ನಾದಬ್ರಹ್ಮ ಹಂಸಲೇಖ ಸಂಗೀತದ “ಸೋಲ್ ಮೇಟ್ಸ್” ಚಿತ್ರದ ಮಧುರವಾದ ಹಾಡು ಬಿಡುಗಡೆ.
ಕನ್ನಡ ಸಿನಿಮಾಗಳ ಮೇಲೆ ಅಪಾರ ಅಭಿಮಾನವನ್ನು ಹೊಂದಿರುವಂತಹ ಯುವ ಪ್ರತಿಭೆ ಶಂಕರ್. ಪಿ. ವಿ. ತಮ್ಮ AV ಕ್ರಿಯೇಶನ್ಸ್ ಮೂಲಕ “ಸೋಲ್ ಮೇಟ್ಸ್” ಚಿತ್ರವನ್ನ ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನ ಮಾಡಿದ್ದಾರೆ. ಅದರಲ್ಲೂ ಈ ಚಿತ್ರಕ್ಕೆ ನಾದಬ್ರಹ್ಮ ಹಂಸಲೇಖ ಸಾಹಿತ್ಯ ಹಾಗೂ ಸಂಗೀತವನ್ನು ನೀಡಿದ್ದು , ಈ ಒಂದು ಚಿತ್ರದ ಮಧುರವಾದ ಹಾಡನ್ನು ಜಿ.ಟಿ. ಮಾಲ್ ನಲ್ಲಿರುವ ಎಂ.ಎಂ.ಬಿ. ಲೆಗಸಿಯಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡಲು ಸಿದ್ಧ ಮಾಡಿದ್ದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ನರಸಿಂಹಲು , ಉಪಾಧ್ಯಕ್ಷ ಶಿಲ್ಪಾ ಶ್ರೀನಿವಾಸ್ ಹಾಗೂ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಈ ಚಿತ್ರದ ಒಂದು ಹಾಡನ್ನು ಲೋಕಾರ್ಪಣೆ ಮಾಡುವುದರ ಜೊತೆಗೆ ಚಿತ್ರತಂಡಕ್ಕೆ ಶುಭವನ್ನು ಹಾರೈಸಿದರು. ಬಂದಂತ ಎಲ್ಲಾ ಗಣ್ಯರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಪರಿಸರ ಉಳಿಸಿ , ಗಿಡವನ್ನು ಬೆಳೆಸಿ ಎನ್ನುತ ಸಸಿಯನ್ನು ನೀಡುತ್ತಾ ನಿರ್ಮಾಪಕರು ಸ್ವಾಗತಿಸಿದ್ದು ವಿಶೇಷವಾಗಿತ್ತು.
ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಶಂಕರ್. ಪಿ. ವಿ. ಮಾತನಾಡುತ್ತಾ ನಾನು ಮೂಲತಃ ಪಾವಗಡದವನು, ಬಾಲ್ಯದಿಂದಲೂ ಸಿನಿಮಾ ಬಗ್ಗೆ ಅಪಾರ ಆಸಕ್ತಿ, ನಾನು ಮೊದಲು ನೋಡಿದ ಚಿತ್ರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹಂಸಲೇಖ ರವರ ಕಾಂಬಿನೇಷನ್ನಲ್ಲಿ ಬಂದಂತಹ ಪುಟ್ನಂಜ ಚಿತ್ರ. ನನ್ನದು ಕ್ರೇನ್ ಅಡಿಕೆ ಪುಡಿ ಬಿಸಿನೆಸ್, ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಒಂದಷ್ಟು ಅನುಭವ ನನಗೆ ಇದೆ. ನಾವು ಮಾಡುವ ಕೆಲಸದಲ್ಲಿ ಪ್ಲಾನ್ ಪಕ್ಕ ಮಾಡಿಕೊಂಡು ಕೆಲಸ ಮಾಡುತ್ತೇವೆ. ಅದರಂತೆ ಚಿತ್ರದ ಮೇಲೆಯೂ ಕೆಲಸ ಮಾಡಿದೆ. ಕಥೆಯನ್ನು ಸಿದ್ಧಪಡಿಸಿಕೊಂಡು ಆಡಿಶನ್ ಮೂಲಕ ಪ್ರತಿಭೆಗಳನ್ನ ಆಯ್ಕೆ ನಡೆಸಿ , ನಮ್ಮದೇ ಒಂದು ಸ್ಥಳದಲ್ಲಿ ಕಲಾವಿದರ ಜೊತೆ ಚಿತ್ರದ ರಿಹರ್ಸಲ್ ಮಾಡಿಕೊಂಡು ತದನಂತರ ಚಿತ್ರೀಕರಣಕ್ಕೆ ಹೊರಟು ಸಿನಿಮಾವನ್ನ ಕಂಪ್ಲೀಟ್ ಮಾಡಿದ್ದೇವೆ. ನಾನು ಯಾರ ಬಳಿಯೂ ನಿರ್ದೇಶನದ ಕೆಲಸವನ್ನು ಕಲಿತಿಲ್ಲ. ಸಿನಿಮಾಗಳನ್ನ ನೋಡುತ್ತಾ ಆಸಕ್ತಿ ಬೆಳೆಸಿಕೊಂಡು , ನಮ್ಮದೇ AV ಕ್ರಿಯೇಷನ್ಸ್ ಮೂಲಕ ಜಿ. ಆರ್. ಅರ್ಚನ ಶಂಕರ .ಪಿ. ವಿ. ನಿರ್ಮಾಣದಲ್ಲಿ ಸಿದ್ಧವಾಗಿರುವ ಚಿತ್ರವಿದು,
ಈ ಸೋಲ್ ಮೇಟ್ಸ್ ಚಿತ್ರವು ಪ್ರೇಮಿಗಳ ಕಥಾನಕದ ಪರಿಸರದ ನಂಟು ಒಳಗೊಂಡಿದೆ. ನಾಯಕ , ನಾಯಕಿ ಪರಿಸರಕ್ಕೆ ಯಾವುದೇ ಸಮಸ್ಯೆ ಬಂದರೂ ಎದುರಿಸಲು ಮುಂದಾಗುವ ಪಾತ್ರ ಮಾಡಿದ್ದಾರೆ. ಈ ನಮ್ಮ ಚಿತ್ರದಲ್ಲಿ ಇಬ್ಬರು ನಾಯಕರು ಹಾಗೂ ಮೂವರು ನಾಯಕಿರಿದ್ದಾರೆ. ಲವ್ , ಥ್ರಿಲ್ಲರ್ , ಹಾರರ್ ಕಂಟೆಂಟ್ ಇರುವ ಈ ಚಿತ್ರದ ಪ್ರತಿಯೊಂದು ಹಾಡು ವಿಭಿನ್ನವಾಗಿದೆ. ಇದಕ್ಕೆ ಕಾರಣ ನಾದಬ್ರಹ್ಮ ಹಂಸಲೇಖ ರ ಸಾಹಿತ್ಯ ಹಾಗೂ ಸಂಗೀತ. ನಮ್ಮ ಚಿತ್ರಕ್ಕೆ ಹಾಡುಗಳು ಕೂಡ ಪ್ರಮುಖ ಶಕ್ತಿಯಾಗಿದೆ. ಈಗ ಚಿತ್ರ ಸೆನ್ಸರ್ ಗೆ ಹೋಗಬೇಕಿದೆ. ಮುಂದಿನ ತಿಂಗಳು ರಾಜ್ಯದ್ಯಂತ ಬಿಡುಗಡೆ ಮಾಡುವ ಪ್ಲಾನ್ ಹಾಕಿಕೊಂಡಿದ್ದೇವೆ. ನಿಮ್ಮೆಲ್ಲರ ಬೆಂಬಲ , ಸಹಕಾರ ಬೇಕು ಎಂದು ಕೇಳಿಕೊಂಡರು.
ಇನ್ನು ನಾಯಕನಾಗಿ ಶ್ರೀಜಿತ್ ಸೂರ್ಯ ಮಾತನಾಡುತ್ತಾ , ಸತ್ಯ ಅನ್ನೋ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ. ಇದರಲ್ಲಿ ಎರಡು ಶೇಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ನಿರ್ದೇಶಕರು ಬಹಳ ಅದ್ಭುತವಾಗಿ ಕಥೆಯನ್ನು ಮಾಡಿಕೊಂಡಿದ್ದಾರೆ. ರಿಹರ್ಸಲ್ ಮಾಡಿ ಪಕ್ಕ ಆದ ಮೇಲೆ ಚಿತ್ರೀಕರಣಕ್ಕೆ ಹೋಗಿದ್ವಿ , ಪರಿಸರಕ್ಕೆ ಏನೇ ತೊಂದರೆ ಆದರೂ ಸತ್ಯವಾಗಿ ಹೋರಾಡುವಂತಹ ಪಾತ್ರ. ಆಕ್ಷನ್ , ಹಾರರ್, ಥ್ರಿಲ್ಲರ್ ಅಂಶವನ್ನು ಒಳಗೊಂಡಿರುವ ಚಿತ್ರವಿದು, ನನ್ನ 12 ವರ್ಷಗಳ ಸಿನಿ ಪಯಣದಲ್ಲಿ ಬಿಡುಗಡೆಯಾಗುತ್ತಿರುವ ನಾಲ್ಕನೇ ಚಿತ್ರ ಇದಾಗಿದೆ. ಈ ಚಿತ್ರದ ನಂತರ ಮತ್ತಷ್ಟು ಉತ್ತಮ ಅವಕಾಶ ಸಿಗುವ ನಿರೀಕ್ಷೆ ಇದೆ ಎಂದು ಹೇಳಿದರು. ಈ ಚಿತ್ರದ ಮತ್ತೊಂದು ಪ್ರಮುಖ ನಾಯಕಿಯಾಗಿರುವ ಯಶ್ವಿಕಾ ನಿಷ್ಕಲ್ ಮಾತನಾಡುತ್ತಾ ನಾನು ಈ ಚಿತ್ರದಲ್ಲಿ ಭೂಮಿ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಅಪ್ಪ ಅಮ್ಮನ ಮುದ್ದಿನ ಮಗಳಾಗಿ ಸಾಫ್ಟ್ವೇರ್ ಇಂಜಿನಿಯರ್ ಯಾಗಿ ಕಾಣಿಸಿಕೊಳ್ಳುತ್ತೇನೆ. ನನಗೂ ಒಂದು ಸುಂದರವಾದ ಹಾಡನ್ನು ನೀಡಿದ್ದಾರೆ ಹಂಸಲೇಖ ಸರ್ , ಅವರ ಜೊತೆ ನನ್ನ ಹಾಡು ಸ್ಟುಡಿಯೋದಲ್ಲಿ ನೋಡಿದೆ. ಹಾಗೆ ಅವರು ನನ್ನನು ಪ್ರಶಂಶಿಸಿದ್ದು ಬಹಳ ಖುಷಿಯಾಯಿತು. ಅವಕಾಶ ಕೊಟ್ಟ ನಮ್ಮ ನಿರ್ದೇಶಕರಿಗೆ ಧನ್ಯವಾದ ಹೇಳುತ್ತೇನೆ. ಇದು ನನ್ನ ಕನ್ನಡದಲ್ಲಿ ಬಿಡುಗಡೆ ಆಗುತ್ತಿರುವ ನಾಲ್ಕನೇ ಚಿತ್ರ ಈ ಚಿತ್ರವನ್ನು ಪ್ರೋತ್ಸಾಹಿಸಿ ಎಂದರು.
ಈ ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಪ್ರಸನ್ನ ಶೆಟ್ಟಿ ಮಾತನಾಡುತ್ತಾ ನಾನು ಈ ಹಿಂದೆ ಅಭಿನಯಿಸಿದ ” ನಿಮ್ಮ ವಸ್ತುಗಳಿಗೆ ನೀವೇ ಜವಾಬ್ದಾರರು” ಎಂಬ ಚಿತ್ರದ ಬಗ್ಗೆ ಒಳ್ಳೆ ಪ್ರಶಂಸೆ ನೀಡಿದ್ದೀರಿ, ನಾನು ಸಂಚಾರಿ ಎಂಬ ರಂಗ ತಂಡದ ಕಲಾವಿದ , ನಾಟಕಗಳನ್ನ ಮಾಡುತ್ತ ಸಿನಿಮಾಗೆ ಬಂದೆ. ನನ್ನನ್ನು ಆಡಿಶನ್ ಮೂಲಕ ತಂಡ ಆಯ್ಕೆ ಮಾಡಿಕೊಂಡಿದ್ದು, ಗೋಪಿ ಎಂಬ ಹಳ್ಳಿ ಹುಡುಗ ಪಾತ್ರ ನಿರ್ವಹಿಸಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿ ಬಂದಿದೆ. ನಮ್ಮ ಸಿನಿಮಾವನ್ನು ನೋಡಿ ಎಂದು ಕೇಳಿಕೊಂಡರು. ಇನ್ನು ಈ ಚಿತ್ರದಲ್ಲಿ ರಜನಿ , ಅಲ್ಮಾಸ್, ಯಶ್ ಶೆಟ್ಟಿ , ಶರತ್ ಲೋಹಿತಾಶ್ವ , ಅರವಿಂದ್ ರಾವ್ , ಅರುಣಾ ಬಾಲರಾಜ್, ಅರಸು ಮಹಾರಾಜ್ , ಪ್ರಶಾಂತ ನಟನ, ಗೌತಮ್, ತಾರಕ್, ನವೀನ್ ಡಿ ಪಟೇಲ್, ಸೇರಿದಂತೆ ಹಲವಾರು ಕಲಾವಿದರ ದಂಡೆ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ರವಿವರ್ಮ ಛಾಯಾಗ್ರಹಣ ,ವಿಕ್ರಮ್ ಮೋರ್ ಸಾಹಸ ನಿರ್ದೇಶನವಿದೆ. ಸದ್ಯದಲ್ಲೇ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದು , ಮುಂದಿನ ತಿಂಗಳು ಚಿತ್ರವನ್ನ ತೆರಿಗೆ ತರುವ ಪ್ಲಾನ್ ಹಾಕಿಕೊಂಡಿದೆ.