“ಅನ್ ಲಾಕ್ ರಾಘವ” ಟ್ರೇಲರ್ ರೀಲಿಸ್ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್.
ಈಗಾಗಲೇ ಟೀಸರ್ ಹಾಗೂ ಹಾಡುಗಳ ಮೂಲಕ ಜನರ ಮನಸ್ಸಿಗೆ ಹತ್ತಿರವಾಗಿರುವ “ಅನ್ ಲಾಕ್ ರಾಘವ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಅಶ್ವಿನಿ ಪುನೀತ್ ರಾಜಕುಮಾರ್ ಅವರು ಟ್ರೇಲರ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷರಾದ ಭಾ.ಮ.ಹರೀಶ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪದಾಧಿಕಾರಿ ಕುಶಾಲ್, ಭಾ.ಮ.ಗಿರೀಶ್, ನಟ ಪ್ರಥಮ್, ಜಿಮ್ ರವಿ ಸೇರಿದಂತೆ ಅನೇಕ ಗಣ್ಯರು ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಮ್ಮ ಚಿತ್ರದ ಶೀರ್ಷಿಕೆಯನ್ನು ಕಳೆದ ಕೆಲವು ದಿನಗಳ ಹಿಂದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರೆ ಬಿಡುಗಡೆ ಮಾಡಿದ್ದರು. ಇಂದು ನಮ್ಮ ಚಿತ್ರದ ಟ್ರೇಲರ್ ಅವರಿಂದಲೇ ಬಿಡುಗಡೆಯಾಗಿದ್ದು ಬಹಳ ಸಂತೋಷವಾಗಿದೆ. ಇಂದು ಬೆಳಗಿನ ಜಾವ ಈ ಟ್ರೇಲರ್ ಸಿದ್ದವಾಯಿತು.
ಅಂದುಕೊಂಡ ಸಮಯಕ್ಕೆ ಟ್ರೇಲರ್ ಬಿಡುಗಡೆಯಾಗಲು ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ. ಯುವ ಪ್ರತಿಭೆಗಳಾದ ಮಿಲಿಂದ್ ಹಾಗೂ ರೆಚೆಲ್ ಡೇವಿಡ್(ಲವ್ ಮಾಕ್ಟೇಲ್) ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರವನ್ನು ಮಂಜುನಾಥ್ ದಾಸೇಗೌಡ ಹಾಗೂ ಗಿರೀಶ್ ಕುಮಾರ್ ನಿರ್ಮಿಸಿದ್ದು, ಕಥೆ, ಚಿತ್ರಕಥೆಯನ್ನು “ರಾಮ ರಾಮ ರೆ” ಖ್ಯಾತಿಯ ಸತ್ಯಪ್ರಕಾಶ್ ಬರೆದಿದ್ದಾರೆ.
ಲವಿತ್ ಛಾಯಾಗ್ರಹಣ, ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ “ಅನ್ ಲಾಕ್ ರಾಘವ” ಚಿತ್ರ ಫೆಬ್ರವರಿ 7 ರಂದು ತೆರೆಗೆ ಬರಲಿದೆ ಎಂದು ನಿರ್ದೇಶಕ ದೀಪಕ್ ಮಧುವನಹಳ್ಳಿ ತಿಳಿಸಿದರು.
ಚಿತ್ರದ ಆರಂಭದಿಂದಲೂ ನಮಗೆ ಪ್ರೋತ್ಸಾಹ ನೀಡುತ್ತಾ ಬಂದಿರುವ ಅಶ್ವಿನಿ ಮೇಡಂ ಅವರಿಗೆ ಅನಂತ ಧನ್ಯವಾದ ಎಂದು ಮತನಾಡಿದ ನಾಯಕ ಮಿಲಿಂದ್, “ಅನ್ ಲಾಕ್ ರಾಘವ” ಚಿತ್ರ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳಿರುವ ಚಿತ್ರ. ಸಾಧುಕೋಕಿಲ ಅವರು ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಈ ಚಿತ್ರದಲ್ಲಿ ಮಾಡಿರುವ ಪಾತ್ರ ಈವರೆಗೂ ಯಾವ ಚಿತ್ರದಲ್ಲೂ ಮಾಡಿಲ್ಲ. ನಮ್ಮ ಚಿತ್ರ ಇದೇ ಫೆಬ್ರವರಿ 7ರಂದು ತೆರೆಗೆ ಬರಲಿದೆ. ಕುಟುಂಬ ಸಮೇತ ಬಂದು ಚಿತ್ರ ನೋಡಿ ಎಂದರು.
“ಅನ್ ಲಾಕ್ ರಾಘವ” ಚಿತ್ರದಲ್ಲಿ ನನ್ನ ಪಾತ್ರ ಚೆನ್ನಾಗಿದೆ. ಜಾನಕಿ ನನ್ನ ಪಾತ್ರದ ಹೆಸರು ಎಂದರು ನಾಯಕಿ ರೆಚೆಲ್ ಡೇವಿಡ್. “ಉದ್ಘರ್ಷ” ಚಿತ್ರ ಸೇರಿದಂತೆ ಈ ಚಿತ್ರದ ತನಕ ನಾಲ್ಕು ಚಿತ್ರಗಳನ್ನು ನಿರ್ಮಾಣ ಮಾಡಿದ್ದೇನೆ. ಚಿತ್ರತಂಡದ ಸದಸ್ಯರ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಇತ್ತೀಚೆಗೆ ಟೆಕ್ನಿಕಲ್ ಶೋ ನಲ್ಲಿ ಚಿತ್ರವನ್ನು ನೋಡಿದಾಗ ತುಂಬಾ ಖುಷಿಯಾಯಿತು ಎಂದರು ನಿರ್ಮಾಪಕ ಮಂಜುನಾಥ್ ದಾಸೇಗೌಡ.
ನನಗೆ ಹದಿನೇಳು ವರ್ಷಗಳಿಂದ ಚಿತ್ರರಂಗದೊಂದಿಗೆ ನಂಟು. ಆದರೆ ನಿರ್ಮಾಪಕನಾಗಿ ಇದು ಮೊದಲ ಚಿತ್ರ. ನಿರ್ದೇಶಕ ದೀಪಕ್ ಅವರು ಕಥೆ ಹೇಳಿದಾಗ ಬಹಳ ಇಷ್ಟವಾಯಿತು. ಆದರೆ ಇತ್ತೀಚೆಗೆ ಚಿತ್ರವನ್ನು ತೆರೆಯ ಮೇಲೆ ನೋಡಿದಾಗ ಇನ್ನೂ ಇಷ್ಟವಾಯಿತು ಎಂದು ಚಿತ್ರದ ಮತ್ತೊಬ್ಬ ನಿರ್ಮಾಪಕರಾದ ಗಿರೀಶ್ ಕುಮಾರ್ ತಿಳಿಸಿದರು. ಗೀತರಚನೆಕಾರ ಹೃದಯಶಿವ ಹಾಡಿನ ಬಗ್ಗೆ ಮಾತನಾಡಿದರು.
 
 
 
 
 
 