*ಸತತ 12 ಗಂಟೆಗಳಲ್ಲಿ ಹೊಸ ದಾಖಲೆ ಬರೆದ ಮಾನಸ ಹೊಳ್ಳ.*
ಗಾಯಕಿ, ಸಂಗೀತ ಸಂಯೋಜಕಿ ಮಾನಸ ಹೊಳ್ಳ ಅವರು ಸತತ 12 ಗಂಟೆಗಳ ಕಾಲ ಒಂದೇ ವೇದಿಕೆಯಲ್ಲಿ ಲೆಜೆಂಡರಿ ಎಸ್. ಜಾನಕಿ ಅವರ ಹಾಡುಗಳನ್ನು ಹಾಡುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.
ಕೋಣನ ಕುಂಟೆಯ ಪ್ರೆಸ್ಟೀಜ್ ಖೋಡೆ ಸೆಂಟರ್ ಫಾರ್ ಪರ್ ಫಾರ್ಮಿಂಗ್ ಆರ್ಟ್ಸ್ ನಲ್ಲಿ ನಡೆದ ‘ಮನಸಗಾನ ಜಾನಕಿಧ್ಯಾನ’ ಸಂಗೀತ ಕಾರ್ಯಕ್ರಮವನ್ನು ವಿನಯ್ ಗುರೂಜಿ, ಹೇಮಾ ಪ್ರಸಾದ್, ಸ್ಟೀಫನ್ ಪ್ರಯಾಗ್, ವಕೀಲ ನಾರಾಯಣ ಸ್ವಾಮಿ ಅವರು ಉದ್ಘಾಟಿಸಿದರು.
ವೇದಿಕೆಯಲ್ಲಿ ತಬಲಾವಾದಕ ವೇಣುಗೋಪಾಲ ರಾಜ್ ಅವರ ನೇತೃತ್ವದ 25 ಸಂಗೀತಗಾರರ ಜತೆ, ಎಸ್. ಜಾನಕಿ ಅವರು ಹಾಡಿದ 87 ಜನಪ್ರಿಯ ಗೀತೆಗಳನ್ನು ದಣಿವಿಲ್ಲದೆ ಹಾಡುವ ಮೂಲಕ ಲೈವ್ ಪರ್ಫಾರ್ಮನ್ಸ್ ನೀಡಿ ನೆರೆದಿದ್ದ ಪ್ರೇಕ್ಷಕರನ್ನು ಮತ್ತು ಗಣ್ಯವ್ಯಕ್ತಿಗಳನ್ನು ಬೆರಗುಗೊಳಿಸಿದರು.
ವಿ.ನಾಗೇಂದ್ರ ಪ್ರಸಾದ್, ವಿ.ಮನೋಹರ್, ಚಂದ್ರಿಕಾ ಗುರುರಾಜ್ ರಂಥ ಗಣ್ಯರ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಹಲವು ದಶಕಗಳಕಾಲ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಇವರಿಗೆ ಇನ್ನೂ ಏನನ್ನಾದರೂ ಸಾಧಿಸಬೇಕೆಂಬ ಹಂಬಲ ಮತ್ತು ತವಕ. ಈ ಹಾದಿಯಲ್ಲಿ ಮೂಡಿಬಂದ ಕಾರ್ಯಕ್ರಮವೇ ಮಾನಸ ಗಾನ ಜಾನಕಿ ಧ್ಯಾನ. ಮೊದಲಿನಿಂದಲೂ ಸಂಗಿತ ಆರಾಧಕಿಯಾದ ಇವರಿಗೆ ಹಾಡುವುದೆಂದರೆ ಪಂಚಪ್ರಾಣ. ಅದೇ ಕಾರಣದಿಂದ ಸತತವಾಗಿ 12 ಗಂಟೆಗಳ ಕಾಲ ದಣಿವಿಲ್ಲದೆ ಹಾಡಿದ್ದಾರೆ.
ಈ ಮೂಲಕ ಸಂಗೀತ ಕ್ಷೇತ್ರದಲ್ಲಿ ನೂತನ ದಾಖಲೆಯನ್ನು ಬರೆದಿದ್ದಾರೆ. ಬೆಳಿಗ್ಗೆ 9:30ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮ 3 ಹಂತಗಳಲ್ಲಿ ರಾತ್ರಿ 10:30ರವರೆಗೂ ನಡೆಯಿತು. 3 ಸಾವಿರ ಜನರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮಾನಸ ಹೊಳ್ಳ ಅವರ ಜತೆ ಗಾಯಕರಾದ ರಾಜೇಶ್ ಕೃಷ್ಣನ್, ಹೇಮಂತ್, ಅಜಯ್ ವಾರಿಯರ್, ಶ್ರೀನಿವಾಸ್, ರಮೋ, ಮೋಹನ್ ಕೃಷ್ಣ, ಉದಯ ಅಂಕೋಲ, ಚಿನ್ಮಯ್ ಅತ್ರೇಯ, ವಿಹಾನ್ ಆರ್ಯ, ಸಂತೋಷ ದೇವ್, ದಾಮೋದರ ನಾಯಕ್, ಕುಮಾರ ಗಂಗೋತ್ರಿ, ಕುಮಾರನ್ ಆರ್ಯ, ವಿಶಾಖ ನಾಗಲಾಪುರ, ರಾಮಚಂದ್ರು, ರವಿ ಸಂತು ಯುಗಳ ಗೀತೆಗಳನ್ನು ಹಾಡಿದರು.
ವೇದಿಕೆಯಲ್ಲಿ ಮುಂಬೈನಿಂದ ಬಂದ ಡ್ರಮ್ ವಾದಕ ಶಿವಮಣಿ ಅವರು 20 ನಿಮಿಷಗಳ ಕಾಲ ಡ್ರಮ್ ನುಡಿಸಿದರು. ಜಾನಕಿ ಅವರು ಹಾಡಿದ ಹೇಮಾವತಿ ಚಿತ್ರದ ಶಿವ ಶಿವ ಎನ್ನದ ಹಾಡನ್ನು ಸರಾಗವಾಗಿ ಹಾಡುವ ಮೂಲಕ ಪ್ರೇಕ್ಷಕರನ್ನು ಮತ್ತು ಗಣ್ಯರನ್ನು ಮಂತ್ರ ಮುಗ್ಧರನ್ನಾಗಿಸಿದರು .ಈ ಹಾಡಿಗೆ ಪ್ರತಿಯೊಬ್ಬರೂ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂತೋಷ ವ್ಯಕ್ತಪಡಿಸಿದರು. ಸಾಯಿಗೋಲ್ಡ್ ಸರವಣ ಅವರು ಕಾರ್ಯಕ್ರಮದ ಪ್ರಾಯೋಜಕರಾಗಿದ್ದರು. ಮಾನಸ ಹೊಳ್ಳ ಅವರು ಕೋಗಿಲೆ ಕಂಠದ ಗಾಯಕಿಯಾಗಿದ್ದು 500ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಅದರ ಜೊತೆಗೆ 10 ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ.