ಕಪ್ಪು ಹಣದ ಗುಟ್ಟು , ರಟ್ಟು , ಎಡವಟ್ಟು : ಬ್ಯಾಂಕ್ of ಭಾಗ್ಯಲಕ್ಷ್ಮಿ ಚಿತ್ರವಿಮರ್ಶೆ (ರೇಟಿಂಗ್ : 3.5 /5)
ರೇಟಿಂಗ್ : 3.5 /5
ಚಿತ್ರ : ಬ್ಯಾಂಕ್ of ಭಾಗ್ಯಲಕ್ಷ್ಮಿ
ನಿರ್ದೇಶಕ : ಅಭಿಷೇಕ್. ಎಂ
ನಿರ್ಮಾಪಕ:ಹೆಚ್.ಕೆ ಪ್ರಕಾಶ್
ಸಂಗೀತ : ಜೂಡಾ ಸ್ಯಾಂಡಿ
ಛಾಯಾಗ್ರಹಣ : ಅಭಿಷೇಕ್
ತಾರಾಗಣ : ದೀಕ್ಷಿತ್ ಶೆಟ್ಟಿ , ಬೃಂದಾ ಆಚಾರ್ಯ , ಸಾಧು ಕೋಕಿಲ, ಶ್ರೀವತ್ಸ , ಶ್ರೇಯಸ್ ಶರ್ಮ, ಅಶ್ವಿನ್ ರಾವ್ ಪಲ್ಲಕ್ಕಿ , ವಿನುತ್, ಗೋಪಾಲಕೃಷ್ಣ ದೇಶಪಾಂಡೆ, ಉಷಾ ಭಂಡಾರಿ ಹಾಗೂ ಮುಂತಾದವರು…
ದುಡ್ಡೇ ದೊಡ್ಡಪ್ಪ ಅಂದ ನಮ್ಮಪ್ಪ… ಎಂಬ ಹಾಡಿನಂತೆ ಹಣವೇ ಎಲ್ಲದಕ್ಕೂ ಮೂಲ. ಹಣವಿದ್ದರೆ ಏನು ಬೇಕಾದರೂ ಆಗುತ್ತೆ ಎಂಬು ನಿರ್ಧಾರ ಬಹುತೇಕರಲ್ಲಿ ಇದ್ದದ್ದೇ. ಅದು ರಾಜಕೀಯ,ಅಧಿಕಾರಿ ಅಥವಾ ಜನಸಾಮಾನ್ಯರ ಕೈಯಲ್ಲಿ ಸಿಕ್ಕರು ಹೇಗೆ ಬೇಕೋ ಹಾಗೆ ಬಳಸಿಕೊಳ್ಳುವುದು ಸಹಜ. ಅಂತದ್ದೇ ಒಂದು ಎಲೆಕ್ಷನ್ ಸಂದರ್ಭದಲ್ಲಿ ಕಪ್ಪು ಹಣದ ಜಾಡು ಸಣ್ಣಪುಟ್ಟ ಕಳ್ಳರಿಗೆ ಸಿಕ್ಕಿದಾಗ ಏನೆಲ್ಲಾ ಅನಾಹುತಗಳು ನಡೆಯುತ್ತದೆ. ಯಾರೆಲ್ಲಾ ಪರದಾಡುತ್ತಾರೆ ಅನ್ನುವುದರ ಜೊತೆಗೆ ಹಣದ ಮೋಹ , ಪ್ರೀತಿಯ ಸೆಳೆತ , ಗೆಳೆಯರ ಪರದಾಟ , ಮಾನವೀಯತೆಯೊಂದಿಗೆ ಹೊಸ ಬ್ಯಾಂಕುಗಳ ಉದ್ಭವದ ಹಿಂದಿರುವ ಕರಾಳ ಸತ್ಯದ ಅನಾವರಣವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮಿ”.
ಎಲೆಕ್ಷನ್ ಸಮಯದಲ್ಲಿ ಸಣ್ಣಪುಟ್ಟ ಪುಡಿ ರೌಡಿಗಳು , ಕಳ್ಳರನ್ನು ಕರೆದು ವಾರ್ನಿಂಗ್ ಮಾಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ಅದರಂತೆ ಇನ್ಸ್ಪೆಕ್ಟರ್ ರಾಮಕೃಷ್ಣ (ಸಾಧುಕೋಕಿಲ)
ಕನಕ (ದೀಕ್ಷಿತ್ ಶೆಟ್ಟಿ) ಹಾಗೂ ಆತನ ಗ್ಯಾಂಗ್ ಗೆ ಕೂಡ ವಾರ್ನಿಂಗ್ ನೀಡುತ್ತಾರೆ. ಇನ್ಸ್ಪೆಕ್ಟರ್ ಗೆ ಟ್ರಾನ್ಸ್ಫರ್ ಮಾಡಿಸುವೆ ಎಂದು ಟಕ್ಕರ್ ಕೊಟ್ಟು ಕಾರ್ ಕಿಡ್ನಾಪ್ ಮಾಡುವ ಗ್ಯಾಂಗ್. ಎಲೆಕ್ಷನ್ ಸಂದರ್ಭದಲ್ಲಿ ಎಲ್ಲರೂ ಬ್ಯುಸಿಯಾಗಿರುತ್ತಾರೆ.
ಸಿಟಿ ಬಿಟ್ಟು ಹೊರಭಾಗದ ಬ್ಯಾಂಕ್ ಲೂಟಿ ಮಾಡಿ ಲೈವ್ ಸೆಟಲ್ ಆಗುತ್ತೆ ಅಂದುಕೊಂಡು ಭಾಗ್ಯಲಕ್ಷ್ಮಿ ಕೋ ಆಪರೇಟಿವ್ ಸೊಸೈಟಿಯ ಬ್ಯಾಂಕಿಗೆ ನುಗ್ಗಿ ಅಲ್ಲಿರುವ ಮ್ಯಾನೇಜರ್ , ಸಿಬ್ಬಂದಿ ಸೇರಿದಂತೆ ಗ್ರಾಹಕರನ್ನು ಕೂಡ ಒತ್ತೇಯಳಾಗಿ ಲಾಕ್ ಮಾಡಿಕೊಳ್ಳುತ್ತಾರೆ. ಈ ವಿಚಾರ ತಿಳಿದಿದ್ದಂತೆ ಗ್ರಾಮದ ಜನರು ಹಾಗೂ ಪೊಲೀಸ್ ಸ್ಥಳಕ್ಕೆ ಬರುತ್ತಾರೆ. ಈ ಕಳ್ಳರಿಗೆ ಬ್ಯಾಂಕ್ ನಲ್ಲಿ ನಿರೀಕ್ಷಿಸಿದ ಹಣ ಸಿಗದೇ ಬ್ಯಾಂಕಿಂದ ಹೊರಬರಲು ಪರದಾಡುವ ಸಮಯ ಎದುರಾಗಿ ಪೊಲೀಸರ ಜೊತೆ ಮಾತಿನ ಚಿಕ್ಕಮಕಿಯು ನಡೆಯುತ್ತದೆ.
ಇದರ ನಡುವೆ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಒಂದಿಷ್ಟು ಬೇಡಿಕೆ ಇಟ್ಟು , ಈಡೇರಿಸಬೇಕು ಇಲ್ಲದಿದ್ದರೆ ಒಬ್ಬರನ್ನಾಗಿ ಕೊಲ್ಲುತ್ತೇವೆ ಎನ್ನುವ ಗ್ಯಾಂಗ್ ಮಾತಿಗೆ ಸರ್ಕಾರವು ಬೆಚ್ಚಿ ಎಲೆಕ್ಷನ್ ಸಂದರ್ಭ ಅನಾಹುತ ಬೇಡ ಎಂದು ಮಾತಿಗೆ ಒಪ್ಪುತ್ತಾರೆ.
ಇದೇ ಸಮಯಕ್ಕೆ ಈ ಒಂದು ಕೋ ಆಪರೇಟಿವ್ ಬ್ಯಾಂಕಿನಲ್ಲಿರುವ ನಿಗೂಢ ಸ್ಥಳದ ಬಗ್ಗೆ ತಿಳಿದು ಮ್ಯಾನೇಜರ್ ಹಾಗೂ ಕ್ಯಾಶ್ ಯಾರ್ ಅರ್ಪಿತ (ಬೃಂದಾ ಆಚಾರ್ಯ) ಳಿಗೆ ದುಬಾಯಿಸಿದಾಗ ಎಲೆಕ್ಷನ್ ಹಾಗೂ ತಮ್ಮ ಸೇಫ್ಟಿಗಾಗಿ ರಾಜಕಾರಣಿಗಳ ಕಪ್ಪುಹಣದ ಸ್ಥಳ ಕನಕ ಹಾಗೂ ಆತನ ಗ್ಯಾಂಗಿನ ಕಣ್ಣಿಗೆ ಕಾಣುತ್ತದೆ.
ಹಣವನ್ನ ಸಾಗಿಸಲು ಸಂಚುರೂಪಿಸುವ ಗ್ಯಾಂಗ್ ಇದರ ನಡುವೆ ಅರ್ಪಿತಳ ಸೌಂದರ್ಯಕ್ಕೆ ಸೋತು ಪ್ರೀತಿಸುವ ಕನಕ , ಇದರ ನಡುವೆ ಗ್ರಾಹಕರ ಪರದಾಟ , ಇನ್ನು ಕೋಟ್ಯಾಂತರ ರೂಪಾಯಿ ಹಣ ಇರುವ ಈ ಜಾಡು ಹುಡುಕುತ್ತಾ ಹೋದಾಗ ರಾಜಕೀಯ , ಪೊಲೀಸ್ , ಬೇರೆಯವರ ಕೈವಾಡಗಳು ನಿಗೂಢತೆ ತಿಳಿಯುತ್ತಾ ಹೋಗುತ್ತದೆ.
ಮುಂದೆ ಸಾಗುವ ರೋಚಕ ಘಟನೆಗಳು ಕ್ಲೈಮಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ.
ಗ್ಯಾಂಗ್ ಲೂಟಿ ಮಾಡುತ್ತಾ…
ಕನಕ ಹಾಗೂ ಅರ್ಪಿತ ಲವ್ ಏನಾಗುತ್ತೆ…
ಕಪ್ಪು ಹಣದ ರಹಸ್ಯ ಏನು…
ಹೊಸ ಬ್ಯಾಂಕುಗಳ ಹಿಂದಿರುವ ರಹಸ್ಯ…
ಇದೆಲ್ಲ ತಿಳಿಯಬೇಕಾದರೆ ಒಮ್ಮೆ ಈ ಚಿತ್ರವನ್ನು ನೋಡಬೇಕು.
ಈ ಚಿತ್ರದ ಕಥೆಯ ತಿರುಳು ಸೂಕ್ಷ್ಮವಾಗಿದೆ. ರಾಷ್ಟ್ರೀಕೃತ ಬ್ಯಾಂಕಿನ ನಡುವೆ ಗ್ರಾಮೀಣ , ಸೊಸೈಟಿಯ ಬ್ಯಾಂಕುಗಳು ಹಿಂದಿರುವ ಶ್ರೀಮಂತರು , ರಾಜಕಾರಣಿಗಳ ಕಪ್ಪುಹಣದ ಸತ್ಯದ ಬಗ್ಗೆ ಬೆಳಕು ಚೆಲ್ಲಿರುವ ನಿರ್ದೇಶಕರ ಕೆಲಸ ಗಮನ ಸೆಳೆಯುತ್ತದೆ. ಆದರೆ ಚಿತ್ರಕಥೆ ಶೈಲಿ ದಿಕ್ಕು ತಪ್ಪಿ ಲಾಜಿಕ್ ಬಿಟ್ಟು ತನಿಷ್ಠ ಬಂದಂತೆ ಸಾಗಿದ್ದು , ಬಹಳಷ್ಟು ಪರಿಪಕ್ವತೆ ಮಾಡಿಕೊಳ್ಳಬೇಕಿತ್ತು ಅನಿಸುತ್ತದೆ.
ಕ್ಲೈಮಾಕ್ಸ್ ಅಲ್ಲಿ ಬರುವ ಗ್ರಾಫಿಕ್ಸ್ ಕೆಲಸ ಉತ್ತಮವಾಗಿದ್ದು , ಮೂಷಿಕ ವಾಹನನ ಅನುಗ್ರಹ ಸಿಕ್ಕಿದಂತಿದೆ. ಇನ್ನು ಹಾಡುಗಳು ವಿಭಿನ್ನವಾಗಿದ್ದು , ಅದರಲ್ಲೂ ಶಿವ ಶಿವ ಹಾಡು ನೆನಪಿನಲ್ಲಿ ಉಳಿಯುವಂತಿದೆ. ಅದೇ ರೀತಿ ಛಾಯಾಗ್ರಾಹಕರ ಕೈಚಳಕ ಸೊಗಸಾಗಿ ಮೂಡಿ ಬಂದಿದೆ. ತಾಂತ್ರಿಕವಾಗಿ ತಂಡ ಬಹಳ ಶ್ರಮ ಪಟ್ಟಿದ್ದು , ಇಂತಹ ಚಿತ್ರಕ್ಕೆ ನಿರ್ಮಾಪಕ ಕೂಡ ಬಹಳ ಯೋಚಿಸಿ , ಚರ್ಚೆ ಮಾಡಿ ಹಣವನ್ನು ಹಾಕುವುದು ಬಹಳ ಅಗತ್ಯ ಅನ್ಸುತ್ತೆ. ಹೊಸ ನಿರ್ದೇಶಕನಿಗೆ ಅವಕಾಶ ನೀಡಿರುವುದು ಮೆಚ್ಚಲೇಬೇಕು.

ಇನ್ನು ಇಡೀ ಚಿತ್ರದ ಕೇಂದ್ರ ಬಿಂದು ನಟ ದೀಕ್ಷಿತ್ ಶೆಟ್ಟಿ ಬಹಳ ಅದ್ಭುತವಾಗಿ ತಮ್ಮ ಪಾತ್ರಕ್ಕೆ ಜೀವ ತುಂಬಿ ಆರಂಭದಿಂದ ಅಂತ್ಯದವರೆಗೂ ಲೀಲಾಜಾಲವಾಗಿ ಎಲ್ಲರ ಗಮನ ಸೆಳೆಯುವಂತೆ ಮಿಂಚಿದ್ದಾರೆ. ಅದೇ ರೀತಿ ನಟಿ ಬೃಂದ ಆಚಾರ್ಯ ಕೂಡ ಬಹಳ ಸೊಗಸಾಗಿ , ಮೃದು ಧ್ವನಿಯಲ್ಲಿ ಪರಿವರ್ತನೆಯ ನುಡಿಗಳ ಮೂಲಕ ತಮ್ಮ ಪಾತ್ರಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಇನ್ನು ನಾಯಕನ ಗೆಳೆಯರಾಗಿ ಅಭಿನಯಿಸಿರುವ ಶ್ರೀವತ್ಸ , ಶ್ರೇಯಸ್ ಶರ್ಮ, ಅಶ್ವಿನ್ ರಾವ್ ಪಲ್ಲಕ್ಕಿ , ವಿನುತ್ ತಮ್ಮ ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.
ಇನ್ಸ್ಪೆಕ್ಟರ್ ಪಾತ್ರದಲ್ಲಿ ಸಾಧು ಕೋಕಿಲ , ವಿಶ್ವನಾಥ್ ಮಂಡಳಿಕ , ಇತಿಹಾಸ ಚಾನೆಲ್ ನ ವರದಿಗಾರನ ಪಾತ್ರದಲ್ಲಿ ಗೋಪಾಲಕೃಷ್ಣ ದೇಶಪಾಂಡೆ , ಹಾಗೂ ಜೋಗುತ್ತಿ ಗಾಯಕಿಯಾಗಿ ಉಷಾ ಭಂಡಾರಿಯ ನಟನೆ ಹಾಗೂ ಹಾಡು ಮನಸನ್ನ ಮುಟ್ಟತ್ತೆ. ಇನ್ನು ವಿಶೇಷ ಪಾತ್ರದಲ್ಲಿ ಶ್ರುತಿ ಹರಿಹರನ್ ಹಾಗೂ ಉಳಿದಂತ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಉತ್ತಮ ಸಾಥ್ ನೀಡಿದೆ. ಯಾವುದೇ ನಿರೀಕ್ಷೆ ಇಲ್ಲದೆ ಮನೋರಂಜನೆಯ ದೃಷ್ಟಿಯಿಂದ ಹೋಗಿ ಒಮ್ಮೆ ನೋಡುವಂತಹ ಚಿತ್ರ ಇದಾಗಿದೆ.