ಯುವ ಪ್ರತಿಭೆಗಳ “ವಿಕಲ್ಪ” ಚಿತ್ರದ ಟೀಸರ್ ಬಿಡುಗಡೆ
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರ ಹೊಂದಿರುವ ʼವಿಕಲ್ಪʼ ಚಿತ್ರ ತೆರೆಗೆ ಬರಲು ಸಿದ್ಧವಾಗುತ್ತಿದೆ. ಈಗಾಗಲೇ ʼವಿಕಲ್ಪʼ ಚಿತ್ರದ ಬಹುತೇಕ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ಚಿತ್ರವನ್ನು ಸೆನ್ಸಾರ್ ಮುಂದೆ ತಂದಿದೆ. ಇದೇ ವೇಳೆ ನಿಧಾನವಾಗಿ ʼವಿಕಲ್ಪʼ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ʼವಿಕಲ್ಪʼದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ. ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ವರ್ಚ್ಯುವಲ್ ಆಗಿ ʼವಿಕಲ್ಪʼ ಚಿತ್ರದ ಟೀಸರ್ ಅನ್ನು ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಹಿರಿಯ ಪತ್ರಕರ್ತ ಜೋಗಿ ʼವಿಕಲ್ಪʼ ಚಿತ್ರದ ಟೀಸರ್ ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ, ಚಿತ್ರತಂಡದ ಪ್ರಯತ್ನದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಅಂದಹಾಗೆ, ಸಿನಿಮಾದ ಹೆಸರೇ ಹೇಳುವಂತೆ, ʼವಿಕಲ್ಪʼ ಔಟ್ ಅಂಡ್ ಔಟ್ ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಸಿನಿಮಾ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು ಮತ್ತು ತಲ್ಲಣಗಳನ್ನು ಚಿತ್ರರೂಪದಲ್ಲಿ ತೆರೆಮೇಲೆ ತಂದಿದೆ ʼವಿಕಲ್ಪʼ ಚಿತ್ರತಂಡ. ಸುಮಾರು ಎರಡು ದಶಕಗಳಿಗೂ ಹೆಚ್ಚಿನ ಕಾಲ ಹವ್ಯಾಸಿ ರಂಗಭೂಮಿಯ ಅನುಭವವಿರುವ, ಪ್ರತಿಷ್ಠಿತ ಬಹುರಾಷ್ಟ್ರೀಯ ಐಟಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿರುವ ಪೃಥ್ವಿರಾಜ್ ಪಾಟೀಲ್, ತಮ್ಮ ಪರಿಕಲ್ಪನೆಯನ್ನು ʼವಿಕಲ್ಪʼ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದಾರೆ.
ʼಸುರೂಸ್ ಟಾಕೀಸ್ʼ ಸಂಸ್ಥೆಯ ಅಡಿಯಲ್ಲಿ ಶ್ರೀಮತಿ ಇಂದಿರಾ ಶಿವಸ್ವಾಮಿ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚೊಚ್ಚಲ ಚಿತ್ರ ಇದಾಗಿದ್ದು, ಈ ಚಿತ್ರದಲ್ಲಿ ನಿರ್ದೇಶಕ ಪೃಥ್ವಿರಾಜ್ ಪಾಟೀಲ್ ಅವರೇ ತೆರೆಮೇಲೂ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ʼವಿಕಲ್ಪʼ ಚಿತ್ರದಲ್ಲಿ ಪೃಥ್ವಿರಾಜ್ ಪಾಟೀಲ್ ಅವರೊಂದಿಗೆ ನಾಗಶ್ರೀ ಹೆಬ್ಬಾರ್, ಹರಿಣಿ ಶ್ರೀಕಾಂತ್, ಸಂಧ್ಯಾ ವಿನಾಯಕ್, ಗಣಪತಿ ವಡ್ಡಿನಗದ್ದೆ, ಸ್ವರೂಪ್ ಬಚ್ಚ್, ಪೂಜಾ ಬಚ್ಚ್, ಜಯಂತ್ ಡೇವಿಡ್, ಗಿರೀಶ್ ಹೆಗಡೆ, ಡಾ. ಪ್ರಕೃತಿ, ಮಾಸ್ಟರ್ ಆಯುಷ್ ಸಂತೋಷ್, ಗಣಪತಿ ಹಿತ್ತಲಕೈ, ಪ್ರಜ್ಞಾ ಗಣಪತಿ, ಮಾಧವ ಶರ್ಮಾ, ಗಣಪತಿ ಎ. ಆರ್, ʼರಾಜ್ಯ ಪ್ರಶಸ್ತಿʼ ವಿಜೇತ ಯಕ್ಷಗಾನ ಕಲಾವಿದ ಗೋಡೆ ನಾರಾಯಣ ಹೆಗಡೆ ಮುಂತಾದ ದೊಡ್ಡ ಕಲಾವಿದರ ತಾರಾಗಣವೇ ಇದೆ.
ʼವಿಕಲ್ಪʼ ಚಿತ್ರದ ಟೀಸರ್ ಬಿಡುಗಡೆ ಬಳಿಕ ಮಾತನಾಡಿದ ಚಿತ್ರತಂಡ, ತಮ್ಮ ಸಿನಿಮಾದ ವಿಶೇಷತೆಗಳ ಬಗ್ಗೆ ಒಂದಷ್ಟು ವಿಷಯಗಳನ್ನು ಹಂಚಿಕೊಂಡಿತು. ಮೊದಲಿಗೆ ʼವಿಕಲ್ಪʼ ಮಾತಿಗಿಳಿದ ಚಿತ್ರದ ನಾಯಕ ನಟ ಕಂ ನಿರ್ದೇಶಕ ಪೃಥ್ವಿರಾಜ್ ಪಾಟೀಲ್, ʼಆರಂಭದಿಂದಲೂ ನಾವು ಹೇಳಿಕೊಂಡು ಬಂದಿರುವ ಹಾಗೇ, ಇದೊಂದು ಸೈಕಾಲಜಿಕಲ್-ಥ್ರಿಲ್ಲರ್ ಕಥಾಹಂದರದ ಚಿತ್ರ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ-ತಲ್ಲಣಗಳನ್ನು ಈ ಚಿತ್ರದ ಮೂಲಕ ತೆರೆಮೇಲೆ ತರುತ್ತಿದ್ದೇವೆ.
ʼವಿಕಲ್ಪʼ ಎಂದರೆ ವಾಸ್ತವ ಮತ್ತು ಕಲ್ಪನೆಗಳ ನಡುವಿನ ಒಂದು ಸ್ಥಿತಿ ಎಂದರ್ಥ. ನಮ್ಮ ಚಿತ್ರದ ಶೀರ್ಷಿಕೆಯ ಪ್ರಕಾರ, ಇದೊಂದು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಕಥೆ ಎಂದೆನಿಸಿದರೂ, ಇದು ಒಂದು ಸಂಪೂರ್ಣ ಥ್ರಿಲ್ಲರ್ ಚಿತ್ರ ಎನ್ನುವುದು ವಿಶೇಷ. ಸೈಕಾಲಜಿಕಲ್-ಥ್ರಿಲ್ಲರ್ ಅಂಶಗಳ ಜೊತೆಗೆ ನವಿರಾದ ಹಾಸ್ಯ ಮತ್ತು ಮನೋರಂಜನೆಗೆ ಹೆಚ್ಚಿನ ಒತ್ತನ್ನು ಕೊಟ್ಟು ಇಡೀ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಈ ಚಿತ್ರಕ್ಕೆ ಚಿತ್ರದ ಕಥೆಯೆ ಹೀರೋ. ಇಲ್ಲಿ ಪ್ರತಿ ಪಾತ್ರಗಳೂ ಮಾತನಾಡುತ್ತವೆ. ಪ್ರತಿ ಪಾತ್ರಗಳೂ ನೋಡುಗರ ಮನಮುಟ್ಟುತ್ತವೆʼ ಎಂದು ವಿವರಣೆ ನೀಡಿದರು.
ನಟಿ ಹರಿಣಿ ಶ್ರೀಕಾಂತ್ ಮಾತನಾಡಿ, ʼಈ ಸಿನಿಮಾದಲ್ಲಿ ನಾನು ಸೈಕಿಯಾಟ್ರಿಸ್ಟ್ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಇಡೀ ಚಿತ್ರತಂಡ ಹೊಸಬರಾದರೂ, ತುಂಬ ವೃತ್ತಿಪರವಾಗಿ ಸಿನಿಮಾ ಮಾಡಿದ್ದಾರೆ. ನಿರ್ದೇಶಕ ಪೃಥ್ವಿರಾಜ್ ಸಾಕಷ್ಟು ತಯಾರಿ ಮಾಡಿಕೊಂಡು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಒಂದು ಚಿತ್ರಕ್ಕೆ ಕಥೆ ಮತ್ತು ಬರವಣಿಗೆಯೇ ಮುಖ್ಯ ಎಂದು ಅಪೇಕ್ಷಿಸುವ ಕನ್ನಡದ ಎಲ್ಲಾ ಪ್ರಬುದ್ಧ ಚಿತ್ರ ಪ್ರೇಕ್ಷಕರಿಗೆ ಈ ಚಿತ್ರ ಖಂಡಿತವಾಗಿಯೂ ಇಷ್ಟವಾಗಲಿದೆʼ ಎಂದು ಭರವಸೆ ವ್ಯಕ್ತಪಡಿಸಿದರು.
ಚಿತ್ರದ ನಾಯಕಿ ನಾಗಶ್ರೀ ಹೆಬ್ಬಾರ್ ಮಾತನಾಡಿ, ʼಈ ಸಿನಿಮಾದಲ್ಲಿ ನಾನು ಸಮುದ್ಯತಾ ಎಂಬ ಹೆಸರಿನ ಪಾತ್ರವನನ್ನು ನಿರ್ವಹಿಸಿದ್ದೇನೆ. ತನ್ನೊಳಗೆ ಅಗಾಧ ತಲ್ಲಣಗಳನ್ನು ಇಟ್ಟುಕೊಂಡರೂ, ಮೇಲ್ನೋಟಕ್ಕೆ ಶಾಂತವಾಗಿರುವಂಥ ಪಾತ್ರ ನನ್ನದು. ಇಲ್ಲಿಯವರೆಗೆ ರಂಗಭೂಮಿಯಲ್ಲಿ ಅಭಿನಯಿಸಿದ್ದ ನನಗೆ ಈ ಸಿನಿಮಾ ಹೊಸತರದ ಅನುಭವ ತಂದುಕೊಟ್ಟಿದೆʼ ಎಂದರು.
ʼವಿಕಲ್ಪʼ ಚಿತ್ರದ ಟೀಸರ್ ಬಿಡುಗಡೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಹಿರಿಯ ಪತ್ರಕರ್ತ ಮತ್ತು ಲೇಖಕ ಜೋಗಿ, ʼಈಗಾಗಲೇ ಈ ಸಿನಿಮಾದ ಒಂದಷ್ಟು ತುಣುಕುಗಳನ್ನು ನೋಡಿದ್ದೇನೆ. ʼವಿಕಲ್ಪʼ ಸಿನಿಮಾದ ಬಗ್ಗೆ ತುಡಿತವಿರುವಂಥವರು ಸೇರಿ ಮಾಡಿದ ಸಿನಿಮಾ. ಕನ್ನಡದಲ್ಲಿ ಇಂಥ ಹೊಸ ಪ್ರಯತ್ನದ ಸಿನಿಮಾಗಳು ಬರುವಂತಾಗಬೇಕು. ಈ ಸಿನಿಮಾದ ಕಥೆ, ಟೀಸರ್, ಹಾಡುಗಳು ಭರವಸೆ ಮೂಡಿಸುವಂತಿದೆ. ಚಿತ್ರ ಬಿಡುಗಡೆಯಾದ ಮೇಲೆ ಮೂಡಿಸಿರುವ ನಿರೀಕ್ಷೆಯನ್ನು ನಿಜ ಮಾಡಲಿ. ಹೊಸಬರ ʼವಿಕಲ್ಪʼ ಸಿನಿಮಾಕ್ಕೆ ಶುಭವಾಗಲಿʼ ಎಂದು ಚಿತ್ರತಂಡತಂಡಕ್ಕೆ ಶುಭ ಹಾರೈಸಿದರು.
ʼವಿಕಲ್ಪʼ ಚಿತ್ರದ ಮತ್ತೊಂದು ವಿಶೇಷತೆಯೆಂದರೆ, ಅನೇಕ ನುರಿತ ಮಾನಸಿಕ ವೈದ್ಯರ ಸಲಹೆಯ ಮೇರೆಗೆ ಈ ಚಿತ್ರದ ಹಲವು ಸನ್ನಿವೇಶಗಳನ್ನು ಚಿತ್ರಿಸಲಾಗಿರುವುದು. ಚಿತ್ರದ ದೃಶ್ಯಗಳು ಸಹಜತೆಗೆ ಅತ್ಯಂತ ಹತ್ತಿರವಾಗಿರಬೇಕು ಎಂಬ ಆಶಯದಿಂದ ಚಿತ್ರತಂಡ ಇಂಥದ್ದೊಂದು ಕೆಲಸ ಮಾಡಿದೆ. ಬೆಂಗಳೂರು, ತೀರ್ಥಹಳ್ಳಿ, ಸಾಗರ, ಶಿರಸಿ, ಕುಂದಾಪುರ, ಯಲ್ಲಾಪುರ ಸುತ್ತಮುತ್ತ ʼವಿಕಲ್ಪʼ ಚಿತ್ರದ ಬಹುತೇಕ ಚಿತ್ರೀಕರಣ ನಡಸಲಾಗಿದ್ದು, ಸಿಂಗಪುರ, ನೆದರ್ಲ್ಯಾಂಡ್ ಸೇರಿದಂತೆ ವಿದೇಶಗಳಲ್ಲೂ ʼವಿಕಲ್ಪʼದ ಚಿತ್ರೀಕರಣ ಮಾಡಲಾಗಿದೆ. ʼವಿಕಲ್ಪʼ ಚಿತ್ರಕ್ಕೆ ಮಿಥುನ್ ತೀರ್ಥಹಳ್ಳಿ ಸಹ ನಿರ್ದೇಶನವಿದೆ. ʼವಿಕಲ್ಪʼ ಚಿತ್ರಕ್ಕೆ ಅಭಿರಾಮ್ ಗೌಡ ಛಾಯಾಗ್ರಹಣ, ಸುರೇಶ್ ಆರುಮುಗಮ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ʼವಿಕಲ್ಪದʼ ವಿಭಿನ್ನ ಹಾಡುಗಳಿಗೆ ಸಂವತ್ಸರ ಸಂಗೀತ ಸಂಯೋಜಿಸಿದ್ದು, ಪೃಥ್ವಿರಾಜ್ ಪಾಟಿಲ್ ಮತ್ತು ಕೌಂಡಿನ್ಯ ಕುಡ್ಲುತೋಟ ಹಾಡುಗಳಿಗೆ ಸಾಹಿತ್ಯ ರಚಿಸಿದ್ದಾರೆ. ಸಿದ್ದಾರ್ಥ್ ಬೆಳ್ಮಣ್ಣು, ಸಂವತ್ಸರ, ಶ್ರೀರಂಜಿನಿ, ಇಂಚರ ಮೊದಲಾದ ಗಾಯಕರ ಧ್ವನಿಯಲ್ಲಿ ʼವಿಕಲ್ಪʼದ ಹಾಡುಗಳು ಮೂಡಿಬಂದಿವೆ.
ಸದ್ಯ ಟೀಸರ್ ಮೂಲಕ ಹೊರಬಂದಿರುವ ʼವಿಕಲ್ಪʼ ನಿಧಾನವಾಗಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಸೈಕಾಲಜಿಕಲ್-ಥ್ರಿಲ್ಲರ್ ಸಿನಿಮಾಗಳ ಸಂಖ್ಯೆ ಕಡಿಮೆಯಿದ್ದು, ಅಂಥ ಬೆರಳೆಣಿಕೆಯ ವಿರಳ ಸಿನಿಮಾಗಳ ಸಾಲಿಗೆ ತಮ್ಮ ʼವಿಕಲ್ಪʼ ಚಿತ್ರ ಕೂಡ ಸೇರುವಂತಿದೆ. ʼವಿಕಲ್ಪʼ ಕನ್ನಡ ಚಿತ್ರರಂಗದ ಮಟ್ಟಿಗೆ ಒಂದು ಅಪರೂಪದ ಚಿತ್ರವಾಗಿ ನಿಲ್ಲದೆ ಎಂಬ ನಿರೀಕ್ಷೆಯಲ್ಲಿದೆ ʼವಿಕಲ್ಪʼ ಚಿತ್ರತಂಡ.
