ಚಿತ್ರೀಕರಣ ಮುಗಿಸಿದ ನಮ್ಮ ಮಣ್ಣಿನ ಕಥಾನಕ “ದೇವಸಸ್ಯ” ಸಿನಿಮಾ.
ಸಿರ್ಸಿ ತಾಲ್ಲೂಕು ಸುತ್ತ ಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಸಿದ್ದಿ ಜನಾಂಗದ ಸಂಸ್ಕೃತಿ, ಆಚಾರ, ವಿಚಾರಗಳ ಕುರಿತು ನಿರ್ದೇಶಕ ಕಾರ್ತೀಕ್ ಭಟ್ ಕಥಾಹಂದರ ಹೆಣೆದಿರುವ ಚಿತ್ರ ದೇವಸಸ್ಯ. ಅಪರೂಪದ ಗಿಡವೊಂದರ ಸುತ್ತ ಈ ಚಿತ್ರಕಥೆ ಸಾಗಲಿದೆ.

ಕನ್ನಡ, ತೆಲುಗು, ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಈ ಚಿತ್ರ ತೆರೆಗೆ ಬರುತ್ತಿದೆ. ಅನಂತ ಫಿಲಂಸ್ ಅಡಿ ಅನಂತಮೂರ್ತಿ ಎಂ.ಹೆಗಡೆ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಕಾರ್ತೀಕ್ ಭಟ್ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಈ ಸಿನಿಮಾದ ಕೊನೆಯ ದಿನದ ಚಿತ್ರೀಕರಣ ಮಾಗಡಿ ರಸ್ತೆಯಲ್ಲಿರುವ ಪುಟ್ಟಣ್ಣ ಕಣಗಾಲ್ ಸ್ಟುಡಿಯೋದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸ್ಥಳಕ್ಕಾಗಮಿಸಿದ ಮಾಧ್ಯಮ ಮಿತ್ರರೊಂದಿಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿತು.
1995ರ ಕಾಲಘಟ್ಟದಲ್ಲಿ ನಡೆಯುವ ನಮ್ಮ ಮಣ್ಣಿನ ಕಥೆಯನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಊರಲ್ಲಿ ಟ್ರಾಕ್ಟರ್ ಓಡಿಸುತ್ತಿದ್ದ ಸಿದ್ಧಿ ಸಮುದಾಯದ ಯುವಕ ಸೆಲ್ವಿನ್ ದೇಸಾಯಿ ಈ ಚಿತ್ರದ ಪ್ರಮುಖ ಪಾತ್ರಧಾರಿ. ನಿರ್ದೇಶಕರು ಈತನಿಗೆ 2 ವರ್ಷಗಳ ತರಬೇತಿ ನೀಡಿ ಬಣ್ಣ ಹಚ್ಚಿಸಿದ್ದಾರೆ. ರಂಗಪ್ರತಿಭೆ ಆಹಾನ್ಗೌಡ ಮತ್ತು ಬಿಂಬಿಕಾ ಜೆ.ರಾವ್ ಪ್ರಮುಖ ಪಾತ್ರಗಳಲ್ಲಿದ್ದಾರೆ, ಅಲ್ಲದೆ, 150ಕ್ಕೂ ಹೆಚ್ಚು ಸಿದ್ಧಿ ಕಲಾವಿದರು ನಟಿಸಿರುವುದು ಈ ಚಿತ್ರದ ವಿಶೇಷ. ಈ ಚಿತ್ರಕ್ಕಾಗಿ 1995ರ ಕಾಲಘಟ್ಟದ ಹಳ್ಳಿಯೊಂದರ ಸೆಟ್ ಹಾಕಿ ಅಲ್ಲಿ, 93 ದಿನಗಳ ಕಾಲ ಚಿತ್ರೀಕರಿಸಲಾಗಿದೆ.

ಈ ಸಂದರ್ಭದಲ್ಲಿ ನಿರ್ಮಾಪಕ ಅನಂತಮೂರ್ತಿ ಹೆಗಡೆ ಮಾತನಾಡುತ್ತ ನನಗೆ ಮೊದಲಿಂದಲೂ ಸಿನಿಮಾ ಬಗ್ಗೆ ತುಂಬಾ ಆಸಕ್ತಿ, ಅದೇ ಕಾರಣಕ್ಕೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದೇನೆ. ಕಳೆದ ಮಾರ್ಚ್ ನಲ್ಲಿ ಶೂಟಿಂಗ್ ಆರಂಭಿಸಿ, ಉತ್ತರ ಕನ್ನಡದಲ್ಲೇ ಬಹುತೇಕ ಚಿತ್ರೀಕರಣ ನಡೆಸಿದ್ದೇವೆ, ಸುಮಾರು 150ರಂದ 200 ಜನ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ. ಅದ್ಭುತವಾದ, ವಿಶೇಷವಾದ ಸಂಜೀವಿನಿ ಗಿಡವೇ ದೇವಸಸ್ಯ. ಇಂತಹ ವಿಶಿಷ್ಟವಾದ ಸ್ಕ್ರಿಪ್ಟ್ ಸಿಕ್ಕಿರೋದು ನಮ್ಮ ಅದೃಷ್ಟ. ನಿರ್ದೇಶಕರು ಈ ಚಿತ್ರಕ್ಕಾಗಿ 3 ವರ್ಷ ಹಗಲಿರುಳು ಕಷ್ಟಪಟ್ಟಿದ್ದಾರೆ. ಚಿತ್ರಕ್ಕಾಗಿಯೇ 30ವರ್ಷಗಳ ಹಿಂದಿದ್ದ ಊರನ್ನು ಮರುಸೃಷ್ಠಿ ಮಾಡಿದ್ದೇವೆ. ಇದು ಸಸ್ಯವೊಂದರ ಕುರಿತಂತೆ ಮಾಡಿರುವ ಕಥೆಯಾಗಿದ್ದರಿಂದ 5 ಭಾಷೆಗಳಲ್ಲಿ ನಿರ್ಮಿಸುತ್ತಿದ್ದೇವೆ ಎಂದು ಹೇಳಿದರು.

ನಿರ್ದೇಶಕ ಕಾರ್ತೀಕ್ ಭಟ್ ಮಾತನಾಡಿ ಮೊದಲಿಂದಲೂ ನನಗೆ ಸಿನಿಮಾ ಎಂದರೆ ಹುಚ್ಚು. ಕೆಲ ಚಲನಚಿತ್ರ, ಸೀರಿಯಲ್ಗಳಿಗೆ ಬರಹಗಾರನಾಗಿ ಕೆಲಸ ಮಾಡಿ, ಮೊದಕಬಾರಿಗೆ ನಿರ್ದೇಶನಕ್ಕೆ ಕೈ ಹಾಕಿದ್ದೇನೆ.
ಸಿರ್ಸಿ ಸುತ್ತಮುತ್ತಲಿನ ಕಾಡು ಪ್ರದೇಶಗಳಲ್ಲಿ ವಾಸಿಸುವ ಸಿದ್ದಿ ಸಮುದಾಯದ ಬಗ್ಗೆ ಚಿತ್ರದಲ್ಲಿ ಹೇಳಿದ್ದೇವೆ, ಇದು ಕಥೆಯಲ್ಲ, ಹೊಸ ಜಗತ್ತು, ಉತ್ತರ ಕನ್ನಡದಲ್ಲಿ ಮಲೆನಾಡು, ಬಯಲುಸೀಮೆ ಎರಡೂ ಇದೆ. ಅದರಲ್ಲಿ ಸಾಕಷ್ಟು ಕಥೆಗಳಿದ್ದು, ಅದರಲ್ಲಿ ಇದೂ ಒಂದು, 46 ರಿಂದ 47 ವರ್ಷನ್ ಕಥೆ ಬರೆದು ಫೈನಲ್ ಮಾಡಿದ್ದೇವೆ,ನಿರ್ಮಾಪಕರಿಗೆ ಕಥೆ ಹೇಳಿದಾಗ ಅವರು ತುಂಬಾ ಇಷ್ಟಪಟ್ಟು ಚಿತ್ರ ನಿರ್ಮಿಸಿದ್ದಾರೆ. ಎರಡು ಊರುಗಳ ಮಧ್ಯೆ ನಡೆಯುವ ಕಥೆಯಿದು. ಸಿದ್ದಿ ಹುಡುಗನ ಪಾತ್ರವನ್ನು ಸೆಲ್ವಿನ್ ದೇಸಾಯಿ ಮಾಡಿದ್ದಾರೆ ಎಂದರು.

ನಂತರ ನಟ ಸೆಲ್ವಿನ್ ಮಾತನಾಡಿ ನಾನು ಊರಲ್ಲಿ ಟ್ರ್ಯಾಕ್ಟರ್ ಓಡಿಸಿಕೊಂಡಿದ್ದೆ. ನನಗೆ ಕನ್ನಡ ಚೆನ್ನಾಗಿ ಬರುತ್ತೆ. ನಿರ್ದೇಶಕರು ಬಂದು ಸಿನಿಮಾದಲ್ಲಿ ಆಕ್ಟ್ ಮಾಡ್ತೀಯಾ ಅಂದ್ರು, ನನ್ನಂಥವನಿಂದ ಸಾಧ್ಯವಾ ಅಂತ ನಕ್ಕಿದ್ದೆ. ನಂತರ ಅವರೇ ಕರೆದುಕೊಂಡು ಹೋಗಿ ಅಭಿನಯ, ಆಕ್ಷನ್ ಕಲಿಸಿದರು ಎಂದು ವಿವರಿಸಿದರು. ಮತ್ತೊಬ್ಬನಟ ಅಹಾನ್ ಮಾತನಾಡುತ್ತ ಇದರಲ್ಲಿ ನಾನು ಕುರ್ಮುಷ್ಠ ಎಂಬ ಪಾತ್ರವನ್ನು ಮಾಡಿದ್ದೇನೆ ಎಂದರು. ನಾಯಕಿ ಬಿಂಬಿಕಾ ಮಾತನಾಡಿ ಈ ಚಿತ್ರದಲ್ಲಿ ನಾನು ಮಾತಂಗಿ ಎಂಬ ಸಿದ್ದಿ ಜನಾಂಗದ ಹುಡುಗಿಯಾಗಿ ಕಾಣಿಸಿಕೊಂಡಿದ್ದೇನೆ. ಇದು ನನ್ನ 5 ನೇ ಚಿತ್ರ ಎಂದರು. ಯಶವಂತ್ ಅವರ ಛಾಯಾಗ್ರಹಣ, ಹರಿ ಅಜಯ್ ಅವರ ಸಂಗೀತ ಸಂಯೋಜನೆ, ಕೆಜಿಎಫ್. ಶ್ರೀಕಾಂತ್ ಅವರ ಸಂಕಲನ ಈ ಚಿತ್ರಕ್ಕಿದೆ. ಉತ್ತರ ಕನ್ನಡ ಜಿಲ್ಲೆಯ ಅದ್ಭುತ ಪ್ರಾಕೃತಿಕ ಸೊಬಗಲ್ಲಿ ರಾಜೇಶ್ ಕೃಷ್ಣನ್, ಆಂಥೋನಿದಾಸ್, ಇಂದು ನಾಗರಾಜ್, ರವಿ ಮೂರೂರು ಹಾಡಿರುವ ವಿಭಿನ್ನ ಶೈಲಿಯ 7 ಹಾಡುಗಳನ್ನ ಸೆರೆಹಿಡಿಯಲಾಗಿದೆ. ಕಾಂತಾರ ಖ್ಯಾತಿಯ ಮಿಥುನ್ಸಿಂಗ್ ಅವರ ಸಾಹಸ ನಿರ್ದೇಶನ, ಯಶವಂತ ಅವರ ಕ್ಯಾಮೆರಾ ಕೈಚಳಕ, ಹರಿಅಜಯ್ ಅವರ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಈ ಚಿತ್ರದಲ್ಲಿ ಸೆಲ್ವಿನ್ ದೇಸಾಯಿ, ಪ್ರಕಾಶ್ ಬೆಳವಾಡಿ, ಪ್ರಮೋದ್ ಶೆಟ್ಟಿ, ಅಯ್ಯಪ್ಪ ಶರ್ಮ, ರವಿ ಮೂರೂರು, ಮಂಜುನಾಥ ಹೆಗಡೆ, ಸಲಗ ಖ್ಯಾತಿಯ ಗೀತಾ ಸಿದ್ಧಿ ಹಾಗೂ ಇತರರು ನಟಿಸಿದ್ದಾರೆ.