ರಾಕ್ಷಸ ಹಾಗೂ ರಕ್ಷಕನ ನಡುವೆ ಹೋರಾಟ : ‘ದೈವ’ ಚಿತ್ರವಿಮರ್ಶೆ (ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ದೈವ
ನಿರ್ದೇಶಕ : MJ ಜಯರಾಜ್
ನಿರ್ಮಾಪಕಿ : ಜಯಮ್ಮ ಪದ್ಮರಾಜ್
ಸಂಗೀತ : ವಿಜೇತ್ ಮಂಜಯ್ಯ
ಛಾಯಾಗ್ರಾಹಣ : ಸಿದಾರ್ಥ್
ತಾರಾಗಣ : ಎಂ. ಜೆ. ಜಯರಾಜ್ , ನೀತು ರಾಯ್, ಸುರಭಿ ರೆಡ್ಡಿ, ನಿಶ್ಚಿತ ಶೆಟ್ಟಿ, ಬಾಲ ರಾಜ್ವಾಡಿ , ಅರುಣ್ ಬಚ್ಚನ್ , ಮಂಜುರಾಜ್ ಸೂರ್ಯ ಹಾಗೂ ಮುಂತಾದವರು…
ದೇಶದ ಮೂಲ ಆಧಾರದ ಸ್ತಂಭವೇ ಹಳ್ಳಿ. ಮುಖ್ಯವಾಗಿ ರೈತರಿದ್ದರೆ ಜೀವನಕ್ಕೆ ದಾರಿ. ದವಸ , ಧಾನ್ಯ ಸಿಕ್ಕರೆ ಸರ್ವರೂ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯ. ಅಂಥದ್ದೇ ಒಂದು ಗ್ರಾಮೀಣ ಸೊಗಡಿನ ಸುತ್ತ ನಡೆಯುವ ಹಳ್ಳಿ ಬದುಕಿನ ಜೀವನ , ಗೌಡನ ದರ್ಪ , ಬಡವರ ಪರದಾಟ , ಆಸ್ತಿ , ಬೆಳೆ , ಅನ್ಯಾಯದ ಸುಳಿಯಲ್ಲಿ ಸ್ನೇಹ , ಪ್ರೀತಿ , ವಿದ್ಯಾಭ್ಯಾಸದ ಕಾರ್ಮೋಡದ ನಡುವೆ ದುಡಿಮೆ ಕಸಿಯಬಾರದು.. ದುಡ್ಡು ಕಸಿಯಬೇಕು…ಎಂಬ ಕ್ರೂರಿಗಳ ದುರ್ವರ್ತನೆಗೆ ತಕ್ಕ ಶಾಸ್ತಿ ಮಾಡಲು ಮುಂದಾಗುವ ಕಥಾನಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ದೈವ”.
ಊರಿನಲ್ಲಿ ಶಾಲೆ ಇದ್ದರೆ ಮಕ್ಕಳು ಓದಿ ವಿದ್ಯಾವಂತರಾಗಿ ತಮ್ಮ ವಿರುದ್ಧ ನಿಲ್ಲುತ್ತಾರೆ ಎನ್ನುತ್ತಾ ಬಂದಂತಹ NGO ಸಂಸ್ಥೆಯ ಶಿಕ್ಷಕರನ್ನೇ ಮಟ್ಟ ಹಾಕುವ ವ್ಯಕ್ತಿ ಕಾಳೇಗೌಡ (ಬಾಲ ರಾಜ್ವಾಡಿ). ಅವನ ಆರ್ಭಟಕ್ಕೆ ಎದುರಿ ಗ್ರಾಮದ ಜನರು ಕೂಡ ಮಾತನಾಡಲು ಭಯ ಪಡುತ್ತಾ , ತಮ್ಮ ಹಿರಿಯರು ಮಾಡಿದ ಸಾಲವನ್ನು ತೀರಿಸಲು ತಮ್ಮ ಜಮೀನಿನಲ್ಲಿ ಬೆಳೆದ ಫಸಲನ್ನು ನೀಡುತ್ತಾ ಹೊಟ್ಟೆ ಬಟ್ಟೆಗಾಗಿ ಪರದಾಡುತ್ತಾರೆ. ಕಾಳೇಗೌಡನಿಗೆ ಹಣದ ಮೇಲೆ ವ್ಯಾಮೋಹವಿದ್ದರೆ ಮಗ ರುದ್ರ (ಅರುಣ್ ಬಚ್ಚನ್) ನಿಗೆ ಹೆಣ್ಣಿನ ಮೇಲೆ ಮೋಹ. ತನ್ನ ಹೆಂಡತಿ ನಿಗೂಢ ಸಾವಿನ ನಂತರವೂ ಊರಿನಲ್ಲಿರುವ ಹೆಣ್ಣುಗಳ ಮೇಲೆ ಇವನ ಕಣ್ಣು. ಇನ್ನು ಶಿವನ ಕೃಪೆಯಿಂದ ಬೆಳೆದು ಬದುಕು ನಡೆಸುವ ದೇವ (ಎಂ ಜೆ ಜಯರಾಜ್) ಕಾಳೇಗೌಡನ ಬಂಟನಾಗಿ ಕೆಲಸ ಮಾಡುತ್ತಾನೆ.
ಇನ್ನು ಶಿವನ ಅನುಗ್ರಹದಿಂದ ಬೆಳೆದ ದೇವ ಪ್ರತಿ ಹುಣ್ಣಿಮೆಯಲ್ಲಿ ಶಿವನ ಆರಾಧನೆ , ಸೇವೆಯಲ್ಲಿ ನಿರತನಾಗುತ್ತಾನೆ. ಇತ್ತ ತಾಯಿ , ಮಾವನ ಮಗಳು ಶೀಲಾ ( ನೀತು ರಾಯ್) ಸೇರಿದಂತೆ ಯಾರ ಮಾತನ್ನು ಲೆಕ್ಕಿಸದೆ ಗ್ರಾಮದ ಜನರ ವಿರೋಧ ಕಟ್ಟಿಕೊಂಡೆ ಗೌಡ ಹೇಳಿದಂತೆ ಆಸ್ತಿ ,ದವಸ , ಧಾನ್ಯ, ಪತ್ರಗಳನ್ನು ವಶಪಡೆಯುತ್ತಾನೆ. ಗೌಡನ ಮಗ ರುದ್ರ ತನ್ನ ಅಕ್ಕನನ್ನು ಕೊಂದಿದ್ದಾನೆ ಎಂದು ಕೇಸ್ ಓಪನ್ ಮಾಡಿಸುವ ತಂಗಿ ಮೌಲ್ಯ (ನಿಶ್ಚಿತಾ ಶೆಟ್ಟಿ). ಇನ್ನು ಪೊಲೀಸ್ ಇನ್ವೆಸ್ಟಿಗೇಷನ್ , ಕೋರ್ಟ್ ಒದ್ದಾಟದಿಂದ ಹೊರಬರಲು ಪ್ಲಾನ್ ಮಾಡುವ ಕಾಳೇಗೌಡ.

ಇದರ ನಡುವೆ ದೇವ ನ ಬಾಲ್ಯದ ಗೆಳತಿ ಗೌಡನ ಪುತ್ರಿ ಸೃಷ್ಟಿಯ ಬೆಂಬಲ ಹೊಸ ಸಂಚಲನ ಸೃಷ್ಟಿಸುತ್ತದೆ. ಇದಲ್ಲದರ ಹಿಂದೆ ಒಂದಷ್ಟು ಫ್ಲಾಶ್ ಬ್ಯಾಕ್ ಘಟನೆಗಳು ತೆರೆದುಕೊಳ್ಳುತ್ತದೆ. ದೇವ ಬಾಲ್ಯದಲ್ಲಿ ನೋಡಿದ ಸತ್ಯ.. ವಿದ್ಯಾರ್ಥಿ ಬದುಕಿನ ಒದ್ದಾಟ… ರೈತರ ಸಮಸ್ಯೆಗೆ ಮಾಡುವ ಪ್ರತಿ ತಂತ್ರ… ಪ್ರೀತಿಸುವ ಹೂಗಳಿಗೆ ಹೇಳುವ ಉತ್ತರ… ದುಷ್ಟರಿಗೆ ದೈವದ ಶಕ್ತಿಯ ಪ್ರಭಾವ.. ಕ್ಲೈಮಾಕ್ಸ್ ಹೇಳುವ ಪಾಠ… ಹೀಗೆ ಒಂದಷ್ಟು ಸೂಕ್ಷ್ಮ ವಿಚಾರಗಳಿಗಾಗಿ ನೀವು ಒಮ್ಮೆ ಈ ಚಿತ್ರವನ್ನು ನೋಡಬೇಕು.
ಇನ್ನು ಈ ಚಿತ್ರದ ನಿರ್ದೇಶಕ ಹಾಗೂ ನಟ MJ ಜಯರಾಜ್ ಹಳ್ಳಿ ಸೋಡಿನ ಬದುಕು ಭಾವನೆ , ಗೌಡನ ಅಟ್ಟಹಾಸ , ರೈತರ ಪರದಾಟ , ಹಿಂಸೆ ವಿದ್ಯಾಭ್ಯಾಸದ ಕೊರತೆ , ಪ್ರೀತಿಯ ಸೆಳೆತ , ಸಂಬಂಧಗಳ ಬೆಸುಗೆ, ದೈವದ ಶಕ್ತಿಯನ್ನು ಕಟ್ಟಿಕೊಡುವುದರಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಕಥೆಯಲ್ಲಿ ಹೊಸತನವಿಲ್ಲ , ಚಿತ್ರಕಥೆ ಇನ್ನಷ್ಟು ಹಿಡಿತ ಮಾಡಬಹುದಿತ್ತು , ಸಂಭಾಷಣೆ ಗಮನ ಸೆಳೆಯುತ್ತದೆ. ನಟನಾಗಿಯೂ ತಮ್ಮ ಪಾತ್ರಕ್ಕೆ ನ್ಯಾಯವನ್ನು ನೀಡಲು ಶ್ರಮ ಪಟ್ಟಿದ್ದಾರೆ. ಆಕ್ಷನ್ ನಲ್ಲಿ ಮಿಂಚಿದ್ದು , ಪ್ರಥಮ ಪ್ರಯತ್ನದಲ್ಲೇ ಭರವಸೆಯನ್ನು ಮೂಡಿಸಿದ್ದಾರೆ. ನಾಯಕಿಯರಾಗಿ ಅಭಿನಯಿಸಿರುವ ಸುರಭಿ ರೆಡ್ಡಿ , ನೀತುರಾಯ್ , ನಿಶ್ಚಿತ ಶೆಟ್ಟಿ ತಮ್ಮ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇನ್ನೂ ಊರ ಗೌಡನಾಗಿ ಬಾಲ ರಾಜ್ವಾಡಿ ಎಂದಿನಂತೆ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದು ಎಲ್ಲರ ಗಮನ ಸೆಳೆದಿದ್ದಾರೆ. ಇನ್ನು ಊರ ಗೌಡನ ಮಗನಾಗಿ ರುದ್ರನ ಪಾತ್ರದಲ್ಲಿ ಅರುಣ್ ಬಚ್ಚನ್ ಕಟ್ಟು ಮಸ್ತಿನ ಖದರ್ ಧ್ವನಿಯಲ್ಲಿ ಖಳನಟನಾಗಿ ಮಿಂಚಿದ್ದು , ಮತ್ತೊಬ್ಬ ಪ್ರತಿಭಾವಂತ ನಟ ಚಿತ್ರರಂಗಕ್ಕೆ ಸಿಕ್ಕಂತಾಗಿದೆ. ಅದೇ ರೀತಿ ಮತ್ತೊಬ್ಬ ಪ್ರತಿಭೆ ಮಂಜು ರಾಜ್ ಸೂರ್ಯ ಕೂಡ ಒಬ್ಬ ಎನ್‌ಜಿಓ ಶಿಕ್ಷಕನಾಗಿ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದು , ಸಹ ಶಿಕ್ಷಕಿಯೂ ಕೂಡ ಉತ್ತಮ ಸಾಥ್ ನೀಡಿದ್ದಾರೆ.
ಇನ್ನು ಉಳಿದಂತೆ ಅಭಿನಯಿಸಿರುವ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಬೆಂಬಲ ನೀಡಿದ್ದಾರೆ. ಇನ್ನು ಚಿತ್ರದ ಸಂಗೀತ , ಛಾಯಾಗ್ರಹಣ , ಸಂಕಲನ ಸೇರಿದಂತೆ ತಾಂತ್ರಿಕವಾಗಿ ತಂಡ ಬಹಳಷ್ಟು ಶ್ರಮ ಪಟ್ಟಿದೆ. ಒಟ್ಟಾರೆ ಮಗನಿಗಾಗಿ ತಾಯಿ ನಿರ್ಮಿಸಿರುವ ಈ ಚಿತ್ರಕ್ಕೆ ಸ್ನೇಹಿತರು ಕೂಡ ಸಹಕಾರ ನೀಡಿರುವುದನ್ನು ಮೆಚ್ಚಲೇಬೇಕು , ಇದೊಂದು ಗ್ರಾಮೀಣ ಭಾಗದಲ್ಲಿ ನಡೆಯುವಂತಹ ಸೂಕ್ಷ್ಮ ಘಟನೆಗಳ ಸುತ್ತ , ಮನೋರಂಜನೆ ಅಂಶವನ್ನು ಬೆಸೆದಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.