ನಿರಾಕರಣೆಯ ಹಿಂದಿರುವ ನಿರ್ಮಲ ಪ್ರೀತಿಯ ಸೆಳೆತ “ಸುಖೀಭವ” (ಚಿತ್ರವಿಮರ್ಶೆ-ರೇಟಿಂಗ್ : 3 /5)
ರೇಟಿಂಗ್ : 3 /5
ಚಿತ್ರ : ಸುಖೀಭವ
ನಿರ್ದೇಶನ : ಎನ್.ಕೆ. ರಾಜೇಶ್ ನಾಯ್ಡು
ನಿರ್ಮಾಪಕ : ಸಂತೋಷ್ ಕುಮಾರ್
ಸಂಗೀತ ಭರತ್ ಬಿಜೆ , ಸುಬಾಮ್
ಛಾಯಾಗ್ರಹಣ : ಮಂಜುನಾಥ್ ನಾಯಕ್
ತಾರಾಗಣ : ಮಹೇಂದ್ರ ಕುಮಾರ್,ಸುಶ್ಮಿತಾ ನಾಯಕ್
ವಿಯಾನ್‌ಶಿ ಹೆಗ್ದೆ , ಗೌರವ್ ಶೆಟ್ಟಿ, ಶೋಭರಾಜ್, ಮೈತ್ರಿ ಜಗ್ಗಿ , ರವಿಶಂಕರ್‌ಗೌಡ, ಸುನಿಲ್ ಪುರಾಣಿಕ್, ತುಕಾಲಿಸಂತು ಹಾಗೂ ಮುಂತಾದವರು…
ಪ್ರೀತಿಗೆ ಸಾವಿಲ್ಲ , ಪ್ರೀತಿ ಅಜರಾಮರ , ಪ್ರೀತಿಗಿರುವ ಶಕ್ತಿಯ ಬಗ್ಗೆ ಹಲವಾರು ಚಿತ್ರಗಳಲ್ಲಿ ನೋಡಿದ್ದೇವೆ. ಅದರಲ್ಲೂ ತಂದೆ ಮಗನ ಪ್ರೀತಿ , ತಾಯಿ ಮಗನ ಪ್ರೀತಿ , ಗೆಳತಿಯ ಪ್ರೀತಿ ಹೀಗೆ ಒಂದೊಂದು ಚಿತ್ರದಲ್ಲಿ ಒಂದೊಂದು ರೀತಿಯ ವ್ಯಾಖ್ಯಾನದ ಮೂಲಕ ಗಮನ ಸೆಳೆಯುತ್ತದೆ. ಅಂತದೇ ಒಂದು ನಿಷ್ಕಲ್ಮಶ ಪ್ರೀತಿಯ ಸುತ್ತ , ಸಂಬಂಧಗಳ ಬೆಸುಗೆಯ ನಡುವೆ ಬದುಕಿನ ಹಾದಿಯಲ್ಲಿ ಎದುರಾಗುವ ಏರುಪೇರುಗಳ ಸಂದರ್ಭಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸುಖೀಭವ”.
ಜೀವನದಲ್ಲಿ ಮನನೊಂದ ನಾಯಕನಿಗೆ ಎದುರಾಗುವ ಇಬ್ಬರು ಕುಡುಕರ ಸಮ್ಮುಖದಲ್ಲಿ ತನ್ನ ನೋವನ್ನ ಹೇಳಿಕೊಳ್ಳುತ್ತಾ ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ. ಬಾಲ್ಯದೆಲ್ಲೆ ತಾಯಿಯನ್ನು ಕಳೆದುಕೊಂಡು ತಂದೆಯಿಂದ ದೂರ ಉಳಿಯುವ ಮಗು ಹಾಸ್ಟೆಲ್ ನಲ್ಲಿ ಗೆಳೆಯನೊಟ್ಟಿಗೆ ತುಂಟಾಟ , ತರ್ಲೆಯಲ್ಲಿ ಕಾಲ ಕಳೆಯುತ್ತಾ ಓದಿನ ಕಡೆ ಗಮನ ಕಳೆದುಕೊಳ್ಳುವ ಹುಡುಗನಿಗೆ ಪ್ರೀತಿಯೇ ಮರಿಚಿಕೆಯಾಗಿದ್ದು , ಶಾಲೆಯಲ್ಲಿ ಮುದ್ದಾದ ಹುಡುಗಿ ಒಬ್ಬಳನ್ನ ಇಷ್ಟಪಡುತ್ತಾನೆ.
ಆದರೆ ಆಕೆ ನಾನು ಯಾಕೆ ಇಷ್ಟ ಪಡಬೇಕು , ನಿನ್ನ ಸಣ್ಣ ಸಣ್ಣ ತಪ್ಪುಗಳನ್ನು ತಿದ್ದಿಕೊಂಡು ಓದಿ ವಿದ್ಯಾವಂತನಾಗು, ಮುಂದೆ ನೋಡೋಣ ಎನ್ನುವ ಮಾತನ್ನು ಹಠದಿಂದ ತೆಗೆದುಕೊಂಡು ಕಾಲೇಜ್ಗೆ ಟಾಪರ್ ಆಗಿ ಬೆಳೆಯುತ್ತಾನೆ ವೈಭವ್ (ಮಹೇಂದ್ರ ಕುಮಾರ್). ಇನ್ನು ತನ್ನ ಗೆಳೆಯ ಗಿರಿ (ಮೈತ್ರಿ ಜಗ್ಗಿ)ಯ ಜೊತೆ ಓಡಾಟ , ಸುತ್ತಾಟ ಇದರ ನಡುವೆ ಒಂದಷ್ಟು ಹುಡುಗಿಯರ ಪ್ರಪೋಸಲ್ ನಿರಾಕರಣೆಯಾದರೂ ಅದರಿಂದ ಅವನು ಭವಿಷ್ಯದ ಹಾದಿಗೆ ಬೇರೆ ರೂಪ ಪಡೆದುಕೊಳ್ಳುತ್ತಾ ಹೋಗುತ್ತದೆ.
ಇದರ ನಡುವೆ ಅಜ್ಜಿಯ ಆರೈಕೆ , ದೂರ ಉಳಿದ ತಂದೆಯ ಒಡನಾಟದ ನಡುವೆ ಅವನವನ್ನು ಇಷ್ಟಪಡುವ ಊರ್ವಿ ( ವಿಯಾನ್‌ಶಿ ಹೆಗ್ದೆ) ತನ್ನ ಪ್ರೀತಿಯನ್ನ ಹೇಳಿಕೊಳ್ಳುತ್ತಾಳೆ. ಇನ್ನು ವೈಭವ್ ಬದುಕಿಗೆ ಹೊಸ ಚೈತನ್ಯ ಬರುತ್ತಿದೆ ಎನ್ನುವಷ್ಟರಲ್ಲಿ ತನ್ನ ಬಾಲ್ಯದ ಗೆಳತಿ ತಾರಾ ( ಸುಶ್ಮಿತಾ ನಾಯಕ್)ಳ ನೆನಪು ವೈಭವನ ಕಾಡುತ್ತಾ ಬೇರೆ ಹಾದಿಯತ್ತ ಸಾಗುತ್ತದೆ. ಮುಂದೆ ಏನಾಗುತ್ತೆ… ವೈಭವ್ ಪ್ರೀತಿ ಯಾರಿಗೆ ಸಿಗುತ್ತೆ… ಸಂಬಂಧ ಹೇಳುವ ಪಾಠ ಏನು.. ಕ್ಲೈಮಾಕ್ಸ್ ಉತ್ತರ ಏನು… ಇದಕ್ಕಾಗಿ ನೀವು ಈ ಚಿತ್ರವನ್ನು ನೋಡಬೇಕು.

ಪ್ರೀತಿ ಪ್ರೇಮದ ಸುತ್ತ ಬಹಳಷ್ಟು ಕಥೆಗಳು ಬಂದಿದ್ದರು , ನಿರ್ದೇಶಕ ಮಾಡಿಕೊಂಡಿರುವ ಚಿತ್ರಕಥೆ ಗಮನ ಸೆಳೆಯುತ್ತದೆ. ಅದರಲ್ಲೂ ಸ್ನೇಹ , ಪ್ರೀತಿ, ಸಂಬಂಧಗಳ ಮೌಲ್ಯದ ವ್ಯಕ್ತಪಡಿಸಿರುವ ಭಾವನೆಗಳು ಕೂಡ ಉತ್ತಮವಾಗಿದ್ದು , ಚಿತ್ರದ ಓಟ ಇನ್ನಷ್ಟು ವೇಗ ಮಾಡಬಹುದಿತ್ತು. ಯುವ ತಂಡಕ್ಕೆ ಬೆನ್ನೆಲುಬಾಗಿ ನಿಂತ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು , ಅದೇ ರೀತಿ ಚಿತ್ರದ ಸಂಗೀತ ಗಮನ ಸೆಳೆದಿದ್ದು , ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ.
ಇನ್ನು ನಾಯಕನಾಗಿ ಮಹೇಂದ್ರ ಕುಮಾರ್ ಪಾತ್ರಕ್ಕೆ ನ್ಯಾಯ ನೀಡುವುದಕ್ಕೆ ಬಹಳಷ್ಟು ಶ್ರಮಪಟ್ಟಿದ್ದಾರೆ. ನಟಿಯರಾದ ಸುಶ್ಮಿತಾ ನಾಯಕ್ ಹಾಗೂ ವಿಯಾನ್‌ಶಿ ಹೆಗ್ದೆ ತಮ್ಮ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಗಮನ ಸೆಳೆದಿದ್ದಾರೆ. ಇನ್ನು ಮೈತ್ರಿ ಜಗ್ಗಿ ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿ ಮಿಂಚಿದ್ದಾರೆ. ನಾಯಕನ ತಂದೆಯಾಗಿ ರವಿಶಂಕರ್ ಗೌಡ ಸೇರಿದಂತೆ ಶೋಭ ರಾಜ್ , ತುಕಾಲಿ ಸಂತು , ಗೌರವ ಶೆಟ್ಟಿ ಪಾತ್ರಗಳು ಗಮನ ಸೆಳೆದು , ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ಕುಳಿತು ನೋಡುವಂತಹ ಚಿತ್ರ ಇದಾಗಿದೆ.