Cini NewsSandalwood

ಸೈಕಲಾಜಿಕಲ್ ಕಥಾಹಂದರ“ಗ್ರೀನ್” ಚಿತ್ರದ ಟ್ರೇಲರ್ ಅನಾವರಣ… ಅ.23 ರಂದು ತೆರೆಗೆ

Spread the love

ಗುನಾದ್ಯ ಪ್ರೊಡಕ್ಷನ್ಸ್ ಅರ್ಪಿಸುವ, ರಾಜ್ ವಿಜಯ್ ಹಾಗೂ ಬಿ.ಎನ್. ಸ್ವಾಮಿ ನಿರ್ಮಾಣದ ಹಾಗೂ ರಾಜ್ ವಿಜಯ್ ನಿರ್ದೇಶನದ ಹಾಗೂ ಬಾಲಾಜಿ ಮನೋಹರ್, ಗೋಪಾಲಕೃಷ್ಣ ದೇಶಪಾಂಡೆ, ಆರ್.ಜೆ. ವಿಕ್ಕಿ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸಿರುವ “ಗ್ರೀನ್” ಚಿತ್ರದ ಟ್ರೇಲರ್ ಅನ್ನು ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಬಿಡುಗಡೆ ಮಾಡಿ ಚಿತ್ರ ಯಶಸ್ವಿಯಾಗಲೆಂದು ಹಾರೈಸಿದ್ದಾರೆ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು “ಗ್ರೀನ್” ಕುರಿತು ಮಾತನಾಡಿದರು.

ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶಿವರಾಜಕುಮಾರ್ ಅವರಿಗೆ ಧನ್ಯವಾದ ತಿಳಿಸಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕ ರಾಜ್ ವಿಜಯ್, ಚಿಕ್ಕ ವಯಸ್ಸಿನಿಂದಲೂ‌ ನನಗೆ ಚಿತ್ರ ನಿರ್ದೇಶಕ ಆಗಬೇಕೆಂಬ ಆಸೆ. ಅದು ಈಗ ಈಡೇರಿದೆ. ಕನ್ನಡದ ಕೆಲವು ನಿರ್ದೇಶಕರ ಬಳಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದ್ದ ನನಗೆ ಇದು ಮೊದಲ ನಿರ್ದೇಶನದ ಚಿತ್ರ. ನಾನೊಬ್ಬ ವಿ.ಎಫ್.ಎಕ್ಸ್ ತಂತ್ರಜ್ಞ ಕೂಡಾ. “ಗ್ರೀನ್” ಕನ್ನಡದಲ್ಲಿ ಅಪರೂಪ ಎನ್ನಬಹುದಾದ ಸೈಕಾಲಜಿಕಲ್ ಮೈಂಡ್ ಬೆಂಡಿಂಗ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಮನೋವೈಜ್ಞಾನಿಕ ಮನಸ್ಸನ್ನು ಬೆರಗುಗೊಳಿಸುವ ಥ್ರಿಲ್ಲರ್ ಚಿತ್ರವೂ ಹೌದು. ತನ್ನ ಇಡೀ ಜೀವನವನ್ನೇ ನಿಯಂತ್ರಿಸುತ್ತಿರುವ ತನ್ನೊಳಗಿನ ರಾಕ್ಷಸನಿಂದ ಹೊರಬರಲು ಹೋರಾಡುವ ನಾಯಕನ ಕಥೆಯೇ “ಗ್ರೀನ್”. ಇದೊಂದು ಕಾಡಿನಲ್ಲಿ ನಡೆಯುವ ಕಥೆಯಾಗಿದ್ದು, ಊಟಿ ಬಳಿಯಲ್ಲಿ ಹೆಚ್ಚಿನ ಚಿತ್ರೀಕರಣ ಮಾಡಲಾಗಿದೆ. ಇನ್ನೂ ಈಗಾಗಲೇ, ಜಗತ್ತಿನ ‌ಹೆಸರಾಂತ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ “ಗ್ರೀನ್” ಪ್ರದರ್ಶನವಾಗಿದ್ದು 21 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಿದೇಶಿಗರು ಮೆಚ್ಚಿಕೊಂಡಿರುವ ನಮ್ಮ ನೆಲದ ಚಿತ್ರವನ್ನು ಸ್ವದೇಶಿಗರು, ಅದರಲ್ಲೂ ಕನ್ನಡಿಗರು ಮೆಚ್ಚಿಕೊಳ್ಳುವ ಭರವಸೆ ಇದೆ. ಅಕ್ಟೋಬರ್ 23ರಂದು ನಮ್ಮ ಚಿತ್ರ ಕರ್ನಾಟಕದಾದ್ಯಂತ ಬಿಡುಗಡೆಯಾಗುತ್ತಿದೆ. ಗುನಾದ್ಯ ಪ್ರೊಡಕ್ಷನ್ಸ್ ವತಿಯಿಂದ ನಿಶಾಂತ್ ನಮ್ಮ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ರವಿ ಫಿಲಂಸ್ ನ ಮನೋಜ್ ಈ ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡಲಿದ್ದಾರೆ ಎಂದರು.

ಚಿತ್ರ ನೋಡಿದ ಮೇಲೆ ನನಗೆ ತುಂಬಾ ಇಷ್ಟವಾಯಿತು. ಅದರಲ್ಲೂ ಕೊನೆಯ ಹದಿನೈದು ನಿಮಿಷ ಯಾರೂ ಊಹಿಸದ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ‌. ಹಾಗಾಗಿ ನಾನು ಈ ಚಿತ್ರತಂಡದ ಜೊತೆ ನಿಂತಿರುವುದಾಗಿ ನಿಶಾಂತ್ ತಿಳಿಸಿದರು. ನನ್ನ ಪಾತ್ರ ಕೂಡಾ ಚೆನ್ನಾಗಿದೆ. ವೀಲ್ ಚೇರ್ ಮೇಲೆ ಕುಳಿತು ನಟಿಸಿದ ಅನುಭವ ವಿಶೇಷವಾಗಿತ್ತು ಎಂದು ಆರ್ ಜಿ ವಿಕ್ಕಿ ತಿಳಿಸಿದರು. ಚಿತ್ರದಲ್ಲಿ ನಟಿಸಿರುವ ಶಿವ ಮಂಜು, ವಿಶ್ವನಾಥ್, ಡಿಂಪಿ ಫಾದ್ಯ, ಛಾಯಾಗ್ರಾಹಕ ಮಧುಸೂದನ್ ಹಾಗೂ ಸಂಗೀತ ನಿರ್ದೇಶಕ ಶಕ್ತಿ ಸ್ಯಾಕ್ ಮುಂತಾದವರು “ಗ್ರೀನ್” ಕುರಿತು ಮಾತನಾಡಿದರು. ಮುರುಡಯ್ಯ, ರಾಮಚಂದ್ರ, ಗಿರೀಶ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರದ ಪ್ರಚಾರ ಕಾರ್ಯಗಳು ಈಗಾಗಲೇ ಬೆಂಗಳೂರು ಮತ್ತು ಮೈಸೂರಿನಲ್ಲಿ ವಿಭಿನ್ನ ರೀತಿಯಲ್ಲಿ ನಡೆದಿದ್ದು, ಇದರ ರೂಪುರೇಷೆಯ ಹೊಣೆ ಹೊತ್ತಿರುವುದು ಎಸ್ ಸ್ಟುಡಿಯೋಸ್. ಟ್ರೇಲರ್ ಮೂಲಕ ನೋಡುಗರ ತಲೆಗೆ ಹುಳು ಬಿಟ್ಟಿರುವ ಚಿತ್ರತಂಡ, ಅಕ್ಟೋಬರ್ 23ರಿಂದ ಪ್ರೇಕ್ಷಕರ ಮನದ ಕದ ಕೂಡಾ ತಟ್ಟೋ ಭರವಸೆಯಲ್ಲಿದೆ.

Visited 1 times, 1 visit(s) today
error: Content is protected !!