Cini NewsMovie ReviewSandalwood

ಗ್ರಾಮೀಣ ಸೊಗಡಿನಲ್ಲಿ ಪ್ರೇಮ ಪುರಾಣ “ಅರಸಯ್ಯನ ಪ್ರೇಮ ಪ್ರಸಂಗ” (ಚಿತ್ರವಿಮರ್ಶೆ-ರೇಟಿಂಗ್ : 3.5 /5)

ರೇಟಿಂಗ್ : 3.5 /5
ಚಿತ್ರ : ಅರಸಯ್ಯನ ಪ್ರೇಮ ಪ್ರಸಂಗ
ನಿರ್ದೇಶಕ : ಜೆ.ವಿ.ಆರ್ ದೀಪು
ನಿರ್ಮಾಪಕಿ : ಮೇಘಶ್ರೀ ರಾಜೇಶ್
ಸಂಗೀತ : ಪ್ರವೀಣ್, ಪ್ರದೀಪ್
ಛಾಯಾಗ್ರಹಣ : ಗುರುಪ್ರಸಾದ್‌
ತಾರಾಗಣ : ಮಹಾಂತೇಶ್ ಹಿರೇಮಠ , ರಶ್ಮಿತ ಆರ್‌ ಗೌಡ, ಪಿ.ಡಿ. ಸತೀಶ್, ರಘು ರಾಮನ ಕೊಪ್ಪ , ವಿಜಯ್ ಚೆಂಡೂರ್, ಸುಜಿತ್, ಸುಧಾ, ಚಿಲ್ಲರ್ ಮಂಜು, ಮಹದೇವ್ ಲಾಲಿಪಾಳ್ಯ ಹಾಗೂ ಮುಂತಾದವರು…

ಹಳ್ಳಿ , ಪಟ್ಟಣ ಸೇರಿದಂತೆ ಪ್ರೀತಿಸೋ ಹೃದಯಕ್ಕೆ ಇರುವ ಶಕ್ತಿಯನ್ನು ಯಾರು ತಡೆಯಲು ಸಾಧ್ಯವಿಲ್ಲ. ಆದರೆ ಕೆಲವು ಸಮಯ , ಸಂದರ್ಭ , ಇನ್ನಿಲ್ಲದ ಗೊಂದಲಗಳನ್ನು ಸೃಷ್ಟಿ ಮಾಡುತ್ತಾ ಬದುಕಿನ ಜೊತೆ ಆಟ ಆಡೋದು ಸರ್ವೇಸಾಮಾನ್ಯ. ಅಂತದ್ದೇ ಒಬ್ಬ ಸೀದಾಸಾದ ಮದುವೆ ವಯಸ್ಸಿನ ಹುಡುಗ ಸುತ್ತ ನಡೆಯೋ ಸಂಬಂಧದ ಬೇಸಿಗೆ, ಗೆಳೆಯನ ಒಡನಾಟ, ಪ್ರೀತಿಯ ಸೆಳೆತ , ಒದ್ದಾಟ , ಪರದಾಟದ ನಡುವೆ ನಗಿಸುತ್ತ ಮನೋರಂಜನೆಯ ರೂಪಕವಾಗಿ ಈ ವಾರ ಪ್ರೇಕ್ಷಕರ ಮುಂದೆ ಬಂದಿರುವಂತಹ ಚಿತ್ರ “ಅರಸಯ್ಯನ ಪ್ರೇಮಪ್ರಸಂಗ”.

ಗುರುವಿನ ಮಠ ಬೆಟ್ಟದ ಮಲ್ಲೇಶ್ವರ ದೇವಾಲಯದ ಪೂಜಾರಿಯಾಗಿರುವ ಅರಸಯ್ಯ(ಮಹಾಂತೇಶ್ ಹಿರೇಮಠ) ನೋಡಲು ಕೃಷ್ಣ ಸುಂದರ. ಅಪ್ಪನ ಶಿವ ಶಿವ ಟೆಂಟ್ ಹೌಸ್ ನೋಡಿಕೊಳ್ಳುವು ಅರಸಯ್ಯ ಊರಿನಲ್ಲಿ ಯಾವುದೇ ಸಂಭ್ರಮ , ಸಾವು ನಡೆದರೂ ಇವರ ಶಾಮಿಯಾನದ ಜೊತೆ ಹಾರ್ಮೋನಿಯಂ ಪೆಟ್ಟಿಗೆ ಹಿಡಿದು ಭಜನೆ ಮಾಡುವುದಕ್ಕೆ ಹಾಜರಿ. ಬಾಲ್ಯದಿಂದಲೂ ಗ್ರಹಗತಿ ಸಿರಿಯಿಲ್ಲ ಎನ್ನುತ್ತಲೇ ಬೆಳೆಯುವ ಅರಸಯ್ಯನಿಗೆ ಮದುವೆ ಮಾಡಲು ಹುಡುಗಿಯನ್ನು ಹುಡುಕುವುದೇ ಅಪ್ಪ ಅಮ್ಮನ ಒದ್ದಾಟ.

ಇನ್ನು ಆಟೋ ಓಡಿಸುತ್ತಾ ಗೆಳೆಯನಿಗೆ ಸದಾ ಬೆನ್ನೆಲುಬಾಗಿ ನಿಲ್ಲುವ ಬಸವ (ಪಿ.ಡಿ .ಸತೀಶ್) ತಂಟೆ , ತರ್ಲೆ , ಹುಡುಗಿ ಹುಡುಕಾಟಕ್ಕೆ ಸಾತ್ ನೀಡುತ್ತಾನೆ. ಯಾವ ಹುಡುಗಿಯನ್ನು ಒಪ್ಪದ ಅರಸಯ್ಯನ ಕಣ್ಣಿಗೆ ಸುಂದರವಾದ ಹುಡುಗಿ ಕಾಣುತ್ತಾಳೆ. ತನ್ನ ಊರಿನ ಪೋಸ್ಟ್ ಆಫೀಸ್ ನಲ್ಲಿ ಕೆಲಸ ಮಾಡುವ ಕುಮಾರಿ (ರಶ್ಮಿಕ ಆರ್ ಗೌಡ) ಪಕ್ಕದ ಊರಿನಲ್ಲಿ ತಂದೆ ಹಾಗೂ ಮಲತಾಯಿ ಜೊತೆ ಜೀವನ ನಡೆಸುತ್ತಾಳೆ.

ಮೊದಲ ನೋಟದಲ್ಲಿ ಮನಸೋತ ಅರಸಯ್ಯ ಕುಮಾರಿಯ ಪ್ರೀತಿಯನ್ನ ಪಡೆಯಲು ಇನ್ನಿಲ್ಲದ ಎಡವಟ್ಟು , ಹರಸಾಹಸವನ್ನು ಮಾಡುತ್ತಾನೆ. ಇವನಿಂದ ದೂರ ಉಳಿಯಲು ಕುಮಾರಿಯೂ ಪರದಾಡುತ್ತಾಳೆ. ಒಂದಷ್ಟು ಏರುಪೇರು , ಮಾತುಕತೆಗಳ ನಡುವೆ ಎರಡು ಮನೆಯವರು ಒಪ್ಪಿ ಇಬ್ಬರಿಗೂ ಮದುವೆ ಮಾಡಲು ನಿರ್ಧರಿಸುತ್ತಾರೆ. ಆದರೆ ಒಂದು ಬಲವಾದ ದೋಷ ಇವರ ಮದುವೆಗೆ ಕಂಟಕವಾಗಿ ಮುರಿದು ಬೀಳುತ್ತದೆ. ಇಲ್ಲಿಂದ ಎದುರಾಗುವ ಘಟನೆಗಳು ರೋಚಕ ತಿರುವಿನ ಹಂತಕ್ಕೆ ಬಂದು ನಿಲ್ಲುತ್ತದೆ. ಏನಿದು ದೋಷ… ಇಬ್ಬರು ಒಂದಾಗುತ್ತಾರ… ಇಲ್ಲವಾ…
ಈ ಎಡವಟ್ಟಿಗೆ ಕಾರಣ ಯಾರು… ಕ್ಲೈಮಾಕ್ಸ್ ನೀಡುವ ಉತ್ತರ ಏನು ಎಂಬುದಕ್ಕೆ ಒಮ್ಮೆ ನೀವು ಈ ಚಿತ್ರವನ್ನು ನೋಡಬೇಕು.

ಇನ್ನು ಈ ಚಿತ್ರದ ನಿರ್ದೇಶಕ ಆಯ್ಕೆ ಮಾಡಿಕೊಂಡಿರುವ ಕಥಾವಸ್ತು ಗಮನ ಸೆಳೆಯುವಂತಿದ್ದು, ಗ್ರಾಮೀಣ ಭಾಗದಲ್ಲಿ ನಡೆಯುವ ಒಂದಷ್ಟು ನೈಜ ಘಟನೆಗಳ ಸುತ್ತ , ಮನೋರಂಜನೆಯ ರಸದೌತಣ ನೀಡುವ ಪ್ರಯತ್ನ ಉತ್ತಮವಾಗಿದೆ. ಹಳ್ಳಿಯ ಬದುಕು ಬವಣೆ , ಪ್ರೀತಿ , ಗೆಳೆತನ , ನಂಬಿಕೆ , ಶಾಸ್ತ್ರ , ಮಂತ್ರದ ಸುತ್ತ ಸಾಗುವ ಚಿತ್ರಕಥೆಯಲ್ಲಿ ಇನ್ನಷ್ಟು ಏರಿಳಿತ ಮಾಡಬಹುದಿತ್ತು. ಸರಾಗವಾಗಿ ಸಾಗುವ ಕಥೆಯಲ್ಲಿ ಹಾಸ್ಯದ ಲೇಪನ ಬೆಸೆದುಕೊಂಡಿದೆ. ಆದರೆ ಪ್ರಯತ್ನ ಇಷ್ಟವಾಗುತ್ತದೆ.

ಒಂದು ಮನೋರಂಜನೆಯ ಚಿತ್ರವನ್ನು ನೀಡಿರುವ ನಿರ್ಮಾಪಕರ ಧೈರ್ಯವನ್ನು ಮೆಚ್ಚಲೇಬೇಕು. ಇನ್ನು ಛಾಯಾಗ್ರಹಕರ ಕೈಚಳಕ ಉತ್ತಮವಾಗಿದ್ದು, ಸಂಗೀತ ಚಿತ್ರಕ್ಕೆ ಪೂರಕವಾಗಿ ಮೂಡಿ ಬಂದಿದ್ದು, ಅಯ್ಯಯ್ಯೋ ರಾಮ.. ಕಣ್ಮುಂದೆ ಡ್ರಾಮಾ… ಹಾಡು ಗುನುಗುವಂತಿದೆ. ಇಡೀ ಚಿತ್ರವನ್ನು ಮಾಂತೇಶ್ ಹಿರೇಮಠ್ ಆವರಿಸಿಕೊಂಡಿದ್ದು , ಅರಸಯ್ಯನಾಗಿ ಬಹಳ ಸೊಗಸಾಗಿ ಪಾತ್ರಕ್ಕೆ ಜೀವವನ್ನು ತುಂಬಿದ್ದಾರೆ. ತನ್ನ ಮುಖ ಚಹರೆ, ಹಾವಭಾವ , ಮಾತಿನ ವರ್ಚಸ್ ಮೂಲಕವೇ ಗಮನ ಸೆಳೆದಿದ್ದಾರೆ. ಇನ್ನು ನಟಿ ರಶ್ಮಿಕ ಆರ್ ಗೌಡ ಕೂಡ ಸಿಕ್ಕ ಅವಕಾಶಕ್ಕೆ ನ್ಯಾಯವನ್ನು ಒದಗಿಸಿದ್ದಾರೆ. ಪಿ.ಡಿ .ಸತೀಶ್ ಹಾಗೂ ಚಿಲ್ಲರ್ ಮಂಜು ಹಾಸ್ಯ ಸನ್ನಿವೇಶಗಳು ನೆನಪಿನಲ್ಲಿ ಉಳಿಯುವಂತಿದೆ.

ನಾಯಕನ ತಂದೆ , ತಾಯಿ ಹಾಗೂ ಅಜ್ಜಿ , ನಾಯಕಿಯ ಅಪ್ಪ-ಅಮ್ಮ ಸೇರಿದಂತೆ ಎಲ್ಲಾ ಪಾತ್ರಗಳು ಚಿತ್ರದ ಓಟಕ್ಕೆ ಜೀವ ತುಂಬಿದ್ದಾರೆ. ಒಟ್ಟರೆ ನಗುವಿನ ಹೊಳೆಯನ್ನ ಹರಿಸುವ ಈ ಮನೋರಂಜನೆಯ ಚಿತ್ರವನ್ನು ಯಾವುದೇ ಮುಜುಗರವಿಲ್ಲದೆ ಎಲ್ಲರೂ ನೋಡುವಂತಿದೆ.

error: Content is protected !!