“ಪೀಟರ್” ಚಿತ್ರದ ಸುಂದರಿ… ಎಂಬ ಮೊದಲ ಹಾಡು ರಿಲೀಸ್
ದೂರದರ್ಶನ ಸಿನಿಮಾ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಆಕ್ಷನ್ ಕಟ್ ಹೇಳಿರುವ ಪೀಟರ್ ಸಿನಿಮಾದ ಮೊದಲ ಹಾಡು ಬಿಡುಗಡೆ ಕಾರ್ಯಕ್ರಮ ನಿನ್ನೆ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಈ ವೇಳೆ ಇಡೀ ಚಿತ್ರತಂಡ ಉಪಸ್ಥಿತರಿದ್ದರು.
ಸುಂದರಿ ಸುಂದರಿ ಎಂಬ ಮೆಲೋಡಿ ಹಾಡು ರಿಲೀಸ್ ಬಳಿಕ ಸಂಗೀತ ನಿರ್ದೇಶಕ ರಿತ್ವಿಕ್ ಮುರುಳೀಧರ್ ಮಾತನಾಡಿ, ಇದು ಮೊದಲ ಸಿನಿಮಾ ತರ ಕೆಲಸ ಮಾಡಿದ್ದೇವೆ. ಪ್ರತಿ ಭಾಷೆಯಲ್ಲಿ ಒರಿಜಿನಲ್ ಸಾಂಗ್ ರೀತಿ ಫೀಲ್ ಕೊಡುತ್ತದೆ. ಎಲ್ಲಾ ಲೈವ್ ಇನ್ಸ್ಟ್ರುಮೆಂಟ್ಸ್ ಬಳಕೆ ಮಾಡಲಾಗಿದೆ. ಈ ಕ್ರೆಡಿಟ್ ಎಲ್ಲಾ ಇಡೀ ತಂಡಕ್ಕೆ ಹೋಗಬೇಕು. ಇನ್ನೂ ಮೂರು ಹಾಡುಗಳು ರಿಲೀಸ್ ಆಗಲಿದೆ ಎಂದು ಮಾಹಿತಿ ನೀಡಿದರು.
ಸುಕೇಶ್ ಶೆಟ್ಟಿ ಮಾತನಾಡಿ, ಪೀಟರ್ ಸಿನಿಮಾ ಹೋಪ್ ಕ್ರಿಯೇಟ್ ಮಾಡಿದೆ. ನಿಮ್ಮ ನಿರೀಕ್ಷೆ ಕೊರತೆ ಬರದ ಹಾಗೇ ಕೆಲಸ ಮಾಡಿದ್ದೇವೆ. ಒಂದು ತಂಡವಾಗಿ ಕೆಲಸ ಮಾಡಿದ್ದೇವೆ. 50% ಮಳೆಯಲ್ಲಿ ಶೂಟಿಂಗ್ ನಡೆಸಲಾಗಿದೆ. ಸಿನಿಮಾ ಅಂತಾ ಬಂದಾಗ ಮ್ಯೂಸಿಕ್ ಪ್ಲಸ್ ಪಾಯಿಂಟ್ ಆಗಬೇಕು. ಅದಕ್ಕಾಗಿ ಟ್ರೆಂಡಿಂಗ್ ಹಾಡು ನೀಡಬೇಕು ಎಂಬ ಉದ್ದೇಶದಿಂದ ರಿತ್ವಿಕ್ ಕೆಲಸ ಮಾಡಿದ್ದಾರೆ. ಇಷ್ಟು ಕೆಲಸಕ್ಕೆ ಬೆಂಬಲವಾಗಿ ನಿಂತವರು ನಮ್ಮ ನಿರ್ಮಾಪಕರು. ನಾಲ್ಕು ಭಾಷೆಯಲ್ಲಿ ಚಿತ್ರ ತೆರೆಗೆ ಬರ್ತಿದೆ. ಥಿಂಕ್ ಮ್ಯೂಸಿಕ್ ಖರೀದಿಸಿದ ಮೊದಲ ಸಿನಿಮಾ ಹಾಡು ಪೀಟರ್. ಈ ಮೂಲಕ ಪೀಟರ್ ಚಿತ್ರ ಮೊದಲ ಗೆಲುವು ಪಡೆದಿದೆ ಎಂದು ಹೇಳಿದರು.
ನಟ ರಾಜೇಶ್ ಧ್ರುವ ಮಾತನಾಡಿ, ಪೀಟರ್ ಜರ್ನಿ ವಿಶೇಷ. ನಾನು ಸುಕೇಶ್ ಅದ್ಭುತವಾಗಿ ಏನೋ ಮಾಡಬೇಕು ಎಂದಾಗ ಕೈ ಜೋಡಿಸಿದ್ದು, ರವಿ ಸರ್ ಹಾಗೂ ರಾಕೇಶ್ ಸರ್. ಕನ್ನಡದ ಮೊಟ್ಟ ಮೊದಲ ಸಿನಿಮಾ ಥಿಂಕ್ ಮ್ಯೂಸಿಕ್ ನಲ್ಲಿ ಬಿಡುಗಡೆಯಾಗುತ್ತಿರುವ ಆಲ್ಬಂ ನಲ್ಲಿ ಪೀಟರ್ ಮೊದಲನೆಯದ್ದು. ಒಂದೊಂದು ಬಿಟ್ ತಲೆ ಮೇಲೆ ಹೊಡೆದ ರೀತಿ, ಹೃದಯಕ್ಕೆ ನಾಟಿದ ರೀತಿ ಇದೆ. ಎಲ್ಲರ ಪ್ಲೇ ಲೀಸ್ಟ್ ಕುಳಿತುಕೊಳ್ಳುವ ಹಾಡು ಇದಾಗಿದೆ. ಟೀಂ ಆಗಿ ಎಲ್ಲರೂ ಕೆಲಸ ಮಾಡಿದ್ದೇವೆ ಎಂದರು.
ಥಿಂಕ್ ಮ್ಯೂಸಿಕ್ ಕನ್ನಡ ಯೂಟ್ಯೂಬ್ ನಲ್ಲಿ ಸುಂದರಿ ಸುಂದರಿ ಎಂಬ ಗೀತೆಯನ್ನು ಅನಾವರಣ ಮಾಡಲಾಗಿದೆ. ಖ್ಯಾತ ಚಿತ್ರ ಸಾಹಿತಿ ನಾಗಾರ್ಜುನ್ ಶರ್ಮಾ ಬರೆದ ಹಾಡು ಇದಾಗಿದ್ದು, ಕಪಿಲ್ ಕಪಿಲನ್ ಹಾಗೂ ಸುನಿಧಿ ಗಣೇಶ್ ಧ್ವನಿಯಾಗಿರುವ ಸಾಂಗ್ ಗೆ ರಿತ್ವಿಕ್ ಮುರುಳೀಧರ್ ಸಂಗೀತ ಒದಗಿಸಿದ್ದಾರೆ. ಸುಂದರಿ ಗೀತೆಯಲ್ಲಿ ನಾಯಕ ರಾಜೇಶ್ ಧ್ರುವ ಹಾಗೂ ನಾಯಕಿ ರವೀಕ್ಷಾ ಮಿಂಚಿದ್ದಾರೆ. ನವ ಪ್ರೇಮಿಗಳಿಗೆ ಹೇಳಿ ಮಾಡಿಸಿದಂತಿರುವ ಹಾಡನ್ನು ಸುಂದರ ಜಾಗಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಏಕಕಾಲದಲ್ಲಿ ಕನ್ನಡದ ಜೊತೆಗೆ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಹಾಡನ್ನು ಬಿಡುಗಡೆ ಮಾಡಲಾಗಿದೆ.
ಪೀಟರ್ ಸಿನಿಮಾ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ಪೀಟರ್ ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳನ್ನು ಥಿಯೇಟರ್ ನಲ್ಲಿ ಎಕ್ಸ್ ಪಿರಿಯನ್ಸ್ ಮಾಡುವುದೇ ಚೆಂದ. ಅದನ್ನು ಪೀಟರ್ ಸಿನಿಮಾದಲ್ಲಿ ನಿರ್ದೇಶಕ ಸುಕೇಶ್ ಹೇಗೆ ಅಳವಡಿಸಲಿದ್ದಾರೆ ಎಂಬ ಕುತೂಹಲವಿದೆ.
ಚಿತ್ರದಲ್ಲಿ ರಾಜೇಶ್ ಧ್ರುವ, ಜಾಹ್ನವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ಧೂರಿ ಸೆಟ್ ಹಾಕಿ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.
I
ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ ಮಿಶ್ರಣ ಪೀಟರ್ ಸಿನಿಮಾದಲ್ಲಿದೆ.