ಮಾನಸಿಕ ದೈಹಿಕ ಸಮಸ್ಯೆಗಳ ಸುತ್ತ “ಕ್ಯಾಲೆಂಡರ್” (ಚಿತ್ರವಿಮರ್ಶೆ-ರೇಟಿಂಗ್ : 3/5)
ರೇಟಿಂಗ್ : 3/5
ಚಿತ್ರ : ಕ್ಯಾಲೆಂಡರ್
ನಿರ್ದೇಶಕ : ನವೀನ್ ಶಕ್ತಿ
ನಿರ್ಮಾಪಕ : ಆದರ್ಶ
ಸಂಗೀತ : ಸುನಾದ್ ಗೌತಮ್
ಛಾಯಾಗ್ರಹಣ : ರಮೇಶ್
ತಾರಾಗಣ : ಆದರ್ಶ ಗುಂಡುರಾಜ್ , ನಿವಿಷ್ಕ ಪಾಟೀಲ್, ಸುಶ್ಮಿತ , ರಮೇಶ್ ಇಂದಿರಾ, ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ, ವಿಶೇಷ ಪಾತ್ರದಲ್ಲಿ ಮಾಲಾಶ್ರೀ ಹಾಗೂ ಮುಂತಾದವರು…
ಸಾಮಾನ್ಯವಾಗಿ ದಿನನಿತ್ಯದ ಜೀವನ ಶೈಲಿಯನ್ನ ಒಂದು ಹಂತದಲ್ಲಿ ರೂಪಿಸಿಕೊಂಡು ಸಾಗುವುದು ಸರ್ವೇ ಸಾಮಾನ್ಯ. ಅದರಲ್ಲೂ ಹೆಣ್ಣು ಮಕ್ಕಳ ಕೆಲಸ ಕಾರ್ಯಗಳು , ನಡೆ , ನುಡಿ , ಮನಸ್ಥಿತಿ, ದೈಹಿಕ ಏರುಪೇರುಗಳ ನಡುವೆ ಸಮಯ ಸಂದರ್ಭಕ್ಕೆ ಅನುಗುಣವಾಗಿ ಕುಟುಂಬಗಳೊಂದಿಗೆ ಬೆರತ ಸಾಗುವುದು ತಿಳಿದೇ ಇದೆ.
ಅಂತದ್ದೇ ಒಂದಷ್ಟು ಹೆಣ್ಣು ಮಕ್ಕಳ ಬದುಕಿನಲ್ಲಿ ಆಗುವಂತಹ ವಿಚಾರಗಳ ಕಥಾನಕವನ್ನು ಬೆಸೆದುಕೊಂಡು ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಕ್ಯಾಲೆಂಡರ್”. ತನ್ನ ವೃತ್ತಿಯನ್ನು ಬಹಳ ಸೂಕ್ಷ್ಮವಾಗಿ ಅರಿತುಕೊಂಡು ಪ್ರೀತಿಯಿಂದ ಜನರ ಸೇವೆಯನ್ನು ಮಾಡುವ ಡಾಕ್ಟರ್ ಆಕಾಶ್ (ಆದರ್ಶ ಗುಂಡುರಾಜ್) ಅಚಾನಕ್ಕಾಗಿ ಮಾರ್ಗ ಮಧ್ಯ ಸಿಗುವ ನಕ್ಷತ್ರ (ಸುಶ್ಮಿತಾ ನಾಯಕ್)ಳನ್ನ ನೋಡಿ ಇಷ್ಟಪಟ್ಟು ಪ್ರೀತಿಸುತ್ತಾನೆ. ಮದುವೆ ಹಂತಕ್ಕೆ ಹೋಗಿ ದೂರವಾಗುತ್ತಾರೆ.
ಕುಡಿತಕ್ಕೆ ದಾಸನಾಗುವ ಡಾಕ್ಟರ್ ಆಕಾಶ್ ಗೆ ಸಹಕಾರಿಯಾಗಿ ನಿಲ್ಲುವ ಸ್ನೇಹಿತೆ ಮಾಳವಿಕ ( ನಿವಿಷ್ಕ ಪಾಟೀಲ್). ಆದರೆ ಮಾಳವಿಕ ಪತಿ ರಾಜ್ ಗೆ ಇವರಿಬ್ಬರ ಮೇಲೆ ಅನುಮಾನ. ವಾದ ವಿವಾದ ಗಲಾಟೆಯ ನಡುವೆ ರಾಜ್ ಸಾವಿಗಿಡಾಗುತ್ತಾನೆ. ಶ್ರೀಮಂತ ವ್ಯಕ್ತಿ ಧನ್ವೀರ ಸಿಂಗ್ (ಶಿವ್ ಪ್ರದೀಪ್) ತನ್ನ ಪುತ್ರನ ಸಾವಿಗೆ ಕಾರಣರಾದವರನ್ನ ಹಿಡಿಯಲು ಸಿಐಡಿ ಯುವರಾಜು ಒಂಟಿಮನಿ (ರಮೇಶ್ ಇಂದಿರಾ) ತಂಡಕ್ಕೆ ಕೇಸ್ ನೀಡುತ್ತಾನೆ.
ಒಂದು ಕಡೆ ಇನ್ವೆಸ್ಟಿಗೇಷನ್ ಸಾಗಿದರೆ ಮತ್ತೊಂದು ಕಡೆ ಗೆಳೆಯ ಸೂರ್ಯ( ಗುರುನಂದನ್) ಮೂಲಕ ಲಾಯರ್ (ಸುಚೇಂದ್ರ ಪ್ರಸಾದ್) ಸಹಕಾರ ಕೇಳುತ್ತಾರೆ. ಹೀಗೆ ಒಂದಕ್ಕೊಂದು ಕೊಂಡಿಯಂತೆ ಬೆಸೆದುಕೊಂಡು ಸಾಗುವ ಈ ಘಟನೆಗಳ ಹಿಂದೆ ಕೆಲವರ ಮೇಲೆ ಅನುಮಾನ ಮೂಡುತ್ತಾ ಹೋಗುತ್ತದೆ. ಆದರೆ ಇದೆಲ್ಲದಕ್ಕೂ ಪಿಎಸ್ಎಂ ಎಂಬ ಸಮಸ್ಯೆ ಕಾರಣ ಎಂಬ ಸೂಕ್ಷ್ಮ ವಿಷಯ ಆರೋಗ್ಯ ಸಚಿವೆ (ಮಾಲಾಶ್ರೀ) ಸಮ್ಮುಖದಲ್ಲಿ ಡಾಕ್ಟರ್ ಗಳ ಮೂಲಕ ತಿಳಿಯುತ್ತಾ ಹೋಗುತ್ತದೆ. ಏನು ಪಿ.ಎಸ್.ಎಂ ಎಂದರೆ…
ಇದು ಯಾರ ಸಮಸ್ಯೆ… ಹೇಗೆ ಬರುತ್ತೆ… ಇದಕ್ಕೆ ಪರಿಹಾರ ಇದೆಯಾ… ಎಂಬ ಸೂಕ್ಷ್ಮ ವಿಚಾರವು ಮಹಿಳೆಯರಿಗೆ ಸೂಕ್ತ ಎನ್ನುವಂತಹ ಅಂಶವನ್ನು ಹೇಳಲು ಹೊರಟಿರುವ ಈ ಚಿತ್ರವನ್ನು ನೀವು ತೆರೆಯ ಮೇಲೆ ನೋಡಬೇಕು.

ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾ ವಸ್ತು ಬಹಳ ಅರ್ಥಪೂರ್ಣವಾಗಿದ್ದು , ಹೆಣ್ಣು ಮಕ್ಕಳ ಮನಸ್ಥಿತಿ , ಅವರ ಮೇಲೆ ಆಗುವಂಥ ಒಂದಷ್ಟು ಪರಿಣಾಮಗಳನ್ನು ಸ್ಪಷ್ಟವಾಗಿ ತೆರೆಯ ಮೇಲೆ ತೋರುವ ಪ್ರಯತ್ನವನ್ನು ಮಾಡಿದ್ದಾರೆ. ಆದರೆ ಚಿತ್ರಕಥೆ ಶೈಲಿ ಇನ್ನಷ್ಟು ಹಿಡಿತವನ್ನು ಸಾಧಿಸಬೇಕಿತ್ತು. ಕ್ಲೈಮ್ಯಾಕ್ಸ್ ವರೆಗೂ ಚಿತ್ರ ಯಾವ ಹಾದಿಯಲ್ಲಿ ಸಾಗುತ್ತಿದೆ ಎಂಬ ಗೊಂದಲ ಮೂಡುತ್ತದೆ. ಕೊನೆಯ ಪರಿಣಾಮ ಗಮನ ಸೆಳೆಯುತ್ತದೆ.
ಇನ್ನು ಚಿತ್ರದ ಸಂಗೀತ , ಛಾಯಾಗ್ರಹಣ , ಸಂಕಲನ ತಕ್ಕಮಟ್ಟಿಗೆ ಮೂಡಿ ಬಂದಿದೆ. ನಿರ್ಮಾಣದ ಜೊತೆ ನಟನಾಗಿ ಅಭಿನಯಿಸಿರುವ ಆದರ್ಶ ಗುಂಡುರಾಜ್ ಬಹಳ ಕಷ್ಟಪಟ್ಟು ಪಾತ್ರವನ್ನು ನಿರ್ವಹಿಸಿದ್ದಾರೆ. ಬಹಳಷ್ಟು ಪರಿಪಕ್ವತೆ ಅಗತ್ಯ ಅನಿಸುತ್ತದೆ. ಕೆಲವು ಸನ್ನಿವೇಶಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಇನ್ನು ನಾಯಕಿ ಸುಶ್ಮಿತಾ ನಾಯಕ್ ಮುದ್ದು ಮುದ್ದಾಗಿ ನಗು ಮೊಗದಲ್ಲಿ ಸಿಕ್ಕ ಅವಕಾಶಕ್ಕೆ ನ್ಯಾಯ ಒದಗಿಸಿದ್ದಾರೆ. ಇನ್ನೋರ್ವ ನಟಿ ನಿವಿಷ್ಕ ಪಾಟೀಲ್ ತಮ್ಮ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ. ಹಾಗೆಯೇ ಹಿರಿಯ ನಟ ರಮೇಶ್ ಇಂದಿರಾ ಅಭಿನಯಿಸಿರುವ ಪೊಲೀಸ್ ಅಧಿಕಾರಿ ಪಾತ್ರ ಸ್ವಲ್ಪ ಅತಿರೇಕ ಅನಿಸುತ್ತದೆ. ಇನ್ನು ವಿಶೇಷ ಪಾತ್ರದಲ್ಲಿ ಅಭಿನಯಿಸಿರುವ ಮಾಲಾಶ್ರೀ ಸೇರಿದಂತೆ ಪ್ರಮೋದ್ ಶೆಟ್ಟಿ, ಪ್ರಕಾಶ್ ತುಮ್ಮಿ ನಾಡು, ಸುಚೇಂದ್ರ ಪ್ರಸಾದ್, ಚಂದ್ರಪ್ರಭ ಸೇರಿದಂತೆ ಎಲ್ಲಾ ಕಲಾವಿದರು ಚಿತ್ರದ ಓಟಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಮಹಿಳಾ ಪ್ರಧಾನ ಅಂಶಗಳನ್ನು ಒಳಗೊಂಡಿರುವ ಈ ಚಿತ್ರವನ್ನು ಎಲ್ಲರೂ ಒಮ್ಮೆ ನೋಡುವಂತಿದೆ.