ಇದೇ 06ರಂದು ಜಾಗೃತಿ ಮೂಡಿಸುವ “ಪಂಚ ರತ್ನಗಳು” ಚಿತ್ರ ಬಿಡುಗಡೆ.
ಬೆಳ್ಳಿ ಪರದೆ ಮೇಲೆ ಮಕ್ಕಳ ಮೂಲಕ ಒಂದು ಅರ್ಥಪೂರ್ಣ ಸಂದೇಶವನ್ನು ಸಾರುವಂತ ಚಿತ್ರವಾಗಿ “ಪಂಚ ರತ್ನಗಳು” ತೆರೆಯ ಮೇಲೆ ಈ ವಾರ ಬರುತ್ತಿದೆ. *ಮಕ್ಕಳು ಮನಸ್ಸು ಮಾಡಿದರೆ ಏನನ್ನಾದರೂ ಮಾಡಬಲ್ಲರು* ಇದು ಇಡೀ ಚಿತ್ರದ ಮೂಲ ಕಥಾನಕವಾಗಿದ್ದು , ಈ ಮಕ್ಕಳ ಚಿತ್ರ *’ಪಂಚ ರತ್ನಗಳು’* ಚಿತ್ರದ ಟ್ರೇಲರ್ ಮತ್ತು ಹಾಡುಗಳ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ನಡೆಯಿತು. ಪ್ರದರ್ಶಕ ಮತ್ತು ವಿತರಕರಾಗಿರುವ ಜಿ.ಆರ್.ನಾರಾಯಣ ಗೌಡ ತಮ್ಮ ಶ್ರೀ ಕ್ಯಾಲಮ್ಮ ದೇವಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೊದಲ ಬಾರಿಗೆ ನಿರ್ಮಾಣ ಮಾಡಿದ್ದಾರೆ.

ಈಗಾಗಲೇ ಒಂದಷ್ಟು ಚಿತ್ರಗಳಲ್ಲಿ ನಟನೆ ಮಾಡಿರುವ ಮೈಸೂರು ಮೂಲದ ಗಾಯಕ *ಗೌತಮ್.ಆರ್ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ಮೂರು ಹಾಡುಗಳಿಗೆ ಸಾಹಿತ್ಯ ಬರೆದು ಎರಡನೇ ಬಾರಿ ನಿರ್ದೇಶನದ* ಜವಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಚಿಣ್ಣರುಗಳಾದ ಪ್ರಥಮ್, ಯಶಸ್, ವಿಹಾನ್, ತನ್ವಿ, ಆಧ್ಯ ಪ್ರಥಮ್, ತಾಯಿಯಾಗಿ ಬಿಂದೂ ಆಚಾರ್ಯ, ಶಿಕ್ಷಣ ಸಚಿವರಾಗಿ ಆನಂದ್ ನಗರ್ಕರ್ ಮುಂತಾದವರು ಅಭಿನಯಿಸಿದ್ದಾರೆ.
ಸಂಗೀತ ಪ್ರಣವ್, ಛಾಯಾಗ್ರಹಣ ಅನಿಲ್ ಕಶ್ಯಪ್, ಸಂಕಲನ ಅಭಿಷೇಕ್, ಸಿಂಕ್ ಸೌಂಡ್ ಅಜಿತ್, ಪೋಸ್ಟ್ ಪ್ರೊಡಕ್ಷನ್ ಕ್ರಿಷ್ ಸ್ಟುಡಿಯೋಸ್ ಅವರದಾಗಿದೆ. ವೆಂಕಟ್‌ಗೌಡ ಸಾರಥ್ಯದಲ್ಲಿ ಸುಮಾರು 60 ಕೇಂದ್ರಗಳಲ್ಲಿ ಸಿನಿಮಾವು ಸದ್ಯದಲ್ಲೇ ತೆರೆಗೆ ಬರಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕರು, ಇಂದಿನ ಸಮಾಜದ ದೈನಂದಿಕ ಸಮಸ್ಯೆಗಳನ್ನು ದೊಡ್ಡವರು ಗಮನಕ್ಕೆ ತೆಗೆದುಕೊಳ್ಳದೆ ಇರುವುದರಿಂದ ವಿಷಯವು ಸರ್ಕಾರಕ್ಕೆ ತಲುಪದೆ ಇರುವುದರಿಂದ ಯಾರನ್ನು ದೂರುವುದರಿಂದ ಪ್ರಯೋಜನವಿಲ್ಲ. ಇದನ್ನು ಅರಿತ ಐದು ಮಕ್ಕಳು ನಾವೇ ಮುಂದಾಗಿ ಏಕೆ ಸರಿಪಡಿಸಬಾರದು ಅಂತ ತೀರ್ಮಾನಕ್ಕೆ ಬರುತ್ತಾರೆ. ಪ್ರಾರಂಭದಲ್ಲಿ ’ಪಂಚ ಭೂತಗಳು’ ಹೆಸರು ಇಡಲಾಗಿತ್ತು. ವಿತರಕ ವೆಂಕಟ್‌ಗೌಡ ಶೀರ್ಷಿಕೆ ನಕರಾತ್ಮಕ ಸಂದೇಶ ಸಾರುವುದರಿಂದ ’ಪಂಚ ರತ್ನಗಳು’ ಸೂಕ್ತವಾಗಿದೆ ಎಂದು ಸಲಹೆ ನೀಡಿದ್ದರಿಂದ ಅದನ್ನೆ ಇಡಲಾಯಿತು. ಪ್ರಕೃತಿಯ ಅಂಶಗಳಾದ ಭೂಮಿ, ನೀರು, ಬೆಂಕಿ, ಗಾಳಿ, ಆಕಾಶ ಇವುಗಳನ್ನು ಭುವನ್, ಜೀವಿತ, ಜ್ಯೋತಿ, ಅನಿಲ್ ಹಾಗೂ ಆಕಾಶ್ ಪಾತ್ರದ ಹೆಸರಿನಲ್ಲಿ ಬಿಂಬಿಸಲಾಗಿದೆ. ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ ಎಂಬುದರ ಮಾಹಿತಿಯನ್ನು ಗೌತಮ್.ಆರ್ ತೆರೆದಿಟ್ಟರು.

ಹಾಗೆಯೇ ಚಿತ್ರದ ನಿರ್ಮಾಪಕರಾದ ಜಿ. ಆರ್. ನಾರಾಯಣಗೌಡ ಮಾತನಾಡುತ್ತಾ ಇದು ನನ್ನ ಮೊದಲ ನಿರ್ಮಾಣದ ಚಿತ್ರ. ಕಥೆ ಬಹಳ ಉತ್ತಮವಾಗಿದೆ ಹಾಗಾಗಿ ನಿರ್ಮಾಣ ಮಾಡಿದೆ. ಸಮಾಜಕ್ಕೆ ಸಂದೇಶ ಸಾರುವಂತ ಉತ್ತಮ ಚಿತ್ರಗಳು ಬಂದರೆ ಖಂಡಿತ ನಿರ್ಮಾಣ ಮಾಡುತ್ತೇನೆ. ಇವತ್ತಿನ ಚಿತ್ರರಂಗದ ಪರಿಸ್ಥಿತಿ ಎಲ್ಲರಿಗೂ ತಿಳಿದಿದೆ. ಒಳ್ಳೆ ಚಿತ್ರಗಳಿಗೆ ಎಲ್ಲರ ಬೆಂಬಲ ಬೇಕು ಎಂದು ಕೇಳಿಕೊಂಡರು.

ಅದೇ ರೀತಿ ವಿತರಕ ವೆಂಕಟ್ ಗೌಡ ಮಾತನಾಡಿ ನಾನು ಬಹುತೇಕ ಅರ್ಥಪೂರ್ಣ , ಸಂದೇಶವಿರುವಂತಹ ಚಿತ್ರಗಳನ್ನು ಇತ್ತೀಚಿನ ದಿನಗಳಲ್ಲಿ ಬಿಡುಗಡೆ ಮಾಡುತ್ತಿದ್ದೇನೆ. ಈ ಚಿತ್ರವು ಖಂಡಿತ ಎಲ್ಲರ ಮನಸ್ಸನ್ನು ಗೆಲ್ಲುತ್ತೆ , ಇಂತಹ ಚಿತ್ರಕ್ಕೆ ಎಲ್ಲರೂ ಸಹಕಾರ ಅತ್ಯಗತ್ಯ ಎಂದು ಕೇಳಿಕೊಂಡರು. ಉಳಿದಂತೆ ಕಲಾವಿದರು ಹಾಗೂ ಮಕ್ಕಳು ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.ಇದೇ 06ರಂದು ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.