಜೊತೆ ಸಮರ್ಥವಾಗಿ
ಸಮರ್ಜಿತ್ ಲಂಕೇಶ್ ತನ್ನ ಪಾತ್ರಕ್ಕೆ ಜೀವ ತುಂಬಿದ್ದಾರೆ.
ಸ್ಯಾಂಡಲ್ವುಡ್, ಬಾಲಿವುಡ್ ಹಾಗೂ ಮಾಲಿವುಡ್ ಸಮಾಗಮದ ಅದ್ದೂರಿ
ಪುನರ್ಜನ್ಮದ ಕಥಾನಕದಲ್ಲಿ ರಾಜರ ಕಾಲಘಟ್ಟ ಹಾಗೂ ಪ್ರಸ್ತುತ ಆಧುನಿಕತೆ ಬದುಕಿನ ಚಿತ್ರಣವನ್ನು ಬಹಳ ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿರುವಂತಹ ಚಿತ್ರ “ವೃಷಭ”. ತ್ರಿಲಿಂಗ ಮಹಾ ಸಾಮ್ರಾಜ್ಯದ ಚಕ್ರಾಧಿಪತಿ ರಾಜ ವಿಜಯೇಂದ್ರ ವೃಷಭ (ಮೋಹನ್ ಲಾಲ್) ಕೈಲಾಸ ವಾಸಿ ತ್ರಿಲಿಂಗೇಶ್ವರನ ಮಹಾನ್ ಭಕ್ತ , ದೈವದತ್ತ ಸ್ಪಟಿಕ ಲಿಂಗದ ಆರಾಧಕ, ಇದರಿಂದ ತನ್ನ ಸಾಮ್ರಾಜ್ಯವನ್ನೇ ಸುಭಿಕ್ಷವಾಗಿ ನೋಡಿಕೊಂಡು , ನೆಮ್ಮದಿಯ ಆಳ್ವಿಕೆಯನ್ನು ನಡೆಸುವಂತಹ ಮಹಾರಾಜ.
ಅಮೂಲ್ಯ ಸ್ಪಟಿಕ ಲಿಂಗಕ್ಕಾಗಿ ಪ್ರಜಾಪತಿ ಎಂಬ ದುಷ್ಟ ವ್ಯಕ್ತಿ ಯುದ್ಧಕ್ಕೆ ದಂಡೆತ್ತಿ ಬರುತ್ತಾನೆ. ಮಹಾರಾಜನ ಮಡದಿ ತ್ರಿಲೋಚನ ದೇವಿ (ರಾಗಣಿ ದ್ವಿವೇದಿ) ಸಮರಕ್ಕೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ದುಷ್ಟರನ್ನು ಹಿಮ್ಮಟ್ಟಿಸುವಾಗ ರಾಜ ವಿಜಯೇಂದ್ರ ವೃಷಭನ ಬಾಣಕ್ಕೆ ತಾಯಿಯ ಮಡಿಲಲ್ಲಿರುವ ಕಂದಮ್ಮ ಬಲಿಯಾಗುತ್ತದೆ. ವಿಧಿಯ ಆಟದಂತೆ ನೊಂದ ತಾಯಿ ರಾಜನಿಗೆ ನಿನಗೂ ಕೂಡ ಪುತ್ರಶೋಕ ನಿರಂತರವಾಗಲಿ ಎಂದು ಶಪಿಸುತ್ತಾಳೆ.
ಮುಂದೆ ನಡೆಯುವ ರಾಜನ ಆಳ್ವಿಕೆಯ ಒಂದಷ್ಟು ಘಟನೆಗಳು ಗೋರವಾಗಿ ಸಾಗುತ್ತದೆ. ಯುಗಗಳು ಕಳೆದಂತೆ ಪ್ರಸ್ತುತ ಕಾಲಘಟ್ಟಕ್ಕೆ ದೊಡ್ಡ ಉದ್ಯಮಿಯಾಗಿ ಬೆಳೆದು ಬಾಲಿವುಡ್ ಖ್ಯಾತ ನಟ ಜಿತೇಂದ್ರ ಮೂಲಕ ಸನ್ಮಾನವನ್ನ ಪಡೆಯುವ ಆದಿತ್ಯವರ್ಮ (ಮೋಹನ್ ಲಾಲ್). ತಂದೆಯ ಪ್ರತಿ ಹೆಜ್ಜೆಯಲ್ಲೂ ಸಾಥ್ ನೀಡುತ್ತಾ, ಬೆನ್ನೆಲುಬಾಗಿ ನಿಲ್ಲುವ ಮುದ್ದಾದ ಮಗ ತೇಜ್ ( ಸಮರ್ಜಿತ್ ಲಂಕೇಶ್). ಅದೇ ರೀತಿ ತಂದೆಗೂ ಮಗನೇ ಜೀವ , ಸರ್ವಸ್ವ. ಇದರ ನಡುವೆ ತಂದೆಗೆ ಕನಸಿನಲ್ಲಿ ಕಾಣುವ ಪುನರ್ಜನ್ಮದ ನಂಟು ಕಂಗಲಾಗಿಸುತ್ತದೆ.
ಈ ಆಧುನಿಕತೆ ಜಗತ್ತಿನಲ್ಲಿ ಮೂಢನಂಬಿಕೆ ಬಗ್ಗೆ ಯೋಚಿಸುವ ತೇಜ ಗೆ ಧಾಮಿನಿ ( ನಯನ ಸಾರಿಕಾ) ಸಹಕಾರ ಸಿಗುತ್ತದೆ. ಮುಂದೆ ಇವರಿಬ್ಬರಲ್ಲಿ ಪ್ರೀತಿ , ಬಿರುಕು ಕಂಡರೂ ತಮ್ಮ ಗುರಿಯತ್ತ ಸಾಗುವ ಮಧ್ಯ ಅಗೋರಿ ಬಾಬಾ ವರಹ ರುದ್ರರ ಭೇಟಿಯಿಂದ ಕಾಲವೇ ಉತ್ತರ ನೀಡುತ್ತದೆ ಎಂಬ ವಿಷಯ ತಿಳಿಯುತ್ತಾರೆ. ಮುಂದೆ ಎದುರಾಗುವ ಸಂಕಷ್ಟಗಳು , ಜನ್ಮಾಂತರದ ತಳಮಳ , ನಿಗೂಢ ಸತ್ಯದ ಅನಾವರಣ ಬೇರೆದೇ ರೂಪವನ್ನು ತೆರೆದುಕೊಳ್ಳುತ್ತಾ ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಅದು ಏನು ಎಂಬುದು ನೀವು ತೆರೆಯ ಮೇಲೆ ನೋಡಬೇಕು.
ಯುವ ಪ್ರತಿಭೆ ಸಮರ್ಜಿತ್ ಲಂಕೇಶ್ ಪರಭಾಷೆಯ ಹಿರಿಯ ಅದ್ಭುತ ಕಲಾವಿದ ಮೋಹನ್ ಲಾಲ್ ರೊಂದಿಗೆ ಮಗನಾಗಿ ಪಾತ್ರವನ್ನು ನಿರ್ವಹಿಸುವುದರ ಜೊತೆಗೆ ಎರಡು ಕಾಲಘಟ್ಟದ ಕಥೆಗೆ ಜೀವ ತುಂಬಿ ತನ್ನ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ. ಮೈ ರೋಮಾಂಚನಗೊಳಿಸುವ ಸಾಹಸ ದೃಶ್ಯಗಳ ಜೊತೆಗೆ ಅದ್ಭುತ ಸ್ಟೆಪ್ಸ್ ಹಾಕುವ ಮೂಲಕ ಡ್ಯಾನ್ಸ್ ಗೂ ಜೈ ಎಂದಿದ್ದಾರೆ.
ಈ ಬಹುಮುಖ ಪ್ರತಿಭೆಯ ಶಕ್ತಿಯನ್ನು ಅಚ್ಚುಕಟ್ಟಾಗಿ ಬೆಳೆಸಿಕೊಂಡಿದ್ದಾರೆ ನಿರ್ದೇಶಕ ನಂದಕಿಶೋರ್. ನಮ್ಮ ಕರುನಾಡಿನ ಈ ಪ್ರತಿಭೆಗೆ ಉಜ್ವಲ ಭವಿಷ್ಯವಿದೆ ಎಂಬುದನ್ನು ಈ ಒಂದು ಚಿತ್ರ ಸಾಬೀತು ಪಡಿಸುತ್ತದೆ. ಇನ್ನು ಹಿರಿಯ ನಟ ಮೋಹನ ಲಾಲ್ ಯಾವ ಪಾತ್ರವನ್ನ ಆದರೂ ಸರಿ , ನ್ಯಾಯ ಒದಗಿಸುವಂತ ಪ್ರಭುದ್ಧರು. ಎರಡು ಶೇಡ್ ಗಳಲ್ಲಿ ಅದ್ಭುತವಾಗಿ ಮಿಂಚಿದ್ದಾರೆ.
ಅದೇ ರೀತಿ ನಟಿ ರಾಗಿಣಿ ಕೂಡ ಮಹಾರಾಣಿ ಹಾಗೂ ಲೀಲಾ ಪಾತ್ರ ಎರಡಕ್ಕೂ ಜೀವ ತುಂಬಿದ್ದಾರೆ. ಮುದ್ದಾಗಿ ಕಾಣುವ ನಟಿ ನಯನ ಸಾರಿಕಾ ಪಾತ್ರ ಗಮನ ಸೆಳೆಯುತ್ತದೆ. ಉಳಿದಂತೆ ಬರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ. ಅದೇ ರೀತಿ ತಾಂತ್ರಿಕವಾಗಿ ಚಿತ್ರ ಅದ್ಭುತವಾಗಿ ಮೂಡಿ ಬಂದಿದ್ದು , ಕಲಾ ನಿರ್ದೇಶನ , ಸಂಗೀತ , ಛಾಯಾಗ್ರಾಹಣ , ಸಂಕಲನ ಸೇರಿದಂತೆ ಪ್ರತಿಯೊಂದು ಗಮನ ಸೆಳೆಯುತ್ತದೆ. ಒಟ್ಟಾರೆ ಫ್ಯಾಮಿಲಿ ಒಟ್ಟಿಗೆ ನೋಡುವಂತ ಉತ್ತಮ ಚಿತ್ರ ಇದಾಗಿದೆ.
ಚಿತ್ರ : ವೃಷಭ
ನಿರ್ದೇಶಕ : ನಂದ ಕಿಶೋರ್
ನಿರ್ಮಾಣ : ಬಾಲಾಜಿ ಮೋಷನ್ ಪಿಕ್ಚರ್ಸ್,ಕನೆಕ್ಟ್ ಮೀಡಿಯಾ , ಅಭಿಷೇಕ್ ವ್ಯಾಸ್ ಸ್ಟುಡಿಯೋ.
ಸಂಗೀತ : ಸ್ಯಾಮ್ ಸಿ. ಎಸ್.
ಛಾಯಾಗ್ರಹಣ : ಆಂಟೋನಿ
ಸಂಕಲನ : ಕೆ.ಎಂ. ಪ್ರಕಾಶ್
ತಾರಾಗಣ : ಮೋಹನ್ ಲಾಲ್, ಸಮರ್ಜಿತ್ ಲಂಕೇಶ್ , ರಾಗಿಣಿ ದ್ವಿವೇದಿ , ನಯನ ಸಾರಿಕಾ , ಕಿಶೋರ್ ಕುಮಾರ್ , ಅಯ್ಯಪ್ಪ ಪಿ ಶರ್ಮಾ , ಮೊಹಮ್ಮದ್ ಅಲಿ ಅಜಯ್ , ರಾಮಚಂದ್ರ ರಾಜು , ನೇಹಾ ಸಕ್ಸೇನಾ , ವಿಶೇಷ ಪಾತ್ರದಲ್ಲಿ ಜಿತೇಂದ್ರ ಹಾಗೂ ಮುಂತಾದವರು…