ಸಿಸಿಟಿವಿಯ ಕರಾಳ ಸತ್ಯ ನೋಟ “ರೂಮ್ ಬಾಯ್” (ಚಿತ್ರವಿಮರ್ಶೆ- ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : ರೂಮ್ ಬಾಯ್
ನಿರ್ದೇಶಕ : ರವಿ ನಾಗಡದಿನ್ನಿ
ನಿರ್ಮಾಪಕ : ಲಿಖಿತ್ ಸೂರ್ಯ
ಸಂಗೀತ : ರೋಣದ ಬಕ್ಕೇಶ್
ಛಾಯಾಗ್ರಹಣ : ಧನಪಾಲ್ ನಾಯಕ್
ಕ್ರಿಯೇಟಿವ್ ಹೆಡ್ : ವಿಜಯ್ ಭರಮಸಾಗರ್
ತಾರಾಗಣ : ಲಿಖಿತ್ ಸೂರ್ಯ , ಲಿಖಿತ್ ಸೂರ್ಯ, ರಕ್ಷಾ , ಅಶ್ವಿನ್ ಹಾಸನ್, ಚೇತನ್ ದುರ್ಗಾ, ವರ್ಧನ್, ಯಶ್ ಶೆಟ್ಟಿ, ರಘು ಶಿವಮೊಗ್ಗ, ವಜರಂಗ ಶೆಟ್ಟಿ, ರಾಹುಲ್, ರೋಷನ್, ಪದ್ಮಿನಿ, ರಜನಿ ಹಾಗೂ ಮುಂತಾದವರು…
ಬಣ್ಣದ ಬದುಕಿಗೆ ಆಸೆಪಟ್ಟು ಊರು , ಕುಟುಂಬವನ್ನು ತೊರೆದು ಬರುವವರು ಬಹಳಷ್ಟು ಜನ ಇದ್ದಾರೆ. ಆದರೆ ಸಮಯ , ಸಂದರ್ಭ ಅವರ ಬದುಕಿನಲ್ಲಿ ಆಡಿಸುವ ಆಟಕ್ಕೆ ಒಬ್ಬೊಬ್ಬರ ಬದುಕು ಒಂದೊಂದು ಹಾದಿಯತ್ತ ಸಾಗುತ್ತದೆ. ಅಂತದೇ ಒಬ್ಬ ಉತ್ತರ ಕರ್ನಾಟಕದ ಪ್ರತಿಭೆ ನಾಯಕನಾಗಲು ಬಂದು ಅನುಭವಿಸುವ ಕಷ್ಟ , ನೋವು , ಪರದಾಟದ ಹಾದಿಯಲ್ಲಿ ಕುತೂಹಲ ಮೂಡಿಸುವ ಸಸ್ಪೆನ್ಸ್ , ಕ್ರೈಂ , ಥ್ರಿಲ್ಲರ್ ಕಥಾನಕದೊಂದಿಗೆ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರೂಮ್ ಬಾಯ್”.
ನನ್ನದೇ ಹೋಟೆಲ್ ಗೆ ವರ್ಧನ್ ತನ್ನ ಗೆಳೆಯರೊಟ್ಟಿಗೆ ಹೊಸ ವರ್ಷದ ಸಂಭ್ರಮವನ್ನು ಎಂಜಾಯ್ ಮಾಡಲು ಹುಡುಗಿಯರ ಜೊತೆ ಬರುತ್ತಾರೆ. ಮೋಜು , ಮಸ್ತಿ , ಎಣ್ಣೆ ಗುಂಗಿನಲ್ಲಿ ತೇಲುತ್ತಿರುವವರ ಮುಂದೆ ಅನಾಮಿಕ ವ್ಯಕ್ತಿ ಎಂಟ್ರಿ ಕೊಟ್ಟು ಹಿಂಸೆ ನೀಡಿ ಸಾಯುವ ಹಂತಕ್ಕೆ ಹೊಡೆಯುತ್ತಾನೆ. 12 ಜನರಲ್ಲಿ 7 ಜನ ಸತ್ತರೆ… 5 ಜನ ನಾಪತ್ತೆಯಾಗಿರುತ್ತಾರೆ. ಇದು ಪೊಲೀಸ್ ಇಲಾಖೆಗೂ ದೊಡ್ಡ ತಲೆ ನೋವಾಗಿ ಸತ್ಯವನ್ನು ಬೇಧಿಸಲು ಸಿಸಿ ಟಿವಿ ಮೊರೆ ಹೋಗುತ್ತಾರೆ ಇನ್ಸ್ಪೆಕ್ಟರ್ ರಘುರಾಮ್ ಹಾಗೂ ತಂಡ, ಇನ್ನು ಟಿವಿ ಚಾನೆಲ್ನಲ್ಲೂ ಇದೇ ಸುದ್ದಿ.
ಇನ್ನು ಜೀವನದಲ್ಲಿ ಹೀರೋ ಆಗಬೇಕೆಂದು ಕನಸು ಕಾಣುವ ಯುವಕ ಸೂರ್ಯ, ಅವಕಾಶ ಸಿಗದೇ ಪೆಟ್ರೋಲ್ ಬಂಕ್ , ಬಾರ್ , ಹೋಟೆಲ್ ನಲ್ಲಿ ಕೆಲಸ ಮಾಡುವ ಸೂರ್ಯನಿಗೆ ಕಿರುಚಿತ್ರ ಮಾಡುವ ನಿರ್ದೇಶಕ ಸಿಗುತ್ತಾನೆ. ನೀನು ನೈಜವಾಗಿ ಪಾತ್ರಕ್ಕೆ ಜೀವ ತುಂಬಬೇಕು , ಅದಕ್ಕಾಗಿ ಮನೆಯಲ್ಲೇ ಹಿಡನ್ ಕ್ಯಾಮೆರಾ ಮುಂದೆ ನಟಿಸು ಎನ್ನುತ್ತಾನೆ. ಅದೇ ರೀತಿ ಬೇರೆ ಬೇರೆ ಪಾತ್ರಗಳನ್ನು ನಿರ್ವಹಿಸುವ ಸೂರ್ಯ ಚಾನ್ಸ್ ಗಿಟ್ಟಿಸಿಕೊಳ್ಳುವ ತವಕದಲ್ಲಿರುತ್ತಾನೆ.
ಇದರ ನಡುವೆ ತನ್ನ ಗೆಳತಿ ರಕ್ಷಾ ಪ್ರೀತಿಯಲ್ಲಿ ಮುಳುಗಿದ್ದರು ಇವರಿಬ್ಬರನ್ನು ದೂರ ಮಾಡಲು ಒಂದು ನಿಗೂಢ ಕಾರಣ ಇರುತ್ತದೆ. ಒಂದು ಕಡೆ ರೂಮ್ ಬಾಯ್ ಕೆಲಸ , ಮತ್ತೊಂದೆಡೆ ಸಿನಿಮಾ ಪ್ರೀತಿ ಇದರ ನಡುವೆ ಒಂದಷ್ಟು ಫ್ಲಾಶ್ ಬ್ಯಾಕ್ ನಲ್ಲಿ ಎದುರಾಗುವ ವಿಚಿತ್ರ ಘಟನೆಗಳು ರೋಚಕ ಘಟ್ಟಕ್ಕೆ ತಂದು ನಿಲ್ಲುತ್ತದೆ. ಈ ಕೊಲೆಗಳು ನಡೆದಿದ್ದು ಯಾಕೆ… ಕೊಂದಿದ್ದು ಯಾರು… ರೂಮ್ ಬಾಯ್ ಹಿನ್ನಲೆ ಏನು… ಪೊಲೀಸ್ ಕಾರ್ಯಾಚರಣೆ ಏನಾಗುತ್ತೆ… ಸಿಸಿಟಿವಿ ಕೊಡುವ ಉತ್ತರ ಏನು… ಇದಕ್ಕಾಗಿ ಒಮ್ಮೆ ನೀವು ರೂಮ್ ಬಾಯ್ ಚಿತ್ರ ನೋಡಲೇಬೇಕು.
ನಾಯಕನಾಗಿ ಯುವ ನಟ ಲಿಖಿತ್ ಸೂರ್ಯ ಅದ್ಭುತವಾಗಿ ತಮ್ಮ ಬಹುಮುಖ ಪ್ರತಿಭೆಯನ್ನು ಹೊರ ಹಾಕಿದ್ದಾರೆ. ಕಥೆಯನ್ನು ಬರೆದು ನಿರ್ಮಿಸುವುದರ ಜೊತೆಗೆ ನಟಿಸಿರುವ ಲಿಖಿತ್ ತಮ್ಮ ಸಾಮರ್ಥ್ಯವನ್ನು ನಾಲ್ಕು ಶೇಡ್ ಗಳ ಮೂಲಕ ತೋರಿಸಿದ್ದು , ಅದರಲ್ಲೂ ಮಂಗಳಮುಖಿಯ ನೋಟ ನಡೆಗೆ ಜೀವ ತುಂಬಿದ್ದಾರೆ. ಮುಂದೆ ಉತ್ತಮ ಅವಕಾಶಗಳು ಸಿಗುವ ಸಾಧ್ಯತೆ ಹೆಚ್ಚಿದೆ , ಜೊತೆಗೆ ಪ್ರಶಸ್ತಿ ಸಿಗುವಂತಹ ಅರ್ಹತೆ ಈ ನಟನಿಗಿದೆ.
ಇನ್ಸ್ಪೆಕ್ಟರ್ ಪಾತ್ರವನ್ನು ನಿರ್ವಹಿಸಿರುವ ಅಶ್ವಿನ್ ಹಾಸನ್ ಪೊಲೀಸ್ ಅಧಿಕಾರಿ ಎಂದರೆ ಹೀಗಿರಬೇಕು ಎನ್ನುವಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಾಯಕಿಯಾಗಿ ರಕ್ಷಾ ನಿಂಬರಗಿ ಸಿಕ್ಕ ಅವಕಾಶವನ್ನು ನಿರ್ವಹಿಸಲು ಶ್ರಮಪಟ್ಟಿದ್ದಾರೆ. ನಿರ್ದೇಶಕನಾಗಿ ರಾಘು ಶಿವಮೊಗ್ಗ , ಸಿಸಿಟಿವಿಯ ಹ್ಯಾಕರ್ ಪಾತ್ರದಲ್ಲಿ ಚೇತನ್ ದುರ್ಗಾ ಸೇರಿದಂತೆ ಮೋಜು , ಮಸ್ತಿ ಗೆಳೆಯ , ಗೆಳತಿಯರಾಗಿ ಯಶ್ ಶೆಟ್ಟಿ , ವರ್ಧನ್ , ವಜರಂಗ ಶೆಟ್ಟಿ, ಪದ್ಮಿನಿ, ರಾಹುಲ್,ರೋಷನ್, ರಜನಿ, ವಿಕ್ಕಿ, ಯಶಾ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ.
ಇದೊಂದು ಸೈಕ್ಲೋಜಿಕಲ್ , ಸಸ್ಪೆನ್ಸ್ ಚಿತ್ರ ಅನಿಸಿದರೂ ನಿರ್ದೇಶಕ ರವಿ ನಾಗಡದಿನ್ನಿ ಒಂದು ಸೂಕ್ಷ್ಮ ವಿಚಾರವನ್ನು ಹೇಳಿದ್ದು , ಯಾರ ಜೀವನದ ಜೊತೆಯೂ ಆಟ ಆಡಬಾರದು, ಪ್ರತಿಯೊಬ್ಬರಿಗೂ ಅವರದೇ ಆದ ಕನಸು , ಆಕಾಂಕ್ಷೆಗಳು ಇದ್ದೇ ಇರುತ್ತದೆ. ಒಮ್ಮೆ ದಿಕ್ಕು ತಪ್ಪಿದರೆ ಅದರಿಂದ ಆಗುವ ಪರಿಣಾಮ ಊಹಿಸಲು ಅಸಾಧ್ಯ ಎಂಬ ಸೂಕ್ಷ್ಮತೆಯನ್ನು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತೆರೆದಿಟ್ಟಿದ್ದಾರೆ. ಸಿಸಿಟಿವಿಯ ದೃಶ್ಯಾವಳಿಯ ಕಥಾನಕ ಮಾಡಿರುವ ಆಲೋಚನೆ ವಿಶೇಷವಾಗಿದೆ.
ಇದೊಂದು ಪ್ರಯೋಗಾತ್ಮಕವಾಗಿದ್ದು , ಮನೋರಂಜನೆಯ ಅಂಶವನ್ನು ಹೊರತುಪಡಿಸಿ ಎಮೋಷನಲ್ ಜೊತೆ ಕುತೂಹಲಕಾರಿ ಚಿತ್ರ ಮೂಡಿ ಬಂದಿದೆ. ಇಡೀ ಚಿತ್ರದ ಹೈಲೈಟ್ ಸಿಸಿಟಿವಿಯ ಕ್ಯಾಮೆರಾ ಕೈಚಳಕ… ಹಾಗೂ ಹಿನ್ನೆಲೆ ಸಂಗೀತ ಹಾಗೂ ಸಂಕಲನ. ಹಾಗೆಯೇ ತಾಂತ್ರಿಕವಾಗಿ ತಂಡ ಶ್ರಮ ಪಟ್ಟಿದ್ದು , ಕ್ರಿಯೇಟಿವ್ ಹೆಡ್ ಆಗಿ ಪತ್ರಕರ್ತ ವಿಜಯ್ ಭರಮಸಾಗರ ಮಾರ್ಗದರ್ಶನ ನೀಡಿದ್ದಾರೆ ಜೊತೆಗೆ ವಾಹಿನಿಯ ಪ್ರಮುಖ ವರದಿಗಾರರಾಗಿ ಪಾತ್ರವನ್ನು ಕೂಡ ನಿರ್ವಹಿಸಿದ್ದಾರೆ. ಒಟ್ಟಾರೆ ಇಡೀ ಚಿತ್ರ ಮುಂದೇನು ಎಂಬ ಪ್ರಶ್ನೆಯೊಂದಿಗೆ ಸಾಗುತ್ತಾ ಹೋಗುವ ರೀತಿ ಎಲ್ಲರನ್ನು ಗಮನ ಸೆಳೆಯುವಂತಿದೆ.