ಕೊಲೆಗಳ ಹಿಂದಿರುವ ನೋವಿನ ಕಥೆ ‘ಸೂತ್ರಧಾರಿ’ (ಚಿತ್ರವಿಮರ್ಶೆ -ರೇಟಿಂಗ್ : 3.5/5)
ರೇಟಿಂಗ್ : 3.5/5
ಚಿತ್ರ : ಸೂತ್ರಧಾರಿ
ನಿರ್ದೇಶಕ : ಕಿರಣ್ ಕುಮಾರ್
ನಿರ್ಮಾಪಕ : ನವರಸನ್
ಸಂಗೀತ : ಚಂದನ್ ಶೆಟ್ಟಿ
ಛಾಯಾಗ್ರಾಹಣ : ಪಿ.ಕೆ.ಹೆಚ್ ದಾಸ್
ತಾರಾಗಣ : ಚಂದನ್ ಶೆಟ್ಟಿ, ಅಪೂರ್ವ, ತಬಲನಾಣಿ, ನವರಸನ್ , ಸಂಜನಾ ಆನಂದ್ , ಪ್ರಶಾಂತ್ ನಟನ , ಗಣೇಶ್ ನಾರಾಯಣನ್ , ಸಂಜಯ್ ಗೌಡ, ಕಾರ್ತಿಕ್ ಹಾಗೂ ಮುಂತಾದವರು…
ಸಸ್ಪೆನ್ಸ್ , ಥ್ರಿಲ್ಲರ್ , ಮರ್ಡರ್ ಮಿಸ್ಟರಿಯ ಹಿಂದೆ ನೋವಿನ ಹಾಗೂ ಸೇಡಿನ ನಿಗೂಢ ಕಥಾನಕಗಳ ಸತ್ಯ ಬೆಸೆದುಕೊಂಡಿರುತ್ತದೆ. ಅಂತದ್ದೇ ಒಂದು ಸಾವಿನ ಹಿಂದಿರುವ ದುಷ್ಟ ವ್ಯಕ್ತಿಗಳ ಕೈವಾಡದ ಸುಳಿಯ ಸುತ್ತ ಕುಟುಂಬಗಳ ಪರದಾಟ, ಸೇಡಿನ ಜ್ವಾಲೆ , ಪೊಲೀಸ್ ಬೇಟೆ ಹಿನ್ನೆಲೆಯಲ್ಲಿ ನಡೆಯುವ ನಿಗೂಢ ವ್ಯಕ್ತಿಯ ಮೈಂಡ್ ಗೇಮ್ ಪ್ಲಾನ್ನಲ್ಲಿ ಎದುರಾಗುವ ರೋಚಕ ಘಟನೆಗಳ ಸರಮಾಲೆಯಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಸೂತ್ರಧಾರಿ”.
ಜೀವನದಲ್ಲಿ ಒಂದು ಆಸೆ , ಕನಸು , ಸೇವೆಯ ಗುರಿಯೊಂದಿಗೆ ಬದುಕು ಕಟ್ಟಿಕೊಳ್ಳುವವಳು ಮನನೊಂದು ಬಿಲ್ಡಿಂಗ್ ನಿಂದ ಹಾರಿ ಪ್ರಾಣ ಬಿಡುತ್ತಾಳೆ. ಇನ್ನು ಅಧಿಕಾರಿ ಹಾಗೂ ಶ್ರೀಮಂತ ವರ್ಗದ ವ್ಯಕ್ತಿಗಳು ವಿಚಿತ್ರ ಮನಸ್ಥಿತಿಯಲ್ಲಿ ಒಬ್ಬೊಬ್ಬರಾಗಿ ಸಾಯುತ್ತಾ ಹೋಗುತ್ತಾರೆ. ಇದು ಪೊಲೀಸ್ ಇಲಾಖೆಗೆ ದೊಡ್ಡ ತಲೆ ನೋವಾಗಿ ಪರಿಣಮಿಸುತ್ತದೆ.
ರಾಜಕೀಯ ಒತ್ತಡದ ನಡುವೆ ಪರದಾಡುವ ಪೊಲೀಸ್ ಕಮಿಷನರ್ ಈ ಕೇಸನ್ನ ಭೇದಿಸಲು ಸಸ್ಪೆಂಡ್ ಆಗಿರುವ ಚಾಣಾಕ್ಷ ಪೋಲೀಸ್ ಅಧಿಕಾರಿ ವಿಜಯ್ ಕುಮಾರ್ (ಚಂದನ್ ಶೆಟ್ಟಿ)ಗೆ ನೀಡಲು ನಿರ್ಧರಿಸುತ್ತಾರೆ. ಹುಡುಗಿಯರನ್ನ ಕಂಡರೆ ಫ್ಲರ್ಟ್ ಮಾಡುವ ಈ ಪೊಲೀಸ್ ಅಧಿಕಾರಿ ಲೈಫ್ ನಲ್ಲಿ ಎಂಜಾಯ್ ಮಾಡುವ ತವಕ ಹೊಂದಿರುತ್ತಾನೆ.
ತಂದೆ ವಿಚಾರವಾಗಿ ಕೋಪಿಸಿಕೊಳ್ಳುವ ವಿಜಯ್ ತಾಯಿಯ ಮಾತು ಎಂದರೆ ಅಸಡ್ಡೆ. ಆದರೆ ಇದರ ನಡುವೆ ಒಂದು ಸತ್ಯ ತಿಳಿಯುವ ವಿಜಯ್ ಕುಮಾರ್ ತನ್ನ ಕರ್ತವ್ಯ ನಿಷ್ಠೆಗೆ ಮುಂದಾಗುತ್ತಾನೆ. ಸಾವುಗಳ ಹಿಂದಿನ ಕಾರ್ಯಾಚರಣೆಗೆ ಪೊಲೀಸ್ ಪೇದೆಗಳಾದ ಕಾಳಿ (ತಬ್ಲಲ ನಾಣಿ) ಹಾಗೂ ತಂಡವನ್ನು ಕಟ್ಟಿಕೊಳ್ಳುತ್ತಾನೆ.
ತನಿಖೆಯ ಹಾದಿಯಲ್ಲಿ ವಿಕ್ರಂ (ನವರಸನ್) ಸಿಗುತ್ತಾನೆ. ಅಮಾಯಕ ಪ್ರೇಮಿಯ ಕಥೆಯ ಕೇಳಿ ಬಿಡುತ್ತಾರೆ. ಇದರ ನಡುವೆ ಅಚಾನಕ್ಕಾಗಿ ಮಾರ್ಗಮಧ್ಯ ಮುದ್ದಾದ ಬೆಡಗಿ ಅದ್ವಿಕಾ (ಅಪೂರ್ವ) ಕಾಣುತ್ತಾಳೆ. ವಿಜಯ್ ತನ್ನ ಪರಿಚಯದ ಜೊತೆ ಪ್ರೀತಿಯ ವಿಚಾರ ತಿಳಿಸಿ ಸುತ್ತಾಟ , ಓಡಾಟ ನಡೆಸುತ್ತಾರೆ.
ಇನ್ನು ಸಾವಿನ ಹಿಂದಿರುವ ರಹಸ್ಯ ಭೇದಿಸುವ ಸಿಸಿಬಿ ತಂಡಕ್ಕೆ ಒಂದೊಂದು ಸುಳಿವು ಸಿಗುತ್ತಾ ಹೋದಂತೆ ನಿಗೂಢ ವ್ಯಕ್ತಿಯ ಕರೆ ಗೊಂದಲ ಮೂಡಿಸುತ್ತಾ ಹೋಗುತ್ತಾನೆ. ಇನ್ನೇನು ಅಪರಾಧಿ ಸಿಕ್ಕ ಎನ್ನುವಷ್ಟರಲ್ಲಿ ಮತ್ತೊಂದು ಸತ್ಯ ಸಂಗತಿ ಹೊರಬರುತ್ತದೆ. ಸಾತ್ವಿಕ ಎಂಬ ಬುದ್ಧಿವಂತೆ ಹುಡುಗಿ ಹುಮಾನಿಟಿ ಆಪ್ ಮೂಲಕ ಜನಸಾಮಾನ್ಯರಿಗೂ ಅನುಕೂಲವಾಗುವಂತಹ ಕೆಲಸ ಮಾಡಲು ಹೊರಟಾಗ ಅಡ್ಡಿ ಮಾಡುವವರ ಷಡ್ಯಂತರ ಈ ಎಲ್ಲಾ ಸಮಸ್ಯೆಗಳಿಗೆ ದಾರಿಯಾಗಿ ಸೂತ್ರಧಾರಿ ಪ್ರವೇಶ ಮಾಡುತ್ತಾನೆ. ಸಾವುಗಳಿಗೆ ಕಾರಣ ಯಾರು… ಪೋಲಿಸ್ ಪ್ಲಾನ್ ಏನು… ಹ್ಯುಮಾನಿಟಿ ಆಪ್ ರಹಸ್ಯ ಏನು… ನಿಜವಾದ ಸೂತ್ರಧಾರಿ ಯಾರು… ಎಂಬುದನ್ನು ತಿಳಿದುಕೊಳ್ಳಲು ಒಮ್ಮೆ ಈ ಚಿತ್ರವನ್ನು ನೋಡಬೇಕು.
ಒಂದು ಪೊಲೀಸ್ ಇನ್ವೆಸ್ಟಿಗೇಷನ್, ಮರ್ಡರ್ ಮಿಸ್ಟರಿ ಸಬ್ಜೆಕ್ಟ್ ಅನ್ನ ಅಚ್ಕಟ್ಟಾಗಿ ನಿರ್ಮಾಣ ಮಾಡಿದ್ದಾರೆ ನಿರ್ಮಾಪಕ ನವರಸನ್. ಒಬ್ಬ ಅಮಾಯಕ ಪ್ರೇಮಿಯ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಚಿತ್ರದ ಹೈಲೆಟ್ ಸನ್ನಿವೇಶದಲ್ಲಿ ಮಿಂಚಿದ್ದಾರೆ.
ಹಾಗೆಯೇ ನಿರ್ದೇಶಕರು ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಕುತೂಹಲಕಾರಿಯಾಗಿದೆ. ಜೀವನದಲ್ಲಿ ಕನಸು , ಗುರಿ , ಹೊಂದಿರುವವರ ಬದುಕಿನಲ್ಲಿ ದುರಂತ ಎದುರಾದರೆ ಏನಿಲ್ಲ ಸಮಸ್ಯೆ ಆಗುತ್ತದೆ. ಅದನ್ನು ಎದುರಿಸಲು ಪರದಾಡುವ ಸ್ಥಿತಿಗತಿಯ ಸುತ್ತ ಪೊಲೀಸ್ ಕಾರ್ಯಾಚರಣೆ ನಡುವೆ ನಡೆಯುವ ಗೇಮ್ ಪ್ಲಾನ್ ಗಮನ ಸೆಳೆಯುವಂತೆ ತೆರೆಯ ಮೇಲೆ ತರಲು ಪ್ರಯತ್ನ ಪಟ್ಟಿದ್ದಾರೆ. ಚಿತ್ರಕಥೆಯಲ್ಲಿ ತಾಂತ್ರಿಕವಾಗಿ ಇನ್ನಷ್ಟು ಆಕರ್ಷಕವಾಗಿ ಮಾಡಬಹುದಿತ್ತು. ಫ್ಯಾಮಿಲಿ , ಲವ್ , ಸಸ್ಪೆನ್ಸ್ , ಮರ್ಡರ್ ಮಿಸ್ಟರಿಯ ಈ ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಸೊಗಸಾಗಿ ಮೂಡಿ ಬಂದಿದೆ. ಛಾಯಾಗ್ರಾಹಕರ ಕೈಚಳಕ ಉತ್ತಮವಾಗಿದೆ. ಇನ್ನು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಚಂದನ್ ಶೆಟ್ಟಿ ಪಾತ್ರಕ್ಕೆ ನ್ಯಾಯ ಒದಗಿಸಲು ಬಹಳಷ್ಟು ಶ್ರಮ ಪಟ್ಟಿದ್ದಾರೆ.
ಮೊದಲ ಭಾಗಕ್ಕಿಂತ ದ್ವಿತೀಯ ಭಾಗದಲ್ಲಿ ಗಮನ ಸೆಳೆಯುತ್ತಾರೆ. ಇನ್ನಷ್ಟು ಪರಿಪಕ್ವತೆ ಅಗತ್ಯ ಅನ್ಸುತ್ತೆ. ಇನ್ನು ನಾಯಕಿಯಾಗಿ ಅಪೂರ್ವ ಸಿಕ್ಕ ಅವಕಾಶಕ್ಕೆ ಸಮರ್ಥವಾಗಿ ಜೀವ ತುಂಬಿದ್ದಾರೆ. ಹಾಡೊಂದಕ್ಕೆ ಬರುವ ಸಂಜನಾ ಆನಂದ್ ಗಮನ ಸೆಳೆಯುತ್ತಾರೆ. ತಬಲಾ ನಾಣಿಯ ಪಂಚಿಂಗ್ ಡೈಲಾಗ್ , ಎರಡು ಶೇಡಿನ ನಟನೆ ಹೈಲೈಟ್ ಆಗಿದೆ. ಇಡೀ ಚಿತ್ರದ ಕೇಂದ್ರ ಬಿಂದು ನವರಸನ್ ಪಾತ್ರ ನೆನಪಿನಲ್ಲಿ ಉಳಿಯುವಂತೆ ಮಾಡಿದೆ. ಇನ್ನು ಯುವ ಪ್ರತಿಭೆ ಕಾರ್ತಿಕ್ ಸೇರಿದಂತೆ ಗಣೇಶ್ ನಾರಾಯಣನ್ , ಸಂಜಯ್ ಗೌಡ , ಪ್ರಶಾಂತ್ ನಟನ , ಕಿನ್ನಲ್ ರಾಜ್ ಸೇರಿದಂತೆ ಎಲ್ಲಾ ಪಾತ್ರಧಾರಿಗಳು ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದು , ಕುತೂಹಲ ಮೂಡಿಸುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.