Cini NewsSandalwood

ಮೈಸೂರಿನಲ್ಲಿ “s/o ಮುತ್ತಣ್ಣ” ಚಿತ್ರದ ‘ಕಮ್ಮಂಗಿ ನನ್ ಮಗನೇ’ ಸಾಂಗ್ ಅನಾವರಣ.

ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿರುವ ಪುರಾತನ ಫಿಲಂಸ್ ನಿರ್ಮಾಣದ, ಶ್ರೀಕಾಂತ್ ಹುಣಸೂರು ನಿರ್ದೇಶನದ ಹಾಗೂ ಡೈನಾಮಿಕ್ ಸ್ಟಾರ್ ದೇವರಾಜ್ ಅವರ ದ್ವಿತೀಯ ಪುತ್ರ ಪ್ರಣಂ ದೇವರಾಜ್ ನಾಯಕನಾಗಿ ನಟಿಸಿರುವ “S/O ಮುತ್ತಣ್ಣ” ಚಿತ್ರಕ್ಕಾಗಿ ಗೀತರಚನೆಕಾರ ಯೋಗರಾಜ್ ಭಟ್ ಬರೆದಿರುವ “ಕಮ್ಮಂಗಿ ನನ್ ಮಗನೇ” ಎಂಬ ಹಾಡು ಇತ್ತೀಚೆಗೆ ಸಾಂಸ್ಕೃತಿಕ ನಗರಿ ಮೈಸೂರಿನ ಮಾಲ್ ಆಫ್ ಮೈಸೂರಿನಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ‌ ಅದ್ದೂರಿಯಾಗಿ ನೆರವೇರಿತು. ಖ್ಯಾತ ನಟ ಶರಣ್ ಹಾಗೂ ಹೆಸರಾಂತ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಈ ಹಾಡನ್ನು ಅದ್ಭುತವಾಗಿ ಹಾಡಿದ್ದಾರೆ. ನಟ ಶರಣ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಹಾಡು ಬಿಡುಗಡೆ ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಹುಟ್ಟಿದ್ದು ಯಾದಗಿರಿಯಲ್ಲಿ. ಬೆಳೆದಿದ್ದು ಹುಬ್ಬಳ್ಳಿಯಲ್ಲಿ. ಈಗಿರುವುದು ಬೆಂಗಳೂರಿನಲ್ಲಿ ಈ ಊರುಗಳು ಬಿಟ್ಟರೆ ಹೆಚ್ಚು ಪ್ರೀತಿಸುವುದು ಮೈಸೂರನ್ನು ಎಂದು ಮಾತನಾಡಿದ ನಟ ಹಾಗೂ ಗಾಯಕ ಶರಣ್, ಅಂತಹ ನನ್ನ ನೆಚ್ಚಿನ ಊರಿನಲ್ಲಿ ನಾನು ಹಾಡಿರುವ ಹಾಡಿನ ಬಿಡುಗಡೆಯಾಗಿದ್ದು ಖುಷಿಯಾಗಿದೆ. ಯೋಗರಾಜ್ ಭಟ್ ಅವರು‌ ಬರೆದಿರುವ ಈ ಹಾಡಿಗೆ ವಿ.ಹರಿಕೃಷ್ಣ ಅವರು ಸಹ ಧ್ವನಿಯಾಗಿರುವುದು ಖುಷಿಯಾಗಿದೆ. ಸಚಿನ್ ಬಸ್ರೂರ್ ಸಂಗೀತ ಕೂಡ ಸೊಗಸಾಗಿದೆ‌. ಪುರಾತನ ಫಿಲಂಸ್ ನಿರ್ಮಾಣದಲ್ಲಿ, ಶ್ರೀಕಾಂತ್ ಹುಣಸೂರ್ ನಿರ್ದೇಶನದಲ್ಲಿ ಹಾಗೂ ಪ್ರಣಂ ದೇವರಾಜ್ ಮತ್ತು ರಂಗಾಯಣ ರಘು ಅವರ ಕಾಂಬಿನೇಶನ್ ನಲ್ಲಿ ಮೂಡಿಬಂದಿರುವ ಈ ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಹಾರೈಸಿದರು.

ನಮ್ಮ ಚಿತ್ರದ ಚಿತ್ರೀಕರಣ ಮೈಸೂರಿನಲ್ಲೇ ಆಗಬೇಕಿತ್ತು. ಅದು ಆಗಲಿಲ್ಲ. ಆದರೆ ನಮ್ಮಿಷ್ಟದ ಮೈಸೂರು ನಮ್ಮನ್ನು ಬಿಡುವುದಿಲ್ಲ. ನಮ್ಮ ಚಿತ್ರದ ಮೊದಲ ಹಾಡು ಮೈಸೂರಿನಲ್ಲೇ ಬಿಡುಗಡೆಯಾಗಿದೆ. ಯೋಗರಾಜ್ ಭಟ್ ಅವರ ಸಾಹಿತ್ಯ, ಶರಣ್ ಹಾಗೂ ಹರಿಕೃಷ್ಣ ಅವರ ಗಾಯನ ಅದ್ಭುತವಾಗಿದೆ. ನಿಮ್ಮೆಲ್ಲರ ಪ್ರೋತ್ಸಾಹ ಸದಾ ಇರಲಿ ಎಂದರು ನಾಯಕ ಪ್ರಣಂ ದೇವರಾಜ್.

ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ನನ್ನೂರಿನಲ್ಲಿ ನನ್ನ ನಿರ್ದೇಶನದ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದ್ದು ಸಂತಸ ತಂದಿದೆ ಎಂದು ನಿರ್ದೇಶಕ ಶ್ರೀಕಾಂತ್ ಹುಣಸೂರು ತಿಳಿಸಿದರು.

ಮೈಸೂರಿಗೂ ಕನ್ನಡ ಚಿತ್ರರಂಗಕ್ಕೆ ಅವಿನಾಭಾವ ಸಂಬಂಧವಿದೆ. ಅಂತಹ ಈ ಊರಿನಲ್ಲಿ “S\O ದೇವಣ್ಣ” ಅವರ ಪುತ್ರ ಪ್ರಣಂ ದೇವರಾಜ್ ಅಭಿನಯದ “S\O ಮುತ್ತಣ್ಣ” ಚಿತ್ರದ ಹಾಡು ಬಿಡುಗಡೆಯಾಗಿದೆ. ಹಾಡು ಚೆನ್ನಾಗಿದೆ. ನಾನು ಹಾಗೂ ಪ್ರಣಂ ಈ ಚಿತ್ರದಲ್ಲಿ ಅಪ್ಪ – ಮಗನಾಗಿ ನಟಿಸಿದ್ದೇವೆ ಎಂದು ನಟ ರಂಗಾಯಣ ರಘು ತಿಳಿಸಿದರು. ಸಂಗೀತ ನಿರ್ದೇಶಕ ಸಚಿನ್ ಬಸ್ರೂರ್ ಹಾಗೂ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿರ್ದೇಶಕ ಪವನ್ ಒಡೆಯರ್ ಮುಂತಾದವರು “S/O ಮುತ್ತಣ್ಣ” ಚಿತ್ರದ ಕುರಿತು ಮಾತನಾಡಿದರು.

ಈ ಚಿತ್ರವನ್ನು ಪುರಾತನ ಫಿಲಂಸ್ ನಿರ್ಮಾಣ ಮಾಡಿರುತ್ತಾರೆ ಇವರಿಗೆ ಎಸ್ ಅರ್ ಕೆ ಫಿಲಂಸ್ ಸಾಥ್ ನೀಡಿದೆ‌. ಪ್ರಣಂ ದೇವರಾಜ್ ಅವರಿಗೆ ನಾಯಕಿಯಾಗಿ “ದಿಯಾ” ಖ್ಯಾತಿಯ ಖುಷಿ ರವಿ ಅಭಿನಯಿಸಿದ್ದಾರೆ. ರಂಗಾಯಣ ರಘು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸುಚೇಂದ್ರ ಪ್ರಸಾದ್‌, ಗಿರೀಶ್‌ ಶಿವಣ್ಣ, ತಬಲ ನಾಣಿ, ಶ್ರೀನಿವಾಸ್‌ ಪ್ರಭು, ಸುಧಾ ಬೆಳವಾಡಿ, ಅರುಣ್‌ ಚಕ್ರವರ್ತಿ, ಸಂದೀಪ ಎಂ ಮುಂತಾದವರು ತಾರಾಬಳಗದಲ್ಲಿದ್ದಾರೆ. ಸಚಿನ್ ಬಸ್ರೂರು ಸಂಗೀತವಿರುವ ‘s/o ಮುತ್ತಣ್ಣ’ ಸಿನಿಮಾದ ಹಾಡುಗಳನ್ನು ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಪ್ರಮೋದ್ ಮರವಂತೆ ಬರೆದಿದ್ದಾರೆ. ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ ಹಾಗೂ ಹರೀಶ್ ಕೊಮ್ಮೆ ಅವರ ಸಂಕಲನ ಬಹು ನಿರೀಕ್ಷಿತ ಈ ಚಿತ್ರಕ್ಕಿದೆ.

error: Content is protected !!