BollywoodCini Gossip

ಜೋಗತಿಯಾಗಿ ಶ್ರೀನಗರ ಕಿಟ್ಟಿ : “ವೇಷಗಳು” ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಟೀಸರ್ ಬಿಡುಗಡೆ

ನಟ ಶ್ರೀನಗರ ಕಿಟ್ಟಿ ಹುಟ್ಟುಹಬ್ಬಕ್ಕೆ “ವೇಷಗಳು” ಚಿತ್ರದ ಟೈಟಲ್ ಹಾಗೂ ಫಸ್ಟ್ ಲುಕ್ ಟೀಸರ್ ಬಿಡುಗಡೆ. ಖ್ಯಾತ ಪತ್ರಕರ್ತ ರವಿ ಬೆಳಗೆರೆ ಅವರ ಒಟ್ಟಾರೆ ಕಥೆಗಳು ಪುಸ್ತಕದ 20ನೆಯ ಕಥೆ ಆಧಾರಿತ “ವೇಷಗಳು” ಚಿತ್ರವಾಗಿ ಹೊರ ಬರುತ್ತಿದೆ. ಇದು ಜೋಗತಿಯರ ಜೀವನದ ಆಗು ಹೋಗುಗಳ ಬಗ್ಗೆ ಬರೆದಿರುವ ಸಣ್ಣ ಕಥೆಯನ್ನಾಧರಿಸಿದೆ.

ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಈ ಚಿತ್ರಕ್ಕೆ ಚಿತ್ರಕಥೆ ಬರೆದು ನಿರ್ಮಾಣದ ಜೊತೆ ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಟೈಟಲ್ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಸಾಮಾನ್ಯವಾಗಿ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸುವುದು ವಾಡಿಕೆ. ಆದರೆ ಈ ಚಿತ್ರದಲ್ಲಿ ಕೆಲಸ ಮಾಡುವವರೆಲ್ಲರೂ ರಂಗಪ್ರತಿಭೆಗಳೇ ಆಗಿದ್ದರಿಂದ, ರಾಜ್ ಗುರು ಸಂಗಡಿಗರಿಂದ ರಂಗಗೀತೆಗಳ ಗಾಯ‌ದ ಮೂಲಕ ಸಮಾರಂಭಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಲಲಿತ ಬೆಳಗೆರೆ ಯವರ ಆಶೀರ್ವಾದದೊಂದಿಗೆ ಭಾವನಾ ಬೆಳಗೆರೆ ಹಾಗೂ ಶ್ರೀನಗರ ಕಿಟ್ಟಿ ಅರ್ಪಿಸುವ ‘ವೇಶಗಳು’ ಚಿತ್ರದ ಟೈಟಲ್ ಟೀಸರ್ ಬಿಡುಗಡೆ ಹಾಗೂ ಕಿಟ್ಟಿ ಅವರ ಬರ್ತ್ ಡೇ ಸಮಾರಂಭ ಏರ್ಪಡಿಸಲಾಗಿತ್ತು.

ವೇದಿಕೆಯಲ್ಲಿ ನಿರ್ದೇಶಕ ಕಿಶನ್ ರಾವ್ ದಳವಿ ಈ ಕಥೆಯನ್ನಿಟ್ಟುಕೊಂಡು ಸಿನಿಮಾ ಮಾಡಲು ಬೆಳಗೆರೆ ಅವರ ಮಗಳು ಭಾವನಾ ಅವರ ಒಪ್ಪಿಗೆ ಹಾಗೂ ಅಳಿಯ ಕಿಟ್ಟಿ ಅವರಿಂದ ಜೋಗತಿ ಪಾತ್ರಕ್ಕೆ ಒಪ್ಪಿಸಲು ಪಟ್ಟಂಥ ಹರಸಾಹಸಗಳನ್ನು ತೆರೆಯ ಮೇಲೆ ದೃಶ್ಯ ರೂಪದಲ್ಲಿ ಪ್ರದರ್ಶಿಸಲಾಯಿತು.

ನಂತರ ಚಿತ್ರದ ಕುರಿತು ಮಾತನಾಡುತ್ತಾ ಮುಂದಿನ ತಿಂಗಳಿಂದ “ವೇಷಗಳು” ಚಿತ್ರದ ಚಿತ್ರೀಕರಣ ಆರಂಭಿಸಿ ಮಧ್ಯಪ್ರದೇಶದ ಮಹಾಕಾಲೇಶ್ವರ, ಉತ್ತರ ಕರ್ನಾಟಕ, ಬೆಂಗಳೂರು ಹಾಗೂ ಮೈಸೂರಲ್ಲಿ ಚಿತ್ರದ ಚಿತ್ರೀಕರಣ ನಡೆಸಲಾಗುವುದು, ಹಾಗೆಯೇ ಉಳಿದ ಕಲಾವಿದರ ಬಗ್ಗೆ ಮಾಹಿತಿಯ ಜೊತೆ ಒಂದೊಂದು ವಿಚಾರವನ್ನು ಬಹಳ ವಿಶೇಷವಾಗಿ ನಿಮ್ಮ ಮುಂದೆ ತಿಳಿಸಲಾಗುವುದು ಎಂದರು.

ಇನ್ನು ಇಡೀ ಕಾರ್ಯಕ್ರಮದ ಕೇಂದ್ರ ಬಿಂದು ಬರ್ತಡೇ ಬಾಯ್ , ನಟ ಶ್ರೀನಗರ ಕಿಟ್ಟಿ ಮಾತನಾಡುತ್ತಾ ಇದು ನನ್ನ ಮಾವನವರು ರವಿ ಬೆಳಗೆರೆ ಬರೆದ ಕಥೆಯನ್ನು ಆಧರಿಸಿ ಮಾಡುತ್ತಿರುವ ಚಿತ್ರ , ಅವರ ಬರವಣಿಗೆ ಬಗ್ಗೆ ನನಗೆ ಅಪಾರ ಗೌರವ , ಬಹಳಷ್ಟು ಬಾರಿ ಅವರ ಬರವಣಿಗೆಯ ಬಗ್ಗೆ ಚರ್ಚೆ ಕೂಡ ಮಾಡಿದ್ದೇನೆ.

ಇನ್ನು ನಮ್ಮ ಕಿಶನ್ ನಮ್ಮ ಮನೆಗೆ ಬಹಳ ಆತ್ಮೀಯ ಹುಡುಗ, ಈ ಚಿತ್ರ ಮಾಡುತ್ತೇನೆ ಎಂದಾಗ ಎರಡು ಮಾತಾಡದೆ ಒಪ್ಪಿಕೊಂಡೆ. ಸಂಪೂರ್ಣ ತಯಾರಿ ಮಾಡಿಕೊಂಡು ಚಿತ್ರೀಕರಣಕ್ಕೆ ಹೊರಟಿದ್ದೇವೆ. ಈ ಚಿತ್ರದಲ್ಲಿ ನನ್ನ ಜೋಗತಿ ಬಸಮ್ಮನ ಪಾತ್ರ ಬಹಳ ವಿಶೇಷವಾಗಿದೆ. ಈ ಮೊದಲ ಲುಕ್ ಗೆ ಸುಮಾರು 3 ಗಂಟೆಗಳ ಮೇಕಪ್ ಮಾಡಬೇಕಾಯಿತು. ಇದಕ್ಕಾಗಿ ತಂಡ ಬಹಳಷ್ಟು ಕೆಲಸ ಮಾಡಿದೆ. ಇನ್ನು ಈ ಚಿತ್ರದಲ್ಲಿ ಜೋಗತಿ ಅವರ ಜೀವನ ಶೈಲಿಯ ಬಗ್ಗೆ ಹೇಳಲಾಗುತ್ತಿದೆ. ಹಾಗೆಯೇ ನಾನು ಬಸಪ್ಪ ಹಾಗೂ ಬಸಮ್ಮ ಎರಡು ಗೆಟಪ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.

ಹಾಗೆಯೇ ಜೋಗತಿಯ ನಡೆ , ನುಡಿ , ವಿಚಾರ ಸೇರಿದಂತೆ ಒಂದಷ್ಟು ಮಾಹಿತಿಯನ್ನ ಪಡೆಯಲು ನಾನು ಪ್ರಶಸ್ತಿ ವಿಜೇತ ಜೋಗತಿ ಮಂಜಮ್ಮ ರವರನ್ನು ಸಂಪರ್ಕಿಸಿಲು ನಿರ್ಧರಿಸಿದ್ದೇನೆ. ಸದ್ಯದಲ್ಲೇ ಮತ್ತಷ್ಟು ಮಾಹಿತಿ ನಮ್ಮ ತಂಡ ನೀಡಲಿದೆ ಎಂದರು.

ಈ ಚಿತ್ರಕ್ಕೆ. ಕೌಶಿಕ್ ಹರ್ಷ ಅವರ ಸಂಗೀತ, ರಾಜ್ ಗುರು ದತ್ತರಾಜ್ ಅವರ ಸಂಭಾಷಣೆ, ಅಕ್ಷಯ್ ಪಿ.ರಾವ್ ಅವರ ಸಂಕಲನ ಈ ಚಿತ್ರಕ್ಕಿದೆ. ಈ ಕಾರ್ಯಕ್ರಮದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ನರಸಿಂಹಲು, ನಿರ್ಮಾಪಕರಾದ ಪ್ರವೀಣ್ ಕುಮಾರ್, ಶಿಲ್ಪ ಶ್ರೀನಿವಾಸ್‌, ಪ್ರದರ್ಶಕರಾದ ಕುಶಾಲ್ ಹಾಗೂ ಮುಂತಾದ ಗಣ್ಯರುಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ ನಟ ಶ್ರೀನಗರ ಕಿಟ್ಟಿ ಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ತಿಳಿಸಿ ಜೊತೆಗೆ ಚಿತ್ರದ ಫಸ್ಟ್ ಲುಕ್ ನೋಡಿ ಮೆಚ್ಚುಗೆ ಮಾತುಗಳುನಾಡಿ ಚಿತ್ರ ಯಶಸ್ವಿ ಕಾಣಲಿ ಎಂದು ಶುಭ ಹಾರೈಸಿದರು.

error: Content is protected !!