ಕಿರಣ್ ರಾಜ್ ಅಭಿನಯದ “ಜಾಕಿ-42” ಚಿತ್ರದ ಟೀಸರ್ ಬಿಡುಗಡೆ
ಕಿರುತೆರೆ ಹಾಗೂ ಹಿರಿತೆರೆ ಎರಡು ಕಡೆ ತಮ್ಮದೇ ಆದ ಚಾಪು ಮೂಡಿಸಿರುವ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ, ಗುರುತೇಜ್ ಶೆಟ್ಟಿ ನಿರ್ದೇಶನದ “ಜಾಕಿ-42” ಚಿತ್ರ ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಿದೆ. ಕನ್ನಡ ರಾಜ್ಯೋತ್ಸವದ ದಿನ ಬಹು ನಿರೀಕ್ಷಿತ ಈ ಚಿತ್ರದ ಟೀಸರ್ ಬಿಡುಗಡೆ ಯಾಗಿದ್ದು, ಟೀಸರ್ ಸಿನಿಮಾ ಪ್ರೇಕ್ಷಕನ ಗಮನ ಸೆಳೆದಿದೆ. ಟೀಸರ್ ಬಿಡುಗಡೆಯಾದ ಕ್ಷಣದಿಂದಲೇ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಗೋಲ್ಡನ್ ಗೇಟ್ ಸ್ಟುಡಿಯೋಸ್ ಬ್ಯಾನರ್ ನಲ್ಲಿ ಭಾರತಿ ಸತ್ಯನಾರಾಯಣ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದ್ದು, ಹಾರ್ಸ್ ರೇಸ್ ಹಿನ್ನೆಲೆಯಲ್ಲಿ ನೆಡೆಯುವ ಕಥಾಹಂದರವನ್ನು ಹೊಂದಿದೆ. ನೂರಾರು ಕುದುರೆಗಳು, ಸಾವಿರಾರು ಸಹಕಲಾವಿದರನ್ನೊಳಗೊಂಡ ಸನ್ನಿವೇಶಗಳು ಟೀಸರ್ ನಲ್ಲಿ ಅದ್ದೂರಿಯಾಗಿ ಮೂಡಿಬಂದಿದೆ. ಈ ಅದ್ದೂರಿ ಸನ್ನಿವೇಶಗಳನ್ನು ನೋಡಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ. ಕಿರಣ್ ರಾಜ್ ದ್ವಿಪಾತ್ರದಲ್ಲಿ ಅಭಿನಯಿಸಿರುವುದು ಅವರ ಅಭಿಮಾನಿಗಳಿಗೆ ಚಿತ್ರವನ್ನು ನೋಡುವ ಕಾತುರವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಪಾತ್ರಕ್ಕಾಗಿ ಕಿರಣ್ ರಾಜ್ ಸಾಕಷ್ಟು ತಯಾರಿ ಮಾಡಿಕೊಂಡಿದ್ದಾರೆ.
ಬಹು ನಿರೀಕ್ಷಿತ ಈ ಚಿತ್ರಕ್ಕೆ ಮಾತಿನ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಎರಡು ಹಾಡುಗಳ ಚಿತ್ರೀಕರಣ ಮಾತ್ರ ಬಾಕಿ ಇದೆ. ಶೀಘ್ರದಲ್ಲೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆಯಾಗಲಿದೆ.ವಿನೋದ್ ಯಜಮಾನ್ಯ ಸಂಗೀತ ನಿರ್ದೇಶನ, ರಾಘವೇಂದ್ರ ಬಿ ಕೋಲಾರ ಛಾಯಾಗ್ರಹಣ ಉಮೇಶ್ ಆರ್ ಬಿ ಸಂಕಲನ ಹಾಗೂ ಸತೀಶ್ ಅವರ ಕಲಾ ನಿರ್ದೇಶನವಿದೆ.
ನಾಯಕಿಯಾಗಿ ಹೃತಿಕ ಶ್ರೀನಿವಾಸ್ ನಟಿಸುತ್ತಿದ್ದಾರೆ. “ಕಾಂತಾರ” ಖ್ಯಾತಿಯ ದೀಪಕ್ ರೈ ಪಾಣಾಜೆ, ರಾಜೇಂದ್ರ ಕಾರಂತ್, ಮಧುಸೂದನ್, ಶಾಂತಲಾ ಕಾಮತ್, ಬಲ ರಾಜ್ವಾಡಿ, ಯಶ್ ಶೆಟ್ಟಿ, ಚೇತನ್ ರೈ ಮಾಣಿ ಮುಂತಾದ ಹೆಸರಾಂತ ಕಲಾವಿದರು ತಾರಾಬಳಗದಲ್ಲಿದ್ದಾರೆ. ಇದೊಂದು ಹಾರ್ಸ್ ರೇಸ್ ಸುತ್ತ ನೆಡೆಯುವ ಕಥೆಯಾದರೂ ಇಲ್ಲಿ ಫ್ಯಾಮಿಲಿ, ಲವ್, ಆಕ್ಷನ್ ಹೀಗೆ ನೋಡುಗರಿಗೆ ಬೇಕಾದ ಎಲ್ಲಾ ಅಂಶಗಳು ಇದೆ. ಇದೊಂದು ನನಗೆ ತುಂಬಾ ವಿಶೇಷವಾದ ಚಿತ್ರ. ಸಿನಿಮಾದ ಎಲ್ಲಾ ಕೆಲಸಗಳು ಭರದಿಂದ ಸಾಗಿದ್ದು, ಕ್ರಿಸ್ಮಸ್ ಹಬ್ಬದ ವೇಳೆಗೆ ಚಿತ್ರವನ್ನು ತೆರೆಗೆ ತರುವ ತಯಾರಿ ನಡೆಯುತ್ತಿದೆ ಎನ್ನುತ್ತಾರೆ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆಯನ್ನು ಬರೆದಿರುವ ನಿರ್ದೇಶಕ ಗುರುತೇಜ್ ಶೆಟ್ಟಿ.
