Cini NewsSandalwood

ರಾಷ್ಟ್ರಪ್ರಶಸ್ತಿ ವಿಜೇತ ಹಿರಿಯ ಪತ್ರಕರ್ತ ಬಾನಾಸು ಅವರಿಗೆ ಹುಟ್ಟೂರ ಗೌರವ

ಕಾಸರಗೋಡಿನ ಸಾಂಸ್ಕೃತಿಕ -ಸಾಹಿತ್ಯಕ ಸಂಸ್ಥೆ ರಂಗ ಚಿನ್ನಾರಿ ಮತ್ತು ಅದರ ಸಹ ಘಟಕಗಳಾದ ನಾರಿ ಚಿನ್ನಾರಿ, ಸ್ವರ ಚಿನ್ನಾರಿ ಜೊತೆಗೆ ಕಾಸರಗೋಡಿನ ಕನ್ನಡಪರ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯಲ್ಲಿ ಅತ್ಯುತ್ತಮ ವಿಮರ್ಶಕ (ವಿಶೇಷ ಉಲ್ಲೇಖ) ಪ್ರಶಸ್ತಿಗೆ ಭಾಜನರಾದ ಹಿರಿಯ ಚಲನಚಿತ್ರ ಪತ್ರಕರ್ತ ಸುಬ್ರಹ್ಮಣ್ಯ ಬಾಡೂರು (ಬಾನಾಸು) ಅವರಿಗೆ ಪದ್ಮಗಿರಿ ಕಲಾಕುಟೀರದಲ್ಲಿ ದಿನಾಂಕ 1.12.2023 ಶುಕ್ರವಾರ ಸಂಜೆ ಹುಟ್ಟೂರ ಗೌರವ ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಎಡನೀರು ಮಠಾಧೀಶರಾದ ಶ್ರೀ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರು, ಕಾಸರಗೋಡಿನ ಕನ್ನಡಪರ ಸಂಘಟನೆಗಳು ಕೈಜೋಡಿಸಿದರೆ ಕಾಸರಗೋಡಿನ ಕನ್ನಡಿಗರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎಂದರಲ್ಲದೆ, ಸುಬ್ರಹ್ಮಣ್ಯ ಬಾಡೂರು ಅವರ ರಾಷ್ಟ್ರಮಟ್ಟದ ಸಾಧನೆ ಕಾಸರಗೋಡಿನ ಕನ್ನಡಿಗರಿಗೆಲ್ಲ ಕೀರ್ತಿ ತಂದಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವೆ, ಎಂಎಲ್‌ಸಿ, ತಾರೆ ಉಮಾಶ್ರೀ ಅವರು ಕಳೆದ ಐದು ದಶಕಗಳಿಂದ ಸಿನಿಮಾ ಕ್ಷೇತ್ರದ ಒಳಹೊರಗನ್ನು ಅತೀ ಹತ್ತಿರದಿಂದ ಬಲ್ಲ ಬಾನಾಸು ಅವರ ಅನುಭವಗಳನ್ನು ದಾಖಲಿಸಿ ಪುಸ್ತಕರೂಪದಲ್ಲಿ ಹೊರತರಬೇಕು. ಅದರಿಂದ ಮುಂದಿನ ತಲೆಮಾರಿನವರಿಗೆ ಕನ್ನಡ ಚಿತ್ರರಂಗದ ಮಾಹಿತಿಗಳನ್ನು ನೀಡಿದಂತಾಗುತ್ತದೆ, ಎಂದರಲ್ಲದೆ, ʻಒಬ್ಬ ಸೃಜನಶೀಲ, ಸೌಮ್ಯ ಸ್ವಭಾವದ ಪ್ರಶ್ನಿಸುವ ಗುಣಗಳುಳ್ಳ ಪ್ರಾಮಾಣಿಕ ಪತ್ರಕರ್ತ, ನನ್ನ ಗೆಳೆಯ ಅನ್ನುವುದೇ ನನಗೆ ಅಭಿಮಾನʼ ಎಂದರು.

ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಮಾತನಾಡಿ ಬಾನಾಸು ಕಾಸರಗೋಡಿಗೆ ಅಭಿಮಾನ ತರುವ ಕೆಲಸ ಮಾಡಿದ್ದಾರೆ. ಅವರು ಮತ್ತಷ್ಟು ಪ್ರಶಸ್ತಿ ಗಳಿಸಲಿ ಎಂದು ಶುಭ ಹಾರೈಸಿದರು. ಮತ್ತೊಬ್ಬ ಅತಿಥಿ, ರಾಷ್ಟ್ರಪ್ರಶಸ್ತಿ ವಿಜೇತ, ನಟ, ಶಿವಧ್ವಜ ಶೆಟ್ಟಿ ಮಾತನಾಡಿ, ಬಾನಾಸು ಅವರು ನನ್ನ ಸಿನಿಮಾ ರಂಗದ ಪ್ರವೇಶದ ಸಂದರ್ಭಗಳಲ್ಲಿ ಗುರುಸ್ಥಾನದಲ್ಲಿದ್ದು, ಬೆನ್ನುತಟ್ಟಿ ಆಶೀರ್ವದಿಸಿ ತಿದ್ದಿದವರು.

ಅವರಿಗೆ ಸಿನಿಮಾ ಕ್ಷೇತ್ರದ ಬಗ್ಗೆ ಇರುವ ಮಾಹಿತಿ ನಿಜಕ್ಕೂ ಆಶ್ಚರ್ಯ ಎನಿಸುತ್ತದೆ . ಅಂತರರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ನಿರಂತರವಾಗಿ ಭಾಗವಹಿಸುತ್ತಿರುವ ಅವರು ಕನ್ನಡ ಚಿತ್ರರಂಗದ ಎನ್ಸೈಕ್ಲೋಪೀಡಿಯಾ ಎಂದರು.  ಮೈಸೂರಿನ ಖ್ಯಾತ ಪತ್ರಕರ್ತ ರವೀಂದ್ರ ಜೋಶಿ ಮಾತನಾಡಿ, ‘ಆಂದೋಲನ’ ಪತ್ರಿಕೆಯ ಅಂಕಣ ಅವರಿಗೆ ರಾಷ್ಟ್ರ ಪ್ರಶಸ್ತಿ ತಂದ ವಿವರವನ್ನು ತಿಳಿಸಿ, ಶುಭ ಹಾರೈಸಿದರು. ಕಾಸರಗೋಡಿನ ಕನ್ನಡಪರ 25 ಸಂಸ್ಥೆಗಳು ಬಾನಾಸು ಅವರಿಗೆ ಶಾಲು, ಹಾರ ನೀಡಿ ಗೌರವಿಸಿದವು. ರಂಗ ಚಿನ್ನಾರಿ ಸಂಸ್ಥೆಯ ಪರವಾಗಿ ಪೇಟ,ಶಾಲು, ಫಲ, ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಸುಬ್ರಹ್ಮಣ್ಯ ಬಾಡೂರು , ಚಿತ್ರರಂಗದಲ್ಲಿ ತಾನು ನಡೆದು ಬಂದ ದಾರಿಯನ್ನು ಹೇಳಿ, ‘ಹುಟ್ಟೂರ ಗೌರವ’ ನೀಡಿದ ಎಲ್ಲರಿಗೂ ಕೃತಜ್ಞತೆಗಳನ್ನು ಹೇಳಿದರು. ರಂಗ ಚಿನ್ನಾರಿ ನಿರ್ದೇಶಕ, ಕಾರ್ಯಕ್ರಮ ಸಂಯೋಜಕ, ಕಾಸರಗೋಡು ಚಿನ್ನಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ರಂಗ ಚಿನ್ನಾರಿಯ ಕೋಳಾರು ಸತೀಶ್ಚಂದ್ರ ಭಂಡಾರಿ ನಾರಿ ಚಿನ್ನಾರಿಯ ಸವಿತಾ ಟೀಚರ್, ದಿವ್ಯಾಗಟ್ಟಿ ಪರಕ್ಕಿಲ, ವೀಣಾ ಅರುಣ್ ಶೆಟ್ಟಿ, ಸರ್ವಮಂಗಳ, ‘ಸ್ವರ ಚಿನ್ನಾರಿ’ಯ ಶ್ರೀಕೃಷ್ಣಯ್ಯ ಅನಂತಪುರ, ಪುರುಷೋತ್ತಮ ಕೊಪ್ಪಳ, ಜನಾರ್ದನ ಅಣಂಗೂರು, ಉದಯ ಮನ್ನಿಪ್ಪಾಡಿ , ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಚಿತ್ರ: ಸಂಜು ಕಾಸರಗೋಡು.

error: Content is protected !!