ಮುಗ್ಧ ಹುಡುಗನ ರಕ್ತಸಿಕ್ತ ಬದುಕು “JC” ಚಿತ್ರವಿಮರ್ಶೆ (ರೇಟಿಂಗ್ : 4/5)
ರೇಟಿಂಗ್ : 4/5
ಚಿತ್ರ : JC
ನಿರ್ದೇಶಕ : ಚೇತನ್ ಜೈರಾಮ್
ನಿರ್ಮಾಣ : ಡಾಲಿ ಪಿಕ್ಚರ್ಸ್
ಸಂಗೀತ : ರೋಹಿತ್ ಸೋವರ್
ಛಾಯಾಗ್ರಾಹಣ : ಕಾರ್ತಿಕ್
ತಾರಾಗಣ : ಸೂರ್ಯ ಪ್ರಖ್ಯಾತ್ , ಭಾವನಾ ರೆಡ್ಡಿ , ರಂಗಾಯಣ ರಘು , ಥ್ರೀಲ್ಲರ್ ಮಂಜು , ವಿಜಯ್ ಸಿಂಹ , ಹಾಗೂ ಮುಂತಾದವರು…
ಮೊಳಕೆಯ ಸಸಿಗೆ ಕೊಡಲಿ ಏಟು.. ಎನ್ನುವಂತೆ ತಾನು , ತನ್ನ ಕುಟುಂಬ , ಸ್ನೇಹಿತರು , ವಿದ್ಯಾರ್ಥಿ ಜೀವನ , ಗೆಳತಿಯೊಟ್ಟಿಗೆ ನೆಮ್ಮದಿಯಾಗಿ ಸುತ್ತಾಟದ ಯುವಕನ ಬದುಕಿನಲ್ಲಿ ಅಚಾನಕ್ಕಾಗಿ ಎದುರಾಗುವ ಪುಡಿ ರೌಡಿಗಳ ಹಾವಳಿ , ದೊಡ್ಡ ಸರಪಳಿಯಂತೆ ಭೂಗತ ಲೋಕಕ್ಕೂ ಹರಡಿ ಪೊಲೀಸ್ , ಕೋರ್ಟ್ , ನ್ಯಾಯಾಂಗ ಬಂಧನಕ್ಕೆ ಸಿಲುಕಿ ಒದ್ದಾಡವನ ಸ್ಥಿತಿಗತಿಯ ಸುತ್ತ ತಂದೆ ಮಗನ ಭಾವನಾತ್ಮಕ ಸಂಬಂಧ ಸುಳಿಯ ಮೂಲಕ ನೈಜಕ್ಕೆ ಹತ್ತಿರ ಎನ್ನುವಂತಹ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ ಜೆ ಸಿ (judicial coustdy).
ತಂದೆ ಸಂಗೀತಗಾರ ಕೃಷ್ಣಮೂರ್ತಿ (ರಂಗಾಯಣ ರಘು) ತಾಯಿ ಶಾರದಾ (ಸ್ವಾತಿ ಗುರುದತ್) ರ ಮುದ್ದಿನ ಮಗ ಮಧುಸೂದನ್ ಅಲಿಯಾಸ್ ಮ್ಯಾಡಿ. ತನ್ನ ಫ್ಯಾಮಿಲಿ , ಕಾಲೇಜ್ , ವಿದ್ಯಾರ್ಥಿಗಳ ಒಡನಾಟ, ಪ್ರೀತಿಯ ಗೆಳತಿ ಮೇಘನಾ ( ಭಾವನಾ ರೆಡ್ಡಿ) ಜೊತೆ ಸುತ್ತಾಟ. ಇನ್ನು ಪ್ರತಿ ಏರಿಯಾದಲ್ಲಿ ತನ್ನದೇ ಹವಾ ಮೇಂಟೈನ್ ಮಾಡಿಕೊಂಡು ಬೆಂಗಳೂರು ಭೂಗತ ಜಗತ್ತಿನ ದೊರೆಯಾಗಿ ಆಳುವ ನಟೋರಿಯಸ್ ರೌಡಿ ಕವಳ ರಾಜಕೀಯ ಮುಖಂಡ (ಸಿದ್ಲಿಂಗು ಶ್ರೀಧರ್) ನ ಮಗಳು ಪರಿಮಳನ್ನ ಮದುವೆಯಾಗಿ ರಾಜಕೀಯಕ್ಕೆ ಎಂಟ್ರಿ ಆಗಲು ಸಿದ್ಧತೆ ಮಾಡಿಕೊಳ್ಳುತ್ತಾನೆ. ಇನ್ನು ಇವನ ಬೆಂಬಲಿಗನಾಗಿ ರಾಕ ತನ್ನ ಗ್ಯಾಂಗ್ ಮೂಲಕ ಜೈಲಿನ ಒಳಗೆ ಹಾಗೂ ಹೊರಗೆ ತನ್ನ ಹವಾ ಮೇಂಟೆನ್ ಮಾಡುತ್ತಾನೆ. ಇವರನ್ನು ಸದೆಬಡಿಯಲು ಮತ್ತೊಂದು ಗ್ಯಾಂಗ್ ಕುಮಾರಿ (ಥ್ರಿಲ್ಲರ್ ಮಂಜು),
ಜೆಸಿಬಿ , ಸೇರಿದಂತೆ ಹಲವು ತಂಡಗಳು ಸ್ಕೆಚ್ ಹಾಕುತ್ತಿರುತ್ತಾರೆ. ಇನ್ನು ಸಣ್ಣ ಗಾಡಿ ವಿಚಾರಕ್ಕೆ ಮ್ಯಾಡಿ ಗೆಳೆಯ ಜಗನ್ನ ವಿಚಾರಕ್ಕೆ ಎದುರಾಗುವ ಗಲಾಟೆ , ಮುಂದೆ ಪ್ರೇಯಸಿ ಮೇಘನಾ ಕಡೆ ತಿರುಗಿ ಹೊಡೆದಾಟ ಬಡದಾಟ ಮೂಲಕ ನ್ಯಾಯಾಂಗ ಬಂಧನ (JC) ಕ್ಕೆ ಹೋಗುವ ಸ್ಥಿತಿ ಬರುತ್ತದೆ. ತನ್ನದಲ್ಲದ ತಪ್ಪಿಗೆ ಜೈಲಿನ ಕಹಿ ಅನುಭವಗಳನ್ನು ಅನುಭವಿಸಿ , ಕುಮಾರಿ ಅಣ್ಣ , ಎ ಟು ಝೆಡ್ ಸೇರಿದಂತೆ ಒಂದಷ್ಟು ರೌಡಿಗಳ ಸಂಪರ್ಕ ಇಟ್ಟುಕೊಂಡು ಹೊರಬರುವ ಮ್ಯಾಡಿಗೆ ತನ್ನ ಗೆಳತಿಯ ಮುಂದೆ ರಾಕನ ವರ್ತನೆ , ಅಟ್ಟಹಾಸ ಸಹಿಸಲಾಗದಂತೆ ಆಗುತ್ತಾನೆ.
ಆದರೂ ಇದರ ಸಹವಾಸವೇ ಬೇಡ ನೆಮ್ಮದಿಯಿಂದ ಬದುಕಬೇಕು ಎನ್ನುವಾಗ ವಿಧಿಯ ಆಟ ಎನ್ನುವಂತೆ ನಟೋರಿಯಸ್ ಡಾನ್ ಸಾವಿಗೆ ಮ್ಯಾಡಿ ಕಾರಣವಾಗುತ್ತಾನೆ. ಇದರ ಹಿಂದೆ ಷಡ್ಯಂತರ ನಡೆದಿರುತ್ತದೆ. ಮುಂದೆ ಮ್ಯಾಡಿ ಉಳಿದ ಕೈದಿಗಳ ಪಾಲಿಗೆ ರಾಜನಂತಾಗುತ್ತಾನೆ.
ಇತ್ತ ತಂದೆ ಮಗನನ್ನು ಹೊರತಲು ಕೋರ್ಟ್ , ಸ್ಟೇಶನ್ ಮೆಟ್ಟಿಲು ಅಲೆದು ಪರದಾಡುತ್ತಾರೆ. ಇನ್ನು ಮ್ಯಾಡಿಯನ್ನ ಕೊಲ್ಲಲು ಸಂಚು ನಡೆಯುವ ಹಲವು ರೋಚಕ ಘಟನೆಗಳು ಮ್ಯಾಡಿ ಬದುಕಿನಲ್ಲಿ ಹೊಸ ಅಧ್ಯಾಯಕ್ಕೆ ದಾರಿ ಮಾಡುತ್ತದೆ. ಅದು ಏನು..
ಮ್ಯಾಡಿ ಜೈಲಿನಿಂದ ಬರ್ತಾನಾ…ಇಲ್ಲವಾ…
ಅಪ್ಪ-ಅಮ್ಮ ಸಿಗ್ತಾರಾ…
ಮೇಘನಾ ಪ್ರೀತಿ ಸಿಗುತ್ತಾ… ಕ್ಲೈಮಾಕ್ಸ್ ಹೇಳುವ ಉತ್ತರ ಏನು… ಇದೆಲ್ಲದಕ್ಕೂ ಒಮ್ಮೆ ನೀವು ಚಿತ್ರ ನೋಡಬೇಕು.
ಜೀವನವೇ ಒಂದು ಪಾಠ , ಇಲ್ಲಿ ತಪ್ಪು ಮಾಡಿದವರಿಗಿಂತ, ತಪ್ಪು ಮಾಡದೆ ಇರುವವರು ಶಿಕ್ಷೆಯನ್ನ ಅನುಭವಿಸುತ್ತಾರೆ. ಇದೆಲ್ಲವೂ ಸಮಯ ಸಂದರ್ಭದ ಜೊತೆ ವಿಧಿಯ ಆಟ. ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಬಹಳ ಅರ್ಥಪೂರ್ಣವಾಗಿದೆ. ಪ್ರಸ್ತುತ ಕಾಲಘಟ್ಟದ ಯುವ ಪೀಳಿಗೆಗೆ ಇಂತಹ ವಿಚಾರಗಳ ಬಗ್ಗೆ ಜಾಗೃತಿ ತರುವುದು ಬಹಳ ಅವಶ್ಯಕವಾಗಿದೆ.
ಅಮಾಯಕರ ಬದುಕಿನಲ್ಲಿ ಆಕಸ್ಮಿತವಾಗಿ ಎದುರಾಗುವ ಘಟನೆಗಳು ಏನೆಲ್ಲ ಸ್ಥಿತಿಗತಿಯನ್ನು ತರುತ್ತದೆ ಎಂಬುದನ್ನು ನಿರ್ದೇಶಕರು ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದು ಗೆದಿದ್ದಾರೆ. ಇನ್ನು ಚಿತ್ರಕಥೆ ವೇಗದಲ್ಲಿ ಇನ್ನಷ್ಟು ಹಿಡಿತ ಮಾಡಿದ್ದರೆ ಚೆನ್ನಾಗಿರ್ತಿತ್ತು ಅನಿಸುತ್ತದೆ. ಜುಡಿಶಿಯಲ್ ಕಸ್ತಡಿಯಲ್ಲಿರುವಂತಹ ಘಟನೆಗಳನ್ನು ನೈಜಕ್ಕೆ ಬಹಳ ಪೂರಕವಾಗಿ ಇಂಚಿಂಚು ಮಾಹಿತಿಯನ್ನು ಹಾಕುವ ವಿಚಾರ ಇದರ ಗಮನವನ್ನು ಸೆಳೆಯುತ್ತದೆ.

ಇಂತಹ ವಿಭಿನ್ನ ಕಥಾ ವಸ್ತುವನ್ನು ಪ್ರೇಕ್ಷಕರ ಮುಂದೆ ತಂದಿರುವಂತಹ ಡಾಲಿ ಪಿಚ್ಚರ್ಸ್ ನ ನಿರ್ಮಾಪಕ ಧನಂಜಯ ರವರ ಆಲೋಚನೆ ಮೆಚ್ಚುವಂಥದ್ದು , ಇನ್ನು ಸಂಭಾಷಣೆ ನೈಜಕ್ಕೆ ಸಮೀಪವಿದ್ದು , ಅತಿರೇಕ ಅನಿಸುತ್ತದೆ. ಚಿತ್ರದ ಹಾಡುಗಳು , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ , ಸಾಹಸ ಎಲ್ಲವೂ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಪ್ರಥಮ ಪ್ರಯತ್ನದಲ್ಲಿ ಯುವ ನಟ ಸೂರ್ಯ ಪ್ರಖ್ಯಾತ ನೈಜಕ್ಕೆ ಪೂರಕವಾಗಿ ಪಾತ್ರದಲ್ಲಿ ಜೀವಿಸಿದ್ದು , ಮ್ಯಾಡಿಯಾಗಿ ಮಿಂಚಿದ್ದು , ಸ್ಯಾಂಡಲ್ ವುಡ್ ಗೆ ಮತ್ತೊಬ್ಬ ಭರವಸೆಯ ನಟ ಸಿಕ್ಕಂತಾಗಿದೆ.
ನಟಿ ಭಾವನಾ ರೆಡ್ಡಿ ಕೂಡ ಸಿಕ್ಕ ಅವಕಾಶವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹಿರಿಯ ನಟ ರಂಗಾಯಣ ರಘು ನಾಯಕನ ತಂದೆಯಾಗಿ ಅಭಿನಯಿಸಿರುವ ಭಾವನಾತ್ಮಕ ಸನ್ನಿವೇಶ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದೆ. ಇನ್ನು ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಕೂಡ ಸೆಟ್ಲ್ಡ್ ಗ್ಯಾಂಗ್ ಲೀಡರ್ ಕುಮಾರಿ ಅಣ್ಣ ಪಾತ್ರದಲ್ಲಿ ಮೂಲಕ ಕಿಂಗ್ ಮೇಕರ್ ಆಗಿ ಮಿಂಚಿದ್ದಾರೆ. ನಟೋರಿಯಸ್ ರೌಡಿ ಕವಳ ಪಾತ್ರಧಾರಿ ಕೂಡ ಆರ್ಭಟಿಸಿದ್ದು , ಮತ್ತೊಬ್ಬ ಭರವಸೆಯ ಖಳನಟನಾಗಿ ರಾಕ ಪಾತ್ರದ ಮೂಲಕ ಚಿತ್ರವನ್ನ ಆವರಿಸಿಕೊಂಡಿದ್ದಾರೆ. ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಸಾತ್ ನೀಡಿದ್ದು,ಒಟ್ಟಾರೆ ನ್ಯಾಯಾಂಗ ಬಂಧನದ ವ್ಯವಸ್ಥೆಯ ಜೊತೆಗೆ ಸತ್ಯ ಅಸತ್ಯತೆಗಳ ನಡುವೆ ಬದುಕು ಎಷ್ಟು ಘೋರ ಎಂಬುವುದನ್ನು ಹೇಳುವ ಮೂಲಕ ತಂದೆ-ತಾಯಿಗಳ ಆತಂಕದ ವಿಚಾರದ ನಡುವೆ ಸಂದೇಶವನ್ನು ನೀಡಿರುವಂತಹ ಚಿತ್ರ ಇದಾಗಿದೆ.