ಪ್ರೀತಿ , ಸಂಬಂಧಗಳ ಸುಳಿಯಲ್ಲಿ ಸೂರ್ಯನ ಬೆಳಕು “ಸೂರ್ಯ” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸೂರ್ಯ
ನಿರ್ದೇಶಕ : ಸಾಗರ್ ದಾಸ್
ನಿರ್ಮಾಪಕರು : ಬಸವರಾಜ ಬೆಣ್ಣೆ, ರವಿ ಬೆಣ್ಣೆ
ಸಂಗೀತ : ಶ್ರೀ ಶಾಸ್ತ
ಛಾಯಾಗ್ರಹಣ : ಮನುರಾಜ್
ತಾರಾಗಣ : ಪ್ರಶಾಂತ್ , ಹರ್ಷಿತಾ , ಶೃತಿ , ರವಿಶಂಕರ್, ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಭಜರಂಗಿ ಪ್ರಸನ್ನ, ಪ್ರಮೋದ್ ಶೆಟ್ಟಿ , ಕುಂಕುಮ್ ಹರಿಹರ, ದೀಪಿಕಾ, ಕಡ್ಡಿಪುಡಿ ಚಂದ್ರು ಹಾಗೂ ಮುಂತಾದವರು…
ಜೀವನದಲ್ಲಿ ಸಂಬಂಧ , ಪ್ರೀತಿ , ಬದುಕು ಎಲ್ಲವೂ ಮುಖ್ಯವೇ. ಒಂದು ವೇಳೆ ಏನಾದರೂ ಎಡವಟ್ಟಾದರೆ, ಎಲ್ಲವೂ ಒಂದಕ್ಕೊಂದು ಕುಂಡಿಯಂತೆ ಬೆಸೆದುಕೊಂಡು ಬದುಕೆ ದಿಕ್ಕಾಪಾಲಾಗಿ ಹೋಗುತ್ತದೆ. ಅಂತದ್ದೇ ಒಬ್ಬ ಹುಡುಗನ ಬದುಕಲ್ಲಿ ಎದುರಾದಂತಹ ಘಟನೆಗಳ ಸುತ್ತ ಸಾಗುವ ನೋವು , ಪ್ರೀತಿ , ಹಿಂಸೆ , ಮೋಸ , ಸತ್ಯತೆಗಳ ರೋಚಕ ತಿರುವಿನ ಕಥಾನಕ ರೂಪವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸೂರ್ಯ”. ಸ್ಲಂ ಒಂದರಲ್ಲಿ ಶಂಕ್ರಣ್ಣ (ಬಾಲ ರಾಜವಾಡಿ) ಆಶ್ರಯದಲ್ಲಿ ಬಹಳಷ್ಟು ಮಕ್ಕಳ ಜೊತೆ ಅನಾಥನಾಗಿ ಬೆಳೆದ ಹುಡುಗ ಸೂರ್ಯ (ಪ್ರಶಾಂತ್). ಕಾಲೇಜಿನಲ್ಲಿ ರಾಂಕ್ ಸ್ಟುಡೆಂಟ್ ಆಗಿರುವ ಸೂರ್ಯ ಆಟೋ , ಹೋಟೆಲ್ನಲ್ಲಿ ಕೆಲಸ ಮಾಡುತ್ತಾ ಬದುಕನ್ನು ಕಟ್ಟಿಕೊಂಡಿರುತ್ತಾನೆ. ಇದರ ನಡುವೆ ಕಾಲೇಜಿನ ಸುಂದರ ಬೆಡಗಿ ಭೂಮಿ (ಹರ್ಷಿತ)ಳನ್ನ ನೋಡಿ ಇಷ್ಟಪಡುತ್ತಾನೆ. ಭೂಗತ ಲೋಕದ ಡಾನ್ ಆಗಿ ಮೆರೆಯುತ್ತಿರುವ ಲೇಔಟ್ ಮಾರಿ (ರವಿಶಂಕರ್) ನ ಪುತ್ರಿ ಭೂಮಿ ಕೂಡ ಸೂರ್ಯನನ್ನ ಇಷ್ಟ ಪಡ್ತಾಳೆ, ಕ್ರಮೇಣ ಆತ ಬಡವ ಎಂದು ತಿಳಿದು ದೂರ ಉಳಿಯುತ್ತಾಳೆ.
ಡಾಕ್ಟರ್ ವೃತ್ತಿಯಲ್ಲಿ ಹೆಸರುವಾಸಿಯಾಗಿ ನಂತರ ಕಷ್ಟದಲ್ಲಿ , ನೊಂದವರಿಗೆ ಸಹಾಯ ಮಾಡುವ ಮಮತಾ (ಶೃತಿ) ತನ್ನ ಅಣ್ಣನ ಮಗಳು ಭೂಮಿ ಜೊತೆ ದೇವಸ್ಥಾನಕ್ಕೆ ಹೋಗುವಾಗ ಆಟೋದಲ್ಲಿ ಸೂರ್ಯನನ್ನ ಭೇಟಿಯಾಗುವ ಸಂದರ್ಭ ಎದುರಾಗುತ್ತದೆ. ಗಂಡನಿಲ್ಲದೆ ಮಗುವನ್ನು ಕಳೆದುಕೊಂಡ ಮಮತಾ ಸೂರ್ಯನನ್ನ ನೋಡಿ ತಾಯಿಯ ಪ್ರೀತಿಯನ್ನ ನೀಡಿ, ನಿನ್ನ ಕಷ್ಟಕ್ಕೆ ನಾನು ಜೊತೆ ಇರುತ್ತೇನೆ ಎನ್ನುತ್ತಾಳೆ.
ಇದರ ನಡುವೆ ಸೂರ್ಯ ಹಾಗೂ ಭೂಮಿಯ ಪ್ರೀತಿ ವಿಚಾರ ತಿಳಿಯುವ ಮಾರಿ ಕೋಪಗೊಳ್ಳುತ್ತಾನೆ. ಇನ್ನು ಸೂರ್ಯನ ಮಟ್ಟ ಹಾಕುವ ಮೊದಲು , ತನ್ನ ಗ್ಯಾಂಗ್ ಮೂಲಕ ಹೆಣ್ಣು ಮಕ್ಕಳನ್ನು ವಿದೇಶಕ್ಕೆ ಮಾರುವ ದಂಧೆಗೆ ಸಿದ್ಧತೆ ಮಾಡಿಕೊಳ್ಳುತ್ತಾನೆ. ಇದರ ನಡುವೆ ಸೂರ್ಯನಿಗೆ ಬೆಂಬಲವಾಗಿ ನಿಲ್ಲುವ ಮಮತಾಗೆ ತನ್ನ ಬದುಕಿನ ಹಿಂದಿರುವ ಫ್ಲಾಶ್ ಬ್ಯಾಕ್ ಹಾಗು ಒಂದು ಸತ್ಯ ತಿಳಿಯುತ್ತದೆ. ಇದೆಲ್ಲವೂ ಬೆಸೆದುಕೊಂಡು ಒಂದೊಂದೇ ಸತ್ಯದ ಸುಳಿವು ಹೊರ ಬರುತ್ತಾ ಹೋಗುತ್ತದೆ. ಅದು ಏನು… ಹೇಗೆ… ಸೂರ್ಯನ ತಾಯಿ ಯಾರು..? ಭೂಮಿ ಪ್ರೀತಿ ಸಿಗುತ್ತಾ… ಕ್ಲೈಮಾಕ್ಸ್ ಉತ್ತರ ಏನು… ಇದೆಲ್ಲದಕ್ಕೂ ನೀವು ಈ ಚಿತ್ರವನ್ನು ನೋಡಲೇಬೇಕು.

ಈ ಚಿತ್ರದ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಹೊಸತನವಲ್ಲದಿದ್ದರೂ ಚಿತ್ರಕಥೆ ಶೈಲಿ ಗಮನ ಸೆಳೆಯುತ್ತದೆ. ಬಡತನದ ಬದುಕು , ಪ್ರೀತಿ , ಸಂಬಂಧಗಳ ನಂಟು , ನೋವು , ಮೋಸದ ಹಿಂದಿರುವ ಕಠೋರ ಸತ್ಯದ ಬಗ್ಗೆ ಅಚ್ಚುಕಟ್ಟಾಗಿ ತೆರೆಯ ಮೇಲೆ ತರುವ ಪ್ರಯತ್ನವನ್ನು ಮಾಡಿದ್ದಾರೆ. ಹಾಡುಗಳು ಚಿತ್ರದ ಓಟಕ್ಕೆ ಪೂರಕವಾಗಿದ್ದು , ಇನ್ನಷ್ಟು ಹಿಡಿದ ಮಾಡಬಹುದಿತ್ತು. ಆದರೂ ಮೊದಲ ಪ್ರಯತ್ನದಲ್ಲೇ ಆಕ್ಷನ್ ಮಾಸ್ ಮೂಲಕ ಪ್ರೀತಿಯ ಮಿಡಿತ , ಮಮತೆಯ ಸೆಳೆತವನ್ನು ತೆರೆ ಮೇಲೆ ತಂದಿದ್ದಾರೆ.
ಇಂತಹ ಚಿತ್ರವನ್ನು ನಿರ್ಮಾಣ ಮಾಡಿರುವ ನಿರ್ಮಾಪಕರ ಸಾಹಸವನ್ನು ಕೂಡ ಮೆಚ್ಚಲೇಬೇಕು. ಸಂಗೀತ , ಛಾಯಾಗ್ರಹಣ , ಸಂಕಲನ ಎಲ್ಲವೂ ಗಮನ ಸೆಳೆಯುವಂತೆ ಮೂಡಿ ಬಂದಿದೆ. ಯುವ ಪ್ರತಿಭೆ ಪ್ರಶಾಂತ್ ನಾಯಕನಾಗಿ ತನ್ನ ಪಾತ್ರಕ್ಕೆ ನ್ಯಾಯ ಒದಗಿಸುವುದಕ್ಕೆ ಬಹಳ ಶ್ರಮ ಪಟ್ಟಿದ್ದು , ಆಕ್ಷನ್ ದೃಶ್ಯವನ್ನು ಅದ್ಭುತವಾಗಿ ನಿಭಾಯಿಸಿದ್ದಾರೆ.
ಅದೇ ರೀತಿ ನಟಿ ಹರ್ಷಿತಾ ಕೂಡ ಸಿಕ್ಕ ಅವಕಾಶಕ್ಕೆ ಜೀವ ತುಂಬಿದ್ದು , ಭರ್ಜರಿಯಾಗಿ ಸ್ಟೆಪ್ಸ್ ಹಾಕುವ ಮೂಲಕ ಡ್ಯಾನ್ಸ್ ಗೂ ಜೈ ಎಂದಿದ್ದಾರೆ. ಇನ್ನು ಈ ನಟಿ ಶ್ರುತಿ ಮನ ಮುಟ್ಟುವಂತೆ ಅಭಿನಯಿಸಿದ್ದು , ವಿಲನ್ ಪಾತ್ರದಲ್ಲಿ ನಟ ರವಿಶಂಕರ್ , ಕಡ್ಡಿಪುಡಿ ಚಂದ್ರು , ಭಜರಂಗಿ ಪ್ರಸನ್ನ ಅದ್ಭುತವಾಗಿ ಪಾತ್ರಕ್ಕೆ ಜೀವ ತುಂಬಿದ್ದು , ಉತ್ತರ ಕರ್ನಾಟಕ ಭಾಷೆಯಲ್ಲಿ ಪ್ರಮೋದ್ ಶೆಟ್ಟಿ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ಉಳಿದಂತೆ ಬಾಲ ರಾಜವಾಡಿ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದ್ದು , ಎಲ್ಲರೂ ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.