Cini NewsSandalwood

‘ಅಪರಿಚಿತೆ’ ಚಿತ್ರದ ಟ್ರೇಲರ್ ಅನಾವರಣ ಮಾಡಿದ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ

Spread the love

ಈ ಮೊದಲು ‘ತಾಯವ್ವ’ ಎಂಬ ಸಿನಿಮಾದಲ್ಲಿ ನಟಿಸಿದ್ದ, ಗೀತಪ್ರಿಯ ಸುರೇಶ್ ಕುಮಾರ್ ಇದೀಗ ಮತ್ತೊಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಆ ಚಿತ್ರದ ಹೆಸರು ‘ಅಪರಿಚಿತೆ’. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಅನಾವರಣ ಸಮಾರಂಭ ನಗರದ ಖಾಸಗಿ ಹೋಟೆಲ್ ನಲ್ಲಿ ಅದ್ದೂರಿಯಾಗಿ ನೆರವೇರಿತು. ಮಾಜಿ ಮುಖ್ಯಮಂತ್ರಿ, ಮಾಜಿ ಬಿ.ಜೆ.ಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಕೇಂದ್ರ ಸಚಿವರಾದ ಡಿ.ವಿ‌.ಸದಾನಂದ ಗೌಡ ಟ್ರೇಲರ್ ಅನಾವರಣ ಮಾಡಿದರು. ಸದಾನಂದ ಗೌಡ ಅವರ ಪತ್ನಿ ಡಾಟಿ ಸದಾನಂದ ಗೌಡ ಹಾಗೂ ನಟಿ ತಾರಾ ಅನುರಾಧ ಕೂಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ನಟಿ ತಾರಾ “ಅಪರಿಚಿತೆ” ಹಾಡೊಂದನ್ನು ಬಿಡುಗಡೆ ಮಾಡಿದರು. ನಂತರ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮಾತನಾಡಿದರು.

ಗೀತಪ್ರಿಯ ಅವರು ಒಂದೊಳ್ಳೆ ಉದ್ದೇಶವಿಟ್ಟುಕೊಂಡು ಈ ಸಿನಿಮಾ‌ ಮಾಡಿದ್ದಾರೆ. ನಾವು ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ಕೊಡಬೇಕಾದರೆ, ಅದನ್ನು ಸುಲಭವಾಗಿ ತಲುಪಿಸುವ ಮಾರ್ಗ ಸಿನಿಮಾ. ಅಂತಹ ಸಿನಿಮಾ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿರುವ ಗೀತಪ್ರಿಯ ಸುರೇಶ್ ಕುಮಾರ್ ಮತ್ತು ತಂಡಕ್ಕೆ ಶುಭವಾಗಲಿ ಎಂದು ಸದಾನಂದ ಗೌಡ ಅವರು ಹಾರೈಸಿದರು. ಡಾಟಿ ಸದಾನಂದ ಗೌಡ ಹಾಗೂ ತಾರಾ ಅನುರಾಧ ಸಹ ಚಿತ್ರತಂಡಕ್ಕೆ ಶುಭ ಕೋರಿದರು.

1985ರಲ್ಲಿ ನಾನು ಹಾಗೂ ನನ್ನ ಪತಿ ಸೇರಿ ಶಿಕ್ಷಣ ಸಂಸ್ಥೆ ಆರಂಭಿಸಿದ್ದೆವು. ಹತ್ತು ಜನರಿಂದ ಆರಂಭವಾದ ಈ ಸಂಸ್ಥೆಯಲ್ಲಿ ಈಗ ಹತ್ತು ಸಾವಿರ ಜನ ವ್ಯಾಸಂಗ ಮಾಡುತ್ತಿದ್ದಾರೆ‌. ಈ ಹಿಂದೆ “ತಾಯವ್ವ” ಎಂಬ ಚಿತ್ರದಲ್ಲಿ ನಟಿಸಿದ್ದೆ. ಈಗ “ಅಪರಿಚಿತೆ” ಎಂಬ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನನ್ನ ಪತಿ ಸುರೇಶ್ ಕುಮಾರ್ ಅವರೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ‌. ನಾನು ಜವಾಬ್ದಾರಿಯುತ ಶಿಕ್ಷಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನಿರ್ದೇಶಕ ವಿಶ್ವನಾಥ್ ಕಥೆ ಹೇಳಿದರು. ಸಮಾಜಕ್ಕೆ ಏನಾದರೂ ಉತ್ತಮ ಸಂದೇಶ ನೀಡುವ ಕಥೆ ಇದ್ದರೆ ಮಾತ್ರ ನಟನೆ ಮಾಡುವುದಾಗಿ ಹೇಳಿದ್ದೆ. ಇದು ಅಂತಹುದ ಕಥೆ. ರಾಮನಗರದಲ್ಲಿ ಚಿತ್ರೀಕರಣ ನಡೆದಿದೆ. ಕ್ರಿಸ್ ಮಸ್ ವೇಳೆಗೆ ಚಿತ್ರ ಬಿಡುಗಡೆಯಾಗಲಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ ಎಂದರು ನಟಿ ಗೀತಪ್ರಿಯ‌‌.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ವಿಶ್ವನಾಥ್, ‘ಇದು ನೈಜ ಕಥೆ ಆಧಾರಿತ ಸಿನಿಮಾ. ಈಗಾಗಲೇ ಚಿತ್ರೀಕರಣ ಮುಗಿದಿದ್ದು, ಚಿತ್ರ ಸೆನ್ಸರ್ ಅಂಗಳದಲ್ಲಿದೆ. ಗೀತಪ್ರಿಯ, ಸಿಂಧೂ ಲೋಕನಾಥ್, ಆರ್.ಜೆ. ನಿಖಿತಾ, ಹಿರಿಯ ನಟ ಶ್ರೀನಾಥ್ ಹಾಗೂ ಶ್ರೀನಾಥ್ ಅವರ ಮಗ ರೋಹಿತ್ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ ಎಂದರು.

ವೇದಿಕೆಯಲ್ಲಿ ಹಿರಿಯ ನಟ ಶ್ರೀನಾಥ್ ಮಾತನಾಡುತ್ತಾ, ‘ಒಂದೊಳ್ಳೆ ಚಿತ್ರದಲ್ಲಿ ನಟಿಸಿರುವ ಖುಷಿಯಿದೆ‌‌. ನಾನು ಹಾಗೂ ನನ್ನ ಮಗ ರೋಹಿತ್ ಇಬ್ಬರು ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ ಎಂದರು.

ಮೂವತ್ತೈದು ವರ್ಷಗಳ ನಂತರ ನಾನು ಸಿನಿಮಾದಲ್ಲಿ ನಟಿಸಿದ್ದೇನೆ. ಅದರಲ್ಲೂ ನಮ್ಮ ಅಪ್ಪನ ಜೊತೆಗೆ‌. ಬಹಳ ಖುಷಿಯಾಗಿದೆ ಎಂದು ರೋಹಿತ್ ಶ್ರೀನಾಥ್ ತಿಳಿಸಿದರು.
ಆರ್.ಜೆ‌.ನಿಖಿತ ಸಹ ಪಾತ್ರದ ಬಗ್ಗೆ ಮಾತನಾಡಿದರು. ನಿರ್ಮಾಪಕ ಸುರೇಶ್ ಕುಮಾರ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Visited 12 times, 1 visit(s) today
error: Content is protected !!