Cini NewsMovie ReviewSandalwood

ಸ್ನೇಹ , ಪ್ರೇಮ , ಮೋಹದ ಸುಳಿಯಲ್ಲಿ ಡವ್ ಸ್ಟೋರಿ “ಫ್ಲರ್ಟ್” (ಚಿತ್ರವಿಮರ್ಶೆರೇಟಿಂಗ್ : 4 /5)

Spread the love

ರೇಟಿಂಗ್ : 4 /5
ಚಿತ್ರ : ಫ್ಲರ್ಟ್
ನಿರ್ದೇಶಕ : ಚಂದನ್ ಕುಮಾರ್
ನಿರ್ಮಾಣ : ಎವರೆಸ್ಟ್ ಪಿಕ್ಚರ್ಸ್
ಸಂಗೀತ : ಜಸ್ಸಿ ಗಿಫ್ಟ್ , ನಕುಲ್ ಅಭಯಂಕರ್
ಛಾಯಾಗ್ರಹಣ : ಹೆಚ್.ಸಿ. ವೇಣು
ತಾರಗಣ : ಚಂದನ್ ಕುಮಾರ್, ವಿಶೇಷ ಹಾಡಿನಲ್ಲಿ ಕಿಚ್ಚ ಸುದೀಪ್, ನಿಮಿಕಾ ರತ್ನಾಕರ್, ಅಕ್ಷತಾ ಬೋಪಣ್ಣ , ಗಿರೀಶ್ ಶಿವಣ್ಣ , ಶೃತಿ, ಸಾಧು ಕೋಕಿಲ, ಅವಿನಾಶ್, ರಂಗಾಯಣ ರಘು, ವಿನಯ್ ಗೌಡ ಹಾಗೂ ಮುಂತಾದವರು…

ಲೈಫ್ನಲ್ಲಿ ನಂಬಿಕೆ ಅನ್ನೋದು ಮಾಯವಾದಂತಿದೆ. ಅದರಲ್ಲೂ ಹುಡುಗ ಹುಡುಗಿಯರಲ್ಲಿ ಯಾರನ್ನ , ಯಾವಾಗ , ಹೇಗೆ ನಂಬೋದು ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಬದುಕು ಕಟ್ಟಿಕೊಳ್ಳುವ ಹುಡುಗನ ಜೀವನದಲ್ಲಿ ಗಾಢವಾದ ಪ್ರೀತಿ, ನಂಬಿಕೆ ದ್ರೋಹ, ಸ್ನೇಹಿತನ ಬೆಂಬಲ, ಹುಡುಗಿಯರ ಜೊತೆ ಮೋಜು-ಮಸ್ತಿ , ಸೈಕೋ ಮನಸ್ಥಿತಿಯ ಸುತ್ತ ಸಾಗುವ ಕೋರ್ಟ್ ಅಂಗಳದ ರೋಚಕ ಕಥೆಯ ಚಿತ್ರ “ಫ್ಲರ್ಟ್” ಈ ವಾರ ಪ್ರೇಕ್ಷಕರ ಮುಂದೆ ಬಂದಿದೆ.

ತನ್ನ ನೋಟ , ಮಾತಿನ ಮೂಲಕವೇ ಹುಡುಗಿಯರ ಮನಸ್ಸನ್ನು ಕದಿಯುವ ಚಾಣಾಕ್ಷ ಕೃಷ್ಣ (ಚಂದನ್ ಕುಮಾರ್). ಮೋಜು ಮಸ್ತಿ , ನಿಶೆಯಲ್ಲಿ ತೇಲುತ್ತಾ 99 ಹುಡುಗಿಯರ ಜೊತೆ ಫ್ಲರ್ಟ್ ಮಾಡುವ ಕೃಷ್ಣ ಸೆಂಚುರಿ ಮಾಡುವಷ್ಟರಲ್ಲಿ ಅತ್ಯಾಚಾರದ ಕೇಸಿನಲ್ಲಿ ಸಿಕ್ಕಿಹಾಕಿಕೊಂಡು ಕಟಕಟೆಗೆ ಬಂದು ನಿಲ್ಲುವಂತಾಗುತ್ತಾನೆ. ಕೋರ್ಟ್ ನಲ್ಲಿ ಕೃಷ್ಣನ ಪರ ಬರುವ ವಕೀಲ ಸಾಧು (ಸಾಧು ಕೋಕಿಲ) ಒಂಬತ್ತು ಕೇಸು ಸೋತರು 10ನೇ ಕೇಸು ಗೆಲುವ ನಿರೀಕ್ಷೆಯಲ್ಲಿ ಇರುತ್ತಾನೆ. ಇನ್ನು ನೊಂದ ಹೆಣ್ಣು ಮಗಳು ಮಾನ್ಯ(ಅಕ್ಷಿತಾ ಬೋಪಯ್ಯ) ಪರ ನಿಲ್ಲುವ ವಕೀಲೆ ಸತ್ಯ (ಶ್ರುತಿ) ಅಪರಾಧಿಗೆ ಘೋರ ಶಿಕ್ಷೆ ನೀಡಬೇಕೆಂದು ವಾದಿಸುತ್ತಾರೆ.

ಇನ್ನು ನ್ಯಾಯಮೂರ್ತಿ (ಅವಿನಾಶ್) ವಾದ , ಪ್ರತಿವಾದವನ್ನ ಆಲಿಸುವಾಗ ಬಾಲ್ಯದ ಗೆಳೆಯ ಬಾಲ ( ಗಿರೀಶ್ ಶಿವಣ್ಣ) ತನ್ನ ಸ್ನೇಹಿತ ಕೃಷ್ಣನ ಫ್ಲ್ಯಾಟ್ ನಲ್ಲಿ ಆಶ್ರಯ ಪಡೆದು ತಾನು ಫಿಟ್ ಅಂಡ್ ಸ್ಲಿಮ್ ಆಗಿ ಹುಡುಗಿಯನ್ನ ಪ್ರೀತಿಸಬೇಕೆಂದು ನಿರ್ಧರಿಸುತ್ತಾನೆ. ಆದರೆ ಕೃಷ್ಣನ ಜಿಮ್ ಟ್ರೈನಿಂಗ್ ನಲ್ಲಿ ಹುಡುಗಿಯರೊಂದಿಗೆ ತನ್ನ ಲೀಲೆ , ಪ್ರೇಮಿಗಳ ಬ್ರೇಕ್ ಅಪ್ ಸ್ಕೆಚ್ ನಿರಂತರವಾಗಿ ಮುಂದುವರಿಸುತ್ತಾನೆ.

ಹಣ , ಆಸ್ತಿ , ಸೌಂದರ್ಯ ಇದ್ದವರ ಹಿಂದೆ ಹುಡುಗಿಯರು ಬರ್ತಾರೆ ಎನ್ನುವ ಕೃಷ್ಣನ ಮಾತನ್ನು ಒಪ್ಪದ ಬಾಲ ತನ್ನನ್ನು ಇಷ್ಟಪಟ್ಟ ಹುಡುಗಿ ಸನಿಹ (ನಿಮಿಕಾ ರತ್ನಾಕರ್)ಳನ್ನ ತನ್ನ ಗೆಳೆಯನ ಫ್ಲ್ಯಾಟ್ ಗೆ ಕರೆತರುವ ಪರಿಸ್ಥಿತಿ ಎದುರಾಗುತ್ತದೆ. ಇನ್ನು ಸನಿಹಳ ನಡುವಳಿಕೆ , ಆಚಾರ , ಪೂಜೆ ಬಾಲುಗೆ ಇಷ್ಟವಾದರೆ , ಕೃಷ್ಣನಿಗೆ ಕಷ್ಟದ ಜೊತೆ ಅನುಮಾನ ಮೂಡುತ್ತದೆ. ಮುಂದೇನು ಅನ್ನುವಷ್ಟರಲ್ಲಿ ಮತ್ತೊಂದು ಫ್ಲಾಶ್ ಬ್ಯಾಕ್ ತೆರೆದುಕೊಳ್ಳುತ್ತದೆ.

ತನ್ನ ಅಣ್ಣ (ರಂಗಾಯಣ ರಘು) ಜೊತೆ ವಾಸಮಾಡುವ ಕೃಷ್ಣ ಎಂಎನ್ಸಿ ಕಂಪನಿಯ ಉದ್ಯೋಗಿ , ಬಾಸ್ (ವಿನಯ್ ಗೌಡ)ನ ನೆಚ್ಚಿನ ಕೆಲಸಗಾರ , ಅದೇ ಕಂಪನಿ ಗೆ ಸೇರುವ ಸನಿಹ. ಅಲ್ಲೊಂದು ಪ್ರೀತಿಯ ಸೆಳೆತದ ನಡುವೆ ಬಾಲ್ಯದ ನಂಟು ಕೂಡ ಕಾಣುತ್ತದೆ. ಹಣ , ಆಸ್ತಿ ನಡುವೆ ಪ್ರೀತಿಗೆ ಮೋಸ , ಕೆಲಸ ಕಳೆದುಕೊಳ್ಳುವ ಕೃಷ್ಣ ಬದುಕಲ್ಲಿ ನೋವಿನ ಸರಮಾಲೆ , ಇದೆಲ್ಲವೂ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಬೇರೆಯದೇ ದಾರಿಯನ್ನ ತೋರಿತ್ತಾ ಗೊಂದಲದೊಂದಿಗೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಏನಿದು ಕೃಷ್ಣನ ಅವತಾರ…
ಸುಳ್ಳು ಯಾವುದು.. ಸತ್ಯ ಏನು…
ಕೋರ್ಟ್ ವಿಚಾರಣೆ ಏನಾಗುತ್ತೆ…
ಲವ್ವ… ಡವ್ವ… ಫ್ರೆಂಡ್ಶಿಪ್…
ಇದೆಲ್ಲದಕ್ಕೂ ಉತ್ತರ ಫ್ಲರ್ಟ್ ಚಿತ್ರ ನೋಡಿ.

 

ಒಂದು ಪೂರ್ಣ ಪ್ರಮಾಣದ ಮನೋರಂಜನೆಯ ಚಿತ್ರವನ್ನು ಮೊದಲ ಬಾರಿಗೆ ನಿರ್ದೇಶನ ಹಾಗೂ ನಿರ್ಮಾಣದ ಜೊತೆಗೆ ಲವಲವಿಕೆಯೊಂದಿಗೆ ತೆರೆಯ ಮೇಲೆ ತಂದಿದ್ದಾರೆ ನಟ ಚಂದನ್ ಕುಮಾರ್. ಯುವಜನತೆಯ ಮೋಜು ಮಸ್ತಿ , ಪ್ರೀತಿಯ ಆಕರ್ಷಣೆ , ನಂಬಿಕೆ ದ್ರೋಹದ ಸುತ್ತ ಗೆಳೆತನದ ಶಕ್ತಿಯ ಪ್ರದರ್ಶನ ಮಾಡಿದಂತಿದೆ. ಆದರೆ ಚಿತ್ರಕಥೆಯಲ್ಲಿ ಕಡಿತ ಮಾಡಬೇಕಿತ್ತು ಅನಿಸುತ್ತದೆ.

ಗಮನ ಸೆಳೆಯುವ ಸಂಭಾಷಣೆ , ಹಾಸ್ಯ ಸನ್ನಿವೇಶಗಳ ಜೊತೆಗೆ ಸಂಗೀತ , ಹಿನ್ನೆಲೆ ಸಂಗೀತ , ಛಾಯಾಗ್ರಹಣ , ಸಂಕಲನ ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಇನ್ನು ವಿಶೇಷ ಹಾಡೊಂದರಲ್ಲಿ ಕಿಚ್ಚ ಸುದೀಪ್ ಹಾಡಿರುವ ಗೀತೆ ಗೆಳೆತನಕ್ಕೆ ಅನುಗುಣವಾಗಿ ಸಾಗಿದೆ. ಇನ್ನು ನಾಯಕ ನಟ ಚಂದನ್ ಕುಮಾರ್ ಬಹಳ ಅದ್ಭುತವಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದು , ಕೆಲವು ಶೇಡ್ ಗಳಲ್ಲಿ ಸುದೀಪ್ ಮ್ಯಾನರಿಸಂ ಕಾಣುವಂತಿದೆ. ಸುಂದರನ ಸುತ್ತ ಸುಂದರಿಯರ ಓಡಾಟ ಕಣ್ತುಂಬಿಕೊಳ್ಳುವಂತಿದೆ.

ಇನ್ನು ಇಡೀ ಚಿತ್ರದ ಹೈಲೈಟ್ ಅಂದರೆ ಬಾಲು ಅಲಿಯಾಸ್ ಬಾಲ ಸುಬ್ರಮಣ್ಯ ಪಾತ್ರದ ಕಲಾವಿದ ಗಿರೀಶ್ ಶಿವಣ್ಣರ ಅಭಿನಯ. ಸಮಯಕ್ಕೆ ತಕ್ಕ ಮಾತು , ನಡುವಳಿಕೆಯ ಮೂಲಕ ತಮ್ಮ ನಟನ ಸಾಮರ್ಥ್ಯವನ್ನು ಅದ್ಭುತವಾಗಿ ತೆರೆದಿಟ್ಟಿದ್ದಾರೆ. ಅದೇ ರೀತಿ ಲಾಯರ್ ಪಾತ್ರದಲ್ಲಿ ಹಾಸ್ಯ ನಟ ಸಾಧುಕೋಕಿಲ ರ ಪಂಚಿಂಗ್ ಡೈಲಾಗ್ , ಎದುರಾಳಿ ಲಾಯರ್ ಶ್ರುತಿ ಮಾತು , ಜಡ್ಜ್ ಪಾತ್ರಧಾರಿ ಅವಿನಾಶ್ ಸಂಭಾಷಣೆಗಳು ಗಮನ ಸೆಳೆಯುತ್ತದೆ. ಇನ್ನು ನಟಿ ನಿಮಿಕಾ ರತ್ನಾಕರ್ ಈ ಹಿಂದೆ ಮಾಡಿದಂತಹ ಎಲ್ಲಾ ಚಿತ್ರಗಳಿಗಿಂತ ಒಂದು ಉತ್ತಮ ವಿಭಿನ್ನ ಪಾತ್ರದಲ್ಲಿ ಮಿಂಚುದ್ದು , ತನ್ನ ಪ್ರತಿಭೆಯನ್ನ ಎಲ್ಲರ ಮುಂದೆ ತೋರಿದ್ದಾರೆ. ಇನ್ನುಳಿದಂತೆ ರಂಗಾಯಣ ರಘು , ಅಕ್ಷತಾ ಬೋಪಯ್ಯ , ವಿನಯ್ ಗೌಡ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಪೂರಕವಾಗಿದೆ. ಇದೊಂದು ರೋಮ್ ಕಾಮ್, ಫ್ರೆಂಡ್ ಶಿಪ್, ಲವ್, ಎಂಟರ್ ಟೈನಿಂಗ್ ಚಿತ್ರವಾಗಿದ್ದು, ಎಲ್ಲರೂ ಎಂಜಾಯ್ ಮಾಡುತ್ತಾ ನೋಡುವಂತಹ ಚಿತ್ರ ಇದಾಗಿದೆ.

Visited 5 times, 5 visit(s) today
error: Content is protected !!