Cini NewsMovie ReviewSandalwood

ನೊಂದ ಸಮುದಾಯದ ಜ್ವಾಲೆಯ ಕಿಚ್ಚು “ದಿ ರೈಸ್ ಆಫ್ ಅಶೋಕ” ಚಿತ್ರವಿಮರ್ಶೆ(ರೇಟಿಂಗ್ : 4/5)

Spread the love

ಚಿತ್ರ: ದಿ ರೈಸ್ ಆಫ್ ಅಶೋಕ
ನಿರ್ದೇಶಕ : ವಿನೋದ್ ವಿ ಧೋಂಡಲೆ
ನಿರ್ಮಾಪಕರು : ವರ್ಧನ್ ನರಹರಿ, ಜೈಷ್ಣವಿ, ಸತೀಶ್ ನೀನಾಸಂ
ಸಂಗೀತ : ಪೂರ್ಣಚಂದ್ರ ತೇಜಸ್ವಿ
ಛಾಯಾಗ್ರಹಣ : ಲವಿತ್
ತಾರಾಗಣ : ಸತೀಶ್​ ನೀನಾಸಂ , ಸಪ್ತಮಿ ಗೌಡ, ಬಿ.ಸುರೇಶ್, ರವಿಶಂಕರ್, ಗೋಪಾಲಕೃಷ್ಣ ದೇಶಪಾಂಡೆ, ಸಂಪತ್ ಮೈತ್ರೇಯಾ, ಯಶ್ ಶೆಟ್ಟಿ, ಡ್ರಾಗನ್ ಮಂಜು, ಹರೀಶ್ ಪೆರಾಡಿ, ಜಗಪ್ಪ ಹಾಗೂ ಮುಂತಾದವರು…

ಈ ಭೂಮಿ ಮೇಲೆ ಜನ್ಮ ತಾಳಿರುವ ಪ್ರತಿ ಒಂದು ಪ್ರಾಣಿ , ಪಕ್ಷಿ , ಮನುಷ್ಯ ಸೇರಿದಂತೆ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಇಲ್ಲಿ ಯಾರು ಹೆಚ್ಚಲ್ಲ.. ಕಮ್ಮಿಯೂ ಇಲ್ಲ…ಮೇಲು-ಕೀಳು ಎಂಬ ತಾರತಮ್ಯವಿಲ್ಲದೆ ಎಲ್ಲರೂ ನೆಮ್ಮದಿಯ ಜೀವನ ಸಾಗಿಸುವುದು ಬಹಳ ಅತ್ಯಗತ್ಯ ಎಂಬ ವಿಚಾರ ತಿಳಿದೇ ಇದೆ. ಆದರೆ ದಶಕಗಳ ಹಿಂದೆ ಇದಕ್ಕೆಲ್ಲ ತದ್ವಿರುದ್ಧವಾಗಿ ಬದುಕು ನಡೆದಿದ್ದೇ ಹೆಚ್ಚು , ಅಂತದ್ದೇ ದೇವರಿಗೆ ತಲೆ ಕೂದಲನ್ನು ಮುಡಿಕೊಡಲು ಬರುವವರ ತಲೆ ಬೋಡಿಸುವ ಹಾಗೂ ನಾದಸ್ವರ ನುಡಿಸುವ ಜನಾಂಗದ ಬದುಕು ಬವಣೆ , ಸಮಸ್ಯೆಗಳ ಕಷ್ಟಕಾರ್ಪಣ್ಯ , ಕೂದಲು ಮಾರಾಟದ ದಂದೆಯ ನಡುವೆ ಸರಕಾರಿ ಕೆಲಸಕ್ಕೆ ಶ್ರಮಪಡುವ ಬಡ ಹುಡುಗನ ಬದುಕಿನಲ್ಲಿ ಎದುರಾಗುವ ನೋವು , ಹಿಂಸೆ ದೊಡ್ಡ ಜ್ವಾಲೆಯ ಶಕ್ತಿಯಾಗಿ ಹೋರಾಡುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ದಿ ರೈಸ್ ಆಫ್ ಅಶೋಕ”.

ದೇವರಿಗೆ ಹರಕೆ ಹೊತ್ತು ಕೂದಲು ಮುಡಿಕೊಡಲು ಬರುವ ಭಕ್ತರ ಕೂದಲು ತೆಗೆಯುವ ಕಾಯಕ ಗಂಗಣ್ಣ (ಬಿ. ಸುರೇಶ್) ಈ ಕೆಲಸ ತನ್ನ ಮಗ ಮಾಡಬಾರದು , ಸರ್ಕಾರಿ ಕೆಲಸಕ್ಕೆ ಸೇರಬೇಕೆಂದು ಶ್ರಮ ಪಡುವ ಅಪ್ಪನ ಆಸೆಯಂತೆ ಓದಿ ರೆವಿನ್ಯೂ ಇನ್ಸ್ಪೆಕ್ಟರ್ ಗೆ ಎಕ್ಸಾಮ್ ಬರೆಯುವ ಮಗ ಅಶೋಕ (ನೀನಾಸಂ ಸತೀಶ್). ಇನ್ನು ತಾಯಿ ಇಲ್ಲದ ಹುಡುಗಿಯನ್ನು ಮುದ್ದಾಗಿ ಬೆಳೆಸುವ ತಂದೆ ಉದ್ಯೋಗದಲ್ಲಿರುವ ಹುಡುಗನಿಗೆ ತನ್ನ ಮಗಳು ಅಂಬಿಕಾ(ಸಪ್ತಮಿ ಗೌಡ) ಳನ್ನ ಕೊಡಬೇಕೆಂದು ಆಸೆ ಪಡುತ್ತಾನೆ.

ಇದರ ನಡುವೆ ಕೂದಲ ವ್ಯಾಪಾರವೇ ದೊಡ್ಡ ದಂಧೆಯಾಗಿಸಿಕೊಂಡು ಅವರತಿ ಗ್ರಾಮದ ಪೋತುರಮ್ಮ ದೇವಿಯ ದೇವಸ್ಥಾನ ಸೇರಿದಂತೆ ಅಕ್ಕಪಕ್ಕ ಊರಿನ ಗ್ರಾಮದ ಮುಡಿಕಟ್ಟೆಯ ಟೆಂಡರ್ ಗಳನ್ನು ತನ್ನ ಕೈವಶದಲ್ಲಿಟ್ಟುಕೊಂಡು ಆರ್ಭಟಿಸುವ ಕುಟ್ಟಿ ಬಾಬ್ಜಿ (ಸಂಪತ್ ಮೈತ್ರೇಯಾ) ತನ್ನ ಪುತ್ರ (ಯಶ್ ಶೆಟ್ಟಿ) ಸೇರಿದಂತೆ ತನ್ನದೇ ರೌಡಿ ಗ್ಯಾಂಗ್ಗಳ ಮೂಲಕ ಜನರನ್ನು ಎದುರಿಸುತ್ತಾ ಕೂದಲು ಮಾರಾಟ ಮಾಡುತ್ತಿರುತ್ತಾನೆ.

ಈ ಕುಲ ಕಸವನ್ನೇ ನಂಬಿಕೊಂಡು ಬದುಕುವರಿಗೆ ನಾಕಾಣೆ ನೀಡಿ ಉಳಿದ ಹಣವನ್ನು ಕಬಳಿಸುತ್ತಾ ಅಮಾಯಕರಿಗೆ ಹಿಂಸೆ ನೀಡುವ ಇವನ ವಿರುದ್ಧ ಧ್ವನಿ ಎತ್ತಿದವರ ಕೂಗು ನಿಲ್ಲಿಸುವ ಈ ರಾಕ್ಷಸನ ವರ್ತನೆಗೆ ಭಯಪಡುತ್ತಾರೆ. ತನ್ನ ಸುತ್ತಮುತ್ತಲಿನ ಜನರ ಸಾವಿಗೆ ಕುಟ್ಟಿ ಬಾಬ್ಜಿಯೇ ಕಾರಣ ಎಂದು ತಿಳಿಯುವ ಅಶೋಕ ಜಿಲ್ಲಾಧಿಕಾರಿ (ರವಿಶಂಕರ್)ಗೆ ವಿಷಯ ತಿಳಿಸುತ್ತಾನೆ. ಕುಟ್ಟಿಯ ಆರ್ಭಟ ತಿಳಿಯುವ ಅಶೋಕ ಟೆಂಡರ್ ಗೆ ಅಪ್ಲೈ ಮಾಡುತ್ತಾನೆ. ತನ್ನ ಜನರನ್ನು ಕಾಪಾಡಿಕೊಳ್ಳಲು ಮುಂದಾಗುತ್ತಾನೆ. ಮುಂದೆ ಎದುರಾಗುವ ಒಂದಷ್ಟು ರೋಚಕ ಘಟನೆಗಳು ಹಿಂದುಳಿದ ಈ ಜನಾಂಗದ ಬದುಕಿಗೆ ದೊಡ್ಡ ಸಂಕಷ್ಟವೇ ಎದುರಾಗುತ್ತದೆ. ಅದು ಏನು… ಹೇಗೆ… ಅಶೋಕ ಸರ್ಕಾರಿ ಕೆಲಸ ಸೇರುತ್ತಾನಾ… ತನ್ನ ಪ್ರೀತಿ ಪಡೆಯುತ್ತಾನಾ… ಸಮುದಾಯದ ಜನರ ಪರ ನಿಲ್ಲುತ್ತಾನಾ… ಕ್ಲೈಮಾಕ್ಸ್ ನೀಡುವ ಉತ್ತರ ಏನು…
ಇದಕ್ಕಾಗಿ ಎಲ್ಲರೂ ಚಿತ್ರವನ್ನು ನೋಡಲೇಬೇಕು.

ಒಂದು ಕಾಲಘಟ್ಟದ ಸಮಯದಲ್ಲಿ ಮೇಲ್ವರ್ಗದವರು ಕೆಳವರ್ಗದವರ ಮೇಲೆ ನಡೆಸುತ್ತಿದ್ದಂತಹ ದಬ್ಬಾಳಿಕೆ , ಹಿಂಸೆ, ನೋವು , ಅವಮಾನ ಸಂಕಷ್ಟಗಳ ಸುತ್ತ ಸಿಡಿದೆಳುವ ಸಮುದಾಯದ ಕ್ರಾಂತಿಯ ಜ್ವಾಲೆಯನ್ನ ತೆರೆಯ ಮೇಲೆ ತಂದಿರುವಂತಹ ರೀತಿ ಗಮನ ಸೆಳೆಯುತ್ತದೆ.

ಚಿತ್ರಕಥೆಯಲ್ಲಿ ಇನ್ನಷ್ಟು ಹಿಡಿತದ ಜೊತೆ ರಕ್ತಪಾತದ ದೃಶ್ಯಗಳ ಕಡಿವಾಣ ಮಾಡಬಹುದಿತ್ತು. ಆದರೂ ಒಂದು ಉತ್ತಮ ಪ್ರಯತ್ನದ ಚಿತ್ರವಾಗಿ ಮೂಡಿಬಂದಿದೆ. ಒಂದಷ್ಟು ಅಡೆತಡೆಗಳ ನಡುವೆ ನಿರ್ಮಾಪಕರು ಈ ಚಿತ್ರಕ್ಕೆ ಬೆಂಬಲವಾಗಿ ನಿಂತು ಬಿಡುಗಡೆ ಮಾಡಿರುವುದನ್ನ ಮೆಚ್ಚಲೇಬೇಕು. ಇನ್ನು ಈ ಸಂಗೀತ ಸೊಗಸಾಗಿದ್ದು , ಹಿನ್ನೆಲೆ ಸಂಗೀತ ಅಬ್ಬರಿತಿದೆ ಅದೇ ರೀತಿ ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ.

ಇನ್ನು ಕಲೆ , ಸಂಕಲನ , ವಸ್ತ್ರಲಂಕಾರ , ಕೇಶವಿನ್ಯಾಸ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದಂತಿದೆ. ಇಡೀ ಚಿತ್ರವನ್ನು ನಟ ನೀನಾಸಂ ಸತೀಶ್ ಆವರಿಸಿಕೊಂಡಿದ್ದಾರೆ. ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆಯಬೇಕೆಂದು ಆಸೆ ಪಡೆಯುವ ಹಿಂದುಳಿದ ವರ್ಗದ ಹುಡುಗನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದು, ಮುಡಿ ತೆಗೆಯುವ ಹಾಗೂ ಶಹನಾಯಿ ನುಡಿಸುವ ಪಾತ್ರದ ಜೊತೆ ವೇಷ ಭೂಷಣದಲ್ಲೂ ಮಿಂಚಿದ್ದಾರೆ.

ಇನ್ನು ನಟಿಯಾಗಿ ಸಪ್ತಮಿ ಗೌಡ ಕೂಡ ಬಹಳ ಲವಲವಿಕೆಯಿಂದ ಅಚ್ಚುಕಟ್ಟಾಗಿ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ನಾಯಕನ ತಂದೆಯಾಗಿ ಬಿ. ಸುರೇಶ್ ಅಮಾಯಕ ವ್ಯಕ್ತಿಯಾಗಿ ಪಾತ್ರಕ್ಕೆ ಜೀವ ತುಂಬಿ ಅದ್ಭುತವಾಗಿ ಅಭಿನಯಿಸಿದ್ದು , ಎಲ್ಲರ ಗಮನ ಸೆಳೆಯುತ್ತಾರೆ. ಇನ್ನು ಚಿತ್ರದ ಪ್ರಮುಖವಾಗಿ ಕುಟ್ಟಿ ಬಾಬ್ಜಿ ಪಾತ್ರವನ್ನು ನಿರ್ವಹಿಸಿರುವ ಸಂಪತ್ ಮೈತ್ರೇಯಾ ದೇಹಕ್ಕೆ ಮೀರಿದಂತ ನಡೆ – ನುಡಿ ವೇಷ ಭೂಷಣವಿದ್ದರೂ ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಇನ್ನು ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸತ್ ನೀಡಿದೆ. ಒಟ್ಟಾರೆ ಎಲ್ಲರೂ ನೋಡುವಂತಹ ಚಿತ್ರ  ಇದಾಗಿದೆ.

Visited 1 times, 1 visit(s) today
error: Content is protected !!