Cini NewsMovie ReviewSandalwood

ದುಷ್ಟ , ಸೋಂಬೇರಿಗೆ ಕಾಲವೇ ಉತ್ತರ…’ರಾಜರತ್ನಾಕರ’ ಚಿತ್ರವಿಮರ್ಶೆ (ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5

ಚಿತ್ರ : ರಾಜರತ್ನಾಕರ
ನಿರ್ದೇಶಕ : ವೀರೇಶ್ ಬೊಮ್ಮ ಸಾಗರ
ನಿರ್ಮಾಪಕ : ಜಯರಾಮ್ ಸಿ . ಮಾಲೂರು
ಸಂಗೀತ : ಹರ್ಷವರ್ಧನ್ ರಾಜ್
ಛಾಯಾಗ್ರಹಣ : ಸಿದ್ದು ಕೆಂಚನಹಳ್ಳಿ
ತಾರಾಗಣ : ಚಂದನ್ ರಾಜ್, ಅಪ್ಸರ , ಯಮುನಾ ಶ್ರೀನಿಧಿ, ನಾಗರಾಜ ರಾವ್, ಚೇತನ್ ದುರ್ಗಾ, ಡಿಂಗ್ರಿ ನರೇಶ್ ಹಾಗೂ ಮುಂತಾದವರು…

ಸಾಮಾನ್ಯವಾಗಿ ಮಧ್ಯಮ ವರ್ಗದ ಬಡಜನರ ದಿನನಿತ್ಯದ ಬದುಕು ಬವಣಿಯೇ ದುಸ್ತರ. ವ್ಯಾಪಾರ , ದಿನಗೂಲಿ, ಮನೆ ಕೆಲಸವೇ ಆಧಾರವಾಗಿಸಿಕೊಂಡು ಬದುಕುವ ಅದೆಷ್ಟೋ ಕುಟುಂಬಗಳು ಜೀವನ ಕಟ್ಟಿಕೊಳ್ಳುವುದಕ್ಕೆ ಪರದಾಡುತ್ತಾರೆ. ಅದರಲ್ಲೂ ಪೊಲಿಯಾಗಿ ತಿರುಗುತ್ತಾ ದೌಲತ್ತು ಮಾಡುವ ಮಕ್ಕಳು ಹುಟ್ಟಿದರಂತೂ ಮನೆಯವರ ಸ್ಥಿತಿಗತಿ ಅದೋಗತಿ. ಅಂತದ್ದೇ ಕಥಾವಸ್ತು ಮೂಲಕ ದುರಹಂಕಾರಿಯೊಬ್ಬನ ಕುಟುಂಬ ಹಾಗೂ ತನ್ನ ಜೀವನದಲ್ಲಿ ಎದುರಿಸುವ ಏರುಪೇರುಗಳನ್ನು ಮನ ಮುಟ್ಟುವ ಹಾಗೆ ನಮ್ಮ ಸುತ್ತಮುತ್ತ ಇಂತಹವರು ಇರ್ತಾರೆ ಎಂಬುದನ್ನು ಹೇಳುವ ನಿಟ್ಟಿನಲ್ಲಿ ಈ ವಾರ ತೆರೆಯ ಮೇಲೆ ಬಂದಿರುವಂತಹ ಚಿತ್ರ “ರಾಜರತ್ನಾಕರ”.

ಯಾವುದೇ ಕೆಲಸ ಕಾರ್ಯವಿಲ್ಲದ ಸೋಂಬೇರಿ , ಧಿಮಾಕು ದೌಲತ್ತಿನಲ್ಲಿ ಗೆಳೆಯರ ಜೊತೆ ಕುಡಿಯುತ್ತಾ ಹಣ ಬೇಕಾದಾಗ ಸುಳ್ಳು ಹೇಳಿ ಯಾಮಾರಿಸುವ ಕಿಲಾಡಿ ಈ ರಾಜ (ಚಂದನ್ ರಾಜ್). ತಾಯಿ ಸರೋಜಾ (ಯಮುನಾ ಶ್ರೀನಿಧಿ) , ತಾತ (ನಾಗರಾಜ್ ರಾವ್) ಹೂ ವ್ಯಾಪಾರ ಮಾಡುತ್ತಾ ಮನೆ ಜೀವನ ನಡೆಸುವುದೇ ಕಷ್ಟಕರವಾಗಿರುತ್ತದೆ. ಮನೆಯ ಬಗ್ಗೆ ಗಮನ ಕೊಡದ ರಾಜ ನಿಗೆ ಗೆಳೆಯರಾದ ಹರೀಶ ಹಾಗೂ ಸಂತು ಸಾಥ್. ದುಡ್ಡಿಗಾಗಿ ಏನು ಬೇಕಾದರೂ ಮಾಡುವ ರಾಜ ಗೆಳೆಯ ಹರೀಶನ ಪ್ರೀತಿ ವಿಚಾರಕ್ಕೆ ಮುಂದೆ ನುಗ್ಗೆ ಪ್ರೇಮಿಗಳನ್ನು ಒಂದು ಮಾಡುತ್ತಾನೆ.

ಇನ್ನು ಮತ್ತೊಬ್ಬ ಗೆಳೆಯ ಸಗಣಿ ಹಾಗೂ ಬೈಕ್ ಇವನ ಓಡಾಟಕ್ಕೆ ಆಧಾರ. ಇದರ ನಡುವೆ ಹೊಸ ಬ್ಯುಸಿನೆಸ್ ಮಾಡುವೆ ಎಂದು ನಲ್ವತ್ತು ಸಾವಿರ ಹಣವನ್ನು ಪಡೆದು ಮೋಸ ಮಾಡುವ ರಾಜ ನ ವರ್ತನೆಯಿಂದ ಬೇಸತ್ತು ಹೋಗುವ ತಾಯಿ ಹಾಗೂ ತಾತ ಸಾಲ ಕೊಟ್ಟವನ ಆರ್ಭಟಕ್ಕೆ ಪರದಾಡುತ್ತಾರೆ. ಇವನ ದುರಹಂಕಾರಕ್ಕೆ ಕೊನೆಯ ಇಲ್ಲವೇ ಎನ್ನುವಷ್ಟರಲ್ಲಿ ಬಿರುಗಾಳಿಯಂತೆ ಮುದ್ದಾದ ಬೆಡಗಿ ಮೇಘ (ಅಪ್ಸರ) ಮಳೆಯಲ್ಲಿ ಪ್ರತ್ಯಕ್ಷ.

ಈ ಕಾಲೇಜ್ ಹುಡುಗಿ ಹಿಂದೆ ಬೀಳುವ ರಾಜ. ಆಕೆಗೆ ಪ್ರಪೋಸ್ ಮಾಡಲು ಗೆಳೆಯರ ಐಡಿಯಾದಂತೆ ನಾನು ಕಸರತ್ತು ಮಾಡುತ್ತಾನೆ. ಆದರೆ ವಿಧಿಯ ಆಟದಂತೆ ಕಾಲಾಯ ತಸ್ಮೈ ನಮಃ ಎನ್ನುವ ಹಾಗೆ ರಾಜನ ಜೀವನದಲ್ಲಿ ಎದುರಾಗುವ ಒಂದು ಸಂದರ್ಭ ಅವನ ಬದುಕಿನ ದಿಕ್ಕನ್ನೇ ಅಲ್ಲೋಲ ಕಲ್ಲೋಲ ಮಾಡುತ್ತದೆ. ಅದು ಏನು… ಹೇಗೆ… ಯಾವ ಸಂದರ್ಭ… ಪ್ರೀತಿ ಸಿಗುತ್ತಾ… ಬದಲಾವಣೆ ಆಗುತ್ತಾನಾ… ಕ್ಲೈಮಾಕ್ಸ್ ಏನು… ಎಂಬುದಕ್ಕೆ ಒಮ್ಮೆ ಚಿತ್ರ ನೋಡಲೇಬೇಕು.

ನಿರ್ದೇಶಕ ವೀರೇಶ್ ಬೊಮ್ಮ ಸಾಗರ್ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಪ್ರಸ್ತುತ ಕಾಲಘಟ್ಟಕ್ಕೆ ತಕ್ಕಂತಿದೆ. ಇಂತಹ ದುಷ್ಟ ಮಕ್ಕಳಿಂದ ಎಷ್ಟೋ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿದೆ. ದುಡ್ಡಿಗಾಗಿ ಯಾವ ಹಂತಕ್ಕೆ ಬೇಕಾದರೂ ಹೋಗುವವನ ಬದುಕು ಏನಾಗುತ್ತೆ ಎಂಬ ಸೂಕ್ಷ್ಮತೆಯನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ಪ್ರೀತಿ , ಸ್ನೇಹ , ಬದುಕು , ಮಮಕಾರದ ಸೆಳೆತ ಗಮನ ಸೆಳೆಯುತ್ತದೆ.

ಚಿತ್ರಕಥೆ ಕೊಂಚ ಬಿಗಿ ಮಾಡಿದರೆ ಇನ್ನು ಚೆನ್ನಾಗಿರತ್ತಿತ್ತು, ಆರಂಭ ಎಷ್ಟು ಸದ್ದು… ಕ್ಲೈಮಾಕ್ಸ್ ಅಷ್ಟೇ ಮನ ಮುಟ್ಟುವಂತಿದೆ. ಇಂತಹ ಜಾಗೃತಿ ಮೂಡಿಸುವ ಚಿತ್ರ ನೀಡಿರುವ ನಿರ್ಮಾಪಕ ಜಯರಾಮ್. ಸಿ. ಮಾಲೂರು ಸಾಹಸವನ್ನು ಕೂಡ ಮೆಚ್ಚಲೇಬೇಕು. ಈ ಚಿತ್ರದ ಹೈಲೈಟ್ ಎಂದರೆ ಹಾಡುಗಳು ಸೊಗಸಾಗಿದ್ದು , ಹರ್ಷವರ್ಧನ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಅದ್ಭುತವಾಗಿ ಮೂಡಿ ಬಂದಿದೆ. ಛಾಯಾಗ್ರಾಹಕರ ಕೈಚಳಕ , ಫೈಟ್ ಮಾಸ್ಟರ್ಗಳ ವಿಭಿನ್ನ ಸ್ಟಂಟ್ , ಸಂಕಲನದ ಕೆಲಸವೂ ಉತ್ತಮವಾಗಿದೆ.

ಇನ್ನು ನಾಯಕನಾಗಿ ಚಂದನ್ ರಾಜ ತನ್ನ ಪ್ರಥಮ ಪ್ರಯತ್ನದಲ್ಲೇ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಭರ್ಜರಿಯಾಗಿ ಎಂಟ್ರಿ ಕೊಡುವ ಯುವ ಪ್ರತಿಭೆ ಮಾತಿನ ಗತ್ತು , ನೋಟದ ಜೊತೆ ಅಬ್ಬರದ ಫೈಟ್ ನಲ್ಲಿ ಮಿಂಚಿದ್ದಾರೆ. ಎಮೋಷನ್ ಸನ್ನಿವೇಶಗಳ ಕಡೆ ಕೊಂಚ ಹೆಚ್ಚು ಗಮನ ಕೊಡಬೇಕಿತ್ತು ಅನಿಸುತ್ತಿದೆ. ಆದರೂ ಭರವಸೆಯ ನಟನಾಗಿ ಸಾಗುವ ಲಕ್ಷಣಗಳು ಇದೆ. ಇನ್ನು ನಾಯಕಿ ಅಪ್ಸರಾ ನೋಡಲು ಮುದ್ದು ಮುದ್ದಾಗಿ ತೆರೆಯ ಮೇಲೆ ಕಾಣುತ್ತಾರೆ.

ಬದುಕಿದ್ದರೆ ಇನ್ನಷ್ಟು ಉತ್ತಮ ಅವಕಾಶ ಸಿಗುತ್ತಿತ್ತು ಎನ್ನಿಸುತ್ತದೆ. ತಾಯಿಯ ಪಾತ್ರದಾರಿ ಯಮುನಾ ಶ್ರೀನಿಧಿ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ತಾತನ ಪಾತ್ರ ಮಾಡಿರುವ ನಾಗರಾಜ್ ರಾವ್ ಮನ ಸೆಳೆಯುವಂತೆ ನಟಿಸಿದ್ದಾರೆ. ತೃತೀಯ ಲಿಂಗ ಪಾತ್ರದಲ್ಲಿ ಮಾಡಿರುವ ಇಮ್ರಾನ್ ಪಾಷಾ ತನ್ನ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದು , ಮುಂದೆ ಉತ್ತಮ ಅವಕಾಶ ಸಿಗುವ ಲಕ್ಷಣಗಳಿವೆ ಅನಿಸುತ್ತದೆ.

ಅದೇ ರೀತಿ ಮತ್ತೊಬ್ಬ ಪ್ರತಿಭೆ ಚೇತನ್ ದುರ್ಗ ನಾಯಕನ ಗೆಳೆಯನಾಗಿ ಕೊಂಡರೂ ತನ್ನದೊಂದು ಪ್ರೀತಿಯ ಟ್ರ್ಯಾಕ್ ಗೆ ಗಮನ ಸೆಳೆಯುವಂತೆ ಪಾತ್ರಕ್ಕೆ ಜೀವ ತುಂಬಿದ್ದಾರೆ. ಉಳಿದಂತೆ ಡಿಂಗ್ರಿ ನರೇಶ್ , ಸಿದ್ದು ಸೇರಿದಂತೆ ಎಲ್ಲರೂ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟಾರೆ ಕುಟುಂಬ ಸಮೇತ ನೋಡುವಂತಹ ಚಿತ್ರ ಇದಾಗಿದ್ದು , ಖಂಡಿತ ಇಂತಹ ಸಿನಿಮಾ ಎಲ್ಲರಿಗೂ ತಲುಪಬೇಕು.

Visited 1 times, 1 visit(s) today
error: Content is protected !!