ಕನ್ನಡ ರಾಜ್ಯೋತ್ಸವದಂದು “ಲ್ಯಾಂಡ್ ಲಾರ್ಡ್” ಚಿತ್ರದ ‘ದಿ ಸರ್ವೈವರ್’.. ಟೀಸರ್ ಬಿಡುಗಡೆ.
ನಾಡಿನೆಲ್ಲೆಡೆ ರಾಜ್ಯೋತ್ಸವದ ಸಂಭ್ರಮ. ಈ ಶುಭದಿನದಂದು ಸಾರಥಿ ಫಿಲಂಸ್ ಲಾಂಛನದಲ್ಲಿ ಕೆ.ವಿ. ಸತ್ಯಪ್ರಕಾಶ್ – ಹೇಮಂತ್ ಗೌಡ ಕೆ.ಎಸ್ ನಿರ್ಮಿಸಿರುವ, ಜಡೇಶ್ ಕೆ.ಹಂಪಿ ನಿರ್ದೇಶನದ ಹಾಗೂ ದುನಿಯಾ ವಿಜಯ್, ರಚಿತರಾಮ್ ಅಭಿನಯದ ‘ಲ್ಯಾಂಡ್ ಲಾರ್ಡ್’ ಚಿತ್ರದ ಸರ್ವೈವರ್ ಟೀಸರ್ ಬಿಡುಗಡೆ ಸಮಾರಂಭ ನವರಂಗ್ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು. ಟೀಸರ್ ಮೂಲಕ ಚಿತ್ರತಂಡ ಬಿಡುಗಡೆಯ ದಿನಾಂಕ ಘೋಷಣೆ ಮಾಡಿದೆ. ಬಹು ನಿರೀಕ್ಷಿತ ಈ ಚಿತ್ರ 2026 ರ ಜನವರಿ 23 ರಂದು ಬಿಡುಗಡೆಯಾಗಲಿದೆ. ಜನವರಿ 20 ದುನಿಯಾ ವಿಜಯ್ ಅವರ ಹುಟ್ಟುಹಬ್ಬ. ಆ ಸಂದರ್ಭದಲ್ಲೇ ಈ ಚಿತ್ರ ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಿಗೆ ಖುಷಿಯಾಗಿದೆ. ಟೀಸರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ಇಂತಹ ಉತ್ತಮ ಸಂದೇಶವಿರುವ ಈ ಕಥೆಯನ್ನು ತೆರೆಗೆ ತರುತ್ತಿರುವ ನಿರ್ದೇಶಕ ಜಡೇಶ್ ಕೆ ಹಂಪಿ ಹಾಗೂ ನಿರ್ಮಾಣ ಮಾಡುತ್ತಿರುವ ಕೆ.ವಿ.ಸತ್ಯಪ್ರಕಾಶ್ ಹಾಗೂ ಕೆ.ಎಸ್ ಹೇಮಂತ್ ಗೌಡ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಾಯಕ ದುನಿಯಾ ವಿಜಯ್, ಕಷ್ಟದ ಸಮಯದಲ್ಲಿ ಕೈ ಹಿಡಿದ ಅಭಿಮಾನಿಗಳಿಗೆ ವಿಶೇಷ ಧನ್ಯವಾದ ಹೇಳಿದರು. ಇನ್ನೂ, ನಾನು ಹಾಗೂ ರಚಿತರಾಮ್ ಅವರು ಒಂದೇ ಬಡಾವಣೆಯವರು. ಮೊದಲಿನಿಂದಲೂ ಸ್ನೇಹಿತರು. ಅವರ ಜೊತೆಗೆ ಅಭಿನಯಿಸಿದ್ದು ಹಾಗೂ ತೆರೆಯ ಮೇಲೆ ಅಷ್ಟೇ ಅಲ್ಲ. ನಿಜಜೀವನದಲ್ಲೂ ನನ್ನನ್ನು ತಾಯಿಯ ತರಹ ಪ್ರೀತಿ ಮಾಡುವ ಹಿರಿಯ ನಟಿ ಉಮಾಶ್ರೀ ಅವರೊಂದಿಗೆ ನಟಿಸಿದ್ದು ಬಹಳ ಸಂತೋಷವಾಗಿದೆ. ನನ್ನ ಮಗಳು ರಿತನ್ಯ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾಳೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಈ ಚಿತ್ರದಲ್ಲಿದೆ. ತಂತ್ರಜ್ಞರ ಕಾರ್ಯವೈಖರಿಯೂ ಚೆನ್ನಾಗಿದೆ. ನಮ್ಮ ಚಿತ್ರ ಜನವರಿ 23 ರಂದು ತೆರೆಗೆ ಬರಲಿದೆ. ಚಿತ್ರ ನಿಮ್ಮೆಲ್ಲರಿಗೂ ಮೆಚ್ಚುಗೆಯಾಗುವ ಭರವಸೆಯಿದೆ ಎಂದರು.
ಈ ಸಂದರ್ಭದಲ್ಲಿ ನಟಿ ರಚಿತಾರಾಮ್ ಮಾತನಾಡುತ್ತಾ, ನಾನು ಈ ಚಿತ್ರದ ಕಥೆ ಕೇಳುವಾಗಲೇ ಬಹಳ ಕುತೂಹಲ ಎನಿಸಿತು. ಕಥೆ ಕೇಳುತ್ತಿರುವಾಗಲೇ ಈ ಪಾತ್ರ ನಾನೇ ಮಾಡಬೇಕು ಅಂದುಕೊಂಡೆ. ಕಥೆ ಕೇಳಿದ ಮೇಲೆ ನಾನು ದರ್ಶನ್ ಸರ್ ಹಾಗೂ ಲೋಕೇಶ್ ಕನಕರಾಜು ಅವರಿಗೆ ಈ ಚಿತ್ರದ ಬಗ್ಗೆ ಹೇಳಿದೆ. ಅವರು ಕೂಡ ಕಥೆ ಚೆನ್ನಾಗಿದೆ ಎಂದರು. “ಜಾನಿ ಜಾನಿ ಎಸ್ ಪಪ್ಪ” ಚಿತ್ರದ ನಂತರ ನಾನು ದುನಿಯಾ ವಿಜಯ್ ಅವರ ಜೊತೆಗೆ ನಟಿಸಿದ್ದೇನೆ. ಈ ಚಿತ್ರತಂಡದೊಟ್ಟಿಗೆ ಕೆಲಸ ಮಾಡಿದ್ದು ಖುಷಿಯಾಗಿದೆ. ನಿಂಗವ್ವ ನನ್ನ ಪಾತ್ರದ ಹೆಸರು. ಟೀಸರ್ ಚೆನ್ನಾಗಿದೆ. ಚಿತ್ರ ಜನವರಿ 23 ತೆರೆಗೆ ಬರಲಿದೆ. ಎಲ್ಲರೂ ಚಿತ್ರ ನೋಡಿ. ಪ್ರೋತ್ಸಾಹ ನೀಡಿ ಎಂದರು.
ಇದೊಂದು 80ರ ಕಾಲಘಟ್ಟದಲ್ಲಿ ನಡೆಯುವ ಈ ನೆಲದ ಕಥೆ. 45 ವರ್ಷಗಳ ಹಿಂದಿನದ್ದನ್ನು ತೆರೆಯ ಮೇಲೆ ತರುವುದು ಅಷ್ಟು ಸುಲಭವಲ್ಲ. ನಾವು ಅಂದುಕೊಂಡ ಹಾಗೆ ಚಿತ್ರ ಬಂದಿದೆ ಅಂದರೆ ಅದಕ್ಕೆ ಚಿತ್ರತಂಡದ ಸಹಕಾರವೇ ಕಾರಣ. ಇನ್ನೂ ದುನಿಯಾ ವಿಜಯ್ ಅವರ ಅಭಿನಯಕ್ಕೆ ಅಭಿಮಾನಿ ನಾನು. ರಚಿತಾರಾಮ್ ಅವರು ಅಭಿನಯಿಸಲು ಸೆಟ್ ಗೆ ಬಂದರೆ ಅವರ ಸಂಭಾಷಣೆಗೆ ವಿಷಲ್ ಬೀಳುತ್ತಿತ್ತು. ರಿತನ್ಯ, ಶಿಶಿರ್, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಮಿತ್ರ, ಅಭಿಷೇಕ್ ದಾಸ್ ಹೀಗೆ ಎಲ್ಲರ ಅಭಿನಯವೂ ಬಹಳ ಚೆನ್ನಾಗಿದೆ. ಐವತ್ತಕ್ಕೂ ಹೆಚ್ಚು ರಂಗಭೂಮಿ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಚೆನ್ನಾಗಿ ಬಂದಿದೆ. ಅದರಲ್ಲೂ ಯೋಗರಾಜ್ ಭಟ್ ಅವರು ಬರೆದು ದುನಿಯಾ ವಿಜಯ್ ಹಾಗೂ ರಚಿತರಾಮ್ ಅವರು ಅಭಿನಯಿಸಿರುವ ಹಾಡೊಂದು ಸದ್ಯದಲ್ಲೇ ಬಿಡುಗಡೆಯಾಗಲಿದ್ದು, ಅದು ಸರ್ವಕಾಲಿಕ ಹಿಟ್ ಹಾಡುಗಳ ಸಾಲಿಗೆ ಸೇರಲಿದೆ. ಚಿತ್ರವನ್ನು ಯಾವುದೇ ಕೊರತೆ ಬಾರದ ಹಾಗೆ ನಿರ್ಮಾಪಕರು ನಿರ್ಮಾಣ ಮಾಡಿದ್ದಾರೆ. ಜನವರಿ 23 ನಮ್ಮ ಚಿತ್ರ ನಿಮ್ಮ ಮುಂದೆ ಬರಲಿದೆ ಎಂದರು ನಿರ್ದೇಶಕ ಜಡೇಶ್ ಕೆ. ಹಂಪಿ.
“ಸಾರಥಿ” ಚಿತ್ರದ ಬಳಿಕ ಹದಿನಾಲ್ಕು ವರ್ಷಗಳ ನಂತರ ನಮ್ಮ ಸಂಸ್ಥೆಯಿಂದ “ಲ್ಯಾಂಡ್ ಲಾರ್ಡ್” ಚಿತ್ರ ನಿರ್ಮಾಣವಾಗಿದೆ. ನಿರ್ದೇಶಕರು ಒಂದೊಳ್ಳೆ ಕಥೆ ಮಾಡಿದ್ದಾರೆ. ನೋಡುಗರು ಕೊಡುವ ದುಡ್ಡಿಗೆ ಐದು ಪಟ್ಟು ಹೆಚ್ಚು ಮನೋರಂಜನೆ ಕೊಡುವ ಚಿತ್ರವಿದು. ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ದುನಿಯಾ ವಿಜಯ್, ರಚಿತರಾಮ್ ಅವರು ಸೇರಿದಂತೆ ಎಲ್ಲಾ ಕಲಾವಿದರಿಗೆ ಹಾಗೂ ತಂತ್ರಜ್ಞರಿಗೆ ಧನ್ಯವಾದ ಎಂದರು ನಿರ್ಮಾಪಕ ಕೆ.ವಿ.ಸತ್ಯಪ್ರಕಾಶ್. ನಮ್ಮ ಚಿತ್ರ ಜನವರಿ 23ರಂದು ಬಿಡುಗಡೆಯಾಗಲಿದೆ. ಮುಂದೆ ಕೂಡ ನಮ್ಮ ಸಂಸ್ಥೆಯಿಂದ ಉತ್ತಮ ಚಿತ್ರಗಳು ನಿರ್ಮಾಣವಾಗಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ತಂದೆ ಕೆ.ವಿ.ಸತ್ಯಪ್ರಕಾಶ್ ಅವರ ಜೊತೆಗೂಡಿ ಈ ಚಿತ್ರವನ್ನು ನಿರ್ಮಿಸಿರುವ ಕೆ.ಎಸ್.ಹೇಮಂತ್ ಗೌಡ ತಿಳಿಸಿದರು.
ಈ ಚಿತ್ರದಲ್ಲಿ ಅಭಿನಯಿಸಿದ್ದು ಬಹಳ ಖುಷಿಯಾಗಿದೆ. ದುನಿಯಾ ವಿಜಯ್ ತೆರೆ ಮೇಲೆ ಮಾತ್ರ ನನ್ನ ಮಗ ಅಲ್ಲ. ನಿಜಜೀವನದಲ್ಲೂ ನನ್ನ ಮಗ ಇದ್ದ ಹಾಗೆ. ಆರೀತಿಯ ಪ್ರೀತಿ ತೋರಿಸುತ್ತಾರೆ ಎಂದು ಹಿರಿಯ ನಟಿ ಉಮಾಶ್ರೀ ಹೇಳಿದರು.
ಈ ಚಿತ್ರದ ಮೂಲಕ ನಾನು ಚಿತ್ರರಂಗ ಪ್ರವೇಶಿಸುತ್ತಿದ್ದೇನೆ. ಈ ಚಿತ್ರದಲ್ಲೂ ನಾನು ದುನಿಯಾ ವಿಜಯ್ ಅವರ ಮಗಳಾಗಿಯೇ ಕಾಣಿಸಿಕೊಂಡಿದ್ದೇನೆ ಎಂದರು ದುನಿಯಾ ವಿಜಯ್ ಪುತ್ರ ರಿತನ್ಯ.
ಚಿತ್ರದಲ್ಲಿ ನಟಿಸಿರುವ ಮಿತ್ರ, ಶಿಶಿರ್, ಅಭಿಷೇಕ್ ದಾಸ್ ಛಾಯಾಗ್ರಾಹಕ ಸ್ವಾಮಿ ಜೆ ಗೌಡ, ಸಂಭಾಷಣೆ ಬರೆದಿರುವ ಮಾಸ್ತಿ, ಶ್ರೀಕಾಂತ್ ಮುಂತಾದ ಚಿತ್ರತಂಡದ ಸದಸ್ಯರು “ಲ್ಯಾಂಡ್ ಲಾರ್ಡ್” ಚಿತ್ರದ ಕುರಿತು ಮಾತನಾಡಿದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಹಾಗೂ ಚಿತ್ರರಂಗದ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
