ಸಸ್ಪೆನ್ಸ್ , ಕ್ರೈಂ , ಥ್ರಿಲ್ಲರ್ ನ ನಿಗೂಢ ಜಾಡು “ಮಾಯಾವಿ” (ಚಿತ್ರವಿಮರ್ಶೆ)
ಚಿತ್ರ : ಮಾಯಾವಿ
ನಿರ್ದೇಶಕ : ಶಂಕರ್ ಜಿ.
ನಿರ್ಮಾಪಕ : ಡಾ. ಹೆಚ್. ಮಹಂತೇಶ್
ಸಂಗೀತ : ಅಗಸ್ತ್ಯ ಸಂತೋಷ್
ಛಾಯಾಗ್ರಹಣ : ಗುರುದತ್ ಮುಸರಿ
ತಾರಾಗಣ: ರಘುರಾಮ್, ನಿಶ್ಚಿತಾ ಶೆಟ್ಟಿ , ಎಂ. ಕೆ. ಮಠ, ಸುರೇಶ ಬಾಬು, ಸೂರ್ಯ ಪ್ರವೀಣ್, ಅನುರಾಧಾ, ಶಿಲ್ಪಾ , ಖುಷಿ ಗೌಡ ಹಾಗೂ ಮುಂತಾದವರು…
ಬದುಕಿನಲ್ಲಿ ನಂಬಿಕೆ , ಗುರಿ , ಆಸಕ್ತಿ ಇದ್ದರೆ ಖಂಡಿತ ನಾವು ಸಾಗುವ ಹಾದಿಯಲ್ಲಿ ಏನೇ ಎಡರು ತೊಡರುಗಳು ಬಂದರೂ ಅದನ್ನು ಎದುರಿಸಿ ನಿಲ್ಲುವಂತಹ ಶಕ್ತಿ ಸಿಕ್ಕೆ ಸಿಗುತ್ತದೆ. ಅಂತದ್ದೇ ಒಬ್ಬ ಗ್ರಾಮೀಣ ಪ್ರತಿಭೆ ಪಟ್ಟಣಕ್ಕೆ ಬಂದು ಕೆಲಸ ಪಡೆದು , ಬದುಕು ಕಟ್ಟಿಕೊಳ್ಳುವ ಜೊತೆಗೆ ತನ್ನ ತಂತ್ರಜ್ಞಾನ ಆವಿಷ್ಕಾರದ ಮೂಲಕ ಸಮಾಜಕ್ಕೆ ಏನಾದರೂ ಕೊಡಬೇಕೆಂಬ ಎನ್ನುವಷ್ಟರಲ್ಲಿ ಎದುರಾಗುವ ಒಂದಷ್ಟು ಘಟನೆಗಳು ಬೇರೆದೆ ದಾರಿಯನ್ನ ತೋರುತ್ತಾ ಸಾಗುವ ವಿಭಿನ್ನ ಕಥಾಹಂದರದ ಸಸ್ಪೆನ್ಸ್ , ಕ್ರೈಂ ಚಿತ್ರವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರವೇ “ಮಾಯಾವಿ”.
ಗ್ರಾಮೀಣ ಪ್ರದೇಶದ ಪ್ರತಿಭಾವಂತ ಯುವಕ ರಘು ಚೆನ್ನಾಗಿ ಓದಿ, ಬಳಿಕ ಹೊಟ್ಟೆಪಾಡಿಗಾಗಿ ಊರು, ಹೆತ್ತವರು, ಒಡ ಹುಟ್ಟಿದವಳನ್ನು ಬಿಟ್ಟು ಬೆಂಗಳೂರಿಗೆ ಬಂದು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾನೆ. ಇಂಜಿನಿಯರಿಂಗ್ ಮುಗಿಸಿ, ತಂತ್ರಜ್ಞಾನದ ಕೌಶಲ್ಯ ಹೊಂದಿರುವ ರಘುವಿಗೆ ಏನಾದರೂ ಹೊಸ ತಂತ್ರಜ್ಞಾನ ಆವಿಷ್ಕಾರದ ಮೂಲಕ ಸಮಾಜಕ್ಕೆ ಏನಾದರೂ ಕೊಡಬೇಕು ಎನ್ನುತ್ತಾ , ಮಹಿಳೆಯರ ಮೇಲಿನ ದೌರ್ಜನ್ಯವನ್ನು ಹತ್ತಿರದಿಂದ ನೋಡಿದಂತಹ ರಘು ಅವರ ಆತ್ಮ ರಕ್ಷಣೆಗೆ ನೆರವಾಗುವಂತಹ ಆಪ್ ಅನ್ನು ಕಂಡು ಹಿಡಿಯುವ ಮೂಲಕ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಅನುಕೂಲವಾಗುವಂತಹ ಕಾರ್ಯಕ್ಕೆ ಮುಂದಾಗುತ್ತಾನೆ.
ಇನ್ನೇನು ಮಹಿಳೆಯರ ರಕ್ಷಣೆಗಾಗಿ ರಘು ರೂಪಿಸಿದ ಮೊಬೈಲ್ ಆ್ಯಪ್ ಎಲ್ಲಾ ಮಹಿಳೆಯರ ಮೊಬೈಲ್ ಪೋನ್ ಗಳಲ್ಲಿ ಅಳವಡಿಸಲು ಕಾರ್ಯನಿರ್ವಹಿಸುವ ಹೊತ್ತಿಗೆ, ಮೆಡಿಕಲ್ ಓದುತ್ತಿರುವ ರಘುವಿನ ತಂಗಿ ಮಾಯಾ ನಿಗೂಢವಾಗಿ ಸಾವಿಗೀಡಾಗುತ್ತಾಳೆ.
ಇದರಿಂದ ಕಂಗಾಲಾಗುವ ರಘು ತನ್ನ ತಂಗಿ ಮಾಯಾಳ ನಿಗೂಢ ಸಾವಿನ ರಹಸ್ಯವನ್ನು ಬೇಧಿಸಲು ತಾನು ರೂಪಿಸಿದ ಮೊಬೈಲ್ ಆ್ಯಪ್ ಮೂಲಕ ತನ್ನ ತಂಗಿಯ ಸಾವಿನ ಬಗ್ಗೆ ಒಂದಷ್ಟು ವಿಷಯಗಳು ಗೊತ್ತಾಗುತ್ತ ಹೋಗುತ್ತದೆ. ಇದರ ಹಿಂದಿರುವ ರಹಸ್ಯ ಏನು… ಮಾಯಾಳ ಸಾವಿನ ಏನು ಕಾರಣ…. ರಹಸ್ಯವನ್ನು ರಘು ಹೇಗೆ ಕಂಡುಹಿಡಿಯುತ್ತಾನೆ… ತಂತ್ರಜ್ಞಾನದ ಬಲೆಯ ನಿಗೂಢ ಆಟ ಹೇಗಿರುತ್ತದೆ… ಎಂಬುದನ್ನು ನೀವು ತಿಳಿಬೇಕಾದರೆ ಮಾಯಾವಿ ಚಿತ್ರವನ್ನು ಒಮ್ಮೆ ನೋಡಬೇಕು.
ಇನ್ನು ನಿರ್ದೇಶಕ ಶಂಕರ್ ಜಿ. ಒಂದು ಸಸ್ಪೆನ್ಸ್ ಕ್ರೈಂ , ಥ್ರಿಲ್ಲರ್ ಕಥಾನಕವನ್ನು ಕುತೂಹಲಕಾರಿಯಾಗಿ ತೆರೆಯ ಮೇಲೆ ತಂದಿದ್ದು, ಮಹಿಳೆಯರ ಮೇಲಿನ ದೌರ್ಜನ್ಯ , ಮೊಬೈಲ್ ತಂತ್ರಜ್ಞಾನದ ಮೂಲಕ ಅದನ್ನು ತಡೆಯುವ ಪ್ರಯತ್ನ, ಅದೆಲ್ಲವನ್ನು ಒಂದು ನಿಗೂಢ ಕೊಲೆಯ ಸುತ್ತ ಚಿತ್ರದಲ್ಲಿ ಹೇಳುವ ಪ್ರಯತ್ನ ವಿಭಿನ್ನವಾಗಿದೆ. ಪ್ರಸ್ತುತ ಕಾಲಘಟ್ಟಕ್ಕೆ ಕನೆಕ್ಟ್ ಆಗುವಂತಿದ್ದರೂ, ಮತ್ತಷ್ಟು ಪರಿಣಾಮಕಾರಿಯಾಗಿ ಪ್ರೇಕ್ಷಕರ ಮುಂದಿಡುವ ಪ್ರಯತ್ನ ಮಾಡಬಹುದಿತ್ತು.
ಚಿತ್ರಕಥೆ ಇನ್ನಷ್ಟು ವೇಗ , ಚುರುಕು ಮಾಡಿದರೆ ಹೆಚ್ಚು ಗಮನ ಸೆಳೆಯುತ್ತಿತ್ತು. ಒಂದು ಉತ್ತಮ ಚಿತ್ರ ನೀಡಲು ಮುಂದಾದ ನಿರ್ಮಾಪಕರ ಧೈರ್ಯ ಮೆಚ್ಚಲೇಬೇಕು. ಸಂಗೀತ ಗಮನ ಸೆಳೆದಿದ್ದು , ಗಾಯಕ ವಿಜಯ ಪ್ರಕಾಶ್ ಧ್ವನಿಯಾಗಿರುವ ‘ಆವರಿಸು…’ ಹಾಡು ಗುನುಗುಡುವಂತಿದೆ. ಛಾಯಾಗ್ರಹಕರ ಕೈಚಳಕ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಂತಿದೆ. ಇನ್ನು ಯುವ ನಟ ರಘುರಾಮ್ ನಾಯಕನಾಗಿ ಉತ್ತಮ ಅಭಿನಯ ನೀಡಿದ್ದಾರೆ. ನಿಶ್ಚಿತಾ ಶೆಟ್ಟಿ ನಾಯಕಿಯ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಉಳಿದಂತೆ ಎಂ. ಕೆ. ಮಠ, ಸುರೇಶ ಬಾಬು, ಸೂರ್ಯ ಪ್ರವೀಣ್, ಅನುರಾಧಾ, ಶಿಲ್ಪಾ, ಖುಷಿ ಗೌಡ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದ್ದಾರೆ. ಒಟ್ಟಾರೆ ಒಂದೊಳ್ಳೆ ಪ್ರಯತ್ನದ ರೂಪವಾಗಿ ಹೊರಬಂದಿರುವ ಈ ಮಾಯವಿ ಚಿತ್ರವನ್ನು ಎಲ್ಲರೂ ಒಮ್ಮೆ ನೋಡಬಹುದು.