Cini NewsSandalwood

“ಕಾಂತಾರ ಅಧ್ಯಾಯ 1” ಇದು ಬರೀ ಚಿತ್ರವಲ್ಲ.. ಶಕ್ತಿ.. ಎನ್ನುವ ಟ್ರೈಲರ್ ಬಿಡುಗಡೆ

Spread the love

ಇಡೀ ವಿಶ್ವದಾದ್ಯಂತ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವಂತಹ ಚಿತ್ರ “ಕಾಂತಾರ-1”. ಅದ್ದೂರಿ ಚಿತ್ರಗಳ ಸರದಾರ ಎಂದೇ ಹೇಳಬಹುದಾದಂತ ಹೊಂಬಾಳೆ ಫಿಲಂಸ್ ನ ವಿಜಯ್ ಕಿರಗಂದೂರ್ ನಿರ್ಮಾಣದ ಕಾಂತಾರ ಚಿತ್ರ ಬಿಡುಗಡೆಗೊಂಡ ಪ್ರತಿ ಸ್ಥಳದಲ್ಲೂ ಪ್ರಶಂಸೆಯನ್ನು ಪಡೆದು ಯಶಸ್ಸಿನ ಗರಿಯನ್ನು ಪಡೆದು ದಂತಕತೆಯಾಗಿದೆ. ಈಗ ಇದರ ಸೀಕ್ವೆಲ್ “ಕಾಂತಾರ-1” ಬರೀ ಚಿತ್ರವಾಗದೆ ಒಂದು ಶಕ್ತಿಯಾಗಿ ಹೊರಬರಲು ಸಜ್ಜಾಗಿದ್ದು , ನಟ , ನಿರ್ದೇಶಕ ರಿಷಬ್ ಶೆಟ್ಟಿ ಸಂಪೂರ್ಣ ಸಾರಥ್ಯವನ್ನು ಹೊತ್ತಿದ್ದಾರೆ.

ಆರಂಭದ ದಿನಗಳಿಂದಲೂ ಬಹಳಷ್ಟು ಸದ್ದನ್ನ ಮಾಡುತ್ತಾ ಬಂದಿರುವ ಈ ಚಿತ್ರ ಕೊನೆಯ ಹಂತದವರೆಗೂ ಯಾವುದೇ ಸುಳಿವನ್ನು ನೀಡಿದೆ , ಈಗ ಮೊದಲ ಬಾರಿಗೆ ಎಲ್ಲಾ ಭಾಷೆಗಳಲ್ಲೂ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದು , ಅದರಲ್ಲೂ ವಿಶೇಷವಾಗಿ ಕನ್ನಡದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆಯನ್ನ ಮಾಧ್ಯಮದವರ ಸಮ್ಮುಖದಲ್ಲಿ ಅದ್ದೂರಿಯಾಗಿ
ಬಿಡುಗಡೆ ಮಾಡಲಾಯಿತು. ಹಾಗೆ ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ನೀಡಲು ಚಿತ್ರತಂಡ ಪತ್ರಿಕಾಗೋಷ್ಠಿಯನ್ನು ಕೂಡ ಆಯೋಜನೆ ಮಾಡಿತ್ತು.

ಇನ್ನು ಇಡೀ ಚಿತ್ರದ ಕೇಂದ್ರ ಬಿಂದು ಚಿತ್ರದ ನಿರ್ದೇಶಕ ಹಾಗೂ ನಟ ರಿಷಬ್ ಶೆಟ್ಟಿ ಮಾತನಾಡಿ, ‘ಕಾಂತಾರ’, ಪಂಚವಾರ್ಷಿಕ ಯೋಜನೆಯ ತರಹ ಐದು ವರ್ಷದ ದೊಡ್ಡ ಜರ್ನಿ ಎನ್ನಬಹುದು. ತುಂಬಾ ಕಷ್ಟಗಳನ್ನು ದಾಟಿ ರಿಲೀಸ್ ಹಂತಕ್ಕೆ ಬಂದಿದೆ. ಈ ಹಂತದಲ್ಲಿ ನನ್ನ ಮಡದಿ ಪ್ರಗತಿ ಎಷ್ಟು ದೇವರಿಗೆ ಹರಕೆ ಹೊತ್ತಿದ್ದಾಳೆ ಗೊತ್ತಿಲ್ಲ.

ಇದು ಎಮೋಷನಲ್ ಜರ್ನಿ ಕೂಡ ಹೌದು. ನನ್ನ ಈ ಪ್ರಯತ್ನಕ್ಕೆ ಇಡಿ ತಂಡ ಶಕ್ತಿಯಾಗಿ ನಿಂತಿದೆ. ತುಂಬಾ ದೊಡ್ಡ ತಂಡವಿದು. ಫಾರೆಸ್ಟ್ ಮಿನಿಸ್ಟರ್ ನಿಂದ ಹಿಡಿದು ಊರಿನ ಜನರು ಸೇರಿದಂತೆ ಎಲ್ಲರೂ ನಮಗೆ ಸಪೋರ್ಟ್ ಮಾಡಿದ್ದಾರೆ. ತಂಡಕ್ಕೆ ಬೇಕಾಗಿದ್ದನ್ನು ಬಜೆಟ್ ಲೆಕ್ಕ ಹಾಕದೆ ನಿರ್ಮಾಪಕ ವಿಜಯ್ ಕಿರಗಂದೂರ್ ಕೊಟ್ಟಿದ್ದಾರೆ. ಮೂರು ತಿಂಗಳಿನಿಂದ ನಮ್ಮ ತಂಡ ನಿದ್ದೆ ಸರಿಯಾಗಿ ಮಾಡಿಲ್ಲ. ಅಷ್ಟು ಕೆಲಸ ಮಾಡುತ್ತಿದ್ದಾರೆ. ನಾಲ್ಕೈದು ಸಾರಿ ನಾನು ಸಾವಿನ ಬಾಗಿಲಿಗೆ ಹೋಗಿ ಬಂದಿದ್ದೇನೆ.

ಆ ದೈವದ ಶಕ್ತಿ ನಮ್ಮ ಜೊತೆ ನಿಂತಿದೆ ಅನಿಸಿತು. ಈ ಚಿತ್ರಕ್ಕಾಗಿ ಸುಮಾರು ನಾಲ್ಕುವರೇ ಲಕ್ಷ ಜನರಿಗೆ ಊಟ ಹಾಕಿದ್ದಾರೆ ನಿರ್ಮಾಪಕರು. “ಕಾಂತಾರ” ಶುರು ಮಾಡಿದಾಗ ಸಿನಿಮಾ ಆಗಿತ್ತು. ಹೋಗತಾ ಭಾವನಾತ್ಮಕ ಪಯಣವಾಗಿದೆ. ನಮ್ಮ ಕನ್ನಡಿಗರು, ಮಾಧ್ಯಮಗಳು ಚಿತ್ರವನ್ನು ಇಷ್ಟು ದೊಡ್ಡ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಒಂದು ಲೈನ್ ಕಥೆಯಿಂದ ನನ್ನ ಮೇಲೆ ನಂಬಿಕೆ ಇಟ್ಟುಕೊಂಡು ಹಣವನ್ನ ನೀಡಿರುವ ನಿರ್ಮಾಪಕರು ಇಲ್ಲಿಯವರೆಗೂ ತಂದಿದ್ದಾರೆ’ ಎಂದು ತಿಳಿಸಿದರು.

ಚಿತ್ರದಲ್ಲಿ ರಾಣಿಯಾಗಿ ನಟಿಸಿರುವ ರುಕ್ಮಿಣಿ ವಸಂತ ಮಾತನಾಡಿ, ‘ಇದು ಮನಸಿಗೆ ತುಂಬಾ ಹತ್ತಿರವಾದ ಚಿತ್ರ. ಕೆರಿಯರ್ ಪ್ರಾರಂಭದ ಹೆಜ್ಜಿಯಲ್ಲಿ ಇಂತಹ ಮಹತ್ವದ ಪಾತ್ರ ಸಿಕ್ಕಿದ್ದು ಖುಷಿ ಆಯ್ತು. ಈ ಪಾತ್ರ ಮಾಡೋದು ಚಾಲೆಂಜ್ ಆಗಿತ್ತು. ತಂಡದ ಸಪೋರ್ಟ್ ತುಂಬಾ ಸಿಗತಾ ಇತ್ತು.‌ ಹಾಗಾಗಿ ಅಷ್ಟಾಗಿ ಕಷ್ಟ ಎನಿಸಲಿಲ್ಲ’ ಎಂದರು.

‘ಮೂರು ವರ್ಷ ನಾವು ಮನೆ ಬಿಟ್ಟು ಮಕ್ಕಳನ್ನು ಕಟ್ಟಿಕೊಂಡು ಕುಂದಾಪುರನಲ್ಲಿ ವಾಸವಿದ್ದು ಈ ಚಿತ್ರದಲ್ಲಿ ಪಾಲ್ಗೊಂಡಿದ್ದೇವೆ. ಹೊಂಬಾಳೆ ಫಿಲಂಸ್ ನಮಗೊಂದು ಫ್ಯಾಮಿಲಿ ಆಗಿ ನಿಂತಿದೆ. ಐದು ವರ್ಷಗಳ ಹಿಂದೆ ಪೋನ್ ನಲ್ಲಿ ಒಂದು ಲೈನ್ ಕಥೆ ಕೇಳಿ ಸಿನಿಮಾ ಮಾಡಲು ಒಪ್ಪಿದವರು ವಿಜಯ್ ಕಿರಗಂದೂರ್ ಅವರು. ಈ ಚಿತ್ರದಲ್ಲಿ ಕಾಸ್ಟೋಮ್ ಡಿಸೈನ್ ಮಾಡಿದ್ದು ಖುಷಿ ಇದೆ. ಈ ಚಿತ್ರದ ಹಿಂದೆ ಒಂದು ಶಕ್ತಿಯಿರುವುದು ಖಂಡಿತ’ ಎಂದು ಚಿತ್ರದ ವಸ್ತ್ರ ವಿನ್ಯಾಸಕಿ ಪ್ರಗತಿ ಶೆಟ್ಟಿ ಮಾಹಿತಿ ನೀಡಿದರು.

ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರ್ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ‘”ಕಾಂತಾರ” ಚಿತ್ರ, ಅಕ್ಟೋಬರ್ 2ರಂದು ಭಾರತದಾದ್ಯಂತ 7000ಕ್ಕೂ ಹೆಚ್ಚು ಸ್ಕ್ರೀನ್ ನಲ್ಲಿ ರಿಲೀಸ್ ಆಗುತ್ತದೆ. ಜೊತೆಗೆ 30 ದೇಶಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಇದೆ ಮೊದಲಬಾರಿಗೆ ಕನ್ನಡ ಸಿನಿಮಾವೊಂದು ಸ್ಪ್ಯಾನಿಷ್ ಭಾಷೆಯಲ್ಲಿ ಡಬ್ಬಿಂಗ್ ಕೂಡ ಆಗುತ್ತಿದೆ. ಮುಂದಿನ ದಿನಗಳಲ್ಲಿ ಭಾರತದ ಬೇರೆ ಮಹಾನಗರಗಳಲ್ಲೂ ಪ್ರೆಸ್ ಮೀಟ್ ಮಾಡುವ ಯೋಜನೆ ಇದೆ’ ಎಂದು ಹೇಳಿದರು.

ವೇದಿಕೆಯಲ್ಲಿ ಭಾರತೀಯ ಅಂಚೆ ಇಲಾಖೆ ವತಿಯಿಂದ ಇಂಡಿಯನ್ ಪೋಸ್ಟ್‌ ಕವರ್ ಹಾಗೂ ಪಿಕ್ಚರ್ ಪೋಸ್ಟ್ ಕಾರ್ಡ್ ಬಿಡುಗಡೆ ಮಾಡಲಾಯಿತು. ಬರಹಗಾರರಾದ ಅನಿರುದ್ಧ್ ಮಹೇಶ್, ಶನೀಲ್ ಗೌತಮ್ ಚಿತ್ರದ ಕಾರ್ಯನಿರ್ವಾಹಕ ನಿರ್ಮಾಪಕ ಆದರ್ಶ, ಸಾಹಸ ನಿರ್ದೇಶಕ ಅರ್ಜುನ್, ಸಂಕಲನಕಾರ ಸುರೇಶ್, ನೃತ್ಯ ನಿರ್ದೇಶಕ ಭೂಷಣ್ ಮುಂತಾದವರು ತಮ್ಮ “ಕಾಂತಾರ ಅಧ್ಯಾಯ ೧” ರ ಬಗ್ಗೆ ಅನುಭವ ಹಂಚಿಕೊಂಡರು.

ಒಟ್ಟಾರೆ ಬಹಳಷ್ಟು ನೀರಿಕ್ಷೆಯನ್ನು ಹುಟ್ಟಿ ಹಾಕಿರುವ “ಕಾಂತಾರ ಅಧ್ಯಾಯ 1” ಚಿತ್ರದ ಟ್ರೇಲರ್ ಎಲ್ಲಾ ಭಾಷೆಗಳಲ್ಲಿ ಬಿಡುಗಡೆಗೊಂಡು ಮಿಲಿಯನ್ಸ್ ಗಟ್ಟಲೆ ವ್ಯೂಸ್ ಅನ್ನ ಪಡೆದು ಎಲ್ಲರ ಗಮನವನ್ನು ಸೆಳೆದಿದೆ. ರಾಜ್ಯ , ದೇಶ ಸೇರಿದಂತೆ ವಿದೇಶಗಳಲ್ಲೂ ಅದ್ದೂರಿಯಾಗಿ ಬಿಡುಗಡೆಗೊಳಲು ಸಜ್ಜಾಗಿರುವ “ಕಾಂತಾರ ಅಧ್ಯಾಯ 1” ನೋಡಲು ಚಿತ್ರ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ದಾರೆ. ಅದರಲ್ಲೂ ಸದ್ಯ ಬಿಡುಗಡೆಯಾಗಿರುವ ಟ್ರೈಲರ್ ಚಿತ್ರ ನೋಡುವ ಕುತೂಹಲವನ್ನು ಹೆಚ್ಚಿಸಿದೆ. ವಿಶೇಷ ಎಂದರೆ ನಾಡಹಬ್ಬ ದಸರಾ ಸಂದರ್ಭದ ಸಮಯದ ಜೊತೆಗೆ ಅಕ್ಟೋಬರ್ 2 ಗಾಂಧಿ ಜಯಂತಿಯ ದಿನದಂದು ಈ ಚಿತ್ರ ಎಲ್ಲೆಡೆ ಬಿಡುಗಡೆಯಾಗುತ್ತಿದೆ.

Visited 1 times, 1 visit(s) today
error: Content is protected !!