ಚಂಡೆ ಸೇವೆ ಹಿಂದಿರುವ ಕರಾಳ ಮುಖ “ಪೀಟರ್” (ಚಿತ್ರವಿಮರ್ಶೆ-ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಪೀಟರ್
ನಿರ್ದೇಶನ : ಸುಕೇಶ್ ಶೆಟ್ಟಿ
ನಿರ್ಮಾಪಕರು : ರವಿ ಹೀರೇಮಠ್, ರಾಕೇಶ್ ಹೆಗ್ಗಡೆ
ಸಂಗೀತ : ರಿತ್ವಿಕ್ ಮುರಳಿಧರ್
ಛಾಯಾಗ್ರಹಣ : ಗುರು ಪ್ರಸಾದ್ ನಾರ್ನಾಡ್
ತಾರಾಗಣ : ರಾಜೇಶ್ ಧ್ರುವಾ, ಜಾನ್ವಿ ರಾಯಲ , ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್ , ಪ್ರತಿಮಾ ನಾಯಕ್, ರಾಮನಾಡಗೌಡ, ವರುಣ್ ಪಟೇಲ್ , ಭರತ್, ದೀನಾ, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ ಹಾಗೂ ಮುಂತಾದವರು…
ಜೀವನವೇ ಒಂದು ಪಾಠವಿದ್ದಂತೆ. ನಮ್ಮ ನಡೆ-ನುಡಿ , ಸಂಸ್ಕೃತಿ , ಆಚಾರ ವಿಚಾರದೊಂದಿಗೆ ಸಾಗುವ ನಮ್ಮ ದಿನನಿತ್ಯದ ಪ್ರಯಾಣದಲ್ಲಿ ವಿಧಿಯ ಆಟ ಎದುರಾದಾಗ ನಮಗೆ ಅರಿವಿಗೆ ಬರೆದಂತೆ ಆಗುವ ಒಂದಷ್ಟು ಘಟನೆಗಳು ಬದುಕಿನ ದಿಕ್ಕನ್ನೇ ಬದಲಿಸುತ್ತಾ ಹೋಗುತ್ತದೆ. ಅಂತದ್ದೇ ಒಂದು ಸಂಬಂಧ , ಸ್ನೇಹ , ಪ್ರೀತಿ , ಮಮಕಾರ , ದ್ರೋಹ , ದ್ವೇಷದ ಸುಳಿಯಲ್ಲಿ ಬೆಸೆದುಕೊಂಡು ಕುತೂಹಲ ಮೂಡಿಸುತ್ತಾ ಸಾಗುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಪೀಟರ್”.
ಹೆಸರು ಪೀಟರ್ (ರಾಜೇಶ್ ಧ್ರುವಾ) ಆದರೆ ಹಿಂದೂ ಸಂಸ್ಕೃತಿ , ಆಚಾರ ವಿಚಾರದ ಬಗ್ಗೆ ಅಪಾರ ಪ್ರೀತಿ , ಗೌರವ. ದಟ್ಟ ಅರಣ್ಯದ ಕಾರ್ಮೋಡಗಳ ನಡುವೆ ಸುಂದರ ಪರಿಸರದಲ್ಲಿ ತಮ್ಮ ಗುರುಗಳಾದ ಕೊಂಜಟ್ಟ ಕಲಿಸಿದಂತಹ ಚಂಡೆ ಬಾರಿಸುವ ವಿದ್ಯೆಯನ್ನ ಕಲಿತ ಶಿಷ್ಯಂದಿರು , ದೇವರ ಮುಂದೆ ಬಾರಿಸುವ ಮೂಲಕ ತಮ್ಮ ಸೇವೆಯನ್ನ ಅರ್ಪಿಸುತ್ತಾ ಸಾಗುತ್ತಾರೆ. ಇಡೀ ತಂಡದ ಜವಾಬ್ದಾರಿಯನ್ನ ಪೀಟರ್ ವಹಿಸಿಕೊಂಡರು , ತನ್ನ ಆತ್ಮೀಯ ಗೆಳೆಯ ಶಂಭೂ(ರಾಮನಾಡಗೌಡ ) ಬಲಗೈ ಬಂಟನಂತಿರುತ್ತಾನೆ.
ಇನ್ನು ಇದೇ ಊರಿನ ಕಾಲೇಜಿನಲ್ಲಿ ವಿದ್ಯಾಭ್ಯಾಸಕ್ಕಾಗಿ ಬರುವ ಮೀರಾ ( ರವೀಕ್ಷಾ ಶೆಟ್ಟಿ) ಕಣ್ಣಿಗೆ ಪೀಟರ್ ಕಾಣುತ್ತಾನೆ. ಮುಂದೆ ಪರಿಚಯ ಸ್ನೇಹವಾಗಿ ಗಾಢವಾದ ಪ್ರೀತಿಯತ್ತ ತಿರುಗುತ್ತದೆ. ಆದರೆ ಪೀಟರ್ ಕುಟುಂಬದಲ್ಲಿ ಅನಾರೋಗ್ಯದ ತಾಯಿ ಮೇರಿ (ಪ್ರತಿಭಾ ನಾಯಕ್), ಕುಡುಕ ತಂದೆ ಜೋಸೆಫ್ (ರಾಧಾಕೃಷ್ಣ ಕುಂಬ್ಳೆ) , ಅಣ್ಣನ ಬದುಕಿನ ದುರಂತ ಘಟನೆ ಸದಾ ಕಾಡುತ್ತದೆ. ಇದೇ ಸಮಯಕ್ಕೆ ಪಕ್ಕದ ಮನೆ ಸೇರುವ ರಾಧ (ಜಾನ್ವಿ ರಾಯಲ) ಹಾಗೂ ಆಕೆಯ ಪುತ್ರ.
ಶಾಲೆಯಲ್ಲಿ ಪಿ ಟಿ ಟೀಚರ್ ಕೆಲಸ ಮಾಡುವ ರಾಧಾ ಮನಸ್ಸಿನಲ್ಲೂ ಒಂದು ಆತಂಕ , ದ್ವೇಷದ ಕಿಚ್ಚು ಕಾಡುತ್ತದೆ. ಅದೇ ರೀತಿ ಮನಸ್ಥಿತಿ ಸರಿಯಿಲ್ಲದ ಪೀಟರ್ ತಾಯಿಗೆ ರಾಧಾಳನ್ನು ಕಂಡಾಗಲ್ಲ ಜೆಸ್ಸಿ ನೋಡಿದಂತೆ ಭಾಸವಾಗಿ ಕೊಲ್ಲುವಷ್ಟು ಕೋಪ. ಗೊಂದಲದ ಗೂಡಾದಂತಹ ಪೀಟರ್ ಏನು ಮಾಡಬೇಕೆಂಬುದೇ ಯಕ್ಷಪ್ರಶ್ನೆಯಾಗುತ್ತದೆ. ಇದೆಲ್ಲದರ ಹಿಂದೆ ಒಂದಷ್ಟು ಫ್ಲಾಶ್ ಬ್ಯಾಕ್ ಘಟನೆಗಳು ಪೀಟರ್ ಬದುಕಿನಲ್ಲಿ ಆಟವಾಡುತ್ತಾ ಸಾಗುತ್ತದೆ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುವ ಮೀರಾ ಸಾವು… ಚಂಡೆ ವಿಚಾರದ ಕರಾಳ ಮುಖ…
ರಾಧಾಳ ದ್ವೇಷ… ಪೀಟರ್ ಎದುರಿಸುವ ಸಮಸ್ಯೆಗಳು…
ಹೀಗೆ ಒಂದಷ್ಟು ಸೂಕ್ಷ್ಮ ವಿಚಾರಗಳು ಕುತೂಹಲಕಾರಿಯಾಗಿ ಸಾಗಿ ಕ್ಲೈಮಾಕ್ಸ್ ಹೇಳುವ ಉತ್ತರ ಏನು… ಎಂಬುದನ್ನು ತಿಳಿಯಬೇಕಾದರೆ ಎಲ್ಲರೂ ಒಮ್ಮೆ ಈ ಪೀಟರ್ ಚಿತ್ರವನ್ನು ನೋಡಬೇಕು.

ಈ ಚಿತ್ರದ ನಿರ್ದೇಶಕ ಸುಕೇಶ್ ಶೆಟ್ಟಿ ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ಬಹಳ ವಿಭಿನ್ನವಾಗಿ ಮೂಡಿಬಂದಿದ್ದು , ನಂಬಿಕೆ ದ್ರೋಹದಿಂದ ಆಗುವ ಅನಾಹುತಗಳು ಏನೆಲ್ಲಾ ಸಮಸ್ಯೆಗಳನ್ನ ಎದುರಿಸುವಂತೆ ಮಾಡುತ್ತದೆ ಎಂಬು ಸೂಕ್ಷ್ಮವನ್ನ ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದು, ತಾಯಿ ಮಗನ ಬಾಂಧವ್ಯ , ಪ್ರೀತಿಯ ಸೆಳೆತ , ಗೆಳೆತನದ ಮುಖವಾಡ ಹೀಗೆ ಒಂದಷ್ಟು ಅಂಶಗಳು ಗಮನ ಸೆಳೆಯುತ್ತದೆ.
ಆದರೆ ಚಿತ್ರಕಥೆ ಇನ್ನಷ್ಟು ಬಿಗಿ ಮಾಡಬಹುದಿತ್ತು , ದ್ವಿತೀಯ ಭಾಗ ಹೆಚ್ಚು ಸೆಳೆಯುವಂತಿದೆ. ಆದರೂ ಪ್ರಯತ್ನ ಉತ್ತಮವಾಗಿದೆ. ಇನ್ನು ಇಂತಹ ಚಿತ್ರವನ್ನು ನಿರ್ಮಿಸಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು , ಹಾಗೆಯೇ ಚಿತ್ರದ ಹೈಲೈಟ್ ಸಂಗೀತ ಹಾಗೂ ಹಿನ್ನೆಲೆ ಸಂಗೀತ. ಇನ್ನೂ ಛಾಯಾಗ್ರಹಕಾರ ಕೈಚಳಕವು ಅದ್ಭುತವಾಗಿದೆ. ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಂತಿದೆ.
ಇನ್ನು ನಾಯಕನಾಗಿ ರಾಜೇಶ್ ಧ್ರುವಾ ಇಡೀ ಚಿತ್ರದ ಕೇಂದ್ರಬಿಂದುವಾಗಿ ಪಾತ್ರದಲ್ಲಿ ಜೀವಿಸಿದ್ದಾರೆ. ಪೀಟರ್ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸುವುದರ ಜೊತೆಗೆ ತಮ್ಮ ಸಾಮರ್ಥ್ಯವನ್ನು ತೆರೆದಿಟ್ಟಿದ್ದಾರೆ. ಮುಂದೆ ಉತ್ತಮ ಭವಿಷ್ಯವಿದೆ. ಇನ್ನು ಮುದ್ದು ಮುದ್ದಾಗಿ ಕಾಣುವ ರವೀಕ್ಷಾ ಶೆಟ್ಟಿ ಕೂಡ ಸಿಕ್ಕ ಅವಕಾಶಕ್ಕೆ ನ್ಯಾಯವನ್ನ ಒದಗಿಸಿ ಎಲ್ಲರ ಗಮನ ಸೆಳೆಯುವಂತೆ ನಟಿಸಿದ್ದಾರೆ.
ವಿಭಿನ್ನ ಶೇಡ್ ಗಳಲ್ಲಿ ಕಾಣಿಸಿಕೊಂಡಿರುವ ನಟಿ ಜಾನ್ವಿ ರಾಯಲ ಕೂಡ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ , ಪಾತ್ರದಲ್ಲಿ ಜೀವಿಸಿದ್ದಾರೆ. ಇನ್ನು ಮತ್ತೋರ್ವ ನಟ ರಾಮನಾಡಗೌಡ ವಿಭಿನ್ನ ಪಾತ್ರದ ಮೂಲಕ ಎಲ್ಲರ ನೆನಪಿನಲ್ಲಿ ಉಳಿಯುವಂತೆ ಅಭಿನಯಿಸಿದ್ದಾರೆ. ನಾಯಕನ ತಾಯಿಯ ಪಾತ್ರಧಾರಿ ಪ್ರತಿಭಾ ನಾಯಕ್ ಕೂಡ ಬಹಳ ಅದ್ಭುತವಾಗಿ ಪಾತ್ರದಲ್ಲಿ ಜೀವಿಸಿದ್ದು , ತಂದೆಯಾಗಿ ರಾಧಾಕೃಷ್ಣ ಕುಂಬ್ಳೆ , ಶಾಲಾ ಶಿಕ್ಷಕರಾಗಿ ರಘು ಪಾಂಡೇಶ್ವರ್ ಸೇರಿದಂತೆ ಒಂದಷ್ಟು ಪ್ರಮುಖ ಪಾತ್ರಗಳು ಕೂಡ ಈ ಚಿತ್ರದಲ್ಲಿ ಅದ್ಭುತವಾಗಿ ಅಭಿನಯಿಸಿದ್ದು , ಎಲ್ಲರ ಗಮನ ಸೆಳೆಯುವಂತೆ ಮಾಡಿದ್ದಾರೆ. ಒಟ್ಟಾರೆ ಸಸ್ಪೆನ್ಸ್ , ಥ್ರಿಲ್ಲರ್, ಫ್ಯಾಮಿಲಿ ಕಂಟೆಂಟ್ ಇರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.