Cini NewsMovie ReviewSandalwood

ಮಿಡ್ಲ್ ಕ್ಲಾಸ್ ಬದುಕಿನ ಆಸೆ , ಕನಸುಗಳ ನೋವು ನಲಿವು “ನಾನು ಕರುಣಾಕರ” (ಚಿತ್ರವಿಮರ್ಶೆ-ರೇಟಿಂಗ್ : 3.5/5)

Spread the love

ರೇಟಿಂಗ್ : 3.5/5
ಚಿತ್ರ : ನಾನು ಕರುಣಾಕರ
ನಿರ್ದೇಶಕ : ಆರ್ಯನ್ ತೇಜಸ್
ನಿರ್ಮಾಪಕರು : ನಮನ್ ನಾರಾಯಣ್ , ವೈಭವ್ ಸುರೇಶ್
ಸಂಗೀತ : ರೋಹಿತ್ ಸೋವರ್
ಛಾಯಾಗ್ರಹಣ : ವಿಜಯ್ ರಾಮ್ ಕುಮಾರ್
ತಾರಾಗಣ : ಆರ್ಯನ್ ತೇಜಸ್, ರಾಧಾ ಭಗವತಿ , ಭವಿಷ್ ಗೌಡ , ಕರಿಸುಬ್ಬು , ಅಪೂರ್ವ ಶ್ರೀ , ಬಿ ಎಂ ವೆಂಕಟೇಶ್ , ಲೊಕೇಶನ್ ಕಾಮಿಡಿ ಕಿಲಾಡಿ, ಎಂ. ಕೆ. ಮಠ ಹಾಗೂ ಮುಂತಾದವರು…

 

ಜೀವನವೇ ಒಂದು ಪಾಠ , ಬದುಕಿನಲ್ಲಿ ಆಸೆ , ಆಕಾಂಕ್ಷೆ , ಕನಸು , ಗುರಿ , ಛಲ , ವಿಶ್ವಾಸ ಇದ್ದರೆ ಖಂಡಿತ ನಾವು ಸಾಗುವ ದಾರಿಯಲ್ಲಿ ಎಷ್ಟೇ ಕಲ್ಲು ಮುಳ್ಳು ಇದ್ದರೂ ಸಹ ಅದನ್ನ ಭೇದಿಸಿ ಸಾಗಿದಾಗ ಸಿಹಿ ಸಿಗುವ ಸಾಧ್ಯತೆ ಹೆಚ್ಚಿರುತ್ತದೆ. ಅಂತದ್ದೇ ಒಂದು ಮಧ್ಯಮ ವರ್ಗದ ಕುಟುಂಬದ ಪ್ರೀತಿ , ಹೊಂದಾಣಿಕೆ , ಸುಖ , ದುಃಖ , ಬದುಕಿನ ಗುರಿಯ ನಡುವೆ ಅಪ್ಪ-ಮಗನ ಬಾಂದವ್ಯದ ನಂಟು , ಗಂಡ ಹೆಂಡತಿಯ ಪ್ರೀತಿಯ ಬೆಸುಗೆಯ ಜೊತೆ ಸಿನಿಮಾ ನಿರ್ದೇಶಕನಾಗಿಬೇಕೆಂಬುವನ ಜೀವನದಲ್ಲಿ ವಿಧಿಯ ಆಟದ ಸೂಕ್ಷ್ಮತೆಯನ್ನು ಬಹಳ ಮನಮುಟ್ಟುವಂತೆ ಕೌಟುಂಬಿಕವಾಗಿ ಕಟ್ಟಿಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ನಾನು ಕರುಣಾಕರ”.

ತಾನೊಬ್ಬ ದೊಡ್ಡ ನಿರ್ದೇಶಕನಾಗಬೇಕೆಂದು ನಿರ್ಧರಿಸಿ ಹಲವಾರು ಜೊತೆ ಕೆಲಸ ಕಲಿತು ತಾನೇ ಕಥೆಯನ್ನು ಮಾಡಿಕೊಂಡು ನಿರ್ಮಾಪಕರಿಗಾಗಿ ಹುಡುಕಾಡುವ ವ್ಯಕ್ತಿ ಕರ್ಣ (ಆರ್ಯನ್ ತೇಜಸ್). ಬಾಡಿಗೆ ಮನೆಯಲ್ಲಿ ಪತ್ನಿ ಮಮತಾ (ರಾಧಾ ಭಗವತಿ) ಮಗ ಅಪ್ಪು (ಭವಿಷ್ ಗೌಡ) ಜೊತೆ ತನ್ನದೇ ಸುಂದರ ಪ್ರಪಂಚದಲ್ಲಿ ಲೆಕ್ಕಾಚಾರದ ಬದುಕಿನ ನಡುವೆ ಕಷ್ಟವನ್ನ ಹೊರಹಾಕದೆ ನಗುತ್ತಾ ಬಾಳು ನಡೆಸುವ ಕುಟುಂಬ. ಶೂಟಿಂಗ್ ಇದ್ದಾಗ ಸಿನಿಮಾ ಕುಟುಂಬದವರ ಬದುಕು ಚೆನ್ನ , ಇಲ್ಲದಿದ್ದರೆ ಅವರ ಬದುಕು ಎಷ್ಟು ಕಷ್ಟ ಎನ್ನುವ ಹಿರಿಯ ವ್ಯಕ್ತಿ (ಕರಿಸುಬ್ಬು) ತನ್ನ ಪೇಂಟಿಂಗ್ ವೃತ್ತಿಯೇ ನನ್ನ ಆಧಾರ, ನಾನು ನೆಮ್ಮದಿಯಾಗಿದ್ದೇನೆ ನೀನು ಈ ಕೆಲಸಕ್ಕೆ ಬಾ ಎಂದು ಕರ್ಣ ನನ್ನ ಕರೆಯುತ್ತಾನೆ. ಆದರೆ ತನ್ನ ಕನಸು , ಆಸೆ , ಎಲ್ಲವೂ ನಿರ್ದೇಶಕನಾಗಬೇಕೆಂದು ಎಂದು ಹೇಳುವ ಕರ್ಣ ಸಮಸ್ಯೆ ಬಂದಾಗ ಪೈಂಟ್ ಕೆಲಸಕ್ಕೂ ಹೋಗುತ್ತಾನೆ.

ಇನ್ನು ಬಡತನದಲ್ಲೂ ಸುಖವನ್ನು ಹುಡುಕುತ್ತಾ ಸಾಗುವ ಮಧುಮತಿ ಗಂಡನಿಗೆ ಬೆನ್ನೆಲುಬಾಗಿ ನಿಲ್ಲುತ್ತಾಳೆ. ಇನ್ನು ಮುದ್ದು ಮಗ ಅಪ್ಪು ತಂದೆಗೆ ಒಂದೊಂದೇ ಬೇಡಿಕೆಯನ್ನು ಕೇಳುತ್ತಾನೆ. ಕರ್ಣ ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಾ ಹೋಗುತ್ತಾನೆ. ಒಮ್ಮೆ ಅಪ್ಪು ಶೋರೂಮಿನ ಐವತ್ತು ಸಾವಿರದ ಓಡಿಸುವ ಟಾಯ್ ಕಾರ್ ಕೇಳುತ್ತಾನೆ. ಒಂದು ಕಡೆ ತನ್ನ ನಿರ್ದೇಶಕನ ಕನಸು , ಮತ್ತೊಂದು ಕಡೆ ಮಗನ ಆಸೆ ಪೂರೈಸಲು ತಂದೆಯ ಪರದಾಟ , ಅದಕ್ಕೆ ತಾಯಿ ಪಡುವ ಸಂಕಟದ ನಡುವೆ ಮಗನ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಕಾರ್ ಗಿಫ್ಟ್ ನೀಡಲು ಎದುರಾಗುವ ಸಂಕಷ್ಟಗಳನ್ನು ಎದುರಿಸುವ ರೀತಿ ಮನ ಮಿಡಿಯುವಂತಿದೆ. ಮಗನ ಆಸೆ ಪೂರೈಸುತ್ತಾನಾ… ನಾನು ನಿರ್ದೇಶಕ ಆಗುತ್ತಾನಾ… ತನ್ನ ಹೆಂಡತಿ ಆಸೆ ಕೈಗೂಡುತ್ತಾ… ಕ್ಲೈಮಸ್ ಉತ್ತರ ಏನು… ಇದಕ್ಕಾಗಿ ಎಲ್ಲರೂ ಚಿತ್ರವನ್ನು ನೋಡಲೇಬೇಕು.

ಮಧ್ಯಮ ವರ್ಗದ ಕುಟುಂಬದ ಬದುಕಿನ ಜೊತೆಗೆ ಒಬ್ಬ ನಿರ್ದೇಶಕ ತನ್ನ ಕನಸನ್ನ ನನಸು ಮಾಡಿಕೊಳ್ಳಲು ಇಷ್ಟೆಲ್ಲಾ ಕಷ್ಟವನ್ನು ಎದುರಿಸುತ್ತಾನೆ ಎಂಬುದನ್ನು ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ. ಒಂದಷ್ಟು ಸನ್ನಿವೇಶಗಳು ಪ್ರತಿಯೊಬ್ಬರ ಜೀವನದಲ್ಲೂ ನಡೆದಂತಹ ಘಟನೆಗಳನ್ನು ನೆನಪಿಸುವಂತಿದೆ. ತಂದೆ ಮಗನ ಬಾಂಧವ್ಯದ ಸನ್ನಿವೇಶ ಮನ ಸೆಳೆಯುತ್ತದೆ. ಒಳ್ಳೆಯ ಪ್ರಯತ್ನವಾಗಿದ್ದು , ಚಿತ್ರಕಥೆಯಲ್ಲಿ ಮತ್ತಷ್ಟು ಏರಿಳಿತವನ್ನು ಮಾಡಬಹುದಿತ್ತು.

ಇಂತಹ ಉತ್ತಮ ಚಿತ್ರಕ್ಕೆ ಹಣ ಹಾಕಿರುವ ನಿರ್ಮಾಪಕರ ಧೈರ್ಯವನ್ನು ಕೂಡ ಮೆಚ್ಚಲೇಬೇಕು. ಸಂಗೀತ ಹಾಗೂ ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿ ಬಂದಿದ್ದು , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡದ ಕೆಲಸ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಇನ್ನು ನಿರ್ದೇಶನದ ಜೊತೆ ನಾಯಕನಾಗಿ ಅಭಿನಯಿಸಿರುವ ಆರ್ಯನ್ ತೇಜಸ್ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿ , ತಮ್ಮ ಸಾಮರ್ಥ್ಯವನ್ನು ಹೊರಹಾಕಿದ್ದಾರೆ. ಇನ್ನು ನಟಿ ರಾಧಾ ಭಗವತಿ ಕೂಡ ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಿದ್ದು , ಸನ್ನಿವೇಶಗಳಲ್ಲಿ ಹೇಳುವಂತೆ ಕೊಂಚ ಪಾತ್ರಕ್ಕಿಂತ ಹೆಚ್ಚು ಅಭಿನಯವನ್ನೇ ನೀಡಿದ್ದಾರೆ. ಆದರೂ ಎಲ್ಲರ ಗಮನವನ್ನು ಸೆಳೆದಿದ್ದಾರೆ.

ಅದೇ ರೀತಿ ಬಾಲ ನಟ ಭವಿಷ್ ಗೌಡ ಕೂಡ ಮುದ್ದು ಮುದ್ದಾಗಿ ಅಭಿನಯದ ಮಾಡಿದ್ದಾರೆ. ಇನ್ನು ಪೈಂಟರ್ ಪಾತ್ರದಲ್ಲಿ ಕರಿಸುಬ್ಬು ಸಂದರ್ಭಕ್ಕೆ ಅನುಗುಣವಾಗಿ ಬಂದು ಜೀವ ತುಂಬಿದ್ದಾರೆ. ಇನ್ನು ಪ್ರಮುಖ ಪಾತ್ರ ಒಂದರಲ್ಲಿ ಬಿ.ಎಮ್. ವೆಂಕಟೇಶ್ ಕೂಡ ಬಹಳ ಅದ್ಭುತವಾಗಿ ಗಮನ ಸೆಳೆಯುತ್ತಾರೆ ಉಳಿದಂತೆ ಅಭಿನಯಿಸಿರುವ ಅಪೂರ್ವ ಶ್ರೀ , ಎಂಕೆ ಮಠ , ಲೋಕೇಶ್ ಹಾಗೂ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಒಟ್ಟಾರೆ ಇಡೀ ಕುಟುಂಬ ಕುಳಿತು ನೋಡಬಹುದಾದ ಉತ್ತಮ ಚಿತ್ರ ಇದಾಗಿದೆ.

Visited 1 times, 1 visit(s) today
error: Content is protected !!