ವಿಧಿಯ ಆಟಕ್ಕೆ ನಲುಗಿದ ದೇವಿ “ಕಮಲ್ ಶ್ರೀದೇವಿ” (ಚಿತ್ರವಿಮರ್ಶೆ -ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಕಮಲ್ ಶ್ರೀದೇವಿ
ನಿರ್ದೇಶಕ : ವಿ.ಎ ಸುನೀಲ್ ಕುಮಾರ್
ನಿರ್ಮಾಪಕರು : ಬಿ.ಕೆ ಧನಲಕ್ಷ್ಮೀ , ರಾಜವರ್ಧನ್
ಸಂಗೀತ : ಕೀರ್ತನ್
ಛಾಯಾಗ್ರಹಣ : ನಾಗೇಶ್ ಆಚಾರ್ಯ
ತಾರಾಗಣ : ಸಚಿನ್ ಚಲುವರಾಯಸ್ವಾಮಿ , ಸಂಗೀತ ಭಟ್ , ಕಿಶೋರ್, ರಮೇಶ್ ಇಂದಿರಾ , ಮಿತ್ರಾ ,
ಉಮೇಶಣ್ಣ , ಅಕ್ಷಿತ ಬೋಪಯ್ಯ ಹಾಗೂ ಮುಂತಾದವರು…
ನಮ್ಮ ಸುತ್ತಮುತ್ತಲಿನಲ್ಲಿ ನಡೆಯುತ್ತಿರುವ ಅದೆಷ್ಟೋ ಕಾಣದ ವೇಶ್ಯಾವಾಟಿಕೆ ದಂಧೆಯ ಹೆಣ್ಣು ಮಕ್ಕಳ ನೋವಿನಕಥಾನಕದ ಕನ್ನಡಿಯಂತೆ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರವೇ “ಕಮಲ್ ಶ್ರೀದೇವಿ”. ಬದುಕಿನಲ್ಲಿ ಅಂದುಕೊಂಡಂತೆ ಯಾವುದು ನಡೆಯುವುದಿಲ್ಲ , ವಿಧಿಯ ಆಟದ ಮುಂದೆ ಎಲ್ಲರೂ ತಲೆಬಾಗಲೇಬೇಕು. ಸಮಯ , ಸಂದರ್ಭ ಒಬ್ಬೊಬ್ಬರನ್ನು ಒಂದೊಂದು ಪರಿಸ್ಥಿತಿಗೆ ಸಿಕ್ಕಿಹಾಕಿಕೊಳ್ಳುವಂತೆ ಮಾಡುತ್ತದೆ. ಸಿಟಿ ಮಾರ್ಕೆಟ್ ಲಾಡ್ಜ್ ಒಂದರಲ್ಲಿ ಹೆಣ್ಣುಮಕ್ಕಳ ಬರ್ಬರ ಹತ್ಯೆ ನಡೆದಿರುತ್ತದೆ. ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಯುತ್ತಿದ್ದಂತೆ ಎಸಿಪಿ ರಾಜೇಶ್ (ಕಿಶೋರ್ ಕುಮಾರ್) ಮೂಲಕ ತನಿಖೆ ಆರಂಭಗೊಳ್ಳುತ್ತದೆ. ಈ ಕೊಲೆ ವಿಚಾರವಾಗಿ ಅನುಮಾನ ಬಂದವರನ್ನು ವಿಚಾರಿಸುತ್ತ ಹೋಗುವಾಗ ಒಂದೊಂದೇ ಸತ್ಯ ಹೊರ ಬರುತ್ತಾ ಹೋಗುತ್ತದೆ. ಜೀವನದಲ್ಲಿ ಸಮಸ್ಯೆಗೆ ಸಿಲುಕಿ ಹಣದ ತುರ್ತು ಅವಶ್ಯಕತೆಗಾಗಿ ದೇಹ ಹಾಳಾದರೂ ಪರವಾಗಿಲ್ಲ , ಮನಸು ಹಾಳಾಗಬಾರದೆಂದು ನಿರ್ಧರಿಸುವ ದೇವಿಕಾ ( ಸಂಗೀತ ಭಟ್) 70,000ಕ್ಕಾಗಿ ಮಾರ್ಕೆಟ್ ಏರಿಯಾದಲ್ಲಿ ಹೆಣ್ಣು ಮಕ್ಕಳು ದಂಧೆ ನಡೆಸುವ ಮಾಮು(ರಮೇಶ್ ಇಂದಿರಾ) ಕಣ್ಣಿಗೆ ಬೀಳುತ್ತಾಳೆ. ಒಳ್ಳೆ ಫಿಗರ್ ಸಿಕ್ಕಿದೆ ಆದರೆ , ಪೇಮೆಂಟ್ ಜಾಸ್ತಿ ಎನ್ನುತ್ತಲೆ ದೇವಿಕಾ ಮಾತಿಗೆ ಒಪ್ಪಿ , ಒಂದು ಗಂಟೆಗೆ 10,000 ಎನ್ನುವಂತೆ ತಾನು ಗಿರಾಕಿ ಕಳಿಸುತ್ತೇನೆ, ಕಮಿಷನ್ ಸಿಕ್ಕರೆ ಸಾಕು ಎಂದು ತನ್ನದೇ ಕಂಟ್ರೋಲ್ ನಲ್ಲಿರುವ ಎಂಎಂ ಲಾಡ್ಜ್ ಗೆ ದೇವಿಕಾ ಳನ್ನ ಕರೆದುಕೊಂಡು ಹೋಗುತ್ತಾನೆ.
ಆಕೆಯ ಫೋಟೋ ತೆಗೆದು ತನ್ನ ವಾಟ್ಸಪ್ ಗ್ರೂಪ್ ಗೆ ಹಾಕುತ್ತಾನೆ. ಗಿರಾಕಿ ಬಂದಂತೆ ತನ್ನ ಕಮಿಷನ್ ಪಡೆದು ದೇವಿಕಾ ಅಕೌಂಟ್ಗೆ ಗೂಗಲ್ ಪೇ ಮಾಡಿ ಗಿರಾಕಿ ಕಳಿಸಲು ತೀರ್ಮಾನಿಸುತ್ತಾನೆ. ಇದರ ನಡುವೆ ಕಮಲ್ (ಸಚಿನ್ ಚಲುವರಾಯಸ್ವಾಮಿ) ಫ್ಲಾಪ್ ನಿರ್ದೇಶಕ ಎಂಬ ಹಣೆ ಪಟ್ಟಿ ಪಡೆದುಕೊಂಡು , ಜೀವನದಲ್ಲಿ ಜಿಗುಪ್ಸೆಗೊಂಡು ನನ್ನ ಗೆಳೆಯ ಹರಿ ಹೇಳಿದಂತೆ ದೇವಿಕಾ ಬಳಿ ಬರುತ್ತಾನೆ. ಆಕೆಯನ್ನ ಅನುಭವಿಸದೆ ತನ್ನ ನೋವನ್ನು ಹೇಳಿಕೊಳ್ಳಲು ನಿರ್ಧಾರ ಮಾಡುತ್ತಾನೆ. ಇವನ ವಿಚಿತ್ರ ವರ್ತನೆ ನೋಡುವ ದೇವಿಕ ಅವನ ನೋವಿಗೆ ಸ್ಪಂದಿಸುತ್ತಾಳೆ.
ಹಾಗೆಯೇ ತನ್ನ ಬದುಕಿನ ಕಥೆಯನ್ನ ಕೂಡ ಹೇಳುತ್ತಾ ಕುಟುಂಬವನ್ನ ನೋಡಿಕೊಳ್ಳದ ಕುಡುಕ ಗಂಡ, ವಯಸ್ಸಾದ ತಾಯಿ ಮತ್ತು ಮುದ್ದಾದ ಮಗಳು. ಆದರೆ ವಿಧಿಯ ಆಟಕ್ಕೆ ಮಗಳು ಸಾವು ಬದುಕಿನ ನಡುವಿನ ಹೋರಾಟದ ಸ್ಥಿತಿಯನ್ನು ಹೇಳುವ ದೇವಿಕಾ. ಇದರ ನಡುವೆ ಬರುವ ಒಬ್ಬೊಬ್ಬ ಕಾಮುಕರ ವರ್ತನೆಗೂ ನಲುಗುತಾ ಹೋಗುತ್ತಾಳೆ. ತನ್ನ ಅಗತ್ಯದ ಹಣ ಸಿಕ್ಕ ಕೊಡಲೇ ಮನೆಗೆ ಹೋಗಲು ನಿರ್ಧರಿಸುವ ದೇವಿಕಾ ನಿಗೂಢ ರೀತಿಯಲ್ಲಿ ಸಾಯುತ್ತಾಳೆ. ಒಂದೊಂದು ಫ್ಲಾಶ್ ಬ್ಯಾಕ್ ಮೂಲಕ ಹೇಳುತ್ತಾ ಹೋಗುವ ಈ ನಿಗೂಢತೆಯ ಸತ್ಯವನ್ನು ಭೇದಿಸಲು ಪೊಲೀಸ್ ನಾನಾ ರೀತಿಯ ವಿಚಾರಣೆಯನ್ನು ಆರಂಭ ಮಾಡುತ್ತದೆ. ದೇವಿಕಾ ನ ಕೊಲೆ ಮಾಡಿದ್ದು ನಿರ್ದೇಶಕನಾ… ಕಾಮುಕರಾ…
ಮಾಮುನಾ…
ಮಗಳ ಸ್ಥಿತಿ ಗತಿ..?
ಪೊಲೀಸ್ ಗೆ ಸಿಕ್ಕ ಸಾಕ್ಷಿ ಏನು…
ಇದೆಲ್ಲದಕ್ಕೂ ಒಮ್ಮೆ ನೀವು ಕಮಲ್ ಶ್ರೀದೇವಿ ಚಿತ್ರ ನೋಡಲೇಬೇಕು.
ಇನ್ನು ನೈಜಕ್ಕೆ ಹತ್ತಿರ ಎನ್ನುವಂತೆ ಒಬ್ಬ ನಿರ್ದೇಶಕನ ಪಾತ್ರದಲ್ಲಿ ಸಚಿನ್ ಚೆಲುವರಾಯಸ್ವಾಮಿ ಗಮನ ಸೆಳೆಯುವಂತೆ ನಟಿಸಿದ್ದು , ಮಾತು , ಮೌನದಲ್ಲಿ ಮತ್ತಷ್ಟು ಪರಿಪಕ್ವತೆ ಹೊಂದಿದ್ದಾರೆ. ಹಾಗೆಯೇ ಚಿತ್ರದ ಹೈಲೈಟ್ ಪಾತ್ರಗಳಲ್ಲಿ ನಟಿ ಸಂಗೀತ ಭಟ್ ಅಭಿನಯ ಕೂಡ ಒಂದು , ಇಂತಹ ಪಾತ್ರವನ್ನು ಮಾಡಲು ಕಲಾವಿದರಿಗೆ ಒಂದು ದೃಢ ನಿರ್ಧಾರ ಇರಬೇಕು, ಅದಕ್ಕೆ ಪೂರಕವಾಗಿ ಧೈರ್ಯಮಾಡಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕೆಲವು ಸನ್ನಿವೇಶಗಳು ಮನಸನ್ನ ಕರಿಗಿಸುತ್ತದೆ. ವೇಶ್ಯಾ ಪಾತ್ರದಲ್ಲೂ ನೋವಿನ ಸಂಕಟವನ್ನು ಹೊರಹಾಕಿರುವ ಈ ಪ್ರತಿಭೆಗೆ ಪ್ರಶಸ್ತಿ ಸಿಗುವ ಸಾಧ್ಯತೆ ಇದೆ. ಅದೇ ರೀತಿ ಮತ್ತೊಬ್ಬ ದೈತ್ಯ ಪ್ರತಿಭೆ ರಮೇಶ್ ಇಂದಿರಾ , ಮುನಿಸ್ವಾಮಿ ಅಲಿಯಾಸ್ ಮಾಮು ಪಾತ್ರವನ್ನ ಬಹಳ ಅದ್ಭುತವಾಗಿ ನಿರ್ವಹಿಸಿ , ಇಡೀ ಚಿತ್ರದ ಓಟಕ್ಕೆ ಕೇಂದ್ರಬಿಂದುವಾಗಿ ಮಿಂಚಿದ್ದಾರೆ.
ಇನ್ನು ಎಸಿಪಿ ಪಾತ್ರದಲ್ಲಿ ನಟ ಕಿಶೋರ್ ಕೂಡ ತಮ್ಮ ಗತ್ತು , ವರ್ಚಸ್ ನೊಂದಿಗೆ ಖಡಕ್ಕಾಗಿ ಅಬ್ಬರಿಸಿದ್ದಾರೆ. ಇನ್ನು ಉಳಿದಂತೆ ಅಭಿನಯಿಸಿರುವ ಕೋಟೆ ಪ್ರಭಾಕರ್ , ಮಿತ್ರಾ , ಉಮೇಶಣ್ಣ , ಅಕ್ಷಿತ ಬೋಪಯ್ಯ , ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದೆ. ಒಂದು ವಿಭಿನ್ನ ಚಿತ್ರವನ್ನ ಪ್ರೇಕ್ಷಕರ ಮುಂದೆ ಇಟ್ಟಿರುವ ನಿರ್ಮಾಪಕರಿಗೆ ಬೆನ್ನೆಲುಬಾಗಿ ನಿಂತು ಕ್ರಿಯೇಟಿವ್ ಹೆಡ್ ಆಗಿ ಕಾರ್ಯ ನಿರ್ವಹಿಸಿರುವ ರಾಜವರ್ಧನ್ ಕೆಲಸ ಮೆಚ್ಚಲೇಬೇಕು. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಕೂಡ ಅಷ್ಟೇ ಕುತೂಹಲಕಾರಿ ಆಗಿದೆ. ಒಂದು ನೋವಿನ ಹಿಂದಿರುವ ಸಮಸ್ಯೆಯನ್ನು ತಮ್ಮ ಕಾಮದ ಚಟಕ್ಕೆ ಬಳಸಿಕೊಳ್ಳುವವರ ವರ್ತನೆಯಿಂದ ಏನೆಲ್ಲಾ ಏರುಪೇರಾಗುತ್ತದೆ ಎಂಬ ಸೂಕ್ಷ್ಮವನ್ನ ತೆರೆಯ ಮೇಲೆ ತಂದಿದ್ದಾರೆ.
ಕೆಲವು ದೃಶ್ಯಗಳು ಮುಜುಗರ , ಹಿಂಸೆ ಅನಿಸುತ್ತದೆ. ಯಾವುದೇ ಕಮರ್ಷಿಯಲ್ ಅಂಶಗಳಿಲ್ಲದೆ ಸಾಗುವ ಈ ಕಥಾನಕ ಒಂದು ಸಂದೇಶದ ಚಿತ್ರವಾಗಿ ಹೊರಬಂದಿದೆ. ಇನ್ನು ಸಂಗೀತ ಕೂಡ ಸಂದರ್ಭಕ್ಕೆ ಅನುಗುಣವಾಗಿ ಮೂಡಿಬಂದಿದ್ದು , ಛಾಯಾಗ್ರಹಾಕರ ಕೈಚಳಕ ಉತ್ತಮವಾಗಿದೆ. ಒಟ್ಟಾರೆ ಎಲ್ಲರ ಮನಮುಟ್ಟುವ ಕಥಾವಸ್ತುವಿರುವ ಈ ಚಿತ್ರವನ್ನು ಒಮ್ಮೆ ನೋಡಬಹುದು.