Cini NewsMovie ReviewSandalwood

ಜನನಾಯಕನ ರಣತಂತ್ರದ ಜಾಲ “ರೋಣ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5

ಚಿತ್ರ : ರೋಣ
ನಿರ್ದೇಶಕ : ಸತೀಶ್ ಕುಮಾರ್
ನಿರ್ಮಾಪಕ : ರಘು ರಾಜ ನಂದ
ಸಂಗೀತ : ಗಗನ್ ಬದೇರಿಯ
ಛಾಯಾಗ್ರಹಣ : ಅರುಣ್ ಕುಮಾರ್
ತಾರಾಗಣ : ರಘು ರಾಜ ನಂದ , ಪ್ರಕೃತಿ ಪ್ರಸಾದ್ , ಶರತ್ ಲೋಹಿತಾಶ್ವ , ಸದಾಶಿವ ನೀನಾಸಂ ಮಾಲೂರು ವಿಜಯ್ , ಚಿಲ್ಲರ್ ಮಂಜು , ಬಲರಾಜವಾಡಿ, ಸಂಗೀತ ಅನೀಲ್ ಹಾಗೂ ಮುಂತಾದವರು…

ಸಾಮಾನ್ಯವಾಗಿ ಒಂದು ಊರು ಅಂದಮೇಲೆ ಅದರ ಆಚಾರ-ವಿಚಾರ ಪದ್ಧತಿಗೆ ಅನುಗುಣವಾಗಿ ಜನರು ಕೂಡ ಹೊಂದುಕೊಂಡು ಹೋಗೋದು ಸರ್ವೇ ಸಾಮಾನ್ಯ. ಅಂತದ್ದೇ ಹಳ್ಳಿ ಸೊಗಡಿನಲ್ಲಿ ಸಾಗುವ ಸಂಬಂಧಗಳ ಬೆಸುಗೆ , ಧಾರ್ಮಿಕ, ರಾಜಕೀಯ , ವೈಜ್ಞಾನಿಕ , ಸಮಸ್ಯೆ , ದ್ವೇಷ , ರಣತಂತ್ರದ ನಡುವೆ ಯುವ ಪಡೆಗಳ ನ್ಯಾಯದ ಹೋರಾಟದ ಹಾದಿಯಲ್ಲಿ ಸಾಗುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ರೋಣ”.

ರಾಜಕೀಯ ವಲಯದಲ್ಲಿ ಸಿಎಂ ಸೇರಿದಂತೆಯೂ ಜನನಾಯಕರಿಗೆ ರೋಣ ಕ್ಷೇತ್ರ ಬಹಳ ಪ್ರಭಾವವನ್ನು ಬೀರುತ್ತದೆ. ಆ ಕ್ಷೇತ್ರದ ಎಂಎಲ್ಎ ತನ್ನದೇ ಪುಂಡರ ಗ್ಯಾಂಗ್ ಜೊತೆಗೆ ಜನರಿಗೆ ನೀರು , ಶಾಲೆ ಮೂಲಭೂತ ಸೌಕರ್ಯಗಳನ್ನ ನೀಡದೆ ರೈತರ ಹಾಗ ಸ್ಮಶಾಣದ ಜಾಗವನ್ನ ಆಕ್ರಮಿಸಿ ವಾಟರ್ ಪ್ಲಾಂಟೇಶನ್ಗೆ ಮುಂದಾಗುವ ಅಧಿಕಾರಿಯ ನಡುವಳಿಕೆಗೆ ತಕ್ಕ ಉತ್ತರ ನೀಡುವ ಊರಿನ ಮುಖಂಡ ರಾಮಕೃಷ್ಣ (ಶರತ್ ಲೋಹಿತಾಶ್ವ) , ಈತನ ಬಂಟನಾಗಿ ಹನುಮಂತು (ಬಾಲರಾಜವಾಡಿ) ಬೆಂಬಲವಾಗಿರುವಾಗ ರೌಡಿಳು ಅಟ್ಯಾಕ್ ಮಾಡುತ್ತಾರೆ.

ಸರಿಯಾದ ಸಮಯಕ್ಕೆ ಶಿವು (ರಘು ರಾಜ ನಂದ) ತಂದೆ ರಾಮಕೃಷ್ಣರನ್ನ ರಕ್ಷಿಸಿ , ರೌಡಿಗಳನ್ನು ಸದೆಬಡೆಯುತ್ತಾನೆ. ಇದರಿಂದ ಕೋಪಗೊಳ್ಳುವ ರಾಜಕೀಯ ನಾಯಕ ಮುಂದಿನ ಎಲೆಕ್ಷನ್ ಗೆ ತೊಂದರೆ ಆಗುತ್ತದೆ ಎಂದು ಬೇರೆದೆ ಪ್ಲಾನ್ ಮಾಡುತ್ತಾನೆ. ಈತ ಊರ ಜನರು ರಾಮಕೃಷ್ಣರೇ ಮುಂದಿನ ನಾಯಕರಾಗಬೇಕು ನಾವು ಬೆಂಬಲ ನೀಡಬೇಕೆಂದು ನಿರ್ಧರಿಸುತ್ತಾರೆ. ಇದೆ ಸಮಯಕ್ಕೆ ಸಿಟಿಯಿಂದ ಬರುವ ಹನುಮಂತು ಮಗಳು ಕಾವ್ಯ (ಪ್ರಕೃತಿ ಪ್ರಸಾದ್) ಕೂಡ ಊರುಗಳ ಸಮಸ್ಯೆ ಕುರಿತು ರಿಸರ್ಚ್ ಮಾಡಿರ್ತಾಳೆ.

ಈ ವಿಚಾರಕ್ಕೆ ಬೆಂಬಲವಾಗಿ ನಿಲ್ಲುವ ಶಿವು ಗೆಳೆಯ ನಾರಾಯಣ (ಚಿಲ್ಲರ್ ಮಂಜು) ಹಾಗೂ ಇನ್ನಷ್ಟು ಸ್ನೇಹಿತರು. ಇದರ ನಡುವೆ ಕಾಳಿಕಾ ಮಾತೆಯ ಊರ ಹಬ್ಬದ ಜಾತ್ರೆ ನಡೆಸಲು ತೀರ್ಮಾನಿಸುತ್ತಾರೆ. ಇದು ರಾಜಕೀಯ ಭವಿಷ್ಯಕ್ಕೂ ನಿರ್ಧಾರದ ಸಮಯವಾಗಿದ್ದು , ಇದರ ನಡುವೆ ಎಮ್ಎಲ್ಎ ತಂಡಕ್ಕೂ ಹಾಗೂ ಗ್ರಾಮದ ಮುಖಂಡರ ತಂಡದ ನಡುವೆ ಒಂದಷ್ಟು ಗೊಂದಲ , ವೈಮನಸ್ಯ ಎದುರಾಗುತ್ತದೆ.

ದೇವಿಯ ಅನುಗ್ರಹದಂತೆ ಜಾತ್ರೆಗೆ ಚಾಲನೆ ಸಿಗುತ್ತದೆ. ಅದ್ದೂರಿ ಹಾಡು ಕುಣಿತದ ಸಂಭ್ರಮದ ನಡುವೆ ಕರಾಳದ ಛಾಯೆ ಮೂಡುತ್ತದೆ. ನೇಣು ಬಿಗಿದ ಸ್ಥಿತಿಯಲ್ಲಿ ಐವರ ಸಾವು ಎದುರಾಗುತ್ತದೆ. ಇದೆಲ್ಲ ಹೇಗೆ ಏನು ಎಂದು ಪೊಲೀಸ್ ಇನ್ವೆಸ್ಟಿಗೇಷನ್ ಒಂದು ಕಡೆ ನಡೆದರೆ , ಮತ್ತೊಂದು ಕಡೆ ಯುವಕರ ತಂಡವು ಕೂಡ ಇದರ ಕಾರಣ ಹುಡುಕುತ್ತಾ ಸಾಗಿದರು, ಮುಂದೆ ನಿಗೂಢ ರೀತಿ ಒಂದೊಂದು ಕೊಲೆ ಆಗುತ್ತದೆ. ಇದಕ್ಕಲ್ಲ ಕಾರಣ ಯಾರು… ಇದರ ಹಿಂದಿನ ರಹಸ್ಯವೇನು… ಕ್ಲೈಮಾಕ್ಸ್ ಹೇಳುವ ಸತ್ಯ ಯಾವುದು… ಇದೆಲ್ಲದಕ್ಕೂ ಉತ್ತರ ತಿಳಿಯಬೇಕಾದರೆ ಒಮ್ಮೆ ನೀವು ಈ ಚಿತ್ರವನ್ನು ನೋಡಲೇಬೇಕು.

ಪ್ರಥಮ ಬಾರಿಗೆ ಬೆಳ್ಳಿ ಪರದೆಯ ಮೇಲೆ ನಾಯಕನಾಗಿ ಯುವ ನಟ ರಘು ರಾಜ ನಂದ ಮಾಸ್ ಆಕ್ಷನ್ ಮೂಲಕ ಎಂಟ್ರಿ ಕೊಟ್ಟು ಫೈಟ್ ಗೆ ಜೈ ಎಂದಿದ್ದಾರೆ. ಅದೇ ರೀತಿ ತಂದೆ ಮಗನ ಬಾಂಧವ್ಯದ ಸನ್ನಿವೇಶಕ್ಕೆ , ಜನರ ಸಮಸ್ಯೆ , ರಾಜಕೀಯ ಕುತಂತ್ರಕ್ಕೆ ಸೆಡ್ಡು ಹೊಡೆದು ನಿಲ್ಲುವ ಪಾತ್ರಕ್ಕೆ ಜೀವ ನೀಡುವ ಪ್ರಯತ್ನ ಪಟ್ಟಿದ್ದು , ಇನ್ನಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ. ಹೆಚ್ಚು ಶ್ರಮಪಟ್ಟರೆ ಮುಂದಿನ ಚಿತ್ರಗಳಲ್ಲಿ ಉತ್ತಮ ಭವಿಷ್ಯ ಸಿಗಲಿದೆ ಅನಿಸುತ್ತದೆ.

ಇನ್ನು ನಾಯಕಿಯಾಗಿ ಪ್ರಕೃತಿ ಪ್ರಸಾದ್ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇಡೀ ಚಿತ್ರದ ಕೇಂದ್ರಬಿಂದುವಾಗಿ ಶರತ್ ಲೋಹಿತಾಶ್ವ ಅದ್ಭುತ ನಟನೆ ನೀಡಿದ್ದಾರೆ. ನಾಯಕನ ತಾಯಿಯ ಪಾತ್ರದಲ್ಲಿ ಸಂಗೀತ ಅನಿಲ್ ಉತ್ತಮ ಸಾತ್ ನೀಡಿದ್ದಾರೆ. ಹಾಸ್ಯ ಪ್ರತಿಭೆ ಚಿಲ್ಲರ್ ಮಂಜು ಮಾತಿನ ವರ್ಸೆ ಗಮನ ಸೆಳೆಯುತ್ತದೆ. ಸಿಎಂ ಪಾತ್ರದಲ್ಲಿ ಈಟಿವಿ ಶ್ರೀಧರ್ ಚಿತ್ರದ ತಿರುವು ನೀಡುವ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

ಮತ್ತೊಬ್ಬ ಹಿರಿಯ ನಟ ಬಾಲ ರಾಜವಾಡಿ ಸೇರಿದಂತೆ ರಂಗಭೂಮಿ ಪ್ರತಿಭೆಗಳು ಹಾಗೂ ಯುವ ಪ್ರತಿಭೆಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಊರಿನಲ್ಲಿ ಜನರು ಎದುರಿಸುವ ಸಮಸ್ಯೆ , ರಾಜಕೀಯ ಶುಡ್ಯಂತರ , ದೈವಿಶಕ್ತಿ , ಆಚಾರ ವಿಚಾರ , ತಂದೆ ಮಗನ ಬಾಂಧವ್ಯ , ಸ್ನೇಹ , ಪ್ರೀತಿ , ಗ್ರಾಮದ ಪದ್ಧತಿಯ ಬಗ್ಗೆ ಬಹಳ ನೇರ ನೇರವಾಗಿ ಕಥೆಯನ್ನು ಬೆಸೆದುಕೊಂಡು ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ. ಕಥೆಯಲ್ಲಿ ಹೊಸತನ ವಿಲ್ಲದಿದ್ದರೂ , ಚಿತ್ರಕಥೆಯಲ್ಲಿ ಬಹಳಷ್ಟು ಏರಿಳಿತ ಮಾಡಬಹುದಿತ್ತು. ಈ ಮೊದಲ ಪ್ರಯತ್ನಕ್ಕೆ ನಿರ್ಮಾಪಕರ ಬೆಂಬಲವು ಮೆಚಲೇಬೇಕು. ಹಾಡುಗಳು ಉತ್ತಮವಾಗಿ ಮೂಡಿ ಬಂದಿದ್ದು , ಛಾಯಾಗ್ರಹಾಕರ ಕೈಚಳಕ ತಕ್ಕ ಮಟ್ಟಕ್ಕೆ ಬಂದಿದೆ. ಒಟ್ಟಾರೆ ಯಾವುದೇ ಮುಜುಗರವಿಲ್ಲದೆ ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದೆ.

error: Content is protected !!