Cini NewsSandalwood

ನೈಜಫಟನೆ ಆಧಾರಿತ ”ಪ್ರೀತಿಯ ಹುಚ್ಚ” ಟ್ರೈಲರ್ ಬಿಡುಗಡೆ

Spread the love

ಕುಮಾರ್ ಮೂವೀಸ್ ಬ್ಯಾನರ್ ಅಡಿಯಲ್ಲಿ ವಿ.ಕುಮಾರ್ ಅವರ ನಿರ್ಮಾಣ ಹಾಗೂ ನಿರ್ದೇಶನದ ಅಲ್ಲದೆ ಬಿ.ಜಿ.ನಂದಕುಮಾರ್ ಅವರ ಸಹ ನಿರ್ಮಾಣವಿರುವ ‘ಪ್ರೀತಿಯ ಹುಚ್ಚ’ ಚಿತ್ರದ ಟ್ರೈಲರನ್ನು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ವಿ.ಕೃಷ್ಣೇಗೌಡ ಅವರು ಇತ್ತೀಚೆಗೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಟ್ರೈಲರ್ ಹಾಗೂ ಹಾಡುಗಳ ಪ್ರದರ್ಶನದ ನಂತರ ನಿರ್ಮಾಪಕ ನಂದಕುಮಾರ್ ಮಾತನಾಡುತ್ತ ಈ ಹಿಂದೆ ತುಂಬಾ ಸಿನಿಮಾ ಮಾಡಿ ಸುಮ್ಮನಾಗಿದ್ದೆ. ಕುಮಾರ್ ಬಂದು ಈ ಸಿನಿಮಾ ಬಗ್ಗೆ ಹೇಳಿದರು. ನಾನೂ ಚಿತ್ರ ನೋಡಿದಾಗ ವಿಶೇಷವಾಗಿದೆ ಎನಿಸಿತು. ಹಾಗಾಗಿ ರಿಲೀಸ್ ಮಾಡೋ ಜವಾಬ್ದಾರಿ ತೆಗೆದುಕೊಂಡೆ. ಚಿತ್ರಕ್ಕಾಗಿ ಕುಮಾರ್ ತುಂಬಾ ಕಷ್ಟಪಟ್ಟಿದ್ದಾರೆ.

ಅದನ್ನು ನಾನು ಕಣ್ಣಾರೆ ನೋಡಿದ್ದೇನೆ ಎಂದರು. ನಂತರ ಕುಮಾರ್ ಮಾತನಾಡುತ್ತ ಮುಂಬೈನಲ್ಲಿ ಹುಟ್ಟಿದ ಕಥೆಯಿದು,‌ ಕೊರೋನಾಗಿಂತ ಮುಂಚೆ ಈ ಕಥೆಯನ್ನು ಬಹಳಷ್ಟು ನಿರ್ಮಾಪಕರಿಗೆ ಹೇಳಿದೆ. ಟಿವಿ, ಡಬ್ಬಿಂಗ್ ರೈಟ್ಸ್ ಮಾಡಿಸಿಕೊಡಲು ನಾನು ಆಗಾಗ ಮುಂಬೈಗೆ ಹೋಗ್ತಿದ್ದೆ. ಅಲ್ಲಿ ಸ್ನೇಹಿತರ ಮೂಲಕ ವೃದ್ದೆಯೊಬ್ಬರ ಪರಿಚಯವಾಯ್ತು.

ಆಕೆ ಹೇಳಿದ ಒಂದು ಕಥೆ ಕೇಳಿ ನನಗೆ ಕಣ್ಣೀರು ಬಂತು. 90% ಅದೇ ಕಥೆ ಇಟ್ಟುಕೊಂಡು 10% ಸಿನಿಮ್ಯಾಟಿಕ್ ಆಗಿ‌ ಹೇಳಿದ್ದೇನೆ. 90ರ ಕಾಲಘಟ್ಟದಲ್ಲಿ ಅರಸೀಕೆರೆ ಶ್ರವಣಬೆಳಗೊಳದ ಮಧ್ಯೆ ನಡೆದಂಥ ನೈಜಘಟನೆಯಿದು. ದಲಿತ ಯುವತಿಯನ್ನು ಗೌಡ್ರ ಮನೆಯವರು ಹೇಗೆ ನಡೆಸಿಕೊಳ್ತಿದ್ದರು ಅಂತ ತೋರಿಸಿದ್ದೇನೆ. ಚಿತ್ರಕ್ಕಾಗಿ 56 ಜನ ನಾಯಕಿಯರು ಬಂದು ಹೋದರು. ಕೊನೆಯಲ್ಲಿ ಕುಂಕುಮ್ ಹರಿಹರ ಸೆಲೆಕ್ಟಾದರು ಎಂದು ವಿವರಿಸಿದರು.

ನಾಯಕ‌ ವಿಜಯ್, ನಾಯಕಿ ಕುಂಕುಮ್ ಹರಿಹರ, ದುಬೈ ರಫೀಕ್, ನಾಗರಾಜ್ ಎಲ್ಲರೂ ತಂತಮ್ಮ ಪಾತ್ರಗಳ ಕುರಿತು ಮಾತನಾಡಿದರು. ಸಂಗೀತ ನಿರ್ದೇಶಕ ತಶಿ ರಂಗರಾಜನ್ ಮಾತನಾಡಿ ಹೊಸತಂಡದ ಜತೆ ಕೆಲಸ ಮಾಡಿದ ಖುಷಿಯಿದೆ. ಚಿತ್ರದಲ್ಲಿ 2 ಹಾಡುಗಳಿದ್ದು, 80-90ರ ಸಂಗೀತವನ್ನು ರಿಕ್ರಿಯೇಟ್ ಮಾಡಿದ್ದೇವೆ. ವಯಲಿನ್ ಈ ಚಿತ್ರದ ಮತ್ತೊಬ್ಬ ನಾಯಕ, 20ರಿಂದ 30 ನಿಮಿಷ ವಯಲಿನ್ ಮ್ಯೂಸಿಕ್ ಇದೆ ಎಂದರು.

ಕನ್ನಡ, ತೆಲುಗು, ತಮಿಳು ಸೇರಿದಂತೆ ಐದು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಇದೇ ತಿಂಗಳಲ್ಲಿ ತೆರೆಕಾಣುತ್ತಿದೆ. ಮ್ಯೂಸಿಕಲ್ ಲವ್ ಸ್ಟೋರಿ ‌ಒಳಗೊಂಡ ಈ ಚಿತ್ರಕ್ಕೆ ಈ ಹಿಂದ ಗಾಯತ್ರಿ ಎಂಬ ಹಾರರ್ ಸಿನಿಮಾ ನಿರ್ದೇಶಿಸಿದ್ದ ವಿ.ಕುಮಾರ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ.‌

ಅಮಾಯಕ ಯುವತಿಯೊಬ್ಬಳ ದಾರುಣ ಕಥೆ ಇದಾಗಿದ್ದು, ಮದುವೆಯಾದ ಮೊದಲ ರಾತ್ರಿಯೇ ದುಷ್ಟರ ಜಾಲಕ್ಕೆ ಸಿಕ್ಕು ಮುಂಬೈನ ರೆಡ್‌ಲೈಟ್ ಏರಿಯಾಕ್ಕೆ ಮಾರಾಟವಾಗುವ ನಾಯಕಿಯ ಜೀವನ ಮುಂದೆ ಯಾವೆಲ್ಲ ತಿರುವು ಪಡೆದುಕೊಂಡಿತು, ಪ್ರೀತಿಸಿ ಮದುವೆಯಾದ ಪತ್ನಿಯನ್ನು ಕಳೆದುಕೊಂಡ ನಾಯಕ ಯಾವ ಸ್ಥಿತಿ ತಲುಪಿದ ಎಂದು ಪ್ರೀತಿಯ ಹುಚ್ಚಾ ಚಿತ್ರದಲ್ಲಿ ಹೇಳಲಾಗಿದೆ.

ಈ ಚಿತ್ರಕ್ಕೆ ಬೆಂಗಳೂರು. ಮಂಡ್ಯ, ಚಿಕ್ಕಮಗಳೂರು, ಹಾಸನ, ಶ್ರವಣಬೆಳಗೊಳ ಹಾಗೂ ಮುಂಬೈನ ಕಾಮಾಟಿಪುರದಲ್ಲಿ 65 ದಿನಗಳವರೆಗೆ ಚಿತ್ರೀಕರಣ ನಡೆಸಲಾಗಿದ್ದು, ಚಿತ್ರದಲ್ಲಿ ಸುಂಟಿಸ್ಟಾರ್ ವಿಜಯ್, ಕುಂಕುಮ್ ಹರಿಹರ ಅಲ್ಲದೆ ಐಟಂ ಡಾನ್ಸರ್ ಅಲಿಶಾ ಮುಂಬೈ ರೆಡ್ ಲೈಟ್ ಏರಿಯಾದ ಡಾನ್ ಆಗಿ ಕಾಣಿಸಿಕೊಂಡಿದ್ದಾರೆ.

ಉಳಿದಂತೆ ದಶಾವರ ಚಂದ್ರು, ದುಬೈ ರಫೀಕ್, ಉಮೇಶ್ ಪುಂಗ, ಅಲಿಶಾ, ಆರ್.ಚಂದ್ರು, ಪುಷ್ಪಲತಾ, ಜೋಗಿ ನಾಗರಾಜ್, ಪೂರ್ಣಿಮಾ, ವಿ.ಭಾಸ್ಕರರಾಜ್, ಮಹದೇವಸ್ವಾಮಿ. ಗೀತಾ, ಸುನಿತಾ, ಪ್ರಮೋದ್, ಮಹದೇವ, ಆನಂದ್ ಮುಂತಾದವರಿದ್ದಾರೆ. ಸುನಿಲ್ ಕೆ.ಆರ್‌.ಎಸ್. ಅವರ ಛಾಯಾಗ್ರಹಣ, ಸುಪ್ರೀಂ ಸುಬ್ಬು ಅವರ ಸಾಹಸ, ಪ್ರವೀಣ್ ವಿಷ್ಣು ಅವರ ಸಂಕಲನ ಈ ಚಿತ್ರಕ್ಕಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.

Visited 1 times, 1 visit(s) today
error: Content is protected !!