Cini NewsSandalwood

“ಸಾರಾಂಶ” ಚಿತ್ರದ ಲಿರಿಕಲ್ ಸಾಂಗ್ ಬಿಡುಗಡೆ.

Spread the love

ಸೂರ್ಯ ವಸಿಷ್ಠ ನಿರ್ದೇಶನದಲ್ಲಿ ಮೂಡಿ ಬಂದಿರುವ `ಸಾರಾಂಶ’ ಚಿತ್ರ ಸದ್ಯದ ಮಟ್ಟಿಗೆ ಪ್ರೇಕ್ಷಕರ ಗಮನ ಸೆಳೆದಿದೆ. ಅದರ ಬಗ್ಗೆ ಒಂದಷ್ಟು ಚರ್ಚೆ, ನಿರೀಕ್ಷೆಗಳು ಮೂಡಿಕೊಂಡಿವೆ. ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಬಿಡುಗಡೆಗೆ ಸನ್ನದ್ಧವಾಗಿ ನಿಂತಿರುವ ಈ ಚಿತ್ರದ ಚೆಂದದ ಲಿರಿಕಲ್ ಸಾಂಗ್ ಇದೀಗ ಬಿಡುಗಡೆಗೊಂಡಿದೆ. ಕೇಳಿದಾಕ್ಷಣವೇ ಹೊಸ ಅನುಭೂತಿಯೊಂದನ್ನು ತುಂಬುವ, ಸೂಕ್ಷ್ಮವಾಗಿ ಕಥಾ ಹಂದರದೊಳಗೆ ಕೈ ಹಿಡಿದು ಕರೆದೊಯ್ಯುತ್ತಲೇ ಕಾಡುವ ಗುಣ ಹೊಂದಿರುವ ಈ ಹಾಡು, ಸಾರಾಂಶದ ಭಿನ್ನ ಕಥಾನಕಕ್ಕೆ ಕನ್ನಡಿ ಹಿಡಿದಂತೆ ಭಾಸವಾಗುತ್ತವೆ!

ಅಪರಿಚಿತ ಲಾಲಿ ಹುಡುಕಿಹೆನು ನಿನ್ನಲಿ… ಅಂತ ಶುರುವಾಗುವ ಈ ಹಾಡು ಮೆಲ್ಲಗೆ ಆವರಿಸಿಕೊಳ್ಳುತ್ತಾ ಹೋಗುತ್ತದೆ. ಉದಿತ್ ಹರಿತಾಸ್ (ಅಜ್ಞಾತ) ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ಈ ಹಾಡು, ಆರಂಭಿಕವಾಗಿಯೇ ಹೊಸಾ ಫೀಲ್ ನೊಂದಿಗೆ ತಾಕುವಂತಿದೆ. ಈ ಚಿತ್ರದ ನಿರ್ದೇಶಕರಾದ ಸೂರ್ಯ ವಸಿಷ್ಠ ಬರೆದಿರುವ ಹಾಡಿನ ಸಾಲುಗಳು ಭಿನ್ನವಾದ ಸಂಗೀತದ ಕುಸುರಿಯಲ್ಲಿ ಮತ್ತಷ್ಟು ಕಳೆಗಟ್ಟಿಕೊಂಡಿದೆ. ಸೋಶಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರುವ ಮಾಧುರಿ ಶೇಷಾದ್ರಿ ಕಂಠಸಿರಿಯಲ್ಲಿ ಮೂಡಿ ಬಂದಿರುವ ಈ ಹಾಡು, ಸಾರಾಂಶದೊಳಗಿನ ಅಸಲೀ ಸಾರಾಂಶದತ್ತ ಕೇಳುಗರೆಲ್ಲ ಮೋಹಗೊಳ್ಳುವಂತೆ ಮಾಡಿ ಬಿಟ್ಟಿದೆ.

ಸಾಮಾನ್ಯವಾಗಿ, ಯಾವುದೇ ಸಿನಿಮಾ ವಿಚಾರದಲ್ಲಾದರೂ ಹಾಡುಗಳಿಗೆ ಬೇರೆಯದ್ದೇ ತೆರನಾದ ಕಿಮ್ಮತ್ತಿದೆ. ಈವತ್ತಿಗೂ ಅದನ್ನು ಸಿನಿಮಾವೊಂದರ ಆಹ್ವಾನ ಪತ್ರಿಕೆ ಎಂಬಂತೆಯೇ ಪರಿಭಾವಿಸಲಾಗುತ್ತದೆ. ಆ ನಿಟ್ಟಿನಲ್ಲಿ ಹೇಳುವುದಾದರೆ, ಸಾರಾಂಶ ಚಿತ್ರದ ಆಹ್ವಾನ ನಿಜಕ್ಕೂ ಮನಸೆಳೆಯುವಂತಿದೆ. ಅಂದಹಾಗೆ, ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದಾವೆ. ಇದೀಗ ಅದರಲ್ಲೊಂದು ಹಾಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಅದರ ಒಟ್ಟಂದವೇ ಉಳಿದೆರಡು ಹಾಡುಗಳಿಗಾಗಿ ಕಾತರಿಸುವಂತೆ ಮಾಡಿದೆ. ಅದು ಈ ಚಿತ್ರತಂಡದ ಶ್ರಮಕ್ಕೆ ದಕ್ಕಿದ ನಿಜವಾದ ಗೆಲುವೆಂಬುದರಲ್ಲಿ ಯಾವ ಸಂದೇಹವೂ ಇಲ್ಲ…

ಈ ಸಿನಿಮಾ ವಿಶಿಷ್ಟವಾದ ಕಥೆಯನ್ನೊಳಗೊಂಡಿದೆ ಎಂಬ ಸ್ಪಷ್ಟ ಸುಳಿವನ್ನು ಈ ಹಿಂದೆಯೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಅದಕ್ಕೆ ಈ ಹಾಡು ಅಕ್ಷರಶಃ ಪುರಾವೆಯಂತೆ ಮೂಡಿಬಂದಿದೆ. ಸಾರಾಂಶದಲ್ಲಿ ದೀಪಕ್ ಸುಬ್ರಮಣ್ಯ, ಸೂರ್ಯ ವಸಿಷ್ಠ, ಶೃತಿ ಹರಿಹರನ್ ಮತ್ತು ಶ್ವೇತಾ ಗುಪ್ತ ಪ್ರಮುಖ ಪಾತ್ರಗಳಾಗಿ ನಟಿಸಿದ್ದಾರೆ. ಆಸಿಫ್ ಕ್ಷತ್ರಿಯಾ, ರವಿ ಭಟ್, ರಾಮ್ ಮಂಜುನಾಥ್, ಸತೀಶ್ ಕುಮಾರ್, ಪೃಥ್ವಿ ಬನವಾಸಿ ಮುಂತಾದವರ ತಾರಾಗಣವಿದೆ. ಖುದ್ದು ಸೂರ್ಯ ವಸಿಷ್ಠ ಮತ್ತು ಗಂಟುಮೂಟೆ ಖ್ಯಾತಿಯ ರೂಪಾ ರಾವ್ ಸಂಭಾಷಣೆ ಬರೆದಿದ್ದಾರೆ. ಅಪರಾಜಿತ್ ಹಿನ್ನೆಲೆ ಸಂಗೀತ, ಪ್ರದೀಪ್ ನಾಯಕ್ ಸಂಕಲನವಿರುವ ಈ ಚಿತ್ರವನ್ನು ರವಿ ಕಶ್ಯಪ್ ಮತ್ತು ಆರ್.ಕೆ ನಲ್ಲಮ್ ಅವರು ವಿಭಾ ಕಶ್ಯಪ್ ಪ್ರೊಡಕ್ಷನ್ಸ್ ಹಾಗೂ ಕ್ಲಾಪ್ಬೋರ್ಡ್ ಪ್ರೊಡಕ್ಷನ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ

Visited 1 times, 1 visit(s) today
error: Content is protected !!